ರೆನಾಲ್ಟ್ ಕೈಗರ್, ಕ್ವಿಡ್ ಮತ್ತು ಟ್ರೈಬರ್ ನೈಟ್ ಅಂಡ್ ಡೇ ಲಿಮಿಟೆಡ್ ಎಡಿಷನ್ ಬಿಡುಗಡೆ
Renault Kiger, Triber, Kwid Night and Day editions: ರೆನಾಲ್ಟ್ ಇಂಡಿಯಾ ಕಂಪನಿಯು ಕೈಗರ್, ಕ್ವಿಡ್ ಮತ್ತು ಟ್ರೈಬರ್ ಕಾರುಗಳಲ್ಲಿ ಹೊಸದಾಗಿ ನೈಟ್ ಅಂಡ್ ಡೇ ಲಿಮಿಟೆಡ್ ಎಡಿಷನ್ ಬಿಡುಗಡೆ ಮಾಡಿದೆ.
ಹೊಸ ಕಾರುಗಳ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ರೆನಾಲ್ಟ್ ಇಂಡಿಯಾ (Renault India) ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಕೈಗರ್, ಕ್ವಿಡ್ ಮತ್ತು ಟ್ರೈಬರ್ ಆವೃತ್ತಿಗಳಲ್ಲಿ ಹೊಸದಾಗಿ ನೈಟ್ ಅಂಡ್ ಡೇ ಲಿಮಿಟೆಡ್ ಎಡಿಷನ್ ಬಿಡುಗಡೆ ಮಾಡಿದೆ. ಹೊಸ ಲಿಮಿಟೆಡ್ ಎಡಿಷನ್ ಕಾರುಗಳು ಟಾಪ್ ಎಂಡ್ ವೆರಿಯೆಂಟ್ ಆಧರಿಸಿ ಬಿಡುಗಡೆಯಾಗಿದ್ದು, ಬೆಲೆ ಕೂಡಾ ತುಸು ದುಬಾರಿಯಾಗಿರಲಿದೆ.
ಹೊಸ ಫೀಚರ್ಸ್ ಗಳೊಂದಿಗೆ ಆಕರ್ಷಕ ಬಣ್ಣದ ಆಯ್ಕೆ ಹೊಂದಿರುವ ನೈಟ್ ಅಂಡ್ ಡೇ ಲಿಮಿಟೆಡ್ ಎಡಿಷನ್ ಕಾರುಗಳು ಸ್ಟ್ಯಾಂಡರ್ಡ್ ಕಾರಿನ ಟಾಪ್ ಎಂಡ್ ಮಾದರಿಗಿಂತಲೂ ರೂ. 15 ಸಾವಿರದಿಂದ ರೂ. 20 ಸಾವಿರದಷ್ಟು ದುಬಾರಿಯಾಗಿದ್ದು, ಕೆಲವೇ ಕೆಲವು ಯುನಿಟ್ ಗಳು ಮಾತ್ರ ಖರೀದಿಗೆ ಲಭ್ಯವಿರಲಿವೆ. ಹೊಸ ಕಾರುಗಳಲ್ಲಿ ಕ್ವಿಡ್ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 5 ಲಕ್ಷ, ಕೈಗರ್ ಕಾರು ಮಾದರಿಯು ರೂ. 6.75 ಲಕ್ಷ ಮತ್ತು ಟ್ರೈಬರ್ ಕಾರು ರೂ. 7 ಲಕ್ಷ ಆರಂಭಿಕ ಬೆಲೆ ಹೊಂದಿವೆ.
ರೆನಾಲ್ಟ್ ಕಂಪನಿಯ ಮಾಹಿತಿ ಪ್ರಕಾರ ಹೊಸ ಲಿಮಿಟೆಡ್ ಎಡಿಷನ್ ಕಾರುಗಳು ಕೇವಲ 1600 ಯುನಿಟ್ ಗಳು ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಇವು ವಿಶೇಷವಾಗಿ ಡ್ಯುಯಲ್ ಕಲರ್ ಪರ್ಲ್ ವೈಟ್ ಬಣ್ಣದ ಆಯ್ಕೆ ಹೊಂದಿವೆ. ಜೊತೆಗೆ ಹೊಸ ಕಾರುಗಳಲ್ಲಿ ಬ್ಲ್ಯಾಕ್ ರೂಫ್ ನೊಂದಿಗೆ ಎ ಫಿಲ್ಲರ್ ನೀಡಲಾಗಿದ್ದು, ಬ್ಲ್ಯಾಕ್ ಟೈಲ್ ಗೇಟ್ ಆಕರ್ಷಕವಾಗಿದೆ.
ಜೊತೆಗೆ ಹೊಸ ಕಾರುಗಳಲ್ಲಿ ರೆನಾಲ್ಟ್ ಕಂಪನಿಯು ಪಿಯಾನೋ ಬ್ಲ್ಯಾಕ್ ಬಣ್ಣದ ವೀಲ್ಹ್ ಕವರ್ಸ್, ಗ್ರೀಲ್ ಇನ್ಸರ್ಟ್, ಬ್ಯಾಡ್ಜಿಂಗ್, ಬ್ಲ್ಯಾಕ್ ಟೈಲ್ ಗೇಟ್ ಗಾರ್ನಿಶ್ ನೀಡಲಾಗಿದ್ದು, ಒಳಭಾಗದಲ್ಲಿ ಹೊಸದಾದ 9 ಇಂಚಿನ ಸ್ಮಾರ್ಟ್ ಫೋನ್ ರಿಪ್ಲಿಕೇಶನ್ ಮತ್ತು ರಿಯರ್ ಪವರ್ಡ್ ವಿಂಡೋಗಳನ್ನು ನೀಡಲಾಗಿದೆ.
ಇನ್ನುಳಿದಂತೆ ವಿಶೇಷ ಆವೃತ್ತಿಗಳಲ್ಲಿನ ಎಂಜಿನ್ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕ್ವಿಡ್ ಮಾದರಿಯಲ್ಲಿ 68 ಹಾರ್ಸ್ ಪವರ್ ಉತ್ಪಾದಿತ 1.0 ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ ನೀಡಲಾಗಿದ್ದರೆ ಟ್ರೈಬರ್ ಕಾರು ಮಾದರಿಯಲ್ಲಿ 72 ಹಾರ್ಸ್ ಪವರ್ ಉತ್ಪಾದಿತ 1.0 ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದೆ. ಹಾಗೆಯೇ ಕೈಗರ್ ಕಾರು ಮಾದರಿಯಲ್ಲಿ ಈ ಹಿಂದಿನಂತೆಯೇ 1.0 ಲೀಟರ್ ಎನ್ಎ ಪೆಟ್ರೋಲ್ ಮತ್ತು 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳಿದ್ದು, ಇವು 72 ಹಾರ್ಸ್ ಪವರ್ ಮತ್ತು 100 ಹಾರ್ಸ್ ಪವರ್ ಉತ್ಪಾದಿಸುತ್ತವೆ.