Triumph Speed 400: ಟ್ರಯಂಫ್ ಹೊಸ ಸ್ಪೀಡ್ 400, ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೈಕ್ ಬಿಡುಗಡೆ
ಬ್ರಿಟಿಷ್ ಬೈಕ್ ಉತ್ಪಾದನಾ ಕಂಪನಿಯಾಗಿರುವ ಟ್ರಯಂಫ್ ಮೋಟಾರ್ ಸೈಕಲ್ ಭಾರತದಲ್ಲಿ ಹೊಚ್ಚ ಹೊಸ ಸ್ಪೀಡ್ 400 ಮತ್ತು ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೈಕ್ ಗಳನ್ನು ಬಿಡುಗಡೆಗೊಳಿಸಿದೆ.
ಟ್ರಯಂಫ್ ಮೋಟಾರ್ ಸೈಕಲ್(Triumph Motorcycles) ಕಂಪನಿಯು ಬಜಾಜ್ ಆಟೋ ಕಂಪನಿ ಜೊತೆಗೂಡಿ ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ಉತ್ಪಾದನಾ ಮಾದರಿಗಳನ್ನು ಅಭಿವೃದ್ದಿಪಡಿಸುತ್ತಿದ್ದು, ಹೊಸ ಯೋಜನೆಯ ಭಾಗವಾಗಿ ಮೊದಲ ಹಂತದಲ್ಲಿ ಸ್ಪೀಡ್ 400, ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೈಕ್ ಬಿಡುಗಡೆ ಮಾಡಿದೆ. ದೆಹಲಿ ಎಕ್ಸ್ ಶೋರೂಂ ಪ್ರಕಾರ ಹೊಸ ಬೈಕ್ ರೂ 2.33 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಸದ್ಯಕ್ಕೆ ಸ್ಪೀಡ್ 400 ಬೈಕ್ ಮಾದರಿಯ ಬೆಲೆ ಮಾತ್ರ ಘೋಷಣೆ ಮಾಡಲಾಗಿದೆ.
ಶೀಘ್ರದಲ್ಲಿಯೇ ಹೈ ಎಂಡ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೆಲೆಯನ್ನು ಸಹ ಘೋಷಣೆ ಮಾಡಲಿದ್ದು, ಇವು ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳಿಗೆ ಭರ್ಜರಿ ಪೈಪೋಟಿ ನೀಡಲಿವೆ. ಹೊಸ ಬೈಕ್ ಮಾದರಿಯಲ್ಲಿ ಟ್ರಯಂಫ್ ಕಂಪನಿಯು 398 ಸಿಸಿ ಲಿಕ್ವಿಡ್ ಕೋಲ್ಡ್ ಎಂಜಿನ್ ಜೋಡಣೆ ಮಾಡಿದ್ದು, ಇದು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 39.5 ಹಾರ್ಸ್ ಪವರ್ ಉತ್ಪಾದಿಸುತ್ತವೆ.
ಇದರೊಂದಿಗೆ ಹೊಸ ಬೈಕ್ ಮಾದರಿಯಲ್ಲಿ 43 ಎಂಎಂ ಪಿಸ್ಟನ್ ಅಪ್ ಸೈಡ್ ಡೌನ್ ಫ್ರಂಟ್ ಫೋರ್ಕ್ ಮತ್ತು ರಿಯರ್ ಮೊನೊ-ಶಾಕ್ ಸಸ್ಷೆಷನ್ ಜೋಡಣೆ ಮಾಡಲಾಗಿದ್ದು, ಸುರಕ್ಷತೆಗಾಗಿ 300 ಎಂಎಂ ಫ್ರಂಟ್ ಮತ್ತು 230 ಎಂಎಂ ರಿಯರ್ ಡಿಸ್ಕ್ ಬ್ರೇಕ್, ಸಿಂಗಲ್ ಚಾನೆಲ್ ಎಬಿಎಸ್ ಸೇರಿದಂತೆ ಹಲವಾರು ಅತ್ಯಾಧುನಿಕ ಫೀಚರ್ಸ್ ಜೋಡಣೆ ಮಾಡಲಾಗಿದೆ.