ದೇಶದ ಅತಿದೊಡ್ಡ ವಾಣಿಜ್ಯ ವಾಹನಗಳ ಉತ್ಪಾದನಾ ಕಂಪನಿಯಾಗಿರುವ ಟಾಟಾ ಮೋಟಾರ್ಸ್ (Tata Motors) ಕಂಪನಿಯು ತನ್ನ ಹೊಚ್ಚ ಹೊಸ ಇಂಟ್ರಾ ವಿ70 ಪಿಕ್ಅಪ್, ಇಂಟ್ರಾ ವಿ20 ಗೋಲ್ಡ್ ಪಿಕ್ಅಪ್ ಮತ್ತು ಏಸ್ ಹೆಚ್‌ಟಿ ಪ್ಲಸ್ ಲಘು ವಾಣಿಜ್ಯ ವಾಹನಗಳ ಬಿಡುಗಡೆ ಮಾಡಿದ್ದು, ಇವು ಸುಧಾರಿಸಿದ ಕಾರ್ಯನಿರ್ವಹಣೆಯೊಂದಿಗೆ ಉತ್ಪಾದಕತೆಯನ್ನು ಹೆಚ್ಚಿಸಿ ನಿರ್ವಹಣಾ ವೆಚ್ಚವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಸಹಕಾರಿಯಾಗಲಿವೆ.
ಹೊಸ ವಾಣಿಜ್ಯ ವಾಹನಗಳೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರಿಗೆ ವ್ಯಾಪಕ ಶ್ರೇಣಿಯ ಸಣ್ಣ ವಾಣಿಜ್ಯ ವಾಹನಗಳು ಮತ್ತು ಪಿಕಅಪ್ ಮಾದರಿಗಳನ್ನು ಒದಗಿಸುತ್ತಿದ್ದು, ಗ್ರಾಹಕರು ತಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ಸೂಕ್ತವಾದ ವಾಹನವನ್ನು ಆಯ್ಕೆ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದರೊಂದಿಗೆ ಹೊಸ ವಾಹನಗಳಲ್ಲಿ ಇಂಧನ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇವು ಮಾಲೀಕರಿಗೆ ನಿರ್ವಹಣೆ ವೆಚ್ಚವನ್ನು ಕಡಿಮೆ ಮಾಡಿ ಲಾಭದ ಪ್ರಮಾಣವನ್ನು ಹೆಚ್ಚುತ್ತವೆ.
ಟಾಟಾ ಹೊಸ ವಾಣಿಜ್ಯ ವಾಹನಗಳಲ್ಲಿ ಇಂಟ್ರಾ ವಿ70 ಪಿಕ್ಅಪ್ ಮಾದರಿಯು ಹೊಸ ಪೀಳಿಗೆಯ ವೈಶಿಷ್ಟ್ಯತೆಗಳೊಂದಿಗೆ ಅತ್ಯಧಿಕ ಪೇಲೋಡ್, ದೊಡ್ಡ ಮಟ್ಟದ ಲೋಡಿಂಗ್ ಪ್ರದೇಶ, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಶಕ್ತಿಯುತ ಡ್ರೈವ್ ಟ್ರೇನ್ ನೊಂದಿಗೆ ಖರೀದಿಗೆ ಲಭ್ಯವಿದೆ. ಇದು ವಿಶ್ವಾಸಾರ್ಹವಾದ 1.5 ಲೀಟರ್ ಡೀಸೆಲ್ ಎಂಜಿನ್ ನಿಂದ ಚಾಲಿತವಾಗಲಿದ್ದು, ಇದರಲ್ಲಿ ಫ್ಲೀಟ್ ಎಡ್ಜ್ ಟೆಲಿಮ್ಯಾಟಿಕ್ಸ್ ಸಿಸ್ಟಂ ಮತ್ತು 9.7 ಅಡಿ ಉದ್ದದ ಲೋಡ್ ಬಾಡಿ ನೀಡಲಾಗಿದೆ. ಹಾಗೆಯೇ ಇದರ ಕ್ಯಾಬಿನ್ ಕಾರಿನಂತಹ ಸೌಕರ್ಯಗಳನ್ನು ಹೊಂದಿದ್ದು, ಚಾಲಕನಿಗೆ ಆಯಾಸ-ಮುಕ್ತ ಚಾಲನೆಯ ಅನುಭವವನ್ನು ನೀಡುತ್ತದೆ.
ಇದನ್ನೂ ಓದಿ: ಅಪಘಾತಗಳನ್ನು ತಗ್ಗಿಸಲು ಇನ್ಮುಂದೆ ಈ ಸೇಫ್ಟಿ ಫೀಚರ್ಸ್ ಅಳವಡಿಕೆ ಕಡ್ಡಾಯ!
ಹಾಗೆಯೇ ಟಾಟಾ ಹೊಸ ಇಂಟ್ರಾ ವಿ20 ಗೋಲ್ಡ್ ಪಿಕ್ಅಪ್ ಸಹ ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಇದು ಭಾರತದ ಮೊದಲ ಮತ್ತು ಏಕೈಕ ದ್ವಿ-ಇಂಧನ ಅಂದರೆ ಬೈ-ಫ್ಯುಯೆಲ್ ಪಿಕ್ಅಪ್ ವಾಹನವಾಗಿದೆ. ಇದು ಆತಂಕ-ಮುಕ್ತ ಪ್ರಯಾಣಕ್ಕೆ ಪೂರಕವಾಗಿ ಹಲವಾರು ಫೀಚರ್ಸ್ ಹೊಂದಿದ್ದು, ಎಲ್ಲಾ ಭೂಪ್ರದೇಶಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದರಲ್ಲಿರುವ ಸಿಎನ್ ಜಿ ದಕ್ಷತೆಯು ಲಾಭದಾಯಕತೆಯನ್ನು ಹೆಚ್ಚಿಸಲಿದ್ದು, ಸಮರ್ಥವಾದ ಫ್ಲೀಟ್ ನಿರ್ವಹಣೆಗಾಗಿ ಫ್ಲೀಟ್ ಎಡ್ಜ್ ಟೆಲಿಮ್ಯಾಟಿಕ್ಸ್ ಸಿಸ್ಟಂನೊಂದಿಗೆ ಬರುತ್ತದೆ. ಹಾಗೆಯೇ ಈ ವಾಹನದಲ್ಲಿ 1,200 ಕೆಜಿ ವರ್ಧಿತ ಪೇಲೋಡ್ ಸಾಮರ್ಥ್ಯ ನೀಡಲಾಗಿದ್ದು, ಒಟ್ಟು ಮೂರು ಸಿಎನ್ ಜಿ ಟ್ಯಾಂಕ್ ಗಳನ್ನು ಹೊಂದುವ ಮೂಲಕ ಬರೋಬ್ಬರಿ 800 ಕಿ.ಮೀ ಪ್ರಮಾಣವನ್ನು ಖಚಿತಪಡಿಸುತ್ತದೆ.
ಇನ್ನು ಭಾರತದಲ್ಲಿ 20 ಲಕ್ಷಕ್ಕೂ ಅಧಿಕ ಗ್ರಾಹಕರನ್ನು ಹೊಂದುವ ಮೂಲಕ ಯಶಸ್ವಿ ವಾಣಿಜ್ಯ ವಾಹನ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಈ ಟಾಟಾ ಏಸ್ ಇದೀಗ ಹೆಚ್‌ಟಿ ಪ್ಲಸ್ ಹೊಸ ವೆರಿಯೆಂಟ್ ನೊಂದಿಗೆ ಬಿಡುಗಡೆಯಾಗಿದೆ. ಇದು ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಜೋಡಣೆಯೊಂದಿಗೆ ಹೆಚ್ಚಿನ ಶಕ್ತಿ ಮತ್ತು ದಕ್ಷತೆಯೊಂದಿಗೆ ದೀರ್ಘವಾದ ಲೋಡಿಂಗ್ ಬಾಡಿಯೊಂದಿಗೆ 900 ಕೆಜಿಯಷ್ಟು ಪೇಲೋಡ್ ಸಾಮರ್ಥ್ಯ ಹೊಂದಿದೆ. ಹಾಗೆಯೇ ಕಡಿಮೆ ನಿರ್ವಹಣಾ ವೆಚ್ಚದ ಮೂಲಕ ಹೆಚ್ಚಿನ ಗಳಿಕೆಗೆ ಅವಕಾಶ ಹೊಂದಿದ್ದು, ಈ ಮೂಲಕ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಂಡಿದೆ.
ಇದನ್ನೂ ಓದಿ: ಪೆಟ್ರೋಲ್ ಕಾರುಗಳು Vs ಪೆಟ್ರೋಲ್ ಸಿಎನ್‌ಜಿ ಕಾರುಗಳು.. ಖರೀದಿಗೆ ಯಾವುದು ಬೆಸ್ಟ್?
ಇದರೊಂದಿಗೆ ವಾಣಿಜ್ಯ ವಾಹನಗಳ ವಿಭಾಗದಲ್ಲಿ ಭಾರತದ ಅತಿದೊಡ್ಡ ಸೇವಾ ನೆಟ್ ವರ್ಕ್ ಹೊಂದಿರುವ ಟಾಟಾ ಮೋಟಾರ್ಸ್ ಕಂಪನಿಯು ದಕ್ಷವಾದ ಫ್ಲೀಟ್ ನಿರ್ವಹಣೆಗಾಗಿ ಹೊಸ ಟೆಲಿಮ್ಯಾಟಿಕ್ಸ್ ಸಿಸ್ಟಂ ಫ್ಲೀಟ್ ಎಡ್ಜ್ ನ ಪ್ರಯೋಜನಗಳೊಂದಿಗೆ ವಾರ್ಷಿಕ ನಿರ್ವಹಣಾ ಒಪ್ಪಂದಗಳ ಅನುಕೂಲತೆ, ಸುಲಭವಾದ ಬಿಡಿಭಾಗಗಳ ಲಭ್ಯತೆ ಮತ್ತು ಸಮಗ್ರವಾದ ಸಂಪೂರ್ಣ ಸೇವಾ 2.0 ಕಾರ್ಯಕ್ರಮಗಳ ಮೂಲಕ ತೊಂದರೆಮುಕ್ತ ವಾಹನ ಮಾಲೀಕತ್ವವನ್ನು ಖಾತರಿಪಡಿಸುತ್ತದೆ.