ದೇಶಿಯ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ (Tata Motors) ಕಂಪನಿಯು ತನ್ನ ಪ್ರಮುಖ ಇವಿ ಕಾರುಗಳ ಖರೀದಿ ಮೇಲೆ ಜುಲೈ ಅವಧಿಯ ಆಫರ್ ಗಳನ್ನು ಘೋಷಣೆ ಮಾಡಿದೆ. ಹೊಸ ಆಫರ್ ಗಳು ನೆಕ್ಸಾನ್ ಇವಿ, ಟಿಯಾಗೋ ಇವಿ ಮತ್ತು ಪಂಚ್ ಇವಿ ಕಾರುಗಳ ಮೇಲೆ ಲಭ್ಯವಿದ್ದು, ಹೊಸ ಆಫರ್ ಗಳಲ್ಲಿ ಗ್ರಾಹಕರು ಕ್ಯಾಶ್ ಡಿಸ್ಕೌಂಟ್, ಎಕ್ಸ್ ಚೆಂಜ್ ಆಫರ್, ಕಾರ್ಪೊರೇಟ್ ಆಫರ್ ಜೊತೆ ಹೊಸದಾಗಿ ಪರಿಚಯಿಸಲಾಗಿರುವ ಗ್ರೀನ್ ಬೋನಸ್ ಸಹ ಪಡೆಯಬಹುದಾಗಿದೆ.
ಭಾರತದಲ್ಲಿ ಸದ್ಯ ವಿವಿಧ ಕಾರುಗಳೊಂದಿಗೆ ಹೊಸ ಸಂಚಲನ ಮೂಡಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಇದುವರೆಗೆ 20 ಲಕ್ಷ ಎಸ್ ಯುವಿ ಕಾರುಗಳನ್ನು ಮಾರಾಟ ಮಾಡಿದೆ. ಎಸ್ ಯುವಿ ಕಾರುಗಳಲ್ಲಿ ಇವಿ ಕಾರುಗಳ ಸಹ ಉತ್ತಮ ಕೊಡುಗೆ ನೀಡಿದ್ದು, ಈ ಹಿನ್ನಲೆಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಎಲೆಕ್ಟ್ರಿಕ್ ಎಸ್ ಯುವಿ ಮಾದರಿಗಳ ಮೇಲೆ ಇದೀಗ ತನ್ನ ಹೊಸ ಆಫರ್ ನೀಡುತ್ತಿದೆ.
ಇದನ್ನೂ ಓದಿ: ಆಕರ್ಷಕ ಬೆಲೆಯಲ್ಲಿರುವ ಪವರ್ ಫುಲ್ 7 ಸೀಟರ್ ಎಸ್‌ಯುವಿ ಕಾರುಗಳಿವು!
ಟಾಟಾ ಮೋಟಾರ್ಸ್ ಕಂಪನಿಯು ಹೊಸ ಆಫರ್ ಗಳಲ್ಲಿ ನೆಕ್ಸಾನ್ ಇವಿ ಖರೀದಿ ಮೇಲೆ ಒಟ್ಟು ರೂ. 1.30 ಲಕ್ಷದ ತನಕ ಆಫರ್ ನೀಡುತ್ತಿದ್ದು, ಇದರಲ್ಲಿ ಗ್ರಾಹಕರು ರೂ. 70 ಸಾವಿರ ತನಕ ಕ್ಯಾಶ್ ಡಿಸ್ಕೌಂಟ್ ಪಡೆಯಬಹುದಾಗಿದೆ. ನೆಕ್ಸಾನ್ ಕಾರಿನ ಎಂಪವರ್ಡ್ ಪ್ಲಸ್ ಎಲ್ಆರ್ ಮತ್ತು ಎಂಪವರ್ಡ್ ಎನ್ಆರ್ ಡಾರ್ಕ್ ಆವೃತ್ತಿಗಳ ಮೇಲೆ ಹೆಚ್ಚಿನ ಆಫರ್ ಗಳು ಲಭ್ಯವಿದ್ದು, ನೆಕ್ಸಾನ್ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 14.49 ಲಕ್ಷದಿಂದ ರೂ. 19.49 ಲಕ್ಷ ಬೆಲೆ ಹೊಂದಿದೆ. ಹೊಸ ಇವಿ ಕಾರಿನಲ್ಲಿ 30kWh ಮತ್ತು 40.5kWh ಬ್ಯಾಟರಿ ಆಯ್ಕೆಗಳಿದ್ದು, ಇವು ಪ್ರತಿ ಚಾರ್ಜ್ ಗೆ 325 ರಿಂದ 456 ಕಿ.ಮೀ ಮೈಲೇಜ್ ನೀಡುತ್ತವೆ.
ನೆಕ್ಸಾನ್ ಇವಿ ನಂತರ ಟಾಟಾ ಕಂಪನಿಯು ಟಿಯಾಗೋ ಇವಿ ಕಾರಿನ ಮೇಲೂ ಅತ್ಯುತ್ತಮ ಆಫರ್ ನೀಡುತ್ತಿದೆ. ಟಿಯಾಗೋ ಇವಿ ಖರೀದಿಯ ಮೇಲೆ ರೂ. 10 ಸಾವಿರದಿಂದ ರೂ. 50 ಸಾವಿರ ತನಕ ಆಫರ್ ನೀಡುತ್ತಿದೆ. ಇದರಲ್ಲಿ ಗ್ರಾಹಕರು ಗ್ರೀನ್ ಬೋನಸ್ ಸಹ ಪಡೆಯಬಹುದಾಗಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 7.99 ಲಕ್ಷದಿಂದ ರೂ. 11.89 ಲಕ್ಷ ಬೆಲೆಯೊಂದಿಗೆ ಪ್ರತಿ ಚಾರ್ಜ್ ಗೆ 315 ಕಿ.ಮೀ ಮೈಲೇಜ್ ನೀಡುತ್ತದೆ.
ಸದ್ಯ ಮಾರುಕಟ್ಟೆಯಲ್ಲಿ ಟಿಯಾಗೋ ಕಾರು 19.2kWh ಮತ್ತು 24kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿನ ಬೇಸ್ ಆವೃತ್ತಿಗಳಿಗೆ ಕಡಿಮೆ ಆಫರ್ ನೀಡಲಾಗಿದೆ. ಹಾಗೆಯೇ ಟಾಪ್ ಎಂಡ್ ಮಾದರಿಗಳ ಮೇಲೆ ಹೆಚ್ಚಿನ ಆಫರ್ ನೀಡಲಾಗುತ್ತಿದ್ದು, ಇದು ಆಕರ್ಷಕ ಫೀಚರ್ಸ್ ಗಳೊಂದಿಗೆ ಉತ್ತಮ ಬೇಡಿಕೆ ಹೊಂದಿದೆ.
ಇದನ್ನೂ ಓದಿ: ಕೇವಲ ರೂ. 15 ಸಾವಿರಕ್ಕೆ ಸಿಎನ್‌ಜಿ ಆವೃತ್ತಿಯಾಗಲಿವೆ ನಿಮ್ಮ ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳು..
ಇನ್ನು ಟಾಟಾ ಮೋಟಾರ್ಸ್ ಕಂಪನಿಯು ಪಂಚ್ ಎಲೆಕ್ಟ್ರಿಕ್ ಕಾರು ಖರೀದಿ ಮೇಲೆ ರೂ. 10 ಸಾವಿರದಿಂದ ರೂ. 30 ಸಾವಿರದಷ್ಟು ಆಫರ್ ನೀಡುತ್ತಿದೆ. ಪಂಚ್ ಇವಿ ಕಾರು ವಿವಿಧ ವೆರಿಯೆಂಟ್ ಗಳೊಂದಿಗೆ ಲಭ್ಯವಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 10.99 ಲಕ್ಷದಿಂದ ರೂ. 15.49 ಲಕ್ಷ ಬೆಲೆಯೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 421 ಕಿ.ಮೀ ಮೈಲೇಜ್ ನೀಡುತ್ತದೆ.