ಜಮ್ಮು-ಕಾಶ್ಮೀರದ (Jammu and Kashmir) ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯು ಸ್ಮಾರ್ಟ್ ಸಿಟಿ (Smart city) ಯೋಜನೆ ಅಡಿ ಶ್ರೀನಗರದಲ್ಲಿ 100 ಎಲೆಕ್ಟ್ರಿಕ್ ಬಸ್ ಗಳನ್ನು (Electric Bus) ಮತ್ತು ಜಮ್ಮುವಿನಲ್ಲಿ 100 ಎಲೆಕ್ಟ್ರಿಕ್ ಬಸ್ ಗಳ ಸಂಚಾರಕ್ಕೆ ನಿರ್ಧರಿಸಿದ್ದು, ಹೊಸ ಯೋಜನೆಗಾಗಿ ಟಾಟಾ ಮೋಟಾರ್ಸ್ (Tata Motors) ಕಂಪನಿಯು ಮೊದಲ ಹಂತದ ಎಲೆಕ್ಟ್ರಿಕ್ ಬಸ್ ಗಳನ್ನು ವಿತರಿಸಿದೆ. ಸುರಕ್ಷಿತ, ಆರಾಮದಾಯಕ ಮತ್ತು ಅನುಕೂಲಕರ ಪ್ರಯಾಣಕ್ಕಾಗಿ ಅತ್ಯಾಧುನಿಕ ವೈಶಿಷ್ಟ್ಯತೆಗಳೊಂದಿಗೆ ಸುಸಜ್ಜಿತವಾಗಿರುವ ಅಲ್ಟ್ರಾ ಇವಿ ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್ ಗಳನ್ನು ವಿತರಣೆ ಮಾಡಲಾಗುತ್ತಿದ್ದು, ಹಂತ-ಹಂತವಾಗಿ 200 ಯುನಿಟ್ ಇವಿ ಬಸ್ ಗಳು ಶ್ರೀನಗರ ಮತ್ತು ಜಮ್ಮುವಿನಲ್ಲಿ ಸಂಚರಿಸಲಿವೆ.
ಶ್ರೀನಗರದಲ್ಲಿ ಪರಿಸರಸ್ನೇಹಿ ಮತ್ತು ಆರ್ಥಿಕ ಸುಸ್ಥಿರತೆಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಜಾಲವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಸಾರ್ವಜನಿಕಎಲೆಕ್ಟ್ರಿಕ್ ಬಸ್ ಗಳನ್ನು ಪರಿಚಯಿಸಲಾಗುತ್ತಿದ್ದು, ಟಾಟಾ ಇವಿ ಬಸ್ ಗಳು ಶೂನ್ಯ-ಮಾಲಿನ್ಯವನ್ನು ಹೊರಸೂಸುವಿಕೆಯೊಂದಿಗೆ ಸುರಕ್ಷತೆ, ಆರಾಮದಾಯಕ ಪ್ರಯಾಣ ಒದಗಿಸಲಿದೆ. ಅಲ್ಟ್ರಾ ಇವಿ ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್ ಗಳು ಇಂಟರ್ ಸಿಟಿ ಪ್ರಯಾಣಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ನಿರ್ಮಾಣಗೊಂಡಿದ್ದು, ಹೊಸ ಇವಿ ಬಸ್ ಸಂಚಾರಕ್ಕೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗೌರ್ನರ್ ಮನೋಜ್ ಸಿನ್ಹಾ ಅವರು ಅಧಿಕೃತವಾಗಿ ಹಸಿರು ನಿಶಾನೆ ತೋರಿದ್ದಾರೆ.
ಇದನ್ನೂ ಓದಿ: ರಾಜ್ಯ ಸಚಿವ ಸಂಪುಟ ಸಚಿವರಿಗೆ ಐಷಾರಾಮಿ ಕಾರು ಭಾಗ್ಯ- ಖುಷಿ ಹಂಚಿಕೊಂಡ ಸಚಿವ
ಟಾಟಾ ಮೋಟಾರ್ಸ್ ಕಂಪನಿಯು ಜಮ್ಮು-ಕಾಶ್ಮೀರದಲ್ಲಿ ಹೊಸ ಇವಿ ಬಸ್ ಗಳ ಪೂರೈಕೆ ಜೊತೆಗೆ 12 ವರ್ಷಗಳ ಕಾಲ ನಿರ್ವಹಣೆ ಮತ್ತು ಕಾರ್ಯಾಚರಣೆಗಾಗಿ ಒಪ್ಪಂದ ಮಾಡಿಕೊಂಡಿದ್ದು, ಮಾಲಿನ್ಯ ನಿಯಂತ್ರಣದಲ್ಲಿ ಹೊಸ ಕ್ರಾಂತಿಗೆ ಸಜ್ಜಾಗುತ್ತಿದೆ.
ದೇಶಾದ್ಯಂತ ವಿವಿಧ ನಗರಗಳ ಸ್ಮಾರ್ಟ್ ಸಿಟಿ ಯೋಜನೆ ಅಡಿ ಟಾಟಾ ಮೋಟಾರ್ಸ್ ಕಂಪನಿಯು ಇದುವರೆಗೆ ಸುಮಾರು 1 ಸಾವಿರ ಎಲೆಕ್ಟ್ರಿಕ್ ಬಸ್ ಗಳನ್ನು ಪೂರೈಕೆ ಮಾಡಿದ್ದು, ವಿತರಣೆಯಾದ ಒಟ್ಟಾರೆ ಇವಿ ಬಸ್ ಗಳು ಇದುವರೆಗೆ 9.6 ಕೋಟಿ ಕಿಲೋ ಮೀಟರ್ ಕ್ರಮಿಸುವ ಮೂಲಕ ಭಾರೀ ಪ್ರಮಾಣದ ಮಾಲಿನ್ಯ ಉತ್ಪಾದನೆ ತಡೆಯುವಲ್ಲಿ ಯಶಸ್ವಿಯಾಗಿವೆ. ಹೀಗಾಗಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಇವಿ ಬಸ್ ಗಳು ರಸ್ತೆಗಿಳಿಯಲು ಸಜ್ಜಾಗುತ್ತಿದ್ದು, ಇವು ಮಾಲಿನ್ಯ ನಿಯಂತ್ರಣದೊಂದಿಗೆ ಕಡಿಮೆ ನಿರ್ವಹಣಾ ವೆಚ್ಚದ ಮೂಲಕ ಸುಸ್ಥಿರ ಅಭಿವೃದ್ದಿಗೆ ಸಹಕಾರಿಯಾಗಲಿವೆ.
ಇದನ್ನೂ ಓದಿ: ಬಿಡುಗಡೆಗೆ ಸಿದ್ದವಾಗಿವೆ ಟಾಪ್ 5 ಬಹುನೀರಿಕ್ಷಿತ ಹೊಸ ಕಾರುಗಳು!
ಇನ್ನು ಟಾಟಾ ಅಲ್ಟ್ರಾ ಎಲೆಕ್ಟ್ರಿಕ್ ಬಸ್ ಮಾದರಿಗಳು ಕಟ್ಟಿಂಗ್ ಎಡ್ಜ್ ವಿನ್ಯಾಸದೊಂದಿಗೆ ನಗರ ಪ್ರಯಾಣಕ್ಕೆ ಅಗತ್ಯವಾಗಿರುವ ಎಲ್ಲಾ ರೀತಿಯ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಇವುಗಳಲ್ಲಿರುವ ಎಲೆಕ್ಟ್ರಿಕ್ ಡ್ರೈವ್ ಟ್ರೇನ್ ಕಡಿಮೆ ವಿದ್ಯುತ್ ಬಳಕೆ ಮತ್ತು ಕಾರ್ಯಾಚರಣೆಯ ವೆಚ್ಚಗಳನ್ನು ತಗ್ಗಿಸ ಹೆಚ್ಚಿನ ಲಾಭಾಂಶ ತಂದುಕೊಡಲಿವೆ. ಹಾಗೆಯೇ ಹೊಸ ಇವಿ ಬಸ್ ಗಳಲ್ಲಿ ಸುಲಭವಾದ ಬೋರ್ಡಿಂಗ್, ಆರಾಮದಾಯಕವಾದ ಆಸನ ಸೌಲಭ್ಯಗಳು ಮತ್ತು ಚಾಲಕ ಸ್ನೇಹಿ ಕಾರ್ಯಾಚರಣೆಯ ವೈಶಿಷ್ಟ್ಯತೆಗಳನ್ನು ಸಹ ಒಳಗೊಂಡಿದೆ.
ಅಲ್ಟ್ರಾ ಎಲೆಕ್ಟ್ರಿಕ್ ಬಸ್ ಮಾದರಿಗಳಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಎಲೆಕ್ರಾನಿಕ್ ಬ್ರೇಕ್ ಡೆಲಿವರಿ, ಏರ್ ಸಸ್ಪೆನ್ಷನ್, ಇಂಟಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಂ (ಐಟಿಎಸ್), ಪ್ಯಾನಿಕ್ ಬಟನ್ ಸೇರಿದಂತೆ ಇನ್ನಿತರೆ ಸುಧಾರಿತ ಸುರಕ್ಷಾ ವೈಶಿಷ್ಟ್ಯತೆಗಳೊಂದಿಗೆ ಗಮನಸೆಳೆಯುತ್ತಿವೆ.