ವಾಹನ ಮಾರುಕಟ್ಟೆಗೆ ಪ್ರತೀ ವರ್ಷವೂ ಹಲವಾರು ವಿನೂತನ ಮಾಡೆಲ್ಗಳು (New Car Models) ಬಿಡುಗಡೆ ಆಗುತ್ತಲೇ ಇರುತ್ತವೆ. ನಾವು ಕೊಳ್ಳುವ ಕಾರು ನಾಲ್ಕೈದು ವರ್ಷಕ್ಕೆ ಔಟ್ಡೇಟೆಡ್ ಆಗಿಹೋಗುವಷ್ಟು ಹೊಸತನದ ಕಾರುಗಳು ಬರುತ್ತಿರುತ್ತವೆ. ಲಕ್ಷಾಂತರ ದುಡ್ಡು ಕೊಟ್ಟು ಕೊಳ್ಳುವ ಕಾರನ್ನು ಅಷ್ಟು ಸುಲಭಕ್ಕೆ ಮಾರಲು ಯಾರಿಗಾದರೂ ಮನಸಾಗದು. ದಂಡಿ ದುಡ್ಡು ಇದ್ದವರು ಬಟ್ಟೆ ಬದಲಿಸಿದಂತೆ ಕಾರುಗಳನ್ನು ಬದಲಿಸಬಹುದು. ಆದರೆ, ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ಆದರೂ ಕೂಡ ಅಪ್ಪ ಹಾಕಿದ ಆಲದ ಮರಕ್ಕೆ ಜೋತುಬಿದ್ದಂತೆ ಹಳೆಯ ಕಾರನ್ನೇ ಓಡಿಸುತ್ತಾ ಕೂತರೆ ಅದೂ ಕೂಡ ನಷ್ಟ ತರುವಂಥದ್ದೇ. ನಿಮ್ಮ ಹಳೆಯ ಕಾರನ್ನು ಸಕಾಲದಲ್ಲಿ ಮಾರಿದರೆ ಒಳ್ಳೆಯ ಬೆಲೆ ಸಿಕ್ಕುತ್ತದೆ. ಹೊಸ ಕಾರು ಕೊಳ್ಳಲೂ ಅನುಕೂಲವಾಗುತ್ತದೆ. ಹಳೆಯ ಕಾರನ್ನು ಯಾವ ಸಮಯದಲ್ಲಿ ಮಾರಬಹುದು, ಮಾರುವಾಗ ಕಾರಿನ ಸ್ಥಿತಿ ಹೇಗಿರಬೇಕು, ಇತ್ಯಾದಿ ಕೆಲ ಅಂಶಗಳನ್ನು ತಿಳಿದುಕೊಂಡಿದ್ದರೆ ಅನುಕೂಲ.
ಇದನ್ನೂ ಓದಿ: Maruti Suzuki: ಮಾರುತಿ ಸುಜುಕಿ 1 ಲಕ್ಷ ಕೋಟಿ ರೂ ಆದಾಯ ದಾಟಿದ ಭಾರತದ ಮೊದಲ ಕಾರ್ ಕಂಪನಿ; ಷೇರುಗಳಿಗೆ ಭಾರೀ ಬೇಡಿಕೆ ಸಾಧ್ಯತೆ
ಮನುಷ್ಯರಂತೆ ಯಂತ್ರಗಳಿಗೂ ಆಯಸ್ಸು ಎಂಬುದು ಇರುತ್ತದೆ. ಹೆಚ್ಚು ಬಳಕೆ ಆದಂತೆಲ್ಲ ಯಂತ್ರಗಳ ಕಾರ್ಯಕ್ಷಮತೆ ಕುಗ್ಗುತ್ತಾ ಹೋಗಿ ಕೊನೆಗೊಂದು ದಿನ ಪೂರ್ತಿ ನಿಂತುಹೋಗುತ್ತವೆ. ಕಾರು ಕೂಡ ಹಾಗೆಯೇ. ಇಂತಿಷ್ಟು ದೂರ ಸವೆಸಿದ ಬಳಿಕ ಕಾರುಗಳ ಕ್ಷಮತೆ ಕಡಿಮೆ ಆಗತೊಡಗುತ್ತದೆ. ಸಾಮಾನ್ಯವಾಗಿ 1 ಲಕ್ಷ ಕಿಮೀ ದೂರ ಓಡಿದ ಬಳಿಕ ಕಾರಿನ ಕ್ಷಮತೆ ನಿಧಾನವಾಗಿ ಕಡಿಮೆ ಆಗುತ್ತದೆ. ಮೈಲೇಜ್ ಕಡಿಮೆ ಆಗುತ್ತದೆ. ಕೆಲ ಕಾರುಗಳು ಇನ್ನೂ ಹೆಚ್ಚು ದೂರ ಕ್ಷಮತೆಯಿಂದ ಓಡಬಹುದಾದರೂ 1 ಲಕ್ಷ ಕಿಮೀ ಎಂಬುದು ಸಾಮಾನ್ಯವಾಗಿ ಅನ್ವಯವಾಗುವ ಮಾನದಂಡ. ಆಗಲೇ ನೀವು ಮಾರಿದರೆ ಉತ್ತಮ ಬೆಲೆ ಸಿಗುತ್ತದೆ. ಅದನ್ನು ಹೊಸ ಕಾರು ಖರೀದಿಗೆ ಬಳಸಬಹುದು.
ಕೆಲ ಕಾರು ಹಳೆಯದಾಗುತ್ತಿರುವಂತೆಯೇ ಕಂಪನಿ ವತಿಯಿಂದ ಬಿಡಿಭಾಗ ಪೂರೈಕೆ ಇತ್ಯಾದಿ ಸೇವೆ ದುರ್ಲಭವಾಗಬಹುದು. ಹಳೆಯ ಕಾರು ಬಿಟ್ಟು ಹೊಸ ಕಾರು ಖರೀದಿಸಲಿ ಎಂಬುದು ಕಂಪನಿಯ ಉದ್ದೇಶವಿರಬಹುದು. ಈ ರೀತಿಯಾಗಿ ಕಾರಿನ ಬಿಡಿಭಾಗದ ಲಭ್ಯತೆ ಕಡಿಮೆ ಆದರೆ ಅದರ ಬೆಲೆ ಸಹಜವಾಗಿ ಹೆಚ್ಚೇ ಇರುತ್ತದೆ. ಇದರಿಂದ ಕಾರಿನ ಮೈಂಟೆನೆನ್ಸ್ ದುಬಾರಿ ಎನಿಸುತ್ತದೆ. ಇದು ಕಾರು ಮಾರಲು ಸಮಯ ಎಂದು ನಿರ್ಧರಿಸಬಹುದು.
ಇದನ್ನೂ ಓದಿ: Ola Refund: ಒಲಾ ಎಲೆಕ್ಟ್ರಿಕ್ ಶಾಕ್..! ಗ್ರಾಹಕರಿಗೆ 130 ಕೋಟಿ ರೂ ರೀಫಂಡ್; ಕಾರಣ ಏನು?
ಒಂದು ಕಾರಿನ ಮಾಡೆಲ್ ಅನ್ನು ಕೆಲ ಕಂಪನಿಗಳು ಬೇರೆ ಬೇರೆ ಕಾರಣಗಳಿಂದ ಉತ್ಪಾದನೆ ನಿಲ್ಲಿಸಬಹುದು. ಹೀಗೆ ಕಂಪನಿಯಿಂದ ತಯಾರಿಕೆ ನಿಂತುಹೋದ ಕಾರಿನ ಮಾಡೆಲ್ ನಿಮ್ಮಲ್ಲಿದ್ದರೆ ಆದಷ್ಟೂ ಬೇಗ ಮಾರುವುದು ಉತ್ತಮ. ನಿಂತುಹೋದ ಮಾಡೆಲ್ನ ಮೌಲ್ಯ ದಿನದಿನವೂ ಕಡಿಮೆ ಆಗುತ್ತಾ ಹೋಗುತ್ತದೆ. ಅದರ ಮೈಂಟೆನೆನ್ಸ್ ವೆಚ್ಚವೂ ದುಬಾರಿಯಾಗಿರುತ್ತದೆ. ನೀವು ಹೆಚ್ಚು ದಿನ ಇಟ್ಟುಕೊಂಡಷ್ಟೂ ಬೆಲೆ ಕಡಿಮೆ ಆಗುತ್ತಾ ಹೋಗುತ್ತದೆ.