ಓಲಾ ಎಲೆಕ್ಟ್ರಿಕ್(Ola Electric) ಬಹುನೀರಿಕ್ಷಿತ ಎಸ್1 ಏರ್(S1 Air) ಇವಿ ಸ್ಕೂಟರ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 1,19,999 ಬೆಲೆ ಹೊಂದಿದ್ದು, ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಹೊಸ ಇವಿ ಸ್ಕೂಟರ್ ಖರೀದಿಗಾಗಿ ಓಲಾ ಎಲೆಕ್ಟ್ರಿಕ್ ಕಂಪನಿಯು ಭಾರೀ ಪ್ರಮಾಣದಲ್ಲಿ ಬುಕಿಂಗ್ ಪಡೆದುಕೊಂಡಿದ್ದು, ಇದೇ ತಿಂಗಳು 31ರಂದು ಹೊಸ ಇವಿ ಸ್ಕೂಟರ್ ಖರೀದಿಗೆ ಲಭ್ಯವಿರಲಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಎಸ್1 ಪ್ರೊ ಮತ್ತು ಎಸ್1 ಇವಿ ಸ್ಕೂಟರ್ ಗಳೊಂದಿಗೆ ಈಗಾಗಲೇ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಇದೀಗ ಎಸ್1 ಏರ್ ಆವೃತ್ತಿಯ ಮೇಲೆ ಹೊಸ ನೀರಿಕ್ಷೆಯಿಟ್ಟುಕೊಂಡಿದ್ದು, ಪೆಟ್ರೋಲ್ ಆಧರಿತ ಸ್ಕೂಟರ್ ಮಾದರಿಗಳಿಗೂ ಇದು ಉತ್ತಮ ಪೈಪೋಟಿ ನೀಡಲಿದೆ.
ಹೊಸ ಎಸ್1 ಏರ್ ಇವಿ ಸ್ಕೂಟರ್ ನಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯು 3kWh ಬ್ಯಾಟರಿ ಪ್ಯಾಕ್ ಮತ್ತು 4.5 kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಹೊಸ ಸ್ಕೂಟರ್ ಪ್ರತಿ ಚಾರ್ಜ್ ಗೆ ಗರಿಷ್ಠ 125 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ. 2.7kWh ಬ್ಯಾಟರಿ ಪ್ಯಾಕ್ ಅನ್ನು ಚಾರ್ಜ್ ಮಾಡಲು 750 ವೊಲ್ಟೊ ಪೋರ್ಟಬಲ್ ಚಾರ್ಜರ್ ನೀಡಿದೆ. ಇದನ್ನು ಇದು ಪೂರ್ತಿಯಾಗಿ ಚಾರ್ಜ್ ಮಾಡಲು ಕನಿಷ್ಠ ಐದು ಗಂಟೆ ತೆಗೆದುಕೊಳ್ಳಲಿದೆ.
ಇದನ್ನೂ ಓದಿ: ನಮ್ಮ ಬೆಂಗಳೂರಿಗೆ ಲಗ್ಗೆಯಿಟ್ಟ ಸೂಪರ್ ಫೀಚರ್ಸ್ ಪ್ರೇರಿತ ಟಾರ್ಕ್ ಮೋಟಾರ್ಸ್ ಕ್ರೇಟಸ್-ಆರ್ ಇವಿ ಬೈಕ್
ಎಸ್1 ಏರ್ ಇವಿ ಸ್ಕೂಟರ್ ನಲ್ಲಿರುವ ಹಬ್ ಎಲೆಕ್ಟ್ರಿಕ್ ಮೋಟಾರ್ 4.5 ಕಿಲೋವ್ಯಾಟ್ ಅಥವಾ 6.03 ಬಿಎಚ್ ಪಿ ಉತ್ಪಾದಿಸಲಿದೆ. ಈ ಮೂಲಕ ಕೇವಲ ಇದು 4.3 ಸೆಕೆಂಡ್ ಗಳಲ್ಲಿ ಸೊನ್ನೆಯಿಂದ 40 ಕಿ.ಮೀ ವೇಗಪಡೆದುಕೊಳ್ಳಲಿದ್ದು, ಪ್ರತಿ ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್ ತಲುಪುತ್ತದೆ. ಇದರಲ್ಲಿ ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ರೈಡ್ ಮೋಡ್ ಗಳಿದ್ದು, ಇದರಲ್ಲಿ ನಾರ್ಮಲ್ ಮೋಡ್ ಬಳಕೆಯೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 100 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.
ಹೊಸ ಎಸ್1 ಏರ್ ಸ್ಕೂಟರ್ ಅನ್ನು ಓಲಾ ಎಲೆಕ್ಟ್ರಿಕ್ ಕಂಪನಿಯು ಮೊದಲೆರಡು ಇವಿ ಮಾದರಿಗಿಂತಲೂ ವಿಭಿನ್ನ ವಿನ್ಯಾಸದಲ್ಲಿ ಬಿಡುಗಡೆ ಮಾಡಿದೆ. ಟ್ಯುಬುಲರ್ ಫ್ರೆಮ್ ನೊಂದಿಗೆ ಸಸ್ಷೆಂಷನ್ ಸೌಲಭ್ಯಕ್ಕಾಗಿ ಹೊಸ ಸ್ಕೂಟರಿನ ಮುಂಭಾಗದಲ್ಲಿ ಟ್ವಿನ್ ಟೆಲಿಸ್ಕೊಪಿಕ್ ಮತ್ತು ಹಿಂಬದಿಯಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ವರ್ ನೀಡಲಾಗಿದೆ. ಹಾಗೆಯೇ ಹೊಸ ಸ್ಕೂಟರ್ ನಲ್ಲಿ ಎರಡು ಬದಿಯಲ್ಲಿ ಡ್ರಮ್ ಬ್ರೇಕ್ ಜೊತೆಗೆ ಸಿಬಿಎಸ್, ಸ್ಟೀಲ್ ವ್ಹೀಲ್ ಜೋಡಿಸಲಾಗಿದ್ದು, 108 ಒಟ್ಟಾರೆ ತೂಕದೊಂದಿಗೆ 165 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.
ಇದನ್ನೂ ಓದಿ: ಭರ್ಜರಿ ಮೈಲೇಜ್ ಜೊತೆ ಹೊಸ ಫೀಚರ್ಸ್ ಗಳೊಂದಿಗೆ ನವೀಕೃತ ಓಕಿ-90 ಇವಿ ಸ್ಕೂಟರ್ ಬಿಡುಗಡೆ
ಇನ್ನುಳಿದಂತೆ ಕನೆಕ್ಟೆಡ್ ಫೀಚರ್ಸ್ ಗಳಿಗಾಗಿ 7 ಇಂಚಿನ ಟಚ್ ಸ್ಕೀನ್ ಡಿಸ್ ಪ್ಲೇ, ಇನ್ ಬಿಲ್ಟ್ ಮೂವ್ ಎಸ್ಒ, ರಿಮೋಟ್ ಬೂಟ್ ಅನ್ ಲಾಕ್, ಬ್ಲ್ಯೂಟೂಥ್, ಕ್ರೂಸ್ ಕಂಟ್ರೋಲ್, ವೆಕೆಷನ್ ಮೋಡ್, ಮಲ್ಟಿಪಲ್ ಪ್ರೊಫೈಲ್, ಕಾಲಿಂಗ್, ನ್ಯಾವಿಗೇಷನ್ ಸೌಲಭ್ಯಗಳಿವೆ. ಹಾಗೆಯೇ ಹೊಸ ಸ್ಕೂಟರಿನಲ್ಲಿ ಕಡಿಮೆ ಸಾಮರ್ಥ್ಯದ ಬ್ಯಾಟರಿ ನೀಡಿರುವುದರಿಂದ ಈ ಬಾರಿ ಪ್ಲ್ಯಾಟ್ ಫುಟ್ ರೇಸ್ಟ್ ಸಿಗಲಿದ್ದು, ನಿಯೋ ಮಿಂಟ್, ಕೋಲ್ ಗ್ಲ್ಯಾಮ್, ಲಿಕ್ವಿಡ್ ಸಿಲ್ವರ್ ಮತ್ತು ಜೆಟ್ ಬ್ಲ್ಯಾಕ್, ವೈಟ್ ಬಣ್ಣಗಳ ಆಯ್ಕೆಗಳಿವೆ.