ಆಕರ್ಷಕ ಬೆಲೆಯಲ್ಲಿರುವ ಪವರ್ ಫುಲ್ 7 ಸೀಟರ್ ಎಸ್‌ಯುವಿ ಕಾರುಗಳಿವು!
ಕಾರು ಮಾರುಕಟ್ಟೆಯಲ್ಲಿ ಮಧ್ಯಮ ಕ್ರಮಾಂಕದ ಎಸ್ ಯುವಿ ಆವೃತ್ತಿಗಳಿಗೆ ಉತ್ತಮ ಬೇಡಿಕೆಯಿದ್ದು, ಈ ವಿಭಾಗದಲ್ಲಿರುವ ವಿವಿಧ ಕಾರು ಮಾದರಿಗಳ ಮಾಹಿತಿ ಇಲ್ಲಿದೆ.
ಭಾರತದಲ್ಲಿ ವಿವಿಧ ಮಾದರಿಯ ಕಾರು ಆವೃತ್ತಿಗಳು ಮಾರಾಟವಾಗುತ್ತಿದ್ದರೂ ಮಧ್ಯಮ ಕ್ರಮಾಂಕದ ಎಸ್ ಯುವಿ ಕಾರುಗಳಿಗೆ (SUV’s) ಉತ್ತಮ ಬೇಡಿಕೆಯಿದೆ. ಹೀಗಾಗಿ ಈ ವಿಭಾಗದಲ್ಲಿ ಈಗಾಗಲೇ ಹಲವಾರು ಕಾರುಗಳು ಖರೀದಿಗೆ ಲಭ್ಯವಿದ್ದು, ಇವು 7 ಸೀಟರ್ ಸೌಲಭ್ಯದೊಂದಿಗೆ ಮಾರಾಟಗೊಳ್ಳುತ್ತಿವೆ. ಹಾಗಾದ್ರೆ ಖರೀದಿಗೆ ಲಭ್ಯವಿರುವ ಆಕರ್ಷಕ ಬೆಲೆಯ 7 ಸೀಟರ್ ಸೌಲಭ್ಯದ ಎಸ್ ಯುವಿ ಕಾರುಗಳು ಯಾವುವು? ಅವುಗಳ ವಿಶೇಷತೆಗಳೇನು? ಬೆಲೆ ಎಷ್ಟು? ಈ ಎಲ್ಲಾ ಮಾಹಿತಿಯನ್ನು ಇಲ್ಲಿ ತಿಳಿಯೋಣ.
ಟಾಟಾ ಹ್ಯಾರಿಯರ್ ಮತ್ತು ಸಫಾರಿ
ಮಧ್ಯಮ ಕ್ರಮಾಂಕದ ಎಸ್ ಯುವಿ ವಿಭಾಗದಲ್ಲಿ ಸದ್ಯ ಅತಿಹೆಚ್ಚು ಬೇಡಿಕೆಯಲ್ಲಿರುವ ಕಾರುಗಳಲ್ಲಿ ಹ್ಯಾರಿಯರ್ ಮತ್ತು ಸಫಾರಿ ಮುಂಚೂಣಿಯಲ್ಲಿವೆ. 5 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಹೊಂದಿರುವ ಹ್ಯಾರಿಯರ್ ಮತ್ತು ಸಫಾರಿ ಕಾರುಗಳು ಹಲವಾರು ವಿಶೇಷತೆಗಳೊಂದಿಗೆ ಖರೀದಿಗೆ ಲಭ್ಯವಿವೆ. ಈ ಎರಡು ಕಾರುಗಳಲ್ಲೂ ಒಂದೇ ಮಾದರಿಯ 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಇವು ಎಕ್ಸ್ ಶೋರೂಂ ಪ್ರಕಾರ ರೂ. 15.49 ಲಕ್ಷದಿಂದ ರೂ. 27.34 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುತ್ತಿವೆ. ಜೊತೆಗೆ ಈ ಎರಡು ಕಾರುಗಳು ಸುರಕ್ಷತೆಗಾಗಿ ಗರಿಷ್ಠ ಮಟ್ಟದ ರೇಟಿಂಗ್ಸ್ ಪಡೆದುಕೊಂಡಿದ್ದು, ಇವು ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯಗಳನ್ನು ಸಹ ಹೊಂದಿವೆ.
ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಇರಲಿ ಈ ಬಗ್ಗೆ ಎಚ್ಚರ!
ಮಹೀಂದ್ರಾ ಎಕ್ಸ್‌ಯುವಿ700
ಮಧ್ಯಮ ಕ್ರಮಾಂಕದ ಎಸ್ ಯುವಿ ಕಾರುಗಳ ವಿಭಾಗದಲ್ಲಿ ಮಹೀಂದ್ರಾ ಎಕ್ಸ್‌ಯುವಿ700 ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದು ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ 5 ಸೀಟರ್ 7 ಸೀಟರ್ ಆಸನಗಳ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ. 2.0 ಲೀಟರ್ ಪೆಟ್ರೋಲ್ ಮತ್ತು 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿರುವ ಎಕ್ಸ್‌ಯುವಿ700 ಕಾರಿನಲ್ಲಿ ಹಲವಾರು ಸುರಕ್ಷಾ ಫೀಚರ್ಸ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಪ್ರಮುಖವಾಗಿ ಹೊಸ ಕಾರಿನಲ್ಲಿ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯವು ಪ್ರಮುಖ ಆಕರ್ಷಣೆಯಾಗಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 13.99 ಲಕ್ಷದಿಂದ ರೂ. 26.99 ಲಕ್ಷ ಬೆಲೆ ಹೊಂದಿದೆ.
ಎಂಜಿ ಹಕ್ಟರ್
ಹೊಸ ಎಂಜಿ ಹೆಕ್ಟರ್ ಕಾರು ಮಾದರಿಯು ಕೂಡಾ ಮಧ್ಯಮ ಕ್ರಮಾಂಕದಲ್ಲಿರುವ ಅತ್ಯುತ್ತಮ ಎಸ್ ಯುವಿ ಮಾದರಿಯಾಗಿದೆ. ಇದು ಕೂಡಾ 5 ಸೀಟರ್ ಮತ್ತು 7 ಸೀಟರ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, 7 ಸೀಟರ್ ಮಾದರಿಯು ಹೆಕ್ಟರ್ ಪ್ಲಸ್ ಹೆಸರಿನಲ್ಲಿ ಮಾರಾಟವಾಗುತ್ತಿದೆ. ಇದು 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಹಲವಾರು ಫೀಚರ್ಸ್ ಹೊಂದಿದ್ದು, ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ರೂ. 13.99 ಲಕ್ಷದಿಂದ ರೂ. 22.83 ಲಕ್ಷ ಬೆಲೆ ಹೊಂದಿವೆ.
ಮಹೀಂದ್ರಾ ಸ್ಕಾರ್ಪಿಯೋ ಎನ್
ಅತ್ಯುತ್ತಮ ಮಧ್ಯಮ ಕ್ರಮಾಂಕದ ಎಸ್ ಯುವಿ ಕಾರುಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಎನ್ ಕೂಡಾ ಭರ್ಜರಿ ಬೇಡಿಕೆ ದಾಖಲಿಸುತ್ತಿದೆ. ಇದು ವಿನೂತನ ವೈಶಿಷ್ಟ್ಯತೆಗಳೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದ್ದು, ಪವರ್ ಫುಲ್ ಎಂಜಿನ್ ಆಯ್ಕೆ ಹೊಂದಿರುವ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ. ಸ್ಕಾರ್ಪಿಯೋ ಎನ್ ನಲ್ಲಿ 2.0 ಲೀಟರ್ ಪೆಟ್ರೋಲ್ ಮತ್ತು 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 13.85 ಲಕ್ಷದಿಂದ ರೂ. 24.54 ಲಕ್ಷ ಬೆಲೆ ಹೊಂದಿದೆ.
ಇದನ್ನೂ ಓದಿ: ಕೋಟಿ ಬೆಲೆಯ ಪವರ್ ಫುಲ್ ಐಷಾರಾಮಿ ಕಾರು ಖರೀದಿಸಿದ ‘ಸಿಂಹಪ್ರಿಯಾ’ ಜೋಡಿ
ಜೀಪ್ ಕಂಪಾಸ್
ಮಧ್ಯಮ ಕ್ರಮಾಂಕದಲ್ಲಿರುವ ಅತ್ಯುತ್ತಮ ಎಸ್ ಯುವಿ ಕಾರುಗಳಲ್ಲಿ ಜೀಪ್ ಕಂಪಾಸ್ ಕೂಡಾ ಗಮನಸೆಳೆಯುತ್ತಿದೆ. ಇದು 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಇದು ಪರ್ಫಾಮೆನ್ಸ್ ನಲ್ಲೂ ಕೂಡಾ ಗ್ರಾಹಕರಿಂದ ಮೆಚ್ಚುಗೆ ಪಡೆದುಕೊಂಡಿದೆ. 6 ಸ್ಪೀಡ್ ಮ್ಯಾನುವಲ್ ಮತ್ತು 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 20.69 ಲಕ್ಷದಿಂದ ರೂ. 32.27 ಲಕ್ಷ ಬೆಲೆ ಹೊಂದಿದೆ.
Published On - 6:42 pm, Thu, 30 May 24