AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Skoda Kushaq Vs Honda Elevate: ಸ್ಕೋಡಾ ಕುಶಾಕ್ ಪ್ರತಿಸ್ಪರ್ಧಿ ಹೋಂಡಾ ಎಲಿವೇಟ್ ವಿಶೇಷತೆಗಳೇನು?

ಭಾರತದಲ್ಲಿ ಪ್ರೀಮಿಯಂ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳ ಮಾರಾಟ ಹೆಚ್ಚುತ್ತಿದ್ದು, ಈ ವಿಭಾಗದಲ್ಲಿ ಇತ್ತೀಚೆಗೆ ಹಲವಾರು ಕಾರು ಮಾದರಿಗಳು ಲಗ್ಗೆಯಿಟ್ಟಿವೆ. ಹೊಸ ಕಾರುಗಳಲ್ಲಿ ಹೋಂಡಾ ಎಲಿವೇಟ್ ಕೂಡಾ ಗಮನಸೆಳೆಯುತ್ತಿದ್ದು, ಇದು ಹಲವಾರು ವಿಶೇಷತೆಗಳೊಂದಿಗೆ ಪ್ರಮುಖ ಪ್ರತಿಸ್ಪರ್ಧಿ ಕಾರುಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

Skoda Kushaq Vs Honda Elevate: ಸ್ಕೋಡಾ ಕುಶಾಕ್ ಪ್ರತಿಸ್ಪರ್ಧಿ ಹೋಂಡಾ ಎಲಿವೇಟ್ ವಿಶೇಷತೆಗಳೇನು?
ಸ್ಕೋಡಾ ಕುಶಾಕ್ Vs ಹೋಂಡಾ ಎಲಿವೇಟ್
Follow us
Praveen Sannamani
|

Updated on: Nov 19, 2023 | 10:00 AM

ಭಾರತದಲ್ಲಿ ಕಳೆದ ಐದು ವರ್ಷಗಳಿಂದ ಕಂಪ್ಯಾಕ್ಟ್ ಎಸ್‌ಯುವಿ (Compact SUV) ಕಾರು ಮಾರಾಟ ಸಾಕಷ್ಟು ಬೆಳವಣಿಗೆ ಸಾಧಿಸಿದ್ದು, ಈ ವಿಭಾಗದಲ್ಲಿ ಇತ್ತೀಚೆಗೆ ಹಲವಾರು ಮಾದರಿಗಳು ಲಗ್ಗೆಯಿಟ್ಟಿವೆ. ಹೊಸ ಹೋಂಡಾ ಎಲಿವೇಟ್ ಕಾರು ಕೂಡಾ ಕಂಪ್ಯಾಕ್ಟ್ ಎಸ್ ಯುವಿ ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದು ಸ್ಕೋಡಾ ಕುಶಾಕ್ ಮಾದರಿಗೆ ಉತ್ತಮ ಪೈಪೋಟಿ ನೀಡುತ್ತಿದೆ. ಕಂಪ್ಯಾಕ್ಟ್ ಎಸ್ ಯುವಿ ಮಾರಾಟದಲ್ಲಿ ಸದ್ಯ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್, ಸ್ಕೋಡಾ ಕುಶಾಕ್, ಫೋಕ್ಸ್ ವ್ಯಾಗನ್ ಟೈಗುನ್ ಮತ್ತು ಸಿಟ್ರನ್ ಸಿ3 ಏರ್ ಕ್ರಾಸ್ ಕಾರುಗಳು ಪ್ರಮುಖವಾಗಿವೆ.

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಮಹತ್ವದ ಬದಲಾವಣೆ ಪರಿಚಯಿಸಿದ ನಂತರ ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಡಬ್ಲ್ಯುಆರ್-ವಿ ಸ್ಥಾನಕ್ಕೆ ಹೊಚ್ಚ ಹೊಸ ಎಲಿವೇಟ್ ಮಾದರಿಯನ್ನು ಪರಿಚಯಿಸಿತು. ಇದು ಪ್ರಸ್ತುತ ಮಾರುಕಟ್ಟೆಯಲ್ಲಿನ ಪ್ರತಿಸ್ಪರ್ಧಿ ಮಾದರಿಗಳಂತೆ ಹಲವಾರು ಪ್ರೀಮಿಯಂ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಆಕರ್ಷಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ಸ್ಕೋಡಾ ಕುಶಾಕ್ ಮಾದರಿಗಳಿಗೆ ಸರಿಸಮನಾದ ಹಲವಾರು ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಈ ಎರಡು ಕಾರುಗಳಲ್ಲಿ ಯಾವುದು ಉತ್ತಮ ಎನ್ನುವುದನ್ನು ತಿಳಿಯೋಣ ಬನ್ನಿ.

Skoda Kushaq Vs Honda Elevate (1)

ಬೆಲೆ ಮತ್ತು ವೈಶಿಷ್ಟ್ಯತೆಗಳು

ಹೊಸ ಎಲಿವೇಟ್ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 11 ಲಕ್ಷದಿಂದ ರೂ. 16.20 ಲಕ್ಷ ಬೆಲೆ ಹೊಂದಿದ್ದು, ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಇದು ಒಟ್ಟು ನಾಲ್ಕು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ. SV, V, VX ಮತ್ತು ZX ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಎಸ್ ವಿ ಮ್ಯಾನುವಲ್ ವೆರಿಯೆಂಟ್ ರೂ. 11 ಲಕ್ಷ ಆರಂಭಿಕ ಬೆಲೆ ಹೊಂದಿದ್ದರೆ ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿರುವ ಜೆಡ್ಎಕ್ಸ್ ವೆರಿಯೆಂಟ್ ರೂ. 16.20 ಲಕ್ಷ ಬೆಲೆ ಹೊಂದಿದೆ.

ಹೋಂಡಾ ಎಲಿವೇಟ್ ಕಾರಿಗೆ ಪೈಪೋಟಿಯಾಗಿರುವ ಸ್ಕೋಡಾ ಕುಶಾಕ್ ಕಾರು ಕೂಡಾ ಉತ್ತಮ ಬೇಡಿಕೆ ಹೊಂದಿದ್ದು, ಕುಶಾಕ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಆಕ್ಟಿವ್, ಆ್ಯಂಬಿನೇಷನ್, ಸ್ಟೈಲ್ ಮತ್ತು ಮಾಂಟೆ ಕಾರ್ಲೋ ಎನ್ನುವ ನಾಲ್ಕು ವೆರಿಯೆಂಟ್‌ಗಳನ್ನು ಹೊಂದಿದ್ದು, ದೆಹಲಿ ಆರಂಭಿಕವಾಗಿ ರೂ. 10.89 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 20.01 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದೆ.

ಇದನ್ನೂ ಓದಿ: ಅಪಘಾತಗಳನ್ನು ತಗ್ಗಿಸಲು ಇನ್ಮುಂದೆ ಈ ಸೇಫ್ಟಿ ಫೀಚರ್ಸ್ ಅಳವಡಿಕೆ ಕಡ್ಡಾಯ!

ಹೋಂಡಾ ಎಲಿವೇಟ್ ಕಾರು ಹೋಂಡಾ ಗ್ಲೋಬಲ್ ಸ್ಮಾಲ್ ಕಾರ್ ಪ್ಲ್ಯಾಟ್ ಫಾರ್ಮ್ ಆಧರಿಸಿ ನಿರ್ಮಾಣವಾಗಿದ್ದು, ನ್ಯೂ ಜನರೇಷನ್ ಸಿಆರ್-ವಿ ಮತ್ತು ಡಬ್ಲ್ಯುಆರ್-ವಿ ಕಾರುಗಳ ವಿನ್ಯಾಸ ಪ್ರೇರಣೆಯೊಂದಿಗೆ ಬಾಕ್ಸಿ ಡಿಸೈನ್ ಹೊಂದಿದೆ. ಈ ಮೂಲಕ ಹೊಸ ಎಲಿವೇಟ್ ಕಾರು ದೊಡ್ಡದಾದ ಕ್ರೊಮ್ ಸಿಗ್ನೆಚರ್ ಗ್ರಿಲ್, ಬೋಲ್ಡ್ ಏರ್ ಡ್ಯಾಮ್, ಆಲ್ ಎಲ್ಇಡಿ ಲೈಟಿಂಗ್ಸ್, ಫ್ಲಕ್ಸ್ ಸ್ಕೀಡ್ ಪ್ಲೇಟ್, 17 ಇಂಚಿನ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್, ಪ್ಲಾಸ್ಟಿಕ್ ಕ್ಲ್ಯಾಡಿಂಗ್ ಮತ್ತು ವ್ಹೀಲ್ ಆರ್ಚ್ ಪಡೆದುಕೊಂಡಿದೆ. ಹಾಗೆಯೇ ಹೊಸ ಕಾರಿನ ಒಳಭಾಗವು ಕೂಡಾ ಆಕರ್ಷಕವಾಗಿದ್ದು, ಕಾರಿನ ಒಳಭಾಗದಲ್ಲಿ ಪ್ರೀಮಿಯಂ ಆಗಿರುವ ಡ್ಯಾಶ್ ಬೋರ್ಡ್, 10.25 ಇಂಚಿನ ಟಚ್ ಸ್ಕ್ರೀನ್ ಇನ್ಪೊಟೈನ್ ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, 7 ಇಂಚಿನ ಸೆಮಿ ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ಸಿಂಗಲ್ ಪೇನ್ ಪನೊರಮಿಕ್ ಸನ್ ರೂಪ್ ಸೇರಿದಂತೆ ಹಲವಾರು ಫೀಚರ್ಸ್ ನೀಡಲಾಗಿದೆ.

ಕುಶಾಕ್ ಕಾರು ಮಾದರಿಯು ಸಹ ಪ್ರತಿಸ್ಪರ್ಧಿ ಮಾದರಿಗಳಿಗೆ ಅನುಗುಣವಾಗಿ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿದೆ. ಅತ್ಯಾಧುನಿಕ ವಿನ್ಯಾಸ ಭಾಷೆ ಹೊಂದಿರುವ ಕುಶಾಕ್ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ಗಳಿದ್ದು, ಸುರಕ್ಷತೆಯಲ್ಲಿ ಇತರೆ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮವಾಗಿದೆ.

Skoda Kushaq Vs Honda Elevate (2)

ಎಂಜಿನ್ ಮತ್ತು ಪರ್ಫಾಮೆನ್ಸ್

ಹೋಂಡಾ ಎಲಿವೇಟ್ ಕಾರಿನಲ್ಲಿ 1.5 ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದರಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ನೀಡಲಾಗಿದೆ. ಇದು ಗರಿಷ್ಠ 121 ಹಾರ್ಸ್ ಪವರ್ ಮತ್ತು 145 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಉತ್ತಮ ಇಂಧನ ದಕ್ಷತೆ ಹೊಂದಿದೆ.

ಸ್ಕೋಡಾ ಕಂಪನಿಯು ಕುಶಾಕ್ ಕಾರು ಮಾದರಿಯಲ್ಲಿ 1.0-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಮತ್ತು ಟಾಪ್ ಎಂಡ್ ಮಾದರಿಗಳಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡುತ್ತಿದ್ದು, ಇದರಲ್ಲಿ ಆರಂಭಿಕ ವೆರಿಯೆಂಟ್‌ಗಳು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್‌ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ ಟಾಪ್ ಎಂಡ್ ವೆರಿಯೆಂಟ್‌ಗಳು 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಜಿಎಸ್ ಡ್ಯಯುಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿವೆ.

ಸುರಕ್ಷಾ ಸೌಲಭ್ಯಗಳು

ಹೊಸ ಕಾರುಗಳಲ್ಲಿ ಸುರಕ್ಷತೆ ಕುರಿತು ಹೇಳುವುದಾದರೇ, ಹೋಂಡಾ ಎಲಿವೇಟ್ ಕಾರಿನಲ್ಲಿ ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್ ಜೋಡಣೆ ಮಾಡಲಾಗಿದೆ. ಎಲಿವೇಟ್ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ 6 ಏರ್ ಬ್ಯಾಗ್ ಸೇರಿದಂತೆ ಹಿಲ್ ಸ್ಟಾರ್ಟ್ ಅಸಿಸ್ಟ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೌಲಭ್ಯಗಳಿವೆ. ಜೊತೆಗೆ ಜೆಡ್ಎಕ್ಸ್ ಟಾಪ್ ಎಂಡ್ ಮಾದರಿಗೆ ಅನ್ವಯಿಸುವಂತೆ ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ ನೀಡಲಾಗಿದ್ದು, ಇದರಲ್ಲಿ ಕೂಲಿಷನ್ ಬ್ರೇಕಿಂಗ್ ಸಿಸ್ಟಂ, ಲೇನ್ ಡಿಫಾರ್ಚರ್ ವಾರ್ನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್ ರೋಡ್ ಡಿಪಾರ್ಚರ್ ವಾರ್ನಿಂಗ್ ಮತ್ತು ಆಟೋಮ್ಯಾಟಿಕ್ ಹೈ ಭೀಮ್ ಅಸಿಸ್ಟ್ ಸೌಲಭ್ಯಗಳಿವೆ.

ಇದನ್ನೂ ಓದಿ: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಸುರಕ್ಷಿತ ಕಾರುಗಳಿವು!

ಹಾಗೆಯೇ ಹೊಸ ಕುಶಾಕ್ ಕಾರಿನಲ್ಲೂ ಸಹ ಸ್ಕೋಡಾ ಕಂಪನಿ ಹಲವಾರು ಸೇಫ್ಟಿ ಫೀಚರ್ಸ್ ಜೋಡಣೆ ಮಾಡಿದ್ದು, ಇದರಲ್ಲಿ ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಮಲ್ಟಿ ಕೂಲಿಷನ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಬಿಎಸ್ ಜೊತೆ ಇಬಿಡಿ, ಮಲ್ಟಿ ಏರ್‌ಬ್ಯಾಗ್, ರಿಯರ್ ವ್ಯೂ ಕ್ಯಾಮೆರಾ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಸೇರಿದಂತೆ ಹಲವಾರು ಸೇಫ್ಟಿ ಫೀಚರ್ಸ್‌ಗಳಿವೆ. ಈ ಮೂಲಕ ಇದು ಗ್ಲೋಬಲ್ ಎನ್ ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದೆ.

ಯಾವುದು ಬೆಸ್ಟ್?

ಇದರೊಂದಿಗೆ ಹೊಸ ಕಾರುಗಳಲ್ಲಿ ಖರೀದಿಗೆ ಯಾವುದು ಬೆಸ್ಟ್? ಎನ್ನುವ ಪ್ರಶ್ನೆಗೆ ಉತ್ತರ ನೀಡುವುದಾರೇ ಈ ಎರಡೂ ಹೊಸ ಕಾರುಗಳು ಸಹ ಹಲವಾರು ಪ್ರಾಯೋಗಿಕ ಅಂಶಗಳೊಂದಿಗೆ ವಿವಿಧ ಗ್ರಾಹಕ ವರ್ಗಗಳನ್ನು ಸೆಳೆಯತ್ತಿವೆ ಎನ್ನಬಹುದು. ಸ್ಕೋಡಾ ಕುಶಾಕ್ ಕಾರು ಹೋಂಡಾ ಎಲಿವೇಟ್ ಗಿಂತಲೂ ಹೆಚ್ಚು ಸುರಕ್ಷಿತ ಮಾದರಿಯಾಗಿ ಎನ್ನಬಹುದಾಗಿದ್ದು, ಬೆಲೆಯಲ್ಲಿ ಇದು ಎಲಿವೇಟ್ ಗಿಂತಲೂ ಸಾಕಷ್ಟು ದುಬಾರಿಯಾಗಿದೆ. ಹೀಗಾಗಿ ಗ್ರಾಹಕರ ಅಭಿರುಚಿ ಮತ್ತು ಬಜೆಟ್ ಗೆ ಅನುಗುಣವಾಗಿ ಈ ಎರಡು ಕಾರುಗಳು ವಿವಿಧ ಕಾರಣಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ ಎನ್ನಬಹುದು.