ಪ್ರಮುಖ ಎಸ್ಯುವಿ ಕಾರುಗಳ ಮೇಲೆ ಭರ್ಜರಿ ಆಫರ್ ನೀಡುತ್ತಿದೆ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪ್ರಮುಖ ಎಸ್ಯುವಿ ಕಾರುಗಳ ಮೇಲೆ ಸಖತ್ ಆಫರ್ ನೀಡುತ್ತಿದ್ದು, ಹೊಸ ಕಾರು ಖರೀದಿದಾರರಿಗೆ ಇದು ಸುವರ್ಣಾವಕಾಶ ಎನ್ನಬಹುದು.
ದೇಶದ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿರುವ ಟಾಟಾ ಮೋಟಾರ್ಸ್ (Tata Motors) ತನ್ನ ಪ್ರಮುಖ ಎಸ್ಯುವಿ ಕಾರು ಮಾದರಿಗಳಾದ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಸೇರಿದಂತೆ ಟಿಯಾಗೋ, ಟಿಗೋರ್, ಆಲ್ಟ್ರೋಜ್ ಕಾರುಗಳ ಬೆಲೆಯಲ್ಲೂ ಇಳಿಕೆ ಮಾಡಿದೆ. ಹೊಸ ದರಗಳು ಮುಂಬರುವ ಅಕ್ಟೋಬರ್ 31ರ ತನಕ ಮಾತ್ರ ಅನ್ವಯಿಸಲಿದ್ದು, ದಸರಾ ಮತ್ತು ದೀಪಾವಳಿಗಾಗಿ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದೊಂದು ಅತ್ಯುತ್ತಮ ಆಫರ್ ಎನ್ನಬಹುದು.
ಹೊಸ ದರಪಟ್ಟಿಯಲ್ಲಿ ವಿವಿಧ ಮಾದರಿಗಳು ಮತ್ತು ವೆರಿಯೆಂಟ್ ಗಳಿಗೆ ಅನುಗುಣವಾಗಿ ಎಕ್ಸ್ ಶೋರೂಂ ದರದಲ್ಲಿ ರೂ. 30 ಸಾವಿರದಿಂದ ರೂ. 1.80 ಲಕ್ಷದಷ್ಟು ಬೆಲೆ ಇಳಿಕೆ ಮಾಡಿದ್ದು, ಎಸ್ಯುವಿ ಕಾರುಗಳ ಮೇಲೆ ಹೆಚ್ಚಿನ ಆಫರ್ ಪಡೆದುಕೊಳ್ಳಬಹುದಾಗಿದೆ.
ಹ್ಯಾರಿಯರ್ ಮತ್ತು ಸಫಾರಿ ಬೆಲೆ ಇಳಿಕೆಯ ನಂತರ ಸಫಾರಿ ಮತ್ತು ಹ್ಯಾರಿಯರ್ ಕಾರಿನ ಬೆಲೆಯಲ್ಲಿ ರೂ. 1.60 ಲಕ್ಷದಿಂದ ರೂ. 1.80 ಲಕ್ಷದಷ್ಟು ಬೆಲೆ ಇಳಿಕೆ ಮಾಡಲಾಗಿದ್ದು, ಇವು ಸದ್ಯ ಎಕ್ಸ್ ಶೋರೂಂ ಪ್ರಕಾರ ರೂ. 14.99 ಲಕ್ಷ ಮತ್ತು ರೂ. 15.49 ಲಕ್ಷ ಆರಂಭಿಕ ಬೆಲೆ ಹೊಂದಿವೆ. ಸಫಾರಿ ಕಾರು 7 ಸೀಟರ್ ಸೌಲಭ್ಯದೊಂದಿಗೆ ಖರೀದಿಗೆ ಲಭ್ಯವಿದ್ದರೆ ಹ್ಯಾರಿಯರ್ ಕಾರು ಮಾದರಿಯು 5 ಸೀಟರ್ ನೊಂದಿಗೆ ಒಂದೇ ಮಾದರಿಯ ಎಂಜಿನ್ ಮತ್ತು ಗೇರ್ ಬಾಕ್ಸ್ ಆಯ್ಕೆಗಳನ್ನು ಪಡೆದುಕೊಂಡಿವೆ.
ನೆಕ್ಸಾನ್ ಮತ್ತು ಆಲ್ಟ್ರೋಜ್ ಟಾಟಾ ಮೋಟಾರ್ಸ್ ಹೊಸ ದರಪಟ್ಟಿಯಲ್ಲಿ ನೆಕ್ಸಾನ್ ಕಾರು ಮಾದರಿಯು ರೂ. 80 ಸಾವಿರದಷ್ಟು ಅಗ್ಗವಾಗಿದೆ. ನೆಕ್ಸಾನ್ ಕಾರು ಈ ಹಿಂದಿನಂತೆಯೇ ರೂ. 8 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಮಧ್ಯಮ ಕ್ರಮಾಂಕದ ಮತ್ತು ಟಾಪ್ ಎಂಡ್ ವೆರಿಯೆಂಟ್ ಬೆಲೆಯಲ್ಲಿ ಮಾತ್ರ ಇಳಿಕೆ ಮಾಡಲಾಗಿದೆ. ಹಾಗೆಯೇ ಆಲ್ಟ್ರೋಜ್ ಕಾರಿನ ಬೆಲೆಯಲ್ಲಿ ರೂ. 45 ಸಾವಿರದಷ್ಟು ಬೆಲೆ ಇಳಿಕೆ ಮಾಡಲಾಗಿದ್ದು, ಇದು ಸದ್ಯ ಎಕ್ಸ್ ಶೋರೂಂ ಪ್ರಕಾರ ರೂ. 6.50 ಲಕ್ಷ ಆರಂಭಿಕ ಬೆಲೆ ಹೊಂದಿದೆ.
ಟಿಗೋರ್, ಟಿಯಾಗೋ ಸಣ್ಣ ಕಾರುಗಳ ಮಾರಾಟದಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುವ ಟಿಯಾಗೋ ಕಾರಿನ ಬೆಲೆಯಲ್ಲಿ ರೂ. 65 ಸಾವಿರ ಬೆಲೆ ಇಳಿಕೆ ಮಾಡಲಾಗಿದ್ದು, ಟಿಗೋರ್ ಕಾರಿನ ಬೆಲೆಯಲ್ಲಿ ರೂ. 30 ಸಾವಿರದಷ್ಟು ಬೆಲೆ ಇಳಿಕೆ ಮಾಡಲಾಗಿದೆ. ಬೆಲೆ ಇಳಿಕೆ ನಂತರ ಇದೀಗ ಟಿಯಾಗೋ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 5 ಲಕ್ಷ ಆರಂಭಿಕ ಬೆಲೆ ಹೊಂದಿದ್ದರೆ ಟಿಗೋರ್ ಕಾರು ರೂ. 6 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಪ್ರತಿಸ್ಪರ್ಧಿ ಕಾರುಗಳಿಗೆ ಇವು ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಿದೆ.
ಇನ್ನು ಟಾಟಾ ಮೋಟಾರ್ಸ್ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ಬೆಲೆಯಲ್ಲೂ ಇಳಿಕೆ ಮಾಡಿದ್ದು, ನೆಕ್ಸಾನ್ ಇವಿ ಬೆಲೆಯಲ್ಲಿ ರೂ. 3 ಲಕ್ಷದ ತನಕ ಇಳಿಕೆ ಮಾಡಿದ್ದರೆ ಪಂಚ್ ಇವಿ ಕಾರಿನ ಬೆಲೆಯಲ್ಲಿ ರೂ. 1.20 ಲಕ್ಷ ಮತ್ತು ಟಿಯಾಗೋ ಕಾರಿನ ಬೆಲೆಯಲ್ಲಿ ರೂ. 40 ಸಾವಿರದಷ್ಟು ಬೆಲೆ ಇಳಿಕೆ ಮಾಡಿದೆ.