Toyota Innova Hycross: ವಿಶೇಷ ಫೀಚರ್ಸ್ ಹೊಂದಿರುವ ಟೊಯೊಟಾ ಇನೋವಾ ಹೈಕ್ರಾಸ್ ಲಿಮಿಟೆಡ್ ಎಡಿಷನ್ ಬಿಡುಗಡೆ

ಟೊಯೊಟಾ ಕಂಪನಿಯು ಇನೋವಾ ಹೈಕ್ರಾಸ್ ಎಂಪಿವಿ ಆವೃತ್ತಿಯಲ್ಲಿ ವಿಶೇಷ ಫೀಚರ್ಸ್ ಹೊಂದಿರುವ ಲಿಮಿಟೆಡ್ ಎಡಿಷನ್ ಬಿಡುಗಡೆ ಮಾಡಿದ್ದು, ಸೀಮಿತ ಅವಧಿಗೆ ಮಾತ್ರ ಹೊಸ ಕಾರು ಖರೀದಿಗೆ ಲಭ್ಯವಿರಲಿದೆ.

Toyota Innova Hycross: ವಿಶೇಷ ಫೀಚರ್ಸ್ ಹೊಂದಿರುವ ಟೊಯೊಟಾ ಇನೋವಾ ಹೈಕ್ರಾಸ್ ಲಿಮಿಟೆಡ್ ಎಡಿಷನ್ ಬಿಡುಗಡೆ
Follow us
Praveen Sannamani
|

Updated on: Nov 21, 2023 | 2:50 PM

ಇನೋವಾ ಹೈಕ್ರಾಸ್ ಮೂಲಕ ಪ್ರೀಮಿಯಂ ಎಂಪಿವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿರುವ ಟೊಯೊಟಾ (Toyota) ಕಂಪನಿಯು ಇದೀಗ ಹೊಸದಾಗಿ ಇನೋವಾ ಹೈಕ್ರಾಸ್ ಲಿಮಿಟೆಡ್ ಎಡಿಷನ್ ಬಿಡುಗಡೆ ಮಾಡಿದ್ದು, ಜಿಎಕ್ಸ್ ವೆರಿಯೆಂಟ್ ಆಧರಿಸಿ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಹೊಸ ಆವೃತ್ತಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 20.07 ಲಕ್ಷ ಆರಂಭಿಕ ಬೆಲೆ ಹೊಂದಿದೆ.

ಹೊಸ ಲಿಮೆಟೆಡ್ ಎಡಿಷನ್ ಇನೋವಾ ಹೈಕ್ರಾಸ್ ಕಾರು ಮಾದರಿಯು ಸಾಮಾನ್ಯ ಜಿಎಕ್ಸ್ ವೆರಿಯೆಂಟ್ ಗಿಂತ ರೂ. 40 ಸಾವಿರದಷ್ಟು ದುಬಾರಿಯಾಗಿರಲಿದ್ದು, ಇದು ಸಂಪೂರ್ಣ ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಮಾರಾಟಗೊಳ್ಳಲಿದೆ. ಹೊಸ ಆವೃತ್ತಿಯಲ್ಲಿ ಟೊಯೊಟಾ ಕಂಪನಿಯು ಬಂಪರ್ ಮತ್ತು ಗ್ರಿಲ್ ಗಳ ಮೇಲೆ ಕ್ರೊಮ್ ಗಾರ್ನಿಶ್ ಜೊತೆಗೆ ಹೊಸ ಫ್ಲಕ್ಸ್ ಸಿಲ್ವರ್ ಸ್ಕೀಡ್ ಪ್ಲೇಡ್ ನೀಡಲಾಗಿದ್ದರೆ ಕಾರಿನ ಒಳಭಾಗದಲ್ಲಿ ಬ್ರೌನ್ ಫೀನಿಷ್ ಹೊಂದಿರುವ ಸಾಫ್ಟ್ ಟಚ್ ಡ್ಯಾಶ್ ಬೋರ್ಡ್, ವಿಂಡೋ ಕಂಟ್ರೋಲ್ ಬಳಿ ಹೊಸ ವಿನ್ಯಾಸದ ಫ್ಲಕ್ಸ್ ವುಡ್ ಟ್ರಿಮ್ ಮತ್ತು ಡ್ಯುಯಲ್ ಟೋನ್ ಹೊಂದಿರುವ ಫ್ಯಾಬ್ರಿಕ್ ಸೀಟುಗಳನ್ನು ನೀಡಲಾಗಿದೆ.

ಟೊಯೊಟಾ ಕಂಪನಿಯು ಹೊಸ ಆವೃತ್ತಿಯನ್ನು 7 ಸೀಟರ್ ಮತ್ತು 8 ಸೀಟರ್ ಮಾದರಿಯಲ್ಲೂ ಮಾರಾಟ ಮಾಡಲಿದ್ದು, ಇನ್ನುಳಿದಂತೆ ಸಾಮಾನ್ಯ ಇನೋವಾ ಹೈಕ್ರಾಸ್ ಮಾದರಿಯಲ್ಲಿ ವಿವಿಧ ತಾಂತ್ರಿಕ ಸೌಲಭ್ಯಗಳು ಮತ್ತು ಎಂಜಿನ್ ಆಯ್ಕೆ ಈ ಹಿಂದಿನಿಂತಯೇ ಮುಂದುವರಿಯಲಿವೆ.

ಇದನ್ನೂ ಓದಿ: ರೂ. 10 ಲಕ್ಷಕ್ಕೆ ಭರ್ಜರಿ ಮೈಲೇಜ್ ನೀಡುವ ಅತ್ಯುತ್ತಮ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳಿವು!

ಇನ್ನು ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟೊಯೊಟಾ ಹೊಸ ಇನೋವಾ ಹೈಕ್ರಾಸ್ ಕಾರು ಮಾದರಿಯನ್ನು ಕಳೆದ ಕೆಲ ತಿಂಗಳ ಹಿಂದಷ್ಟೆ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ಸದ್ಯ ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 18.82 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 30.26 ಲಕ್ಷ ಬೆಲೆ ಹೊಂದಿದೆ. ಹೊಸ ಕಾರು ಮಾದರಿಯು ಜಿ, ಜಿಎಕ್ಸ್, ವಿಎಕ್ಸ್, ಜೆಡ್ಎಕ್ಸ್ ಮತ್ತು ಜೆಡ್ಎಕ್ಸ್(ಒ) ವೆರಿಯೆಂಟ್ ಗಳನ್ನು ಹೊಂದಿದ್ದು, ಹೊಸ ಕಾರು ಪೆಟ್ರೋಲ್ ಮತ್ತು ಹೈಬ್ರಿಡ್ ಮಾದರಿಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ.

ಸುಧಾರಿತ ತಂತ್ರಜ್ಞಾನ ಪ್ರೇರಿತ ಟಿಎನ್ ಜಿಸಿ-ಎ ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣವಾಗಿರುವ ಹೊಸ ಇನೋವಾ ಹೈಕ್ರಾಸ್ ಹೊಸ ಕಾರು ಹಲವಾರು ಹೊಸ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ವಿನೂತನ ವಿನ್ಯಾಸದ ಜೊತೆಗೆ ವಿವಿಧ ಪ್ರೀಮಿಯಂ ಫೀಚರ್ಸ್ ಗಳನ್ನು ಪಡೆದುಕೊಂಡಿದೆ.

ಹೊಸ ಇನೋವಾ ಹೈಕ್ರಾಸ್ ಕಾರು ಮಾದರಿಯು ಪ್ರಮುಖ 2 ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಇದರಲ್ಲಿ 2.0 ಲೀಟರ್ ಸಾಮಾನ್ಯ ಪೆಟ್ರೋಲ್ ಮತ್ತು 2.0 ಲೀಟರ್ ಪೆಟ್ರೋಲ್ ಜೊತೆ ಹೈಬ್ರಿಡ್ ಎಂಜಿನ್ ಆಯ್ಕೆಯನ್ನು ನೀಡಲಾಗಿದೆ. ಇದರಲ್ಲಿ 2.0 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮಾದರಿಯು 172 ಹಾರ್ಸ್ ಪವರ್ ಮತ್ತು 205 ಎನ್ಎಂ ಟಾರ್ಕ್ ಉತ್ಪಾದಿಸಿದರೆ ಹೈಬ್ರಿಡ್ ಮಾದರಿಯು ಸಿವಿಟಿ ಗೇರ್ ಬಾಕ್ಸ್ ನೊಂದಿಗೆ 150 ಹಾರ್ಸ್ ಪವರ್, 187 ಎನ್ಎಂ ಟಾರ್ಕ್‌ ಉತ್ಪಾದಿಸುತ್ತದೆ. ಈ ಮೂಲಕ ಹೊಸ ಕಾರು ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 21 ಕಿ.ಮೀ ಮೈಲೇಜ್ ಹಿಂದಿರುಗಿಸಿದರೆ ಹೈಬ್ರಿಡ್ ಮಾದರಿಯು ಸಂಪೂರ್ಣ ಪೆಟ್ರೋಲ್ ಟ್ಯಾಂಕ್ ನೊಂದಿಗೆ ಒಂದು ಬಾರಿಗೆ 1,097 ಕಿ.ಮೀ ಸಂಚರಿಸುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಸುರಕ್ಷಿತ ಕಾರುಗಳಿವು!

ಇದಲ್ಲದೆ ಹೊಸ ಕಾರು 4,755 ಎಂಎಂ ಉದ್ದ, 1,850 ಎಂಎಂ ಅಗಲ, 1,795 ಎಂಎಂ ಎತ್ತರ, 2,850 ಎಂಎಂ ವ್ಹೀಲ್ ಬೆಸ್ ಮತ್ತು 185 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಗರಿಷ್ಠ ಸುರಕ್ಷತೆಗಾಗಿ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೇರಿದಂತೆ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದೆ.