Honda CB350 Vs RE Classic 350: ಹೋಂಡಾ ಸಿಬಿ350 Vs ಆರ್‍ಇ ಕ್ಲಾಸಿಕ್ 350.. ಖರೀದಿಗೆ ಯಾವುದು ಬೆಸ್ಟ್?
ಹೋಂಡಾ ಮೋಟಾರ್ ಸೈಕಲ್ ಕಂಪನಿಯು ತನ್ನ ಹೊಸ ಸಿಬಿ350 ಬೈಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯೊಂದಿಗೆ ಹೋಂಡಾ ಕಂಪನಿಯು 350 ಸಿಸಿ ವಿಭಾಗದ ಪ್ರಮುಖ ಕ್ಲಾಸಿಕ್ ಬೈಕ್ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ. ಹಾಗಾದ್ರೆ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಸಿಬಿ350 ಹೇಗಿ ವಿಭಿನ್ನವಾಗಿದೆ ಮತ್ತು ವಿಶೇಷತೆಗಳೇನು? ಎನ್ನುವ ವಿಶೇಷ ಮಾಹಿತಿಗಳು ಇಲ್ಲಿವೆ.
ದೇಶಿಯ ಮಾರುಕಟ್ಟೆಯಲ್ಲಿನ ದ್ವಿಚಕ್ರ ವಾಹನಗಳ (Two Wheelers) ಮಾರಾಟವು ಹೊಸ ದಾಖಲೆಗಳಿಗೆ ಕಾರಣವಾಗುತ್ತಿದ್ದು, ಪ್ರೀಮಿಯಂ ಬೈಕ್ ಮಾದರಿಗಳಿಗೂ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿವೆ. ಪ್ರೀಮಿಯಂ ಬೈಕ್ ಮಾದರಿಗಳಲ್ಲಿ ರಾಯಲ್ ಎನ್ ಫೀಲ್ಡ್ ನಿರ್ಮಾಣದ ಕ್ಲಾಸಿಕ್ ಬೈಕ್ ಮಾದರಿಗಳು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದೇ ಹಾದಿಯಲ್ಲಿ ಸಾಗುತ್ತಿರುವ ಹೋಂಡಾ ಮೋಟಾರ್ ಸೈಕಲ್ ಕಂಪನಿಯು ಕೂಡಾ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಪ್ರೀಮಿಯಂ ಬೈಕ್ ಮಾದರಿಗಳನ್ನು ಪರಿಚಯಿಸುತ್ತಿದೆ. ಕಮ್ಯುಟರ್ ಬೈಕ್ ಮಾದರಿಗಳೊಂದಿಗೆ ಈಗಾಗಲೇ ಹೀರೋ ಮೋಟೊಕಾರ್ಪ್ ಹಿಂದಿಕ್ಕಿರುವ ಹೋಂಡಾ ಮೋಟಾರ್ ಸೈಕಲ್ ಕಂಪನಿಯು ಇದೀಗ ಪ್ರೀಮಿಯಂ ಬೈಕ್ ಮಾದರಿಗಳೊಂದಿಗೆ ರಾಯಲ್ ಎನ್ ಫೀಲ್ಡ್ ಕಂಪನಿಗೆ ಭರ್ಜರಿ ಪೈಪೋಟಿ ನೀಡುವ ಯೋಜನೆಯಲ್ಲಿದೆ.
ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು
ಪ್ರೀಮಿಯಂ ಬೈಕ್ ಮಾದರಿಗಳಿಗಾಗಿಯೇ ಬಿಗ್ ವಿಂಗ್ ಮಾರಾಟ ಮಳಿಗೆಗಳನ್ನು ಹೊಂದಿರುವ ಹೋಂಡಾ ಕಂಪನಿಯು ಹೊಸ ಸಿಬಿ350 ರೆಟ್ರೋ ಕ್ಲಾಸಿಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಇದು ರಾಯಲ್ ಎನ್ ಫೀಲ್ಡ್ ನಿರ್ಮಾಣದ ಕ್ಲಾಸಿಕ್ 350 ಮತ್ತು ಬುಲೆಟ್ 350 ಬೈಕ್ ಮಾದರಿಗಳಿಗೆ ಹೆಚ್ಚಿನ ಪೈಪೋಟಿ ನೀಡಲಿದೆ. ಹೊಸ ಬೈಕ್ ಮಾದರಿಯು ಪ್ರತಿಸ್ಪರ್ಧಿ ಮಾದಿರಗಳಿಂತಲೂ ಕಡಿಮೆ ಬೆಲೆ, ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಬಲಶಾಲಿ ಎಂಜಿನ್ ಆಯ್ಕೆ ಪಡೆದುಕೊಂಡಿದೆ.
ಇದನ್ನೂ ಓದಿ: ಅಪಘಾತಗಳನ್ನು ತಗ್ಗಿಸಲು ಇನ್ಮುಂದೆ ಈ ಸೇಫ್ಟಿ ಫೀಚರ್ಸ್ ಅಳವಡಿಕೆ ಕಡ್ಡಾಯ!
ಹಾಗೆಯೇ ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ ಮತ್ತು ಬುಲೆಟ್ ಬೈಕ್ ಗಳಲ್ಲಿ ಎಲ್ಇಡಿ ಹೆಡ್ ಲ್ಯಾಂಪ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಗಳನ್ನು ನೀಡದಿದ್ದರೂ ಗುಣಮಟ್ಟದ ಉತ್ಪಾದನೆಯಿಂದ ಹೆಚ್ಚಿನ ಬೇಡಿಕೆಪಡೆದುಕೊಳ್ಳುತ್ತಿವೆ. ಜೊತೆಗೆ ಆರ್ ಇ 350 ಸಿಸಿ ಬೈಕ್ ಮಾದರಿಗಳಲ್ಲಿ ಸಿಂಗಲ್ ಚಾನೆಲ್ ಎಬಿಎಸ್, ಡ್ಯುಯಲ್ ಚಾನೆಲ್ ಎಬಿಎಸ್, ಎಲೆಕ್ಟ್ರಿಕ್ ಸ್ಟಾರ್ಟ್, ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಫ್ರಂಟ್ ಅಂಡ್ ರಿಯರ್ ಡಿಸ್ಕ್ ಬ್ರೇಕ್ ಹೊಂದಿವೆ.
ಹೋಂಡಾ ಕಂಪನಿಯು ಸಿಬಿ350 ಮಾದರಿಯಲ್ಲಿ ಕ್ಲಾಸಿಕ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಜೋಡಣೆ ಮಾಡಿದ್ದು, ರೆಟ್ರೋ ವಿನ್ಯಾಸ ಆಧರಿತ ಲಾಂಗ್ ಮೆಟಲ್ ಫೆಂಡರ್, ಮೆಟಲ್ ಕವರ್ ಒಳಗೊಂಡಿರುವ ಫ್ರಂಟ್ ಫೋರ್ಕ್ಸ್, ವಿಭಜಿತ ಆಸನ, ಡಿಜಿಟಲ್ ಅನಲಾಗ್ ಇನ್ಸ್ಟುಮೆಂಟ್ ಕ್ಲಸ್ಟರ್, ಹೋಂಡಾ ಸ್ಮಾರ್ಟ್ ಫೋನ್ ವಾಯ್ಸ್ ಕಂಟ್ರೋಲ್ ಸಿಸ್ಟಂ(ಹೆಚ್ಎಸ್ ವಿಸಿಎಸ್), ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ ಮತ್ತು ಹೋಂಡಾ ಸೆಲೆಕ್ಟೆಬಲ್ ಟಾರ್ಕ್ ಕಂಟ್ರೋಲ್ ಸೌಲಭ್ಯಗಳನ್ನು ನೀಡಿದೆ.
ಇದಲ್ಲದೆ ಹೊಸ ಬೈಕ್ ಮಾದರಿಯಲ್ಲಿ ಟೆಲಿಸ್ಕೋಫಿಕ್ ಫ್ರಂಟ್ ಫೋರ್ಕ್ಸ್ ಸಸ್ಷೆಂಷನ್ ಮತ್ತು ನೈಟ್ರೊಜೆನ್ ಚಾರ್ಜ್ಡ್ ರಿಯರ್ ಸಸ್ಷೆಂಷನ್ ಜೋಡಣೆಯೊಂದಿಗೆ ಪ್ರಿಸಿಯಸ್ ರೆಡ್ ಮೆಟಾಲಿಕ್, ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಮ್ಯಾಟೆ ಕ್ರಸ್ಟ್ ಮೆಟಾಲಿಕ್, ಮ್ಯಾಟೆ ಮಾರ್ಷಲ್ ಗ್ರೀನ್ ಮೆಟಾಲಿಕ್ ಮತ್ತು ಮ್ಯಾಟೆ ಡುನೆ ಬ್ರೌನ್ ಬಣ್ಣಗಳ ಆಯ್ಕೆ ನೀಡಲಾಗಿದೆ.
ಎಂಜಿನ್ ಮತ್ತು ಪರ್ಫಾಮೆನ್ಸ್
ರಾಯಲ್ ಎನ್ ಫೀಲ್ಡ್ ಕಂಪನಿಯು ಕ್ಲಾಸಿಕ್ 350 ಬೈಕ್ ಮಾದರಿಯಲ್ಲಿ 349.34 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನೀಡಿದ್ದು, ಇವು 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 19..94 ಹಾರ್ಸ್ ಪವರ್ ಮತ್ತು 27 ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.
ಹಾಗೆಯೇ ಬಲಶಾಲಿಯಾಗಿರುವ ಸಿಬಿ350 ಬೈಕ್ ಮಾದರಿಯಲ್ಲಿ ಹೋಂಡಾ ಕಂಪನಿಯು 348.36 ಸಿಸಿ, 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಣೆ ಮಾಡಿದ್ದು, ಇದು ಬಿಎಸ್6 ಎರಡನೇ ಹಂತದ ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಪೂರೈಸಿದೆ. ಈ ಮೂಲಕ ಹೊಸ ಬೈಕ್ 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 21 ಹಾರ್ಸ್ ಪವರ್ ಮತ್ತು 29 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಇದು ದಿನ ನಿತ್ಯದ ಬಳಕೆಯ ಜೊತೆಗೆ ದೀರ್ಘಕಾಲಿಕ ಪ್ರವಾಸದ ಉದ್ದೇಶಕ್ಕೂ ಅನುಕೂಲಕರವಾಗಿದೆ.
ಇದರೊಂದಿಗೆ ಸಿಬಿ350 ಹೊಸ ಬೈಕಿನಲ್ಲಿ ಸುರಕ್ಷತೆಗಾಗಿ ಸ್ಟ್ಯಾಂಡರ್ಡ್ ಡ್ಯುಯಲ್ ಚಾನಲ್ ಎಬಿಎಸ್ ಸೇರಿದಂತೆ ಮುಂಭಾಗದ ಚಕ್ರದಲ್ಲಿ 310ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು 240 ಎಂಎಂ ರಿಯರ್ ಡಿಸ್ಕ್ ಬ್ರೇಕ್ ನೀಡಲಾಗಿದ್ದು, ರಸ್ತೆಯಲ್ಲಿ ಉತ್ತಮ ಹಿಡಿತಕ್ಕಾಗಿ 130-ಸೆಕ್ಷನ್ 18 ಇಂಚಿನ ಟೈರ್ ಗಳನ್ನು ಜೋಡಿಸಲಾಗಿದ್ದು, ಹೊಸ ಬೈಕ್ ಖರೀದಿಸುವ ಗ್ರಾಹಕರಿಗೆ 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ಜೊತೆಗೆ 7 ವರ್ಷಗಳ ವಿಸ್ತರಿತ ವಾರಂಟಿ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: ಪ್ರತಿ ಚಾರ್ಜ್ ಗೆ ಬರೋಬ್ಬರಿ 738 ಕಿಮೀ ಮೈಲೇಜ್ ನೀಡುತ್ತೆ ಈ ಇವಿ ಎಂಪಿವಿ ಕಾರು
ಬೆಲೆ ಮತ್ತು ವೆರಿಯೆಂಟ್ ಗಳು
ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಸಿಬಿ350 ಬೈಕ್ ಮಾದರಿಯು ಡಿಎಲ್ಎಕ್ಸ್ ಮತ್ತು ಡಿಎಲ್ಎಕ್ಸ್ ಪ್ರೊ ಎನ್ನುವ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಡಿಎಲ್ಎಕ್ಸ್ ವೆರಿಯೆಂಟ್ ರೂ. 1,99,999 ಬೆಲೆ ಹೊಂದಿದ್ದರೆ ಡಿಎಲ್ಎಕ್ಸ್ ಪ್ರೊ ವೆರಿಯೆಂಟ್ ರೂ. 2,17,800 ಬೆಲೆ ಹೊಂದಿದೆ.
ಅದೇ ರೀತಿಯಾಗಿ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ ಬೈಕ್ ಮಾದರಿಯು ಸಹ ವಿವಿಧ ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 1.93 ಲಕ್ಷದಿಂದ ರೂ. 2.13 ಲಕ್ಷ ಬೆಲೆ ಹೊಂದಿದ್ದು, ಇವು ವಿವಿಧ ಕಾರಣಗಳಿಗೆ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿವೆ. ಈ ಮೂಲಕ ಎರಡೂ ಬೈಕ್ ಮಾದರಿಗಳು ಇದೀಗ ಕ್ಲಾಸಿಕ್ ಬೈಕ್ ಪ್ರಿಯರ ಆದ್ಯತೆಗೆ ಅನುಗುಣವಾಗಿ ಖರೀದಿಗೆ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಹೊಸ ಸಿಬಿ350 ಬೈಕ್ ಹೇಗೆ ಬೇಡಿಕೆ ಪಡೆದುಕೊಳ್ಳಲಿದೆ ಎನ್ನುವುದನ್ನು ಕಾಯ್ದುನೋಡಬೇಕಿದೆ.
Published On - 6:33 pm, Mon, 20 November 23