Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭರ್ಜರಿ ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಟೊಯೊಟಾ ಕಂಪನಿಯು ತನ್ನ ಹೊಸ ಅರ್ಬನ್ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಇವಿ ಕಾರು ಮಾದರಿಯು ಮಾರುತಿ ಸುಜುಕಿ ಜೊತೆಗಿನ ಸಹಭಾಗಿತ್ವ ಯೋಜನೆ ಅಡಿ ನಿರ್ಮಾಣಗೊಳ್ಳಲಿದೆ.

ಭರ್ಜರಿ ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ
ಟೊಯೊಟಾ ಅರ್ಬನ್ ಎಲೆಕ್ಟ್ರಿಕ್ ಎಸ್‌ಯುವಿ
Follow us
Praveen Sannamani
|

Updated on: Dec 04, 2023 | 8:06 PM

ವಿಶ್ವದ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿ ಹೊರಹೊಮ್ಮಿರುವ ಟೊಯೊಟಾ (Toyota) ಕಂಪನಿಯು ಜಾಗತಿಕ ಮಾರುಕಟ್ಟೆಗಾಗಿ ವಿವಿಧ ಎಲೆಕ್ಟ್ರಿಕ್ ಕಾರು (Electric Cars) ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಭಾರತದಲ್ಲೂ ಬೃಹತ್ ಯೋಜನೆಯೊಂದಿಗೆ ಮೊದಲ ಇವಿ ಮಾದರಿಯಾದ ಅರ್ಬನ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅನಾವರಣಗೊಳಿಸಿದೆ.

ಹೊಸ ಅರ್ಬನ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಟೊಯೊಟಾ ಕಂಪನಿಯು ಮಾರುತಿ ಸುಜುಕಿ ಬಹುನೀರಿಕ್ಷಿತ ಇವಿಎಕ್ಸ್ ಆಧರಿಸಿ ನಿರ್ಮಾಣಗೊಳಿಸಿದ್ದು, ಹೊಸ ಕಾರು ಮಾದರಿಯನ್ನು 27ಪಿಎಲ್ ಪ್ಲ್ಯಾಟ್ ಫಾರ್ಮ್ ಮೇಲೆ ಅಭಿವೃದ್ದಿಪಡಿಸಿದೆ. ಜೊತೆಗೆ ಹೊಸ ಕಾರು ಮಾದರಿಯನ್ನು ಟೊಯೊಟಾ ಕಂಪನಿಯು ಭಾರತದಲ್ಲಿಯೇ ನಿರ್ಮಾಣ ಮಾಡಲಿದ್ದು, ಹೊಸ ಕಾರನ್ನು ಭಾರತದಲ್ಲಿ ಮಾತ್ರವಲ್ಲದೇ ಪ್ರಮುಖ ಜಾಗತಿಕ ಮಾರುಕಟ್ಟೆಗಳಿಗೂ ಇಲ್ಲಿಂದಲೇ ರಫ್ತು ಮಾಡುವ ಯೋಜನೆ ಹೊಂದಿದೆ.

Toyota Urban SUV (1)

ಅರ್ಬನ್ ಎಲೆಕ್ಟ್ರಿಕ್ ಎಸ್‌ಯುವಿಯ ಬೆಲೆ ಸ್ವರ್ಧಾತ್ಮಕಗೊಳಿಸುವ ಉದ್ದೇಶದಿಂದ ಟೊಯೊಟಾ ಮತ್ತು ಮಾರುತಿ ಸುಜುಕಿ ಕಂಪನಿಗಳು ಒಂದೇ ಮಾದರಿಯ ಹಲವಾರು ತಾಂತ್ರಿಕ ಮತ್ತು ತಂತ್ರಜ್ಞಾನ ಸೌಲಭ್ಯಗಳನ್ನು ಹಂಚಿಕೊಳ್ಳಲಿದ್ದು, ಇದು ಇವಿಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿರುವಂತೆಯೇ 60ಕೆವಿಹೆಚ್ ಬ್ಯಾಟರಿ ಪ್ಯಾಕ್‌ ಜೋಡಣೆ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: ಪೆಟ್ರೋಲ್ ಕಾರುಗಳು Vs ಪೆಟ್ರೋಲ್ ಸಿಎನ್‌ಜಿ ಕಾರುಗಳು.. ಖರೀದಿಗೆ ಯಾವುದು ಬೆಸ್ಟ್?

ಅರ್ಬನ್ ಎಸ್‌ಯುವಿ ಕಾನ್ಸೆಪ್ಟ್ ಮಾದರಿಯಲ್ಲಿ ಫ್ರಂಟ್ ವ್ಹೀಲ್ ಡ್ರೈವ್ ಮತ್ತು ಆಲ್ ವ್ಹೀಲ್ ಡ್ರೈವ್ ಆಯ್ಕೆ ಪಡೆದುಕೊಳ್ಳಲಿದ್ದು, ಇದು ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ಪ್ರತಿ ಚಾರ್ಜ್ ಗೆ 450 ಕಿ.ಮೀ ನಿಂದ 500 ಕಿ.ಮೀ ತನಕ ಮೈಲೇಜ್ ನೀಡಬಹುದಾಗಿದೆ. ಜೊತೆಗೆ ಇವಿಎಕ್ಸ್ ಎಸ್‍ಯುವಿಯೆಂತೆ ಹಲವಾರು ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದ್ದು, ಇದು ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳೊಂದಿಗೆ ಸುಧಾರಿತ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

Toyota Urban SUV (1)

ಇನ್ನು ಎಸ್ ಯುವಿ ಕೂಪೆ ವಿನ್ಯಾಸ ಹೊಂದಿರುವ ಹೊಸ ಇವಿಎಕ್ಸ್ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವ ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್ ಯುವಿ400 ಎಲೆಕ್ಟ್ರಿಕ್ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ. ಹೊಸ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು ಕಾನ್ಸೆಪ್ಟ್ ಮಾದರಿಯಲ್ಲಿ ಹಲವು ತಾಂತ್ರಿಕ ಅಂಶಗಳನ್ನು ಮುಂದುವರೆಸುವ ಸಾಧ್ಯತೆಗಳಿದ್ದು, ಇದು ಹೆಚ್ಚಿನ ಮಟ್ಟದ ಸ್ಥಳೀಕರಣದೊಂದಿಗೆ ಬೆಲೆಯಲ್ಲೂ ಗಮನಸೆಳೆಯಲಿದೆ.

ಹೊಸ ಕಾರಿನ ಒಳಭಾಗದಲ್ಲಿ ಆಕರ್ಷಕವಾದ ಡ್ಯಾಶ್ ಬೋರ್ಡ್, ಟ್ವಿನ್ ಸ್ಕ್ರೀನ್ ಸೆಟ್ಅಪ್, ದೊಡ್ಡದಾದ ಇನ್ಪೋಟೈನ್ಮೆಂಟ್ ಸಿಸ್ಟಂ, ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ವರ್ಟಿಕಲ್ ಎಸಿ ಮತ್ತು ಪ್ಲ್ಯಾಟ್ ಬಾಟಮ್ ಸ್ಟೀರಿಂಗ್ ವ್ಹೀಲ್ ಸೌಲಭ್ಯಗಳಿರಲಿವೆ. ಹಾಗೆಯೇ ಹೊಸ ಕಾರಿನಲ್ಲಿ ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಗಳಿರಲಿದ್ದು, ಹೊಸ ಕಾರು ಟೊಯೊಟಾ ಇವಿ ಪ್ಲ್ಯಾಟ್ ಫಾರ್ಮ್ ನಿಂದಲೂ ಹಲವು ಫೀಚರ್ಸ್ ಎರವಲು ಪಡೆದುಕೊಳ್ಳಲಿದೆ.

Toyota Urban SUV (1)

ಇದನ್ನೂ ಓದಿ: ರೂ. 10 ಲಕ್ಷಕ್ಕೆ ಭರ್ಜರಿ ಮೈಲೇಜ್ ನೀಡುವ ಅತ್ಯುತ್ತಮ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳಿವು!

ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿ ಕಂಪನಿ ಹೊಸ ಕಾರನ್ನು ಮುಂಬರುವ ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಬಿಡುಗಡೆ ಮಾಡುವ ಸಾಧ್ಯತೆಗಳಿದ್ದು, ಇದು ವಿವಿಧ ವೆರಿಯೆಂಟ್ ಗಳೊಂದಿಗೆ ರೂ. 12 ಲಕ್ಷದಿಂದ ರೂ. 16 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ. ಹಾಗೆಯೇ ಟೊಯೊಟಾ ಅರ್ಬನ್ ಎಲೆಕ್ಟ್ರಿಕ್ ಎಸ್‌ಯುವಿ ಸಹ ಆಕರ್ಷಕ ಬೆಲೆ ಹೊಂದಿರಲಿದ್ದು, ಇದು ವಿದೇಶಿ ಮಾರುಕಟ್ಟೆಯಲ್ಲೂ ಸದ್ದು ಮಾಡಲಿದೆ.