Upcoming Cars in India: ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಈ ಟಾಪ್ 5 ಕಾರುಗಳ ವಿಶೇಷತೆಗಳೇನು?

| Updated By: Digi Tech Desk

Updated on: Oct 31, 2022 | 1:58 PM

ಹೊಸ ಕಾರುಗಳ ಮಾರಾಟವು ಸಾಕಷ್ಟು ಸುಧಾರಿಸಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ವಿನೂತನ ಕಾರು ಮಾದರಿಗಳು ಮಾರುಕಟ್ಟೆ ಪ್ರವೇಶಿಸಲು ಸಜ್ಜುಗೊಂಡಿವೆ. ಹಾಗಾದರೆ ಬಿಡುಗಡೆಯಾಗಲಿರುವ ಹೊಸ ಕಾರುಗಳು ಯಾವವು? ಅವುಗಳಲ್ಲಿರುವ ಹೊಸ ತಾಂತ್ರಿಕ ಅಂಶಗಳು ಮತ್ತು ಅಂದಾಜು ಬೆಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೋಡೋಣ ಬನ್ನಿ.

Upcoming Cars in India: ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಈ ಟಾಪ್ 5 ಕಾರುಗಳ ವಿಶೇಷತೆಗಳೇನು?
Upcoming Cars in India
Follow us on

ಭಾರತದಲ್ಲಿ ಕಳೆದ ಎರಡು ವರ್ಷಗಳಿಂದ ವೈಯಕ್ತಿಕ ವಾಹನ ಬಳಕೆಯ ಪ್ರಮಾಣವು ನಿರಂತರವಾಗಿ ಹೆಚ್ಚುತ್ತಿದೆ. ಹೀಗಾಗಿ ಪ್ರಮುಖ ಕಾರು ಉತ್ಪಾದನಾ ಕಂಪನಿಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿವೆ. ಹೊಸ ಕಾರುಗಳ ಪಟ್ಟಿಯಲ್ಲಿ ಸಾಮಾನ್ಯ ಕಾರುಗಳಲ್ಲದೆ ಎಲೆಕ್ಟ್ರಿಕ್ ಕಾರುಗಳ ಮಾರಾಟವು ಸಹ ಗಮನಸೆಳೆಯುತ್ತಿದ್ದು, ಹೊಸ ಕಾರುಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಟೊಯೊಟಾ ಇನೋವಾ ಹೈಕ್ರಾಸ್

ಬಿಡುಗಡೆಯಾಗಲಿರುವ ಹೊಸ ಕಾರುಗಳ ಪಟ್ಟಿಯಲ್ಲಿ ಟೊಯಾಟಾ ಇನೋವಾ ಹೈಕ್ರಾಸ್ ಎಂಪಿವಿ ಪ್ರಮುಖ ಆವೃತ್ತಿಯಾಗಿದೆ. ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇನೋವಾ ಕ್ರಿಸ್ಟಾ ಮಾದರಿಗಿಂತಲೂ ವಿಭಿನ್ನವಾಗಿದ್ದು, ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ. ಹೊಸ ಇನೋವಾ ಹೈಕ್ರಾಸ್ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ಜೊತೆಗೆ ಹೆಚ್ಚಿನ ಮೈಲೇಜ್ ಹೊಂದಿರುವ ಹೈಬ್ರಿಡ್ ಮಾದರಿಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

 

ಇನೋವಾ ಹೈಕ್ರಾಸ್ ಕಾರಿನಲ್ಲಿ ಟೊಯೊಟಾ ಕಂಪನಿಯು 2023ರಿಂದ ಜಾರಿಗೆ ಬರುತ್ತಿರುವ ರಿಯಲ್ ಟೈಮ್ ಎಮಿಷನ್ ನಿಯಮ ಅನುಸಾರವಾಗಿ ಡೀಸೆಲ್ ಮಾದರಿಯ ಮಾರಾಟವನ್ನು ಕೈಬಿಟ್ಟಿದೆ. ಹೀಗಾಗಿ ಕಂಪನಿಯು ಹೊಸ ಕಾರಿನಲ್ಲಿ ಪೆಟ್ರೋಲ್ ಜೊತೆ ಪೆಟ್ರೋಲ್ ಹೈಬ್ರಿಡ್ ಮಾದರಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಹೊಸ ಕಾರು ಹೈಬ್ರಿಡ್ ಎಂಜಿನ್ ಜೊತೆಗೆ ಹಲವಾರು ಪ್ರೀಮಿಯಂ ಸೌಲಭ್ಯಗಳೊಂದಿಗೆ ಈ ತಿಂಗಳಾಂತ್ಯಕ್ಕೆ ಇಲ್ಲವೇ 2023ರ ಆರಂಭದಲ್ಲಿ ಖರೀದಿಗೆ ಲಭ್ಯವಾಗಲಿದೆ.

ಇದನ್ನೂ ಓದಿ: ಭಾರತದಲ್ಲಿ ಸದ್ಯ ಖರೀದಿಸಬಹುದಾದ ಅತಿಹೆಚ್ಚು ಸುರಕ್ಷಿತ ಮಧ್ಯಮ ಕ್ರಮಾಂಕದ ಕಾರುಗಳಿವು!

ಬಿವೈಡಿ ಅಟ್ಟೊ 3 ಇವಿ

ಬಿವೈಡಿ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಅಟ್ಟೊ 3 ಎಲೆಕ್ಟ್ರಿಕ್ ಎಸ್ ಯುವಿ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಕಾರು ಹಲವಾರು ವಿಶೇಷತೆಗಳೊಂದಿಗೆ ಇದೇ ತಿಂಗಳು 16ರಂದು ಬಿಡುಗಡೆ ಮಾಡುವ ನೀರಿಕ್ಷೆಯಿದೆ. ಹೊಸ ಕಾರು ಖರೀದಿಗಾಗಿ ಕಂಪನಿಯು ಈಗಾಗಲೇ ರೂ. 50 ಸಾವಿರ ಮುಂಗಡದೊಂದಿಗೆ ಬುಕಿಂಗ್ ಕೂಡಾ ಆರಂಭಿಸಿದ್ದು, ಪ್ರೀಮಿಯಂ ಫೀಚರ್ಸ್, ಅತ್ಯುತ್ತಮ ಬ್ಯಾಟರಿ ಪ್ಯಾಕ್ ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳಲಿದೆ.

ಅಟ್ಟೊ 3 ಕಾರಿನಲ್ಲಿ ಎರಡು ಮಾದರಿಯ ಬ್ಯಾಟರಿ ಆಯ್ಕೆ ನೀಡಬಹುದಾಗಿದ್ದು, ಆರಂಭಿಕ ಮಾದರಿಯು 49.92 kWh ಬ್ಯಾಟರಿ ಪ್ಯಾಕ್ ಪಡೆದುಕೊಳ್ಳಲಿದ್ದರೆ ಹೈ ಎಂಡ್ ಮಾದರಿಯು 60.48 kWh ಬ್ಯಾಟರಿ ಪ್ಯಾಕ್ ಮೂಲಕ ಗರಿಷ್ಠ 521 ಕಿ.ಮೀ ಮೈಲೇಜ್ ನೀಡುತ್ತದೆ. ಇದು ಹ್ಯುಂಡೈ ಕೊನಾ ಇವಿ, ಎಂಜಿ ಜೆಡ್ ಎಸ್ ಇವಿ ಮತ್ತು ಟಾಟಾ ನೆಕ್ಸಾನ್ ಮ್ಯಾಕ್ಸ್ ಮಾದರಿಗಳಿಗೆ ಪೈಪೋಟಿಯಾಗಿ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 22 ಲಕ್ಷದಿಂದ ರೂ. 25 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದೆ.

ಹೋಂಡಾ ಕಂಪ್ಯಾಕ್ಟ್ ಎಸ್ ಯುವಿ

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಗಾಗಿ ಸಂಪೂರ್ಣವಾಗಿ ಹೊಸ ತಂತ್ರಜ್ಞಾನ ಪ್ರೇರಿತ ಪ್ರೀಮಿಯಂ ಕಂಪ್ಯಾಕ್ಟ್ ಎಸ್ ಯುವಿ ಬಿಡುಗಡೆಗೆ ಸಿದ್ದವಾಗಿದೆ. ಹೊಸ ಕಾರು ಅಮೇಜ್ ಕಂಪ್ಯಾಕ್ಟ್ ಸೆಡಾನ್ ಪ್ಲ್ಯಾಟ್ ಫಾರ್ಮ್ ಆಧರಿಸಿದ್ದು, ಹೊಸ ಕಾರು 1.5 ಲೀಟರ್ ಪೆಟ್ರೋಲ್ ಮತ್ತು ಹೈಬ್ರಿಡ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಹೊಸ ಹೋಂಡಾ ಕಾರು ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುವ ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್ ಯುವಿ300 ಕಾರುಗಳಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದ್ದು, ಹೊಸ ಕಾರು ಈ ವರ್ಷಾಂತ್ಯಕ್ಕೆ ಇಲ್ಲವೇ 2023ರ ಆರಂಭದಲ್ಲಿ ಎಕ್ಸ್ ಶೋರೂಂ ಪ್ರಕಾರ ರೂ. 8 ಲಕ್ಷದಿಂದ ರೂ. 15 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದೆ.

2022ರ ಎಂಜಿ ಹೆಕ್ಟರ್

ಎಂಜಿ ಮೋಟಾರ್ ಕಂಪನಿಯು ಇದೇ ತಿಂಗಳಾಂತ್ಯಕ್ಕೆ 2022ರ ಹೆಕ್ಟರ್ ಎಸ್ ಯುವಿ ಬಿಡುಗಡೆ ಮಾಡಲಿದ್ದು, ಹೊಸ ಕಾರು ಪ್ರಮುಖ ಫೀಚರ್ಸ್ ಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ. ಹೊಸ ಕಾರಿನಲ್ಲಿ ಕಂಪನಿಯು ಈ ಬಾರಿ ಎಡಿಎಎಸ್(ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ) ಜೋಡಣೆ ಮಾಡಲಿದ್ದು, ಜೊತೆಗೆ ವಿನ್ಯಾಸದಲ್ಲೂ ತುಸು ಬದಲಾವಣೆಗಳನ್ನು ಪಡೆದುಕೊಳ್ಳಲಿದೆ.

ಇದನ್ನೂ ಓದಿ: ಭಾರತದಲ್ಲಿ ಮೂರು ಹೊಸ ಎಸ್ ಯುವಿ ಕಾರುಗಳನ್ನು ಅನಾವರಣಗೊಳಿಸಿದ ನಿಸ್ಸಾನ್!

ಹ್ಯುಂಡೈ ಐಯಾನಿಕ್ 5

ಹ್ಯುಂಡೈ ಕಂಪನಿಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣಾಗಿ ಮುಂಬರುವ ಕೆಲವೇ ದಿನಗಳಲ್ಲಿ ವಿವಿಧ ಹೊಸ ಮಾದರಿಯ ಎಲೆಕ್ಟ್ರಿಕ್ ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಇವಿ ಕಾರುಗಳಿಗಾಗಿ ಆಧುನಿಕ ತಂತ್ರಜ್ಞಾನ ಪ್ರೇರಿತ ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (ಇ-ಜಿಎಂಪಿ) ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಲು ಉದ್ದೇಶಿಸಿದೆ.

ಹೊಸ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಕಂಪನಿಯು ವಿವಿಧ ಸೆಗ್ಮೆಂಟ್‌ ಇವಿ ಪರಿಚಯಿಸಲಿದ್ದು, ಇದರಲ್ಲಿ ಐಯಾನಿಕ್ 5 ಎಲೆಕ್ಟ್ರಿಕ್ ಎಸ್ ಯುವಿ ಕೂಡಾ ಒಂದಾಗಿದೆ. ಇದು ದೇಶಿಯ ಮಾರುಕಟ್ಟೆಯಲ್ಲಿ ಈ ವರ್ಷದ ಕೊನೆಯಲ್ಲಿ ಇಲ್ಲವೇ 2023ರ ಆರಂಭದಲ್ಲಿ ಬಿಡುಗಡೆಯಾಗಬಹುದಾಗಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಹೊಸ ಕಾರು 58 ಕಿ.ವ್ಯಾ ಮತ್ತು 72.6 ಕಿ.ವ್ಯಾ ಬ್ಯಾಟರಿ ಪ್ಯಾಕ್ ಜೋಡಣೆಯೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 500 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

Published On - 4:32 pm, Tue, 25 October 22