ರಾಯಲ್ ಎನ್ಫೀಲ್ಡ್ (Royal Enfield) ಕಂಪನಿಯು ತನ್ನ ಹೊಸ ಹಿಮಾಲಯನ್ 450 (Himalayan 450) ಬೈಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 2.69 ಲಕ್ಷ ಆರಂಭಿಕ ಬೆಲೆ ಹೊಂದಿದೆ. ಹೊಸ ಬೈಕ್ ಮಾದರಿಯು ವಿವಿಧ ತಾಂತ್ರಿಕ ಅಂಶಗಳು ಮತ್ತು ಬಣ್ಣದ ಆಯ್ಕೆಗಳಿಗೆ ಅನುಗುಣವಾಗಿ ಪ್ರಮುಖ ಐದು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಆರಂಭಿಕ ಮಾದರಿಯು ರೂ. 2.69 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 2.84 ಲಕ್ಷ ಬೆಲೆ ಹೊಂದಿದೆ.
ಹಿಮಾಲಯನ್ 450 ಬೈಕ್ ಖರೀದಿದಾರರಿಗೆ ಹೊಸ ಆಫರ್ ನೀಡಿರುವ ರಾಯಲ್ ಎನ್ಫೀಲ್ಡ್ ಕಂಪನಿಯು ಡಿಸೆಂಬರ್ 31ರ ಒಳಗಾಗಿ ಬುಕಿಂಗ್ ಮಾಡುವ ಗ್ರಾಹಕರಿಗೆ ಮಾತ್ರ ರೂ. 2.69 ಲಕ್ಷ ಆರಂಭಿಕ ಬೆಲೆಯ ಆಫರ್ ನೀಡಿದ್ದು, ಜನವರಿ 1ರ ನಂತರ ಬುಕಿಂಗ್ ದಾಖಲಿಸುವ ಗ್ರಾಹಕರಿಗೆ ಬೆಲೆ ಹೆಚ್ಚಳ ಮಾಡುವ ಸುಳಿವು ನೀಡಿದೆ. ಹೊಸ ಬೈಕ್ ಮಾದರಿಯ ಬೆಲೆಯಲ್ಲಿ ಈಗಾಗಲೇ ಈ ಹಿಂದಿನ ಮಾದರಿಗಿಂತಲೂ ರೂ. 54 ಸಾವಿರದಷ್ಟು ದುಬಾರಿಯಾಗಿದ್ದು, ಹೊಸ ವರ್ಷದಲ್ಲಿ ಬೈಕ್ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇನ್ನಷ್ಟು ಬೆಲೆ ಏರಿಕೆ ಬಿಸಿ ತಟ್ಟಲಿದೆ ಎನ್ನಬಹುದು.
ವಿನ್ಯಾಸ ಮತ್ತು ವೈಶಿಷ್ಟ್ಯತೆ
ಹೊಸ ಹಿಮಾಲಯನ್ 450 ಬೈಕ್ ಮಾದರಿಯು ಈ ಹಿಂದಿನ ಮಾದರಿಗಿಂತಲೂ ಹೆಚ್ಚು ಬಲಿಷ್ಠವಾದ ವಿನ್ಯಾಸದಿಂದಿಗೆ ಆಲ್ ಎಲ್ಇಡಿ ಲೈಟಿಂಗ್ಸ್ ಹೊಂದಿದ್ದು, ಹೊಸ ಟ್ವಿನ್-ಸ್ಪಾರ್ ಫ್ರೇಮ್ ಆಧರಿತ ಪ್ಲ್ಯಾಟ್ ಫಾರ್ಮ್ ಆಧರಿಸಿ ನಿರ್ಮಾಣವಾಗಿದೆ. ಹೊಸ ಪ್ಲ್ಯಾಟ್ ಫಾರ್ಮ್ ನಿಂದಾಗಿ ಹಿಮಾಲಯನ್ ಬೈಕಿನ ತೂಕವು ಈ ಹಿಂದಿನ ಮಾದರಿಗಿಂತಲೂ ಸುಮಾರು 10 ಕೆ.ಜಿ ಇಳಿಕೆಯೊಂದಿಗೆ 196 ಕೆ.ಜಿ ತೂಕ ಹೊಂದಿದ್ದು, ಇದರಲ್ಲಿ ಸ್ಲಿಪ್ಲ್ ಅಂಡ್ ಅಸಿಸ್ಟ್ ಕ್ಲಚ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗಿದೆ.
ಇದನ್ನೂ ಓದಿ: ಹೋಂಡಾ ಸಿಬಿ350 Vs ಆರ್‍ಇ ಕ್ಲಾಸಿಕ್ 350.. ಖರೀದಿಗೆ ಯಾವುದು ಬೆಸ್ಟ್?
ಹೊಸ ಬೈಕಿನಲ್ಲಿ ರಾಯಲ್ ಎನ್ಫೀಲ್ಡ್ ಕಂಪನಿಯು ಮುಂಭಾಗದಲ್ಲಿ 43 ಎಂಎಂ ಯುಎಸ್ ಡಿ ಫೋರ್ಕ್ಸ್ ಮತ್ತು ಹಿಂಬದಿಯಲ್ಲಿ 200 ಎಂಎಂ ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಟ್ರಾವೆಲ್ ಸಸ್ಷೆಂಷನ್ ನೀಡಲಾಗಿದ್ದು, ನ್ಯಾವಿಗೇಷನ್ ಮತ್ತು ಬ್ಲೂಟೂತ್ ಸಂಪರ್ಕ ಹೊಂದಿರುವ ದೊಡ್ಡದಾದ ಮತ್ತು ವೃತ್ತಾಕಾರದ ಟಿಎಫ್ ಟಿ ಸ್ಕ್ರೀನ್ ಅನ್ನು ಒಳಗೊಂಡಿದೆ. ಹಾಗೆಯೇ ಹೊಸ ಬೈಕ್ ಮಾದರಿಯಲ್ಲಿ ರೈಡ್ ಬೈ ವೈರ್ ತಂತ್ರಜ್ಞಾನ ಸೇರಿದಂತೆ ಇಕೋ ಮತ್ತು ಪರ್ಫಾಮೆನ್ಸ್ ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದೆ.
ಎಂಜಿನ್ ಮತ್ತು ಪರ್ಫಾಮೆನ್ಸ್
ಹೊಸ ರಾಯಲ್ ಎನ್ಫೀಲ್ಡ್ ಹಿಮಾಲಯನ್ 450 ಬೈಕ್ ಮಾದರಿಯಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ 452 ಸಿಸಿ ಲಿಕ್ವಿಡ್ ಕೂಲ್ಡ್, DOHC ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಿಸಲಾಗಿದ್ದು, ಇದು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 40 ಹಾರ್ಸ್ ಪವರ್ ಮತ್ತು 40 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.
ಹೊಸ ಬೈಕಿನ ಸುರಕ್ಷಾ ಫೀಚರ್ಸ್ ಬಗೆಗೆ ಹೇಳುವುದಾರರೇ, ಮುಂಭಾಗದ ಚಕ್ರದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯ ಚಕ್ರದಲ್ಲಿ 270 ಎಂಎಂ ಡಿಸ್ಕ್ ಬ್ರೇಕ್ ಜೋಡಣೆ ಮಾಡಲಾಗಿದ್ದು, ಅಡ್ವೆಂಚರ್ ಬೈಕ್ ಚಾಲನೆಗೆ ಸಹಕಾರಿಯಾಗುವಂತೆ ಮುಂಭಾಗದಲ್ಲಿ 21 ಇಂಚಿನ ವ್ಹೀಲ್ ಮತ್ತು ಹಿಂಬದಿಯಲ್ಲಿ 17 ಇಂಚಿನ ವ್ಹೀಲ್ ಅಳವಡಿಸಲಾಗಿದೆ. ಹಾಗೆಯೇ ಹೊಸ ಬೈಕಿನಲ್ಲಿ ಸ್ವಿಚ್ ಮಾಡಬಹುದಾದ ಡ್ಯುಯಲ್ ಚಾನಲ್ ಎಬಿಎಸ್ ನೀಡಲಾಗಿದ್ದು, ಇದು ಅಡ್ವೆಂಚರ್ ರೈಡಿಂಗ್ ನಲ್ಲಿ ಅತ್ಯುತ್ತಮ ಆಯ್ಕೆಯಾಗಿರಲಿದೆ.
ಇದನ್ನೂ ಓದಿ: ಹೀರೋ ಜೂಮ್ 125ಆರ್ ಮತ್ತು ಜೂಮ್ 160 ಮ್ಯಾಕ್ಸಿ ಸ್ಕೂಟರ್ ಅನಾವರಣ!
ಇದರೊಂದಿಗೆ ಹೊಸ ಬೈಕ್ 230 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ನೊಂದಿಗೆ ಒಟ್ಟು 17 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಪಡೆದುಕೊಂಡಿದ್ದು, ಈ ಮೂಲಕ ಹೊಸ ಬೈಕ್ ಮಧ್ಯಮ ಕ್ರಮಾಂಕದ ಪ್ರಮುಖ ಅಡ್ವೆಂಚರ್ ಬೈಕ್ ಮಾದರಿಗಳಾದ ಯೆಜ್ಡಿ ಅಡ್ವೆಂಚರ್, ಟ್ರಯಂಫ್ ಸ್ಕ್ರಾಂಬ್ಲರ್ 400ಎಕ್ಸ್ ಮತ್ತು ಬಿಎಂಡಬ್ಲ್ಯು ಜಿ 310 ಜಿಎಸ್ ಮಾದರಿಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.
Published On - 3:59 pm, Sat, 25 November 23