Tata EV Cars: ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಟಾಟಾ ಮೋಟಾರ್ಸ್ ಹೊಸ ದಾಖಲೆ
ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಕಳೆದ ತಿಂಗಳು ಭಾರೀ ಪ್ರಮಾಣದಲ್ಲಿ ಮಾರಾಟ ದಾಖಲೆ ನಿರ್ಮಿಸಿದ್ದು, ಹೊಸ ನೆಕ್ಸಾನ್ ಇವಿ ಆವೃತ್ತಿಯು ಹೆಚ್ಚಿನ ಬೇಡಿಕೆ ತಂದುಕೊಡುತ್ತಿದೆ.
ದೇಶದ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿರುವ ಟಾಟಾ ಮೋಟಾರ್ಸ್ (Tata Motors) ತನ್ನ ವಾಹನ ಮಾರಾಟ ವರದಿಯನ್ನು ಪ್ರಕಟಿಸಿದ್ದು, ಎಲೆಕ್ಟ್ರಿಕ್ ಕಾರುಗಳ (Electric Cars) ಮಾರಾಟದಲ್ಲೂ ಭರ್ಜರಿ ಬೇಡಿಕೆ ಪಡೆದುಕೊಂಡಿದೆ. ಕಳೆದ ತಿಂಗಳು ಅಕ್ಟೋಬರ್ ನಲ್ಲಿ ಒಟ್ಟಾರೆ 48,217 ಯುನಿಟ್ ಪ್ರಯಾಣಿಕರ ಕಾರುಗಳನ್ನು ಮಾರಾಟ ಮಾಡಿರುವ ಟಾಟಾ ಮೋಟಾರ್ಸ್ ಕಂಪನಿಯು ಬರೋಬ್ಬರಿ 5,456 ಯುನಿಟ್ ಎಲೆಕ್ಟ್ರಿಕ್ ಕಾರುಗಳ ಮಾರಾಟವನ್ನು ದಾಖಲಿಸಿದೆ.
ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಕಳೆದ ವರ್ಷದ ಅಕ್ಟೋಬರ್ ಅವಧಿಗಿಂತ ಶೇ. 28 ರಷ್ಟು ಬೆಳವಣಿಗೆ ಸಾಧಿಸಿದ್ದು, ನೆಕ್ಸಾನ್ ಇವಿ, ಟಿಯಾಗೊ ಇವಿ ಮತ್ತು ಟಿಗೂರ್ ಇವಿ ಕಾರುಗಳನ್ನು ದಾಖಲೆ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದೆ. ವಾಣಿಜ್ಯ ಬಳಕೆಗಾಗಿ ಎಕ್ಸ್ ಪ್ರೆಸ್-ಟಿ ಇವಿ ಕಾರನ್ನು ಮಾರಾಟ ಮಾಡಲಾಗುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ನೆಕ್ಸಾನ್ ಇವಿ ಫೇಸ್ ಲಿಫ್ಟ್ ಮಾದರಿಯು ಕಳೆದ ತಿಂಗಳು ಹೆಚ್ಚಿನ ಬೇಡಿಕೆ ದಾಖಲಿಸಿದೆ.
ಇದನ್ನೂ ಓದಿ: ಮಹೀಂದ್ರಾ ನಿರ್ಮಾಣದ ಈ ಕಾರಿನ ಮೇಲೆ ರೂ. 3.50 ಲಕ್ಷ ಡಿಸ್ಕೌಂಟ್
ಪ್ರಸ್ತುತ ಮಾರುಕಟ್ಟೆಯಲ್ಲಿನ ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಇವಿ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಇವಿ ಕಾರುಗಳನ್ನು ಸುಧಾರಿತ ತಂತ್ರಜ್ಞಾನ, ಆಕರ್ಷಕ ಬೆಲೆಗಳು ಮತ್ತು ಭರ್ಜರಿ ಮೈಲೇಜ್ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸುತ್ತಿದೆ.
ಇತ್ತೀಚೆಗೆ ಬಿಡುಗಡೆಯಾದ ಹೊಸ ನೆಕ್ಸಾನ್ ಇವಿ ಕಾರು ಮಾದರಿಯು ಕೂಡಾ ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಬ್ಯಾಟರಿ ಪ್ಯಾಕ್ ಜೋಡಣೆಗೆ ಅನುಗುಣವಾಗಿ ಮಿಡ್ ರೇಂಜ್ ವರ್ಷನ್ ಮತ್ತು ಲಾಂಗ್ ವರ್ಷನ್ ಗಳಲ್ಲಿ ಖರೀದಿಗೆ ಲಭ್ಯವಾಗಿದೆ. ಇದರಲ್ಲಿ ಮಿಡ್ ರೇಂಜ್ ನಲ್ಲಿರುವ ವೆರಿಯೆಂಟ್ ಗಳು ಎಕ್ಸ್ ಶೋರೂಂ ಪ್ರಕಾರ ರೂ. 14.74 ಲಕ್ಷದಿಂದ ರೂ.17.84 ಲಕ್ಷ ಬೆಲೆ ಹೊಂದಿದ್ದರೆ ಲಾಂಗ್ ವೆರಿಯೆಂಟ್ ಗಳು ಎಕ್ಸ್ ಶೋರೂಂ ಪ್ರಕಾರ ರೂ. 18.19 ಲಕ್ಷದಿಂದ ರೂ. 19.94 ಲಕ್ಷ ಬೆಲೆ ಹೊಂದಿವೆ.
ಇದನ್ನೂ ಓದಿ: ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಸಿಎನ್ ಜಿ ಕಾರುಗಳಿವು!
ನೆಕ್ಸಾನ್ ಇವಿ ಹೊಸ ಕಾರಿನ ಲಾಂಗ್ ರೇಂಜ್ ವೆರಿಯೆಂಟ್ ಗಳು 40.5 ಕೆವಿಹೆಚ್ ಬ್ಯಾಟರಿ ಪ್ಯಾಕ್ ಮೂಲಕ 465 ಕಿ.ಮೀ ಮೈಲೇಜ್ ನೀಡಲಿದ್ದರೆ ಮಿಡ್ ರೇಂಜ್ ವೆರಿಯೆಂಟ್ ಗಳಲ್ಲಿ 30 ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆಯೊಂದಿಗೆ 325 ಕಿ.ಮೀ ಮೈಲೇಜ್ ನೀಡುತ್ತವೆ. ಜೊತೆಗೆ ಹೊಸ ನೆಕ್ಸಾನ್ ಇವಿ ಕಾರಿನಲ್ಲಿ V2V ಮತ್ತು V2L ಚಾರ್ಜಿಂಗ್ ತಂತ್ರಜ್ಞಾನ ಬಳಕೆ ಮಾಡಲಾಗಿದ್ದು, ಹೊಸ ತಂತ್ರಜ್ಞಾನದೊಂದಿಗೆ ನೆಕ್ಸಾನ್ ಕಾರು ಮಾಲೀಕರು ಇತರೆ ನೆಕ್ಸಾನ ಇವಿ ಕಾರುಗಳಿಂದ ಬ್ಯಾಟರಿ ರೀಚಾರ್ಜ್ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಇದು ತುರ್ತು ಸಂದರ್ಭದಲ್ಲಿ ಚಾರ್ಜರ್ ಸಮಸ್ಯೆ ಬಗೆಹರಿಸಲು ಸಹಕಾರಿಯಾಗಿದ್ದು, ಇಕೋ, ಸಿಟಿ ಮತ್ತು ಸ್ಪೋರ್ಟ್ ಡ್ರೈವಿಂಗ್ ಮೋಡ್ ಗಳು ಚಾಲನಾ ಆದ್ಯತೆಗೆ ಸಹಕಾರಿಯಾಗಿವೆ.