ಭಾರತದಲ್ಲಿ ಪರಿಸರ ಸ್ನೇಹಿ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಸಾಂಪ್ರಾದಾಯಿಕ ಇಂಧನ ಚಾಲಿತ ವಾಹನಗಳ ಜೊತೆಗೆ ಎಲೆಕ್ಟ್ರಿಕ್ ಮತ್ತು ಸಿಎನ್ಜಿ ಚಾಲಿತ ವಾಹನಗಳಿಗೂ ಉತ್ತಮ ಬೇಡಿಕೆ ದಾಖಲಾಗುತ್ತಿದೆ. ಸಿಎನ್ಜಿ ಚಾಲಿತ ವಾಹನಗಳು ಆಕರ್ಷಕ ಬೆಲೆಯಲ್ಲಿ ಖರೀದಿಗೆ ಲಭ್ಯವಾಗುತ್ತಿದ್ದು, ಇವು ಕಡಿಮೆ ನಿರ್ವಹಣಾ ವೆಚ್ಚ ಮತ್ತು ಹೆಚ್ಚಿನ ಮೈಲೇಜ್ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿವೆ. ಹೀಗಾಗಿ ಟಿವಿಎಸ್ ಕಂಪನಿ ಕೂಡಾ ತನ್ನ ಹೊಸ ಸಿಎನ್ ಜಿ ಚಾಲಿತ ಸ್ಕೂಟರ್ ಮಾದರಿಯನ್ನು ಬಿಡುಗಡೆಗಾಗಿ ಸಿದ್ದವಾಗುತ್ತಿದೆ.
ಇತ್ತೀಚೆಗೆ ಸಿಎನ್ ಜಿ ಚಾಲಿತ ಬಜಾಜ್ ಫ್ರೀಡಂ 125 ಬೈಕ್ ಬಿಡುಗಡೆಯ ಬೆನ್ನಲ್ಲೇ ಟಿವಿಎಸ್ ಕೂಡಾ ತನ್ನ ಮೊದಲ ಸಿಎನ್ ಜಿ ಚಾಲಿತವಾಗಿರುವ ತನ್ನ ಹೊಸ ಸ್ಕೂಟರ್ ಬಿಡುಗಡೆಗಾಗಿ ಸಿದ್ದವಾಗುತ್ತಿದ್ದು, ಇದು ವಿನೂತನ ತಂತ್ರಜ್ಞಾನ ಪ್ರೇರಣೆಯೊಂದಿಗೆ ರಸ್ತೆಗಿಳಿಯಲಿದೆ. ಹೊಸ ಸಿಎನ್ ಜಿ ಸ್ಕೂಟರ್ ಕಾರ್ಯಕ್ಷಮತೆ ಕುರಿತಾಗಿ ಈಗಾಗಲೇ ಹಲವು ಸುತ್ತಿನ ಟೆಸ್ಟ್ ರೈಡ್ ನಡೆಸಲಾಗಿದ್ದು, ಈ ವರ್ಷಾಂತ್ಯಕ್ಕೆ ಹೊಸ ಸಿಎನ್ ಜಿ ಸ್ಕೂಟರ್ ಅಂತಿಮ ರೂಪ ಪಡೆದುಕೊಳ್ಳಲಿದೆ.
ಹೊಸ ಸಿಎನ್ ಜಿ ಚಾಲಿತ ಸ್ಕೂಟರ್ ಮಾದರಿಯನ್ನು ಸದ್ಯಕ್ಕೆ ಟಿವಿಎಸ್ ಕಂಪನಿಯು ಯು740 ಕೋಡ್ ನೇಮ್ ಮೂಲಕ ವಿವಿಧ ಹಂತದ ಪರೀಕ್ಷೆಗಳನ್ನು ಕೈಗೊಳ್ಳುತ್ತಿದ್ದು, ಇದು ಪೆಟ್ರೋಲ್ ಮತ್ತು ಸಿಎನ್ ಜಿ ಮೇಲೆ ಚಾಲನೆಗೊಳ್ಳಲಿದೆ. ಹೊಸ ಸ್ಕೂಟರಿನಲ್ಲಿ ಸಿಎನ್ ಜಿ ಸಿಲಿಂಡರ್ ಅನ್ನು ಬೂಟ್ ಸ್ಪೆಸ್ ಕೆಳ ಭಾಗದಲ್ಲಿ ಜೋಡಣೆ ಮಾಡಬಹುದಾದಿದ್ದು, ಸಿಲಿಂಡರ್ ಗೆ ಹಾನಿಯಾಗದಂತೆ ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ.
ಇದನ್ನೂ ಓದಿ: ಭರ್ಜರಿ ಮೈಲೇಜ್ ಪ್ರೇರಿತ ಬಜಾಜ್ ಫ್ರೀಡಂ 125 ಸಿಎನ್ಜಿ ಬೈಕ್ ವಿಶೇಷತೆಗಳಿವು!
ಇನ್ನು ಟಿವಿಎಸ್ ಹೊಸ ಸಿಎನ್ ಜಿ ಸ್ಕೂಟರ್ ಸಾಮಾನ್ಯ ಮಾದರಿಯಲ್ಲಿರುವಂತೆ 125 ಸಿಸಿ ಎಂಜಿನ್ ಹೊಂದಿದಲಿದ್ದು, ವಾಹನ ಮಾಲೀಕರು ಇಂಧನ ಲಭ್ಯತೆ ಆಧಾರದ ಮೇಲೆ ಪೆಟ್ರೋಲ್ ಅಥವಾ ಸಿಎನ್ ಜಿಗೆ ಸ್ವಿಚ್ ಮಾಡಿಕೊಂಡು ಚಾಲನೆ ಮಾಡಬಹುದಾಗಿದೆ. ಪ್ರತಿ ಕೆಜಿ ಸಿಎನ್ ಜಿಗೆ ಹೊಸ ಸ್ಕೂಟರ್ ಗರಿಷ್ಠ 105ರಿಂದ 110 ಕಿ.ಮೀ ಮೈಲೇಜ್ ನೀಡಬಹುದಾಗಿದ್ದು, ಇದು ಸಾಮಾನ್ಯ ಪೆಟ್ರೋಲ್ ಮಾದರಿಗಿಂತಲೂ ತುಸು ದುಬಾರಿಯಾಗಿರಲಿದೆ.