Maruti Suzuki: ಮಾರುತಿ ಸುಜುಕಿ 1 ಲಕ್ಷ ಕೋಟಿ ರೂ ಆದಾಯ ದಾಟಿದ ಭಾರತದ ಮೊದಲ ಕಾರ್ ಕಂಪನಿ; ಷೇರುಗಳಿಗೆ ಭಾರೀ ಬೇಡಿಕೆ ಸಾಧ್ಯತೆ
Global Autmakers Top-30 List: ಮಾರುತಿ ಸುಜುಕಿಯ ಒಂದು ವರ್ಷದ ಆದಾಯ 1 ಲಕ್ಷ ಕೋಟಿ ರೂ ಗಡಿ ಮುಟ್ಟಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಕಂಪನಿ ಎನಿಸಿದೆ. ಅತಿಹೆಚ್ಚು ಆದಾಯ ಹೊಂದಿದ ಕಾರುಸಂಸ್ಥೆಗಳ ಜಾಗತಿಕ ಪಟ್ಟಿಗೆ ಮೊದಲ ಬಾರಿಗೆ ಮಾರುತಿ ಸುಜುಕಿ ಪ್ರವೇಶಪಡೆದಿದೆ.
ನವದೆಹಲಿ: ಭಾರತದ ಮಾರುತಿ ಸುಜುಕಿ ಸಂಸ್ಥೆಯ ಆದಾಯ (Maruti Suzuki revenue) ಒಂದು ಹಣಕಾಸು ವರ್ಷದಲ್ಲಿ 1 ಲಕ್ಷ ಕೋಟಿ ರೂ ದಾಟಿದೆ. ಈ ಸಾಧನೆ ಮಾಡಿದ ಭಾರತದ ಮೊದಲ ಪ್ಯಾಸೆಂಜರ್ ವಾಹನ ಕಂಪನಿ ಎನಿಸಿದೆ ಮಾರುತಿ ಸುಜುಕಿ. ಬ್ಲೂಮ್ಬರ್ಗ್ ವರದಿ ಪ್ರಕಾರ ಜಾಗತಿಕ ಟಾಪ್ 30 ವಾಹನ ಸಂಸ್ಥೆಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಸ್ಥಾನ ಪಡೆದಿದೆ. ಅತಿ ಹೆಚ್ಚು ಆದಾಯ ಹೊಂದಿದ ವಾಹನ ಕಂಪನಿಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ 28ನೇ ಸ್ಥಾನ ಪಡೆದಿದೆ. ಈ ಗ್ಲೋಬಲ್ ಲಿಸ್ಟ್ಗೆ ಮಾರುತಿ ಸುಜುಕಿ ಸಂಸ್ಥೆ ಸೇರ್ಪಡೆಯಾಗಿದ್ದು ಇದೇ ಮೊದಲು. ವೋಸ್ವ್ಯಾಗನ್ (Volkswagen), ಟೊಯೋಟಾ ಮತ್ತು ಸ್ಟೆಲಾಂಟಿಸ್ (Stellantis- ಫಿಯಟ್ ಕಾರ್ ಕಂಪನಿಯ ಭಾಗ) ಕಾರು ಸಂಸ್ಥೆಗಳು ಮೊದಲ 3 ಸ್ಥಾನದಲ್ಲಿದ್ದು ಕ್ರಮವಾಗಿ 293 ಬಿಲಿಯನ್ ಡಾಲರ್ (24 ಲಕ್ಷ ಕೋಟಿ ರೂ), 271 ಬಿಲಿಯನ್ ಡಾಲರ್ ಮತ್ತು 189 ಬಿಲಿಯನ್ ಡಾಲರ್ ವಾರ್ಷಿಕ ಆದಾಯ ಹೊಂದಿವೆ. ಈ ಪಟ್ಟಿಯಲ್ಲಿ ಭಾರತದ ಟಾಟಾ ಮೋಟಾರ್ಸ್ ಮಾಲಕತ್ವದ ಜಾಗ್ವರ್ ಲ್ಯಾಂಡ್ ರೋವರ್ 17ನೇ ಸ್ಥಾನದಲ್ಲಿರುವುದು ವಿಶೇಷ.
ಭಾರತದಲ್ಲಿ ಮೊದಲಿಂದಲೂ ನಂಬರ್ ಒನ್ ಕಾರ್ ಕಂಪನಿ ಎನಿಸಿದರೂ ಮಾರುತಿ ಸುಜುಕಿ ಈ ಜಾಗತಿಕ ಪಟ್ಟಿಗೆ ಬಂದಿರುವುದು ಇದೇ ಮೊದಲು. ಟಾಟಾ ಕಂಪನಿಯ ಲ್ಯಾಂಡ್ ರೋವರ್ ಕಾರುಗಳು ಹಲವು ದೇಶಗಳಲ್ಲಿ ಉತ್ತಮ ಮಾರಾಟ ಕಾಣುತ್ತಿವೆ. ಹೀಗಾಗಿ, ಗ್ಲೋಬಲ್ ಪಟ್ಟಿಯಲ್ಲಿ ಟಾಟಾ ಸೇರಿದೆ. ಆದರೆ, ಮುಂದಿನ ದಿನಗಳಲ್ಲಿ ಭಾರತದ ವಾಹನ ಮಾರುಕಟ್ಟೆ ಇನ್ನೂ ವೇಗದಲ್ಲಿ ವಿಸ್ತಾರಗೊಳ್ಳಬಹುದು ಎಂಬ ಆಶಯದಲ್ಲಿ ಮಾರುತಿ ಸುಜುಕಿ ಇದೆ. ಸರ್ಕಾರದಿಂದ ಯಾವುದೇ ನಿರ್ಬಂಧಗಳು ಇಲ್ಲದೇ ಆರ್ಥಿಕತೆ ನಿಭಾಯಿಸಲಾಗುತ್ತಿರುವ ರೀತಿ ನೋಡಿದರೆ ಎಲ್ಲರಿಗೂ ಬೆಳೆಯಲು ಅವಕಾಶ ಇದೆ ಎಂದು ಮಾರುತಿ ಸುಜುಕಿ ಸಂಸ್ಥೆಯ ಮುಖ್ಯಸ್ಥ ಆರ್.ಸಿ. ಭಾರ್ಗವ ಹೇಳಿದ್ದಾರೆ.
ಇದನ್ನೂ ಓದಿ: Comet EV: ಚೀನೀ ಕಂಪನಿಯಿಂದ ಭಾರತದಲ್ಲಿ ಅತಿಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆ; ಟಾಟಾ ಟಿಯಾಗೋಕ್ಕಿಂತ ಉತ್ತಮವಾಗಿದೆಯಾ?
ಏಪ್ರಿಲ್ 26ರಂದು ಮಾರುತಿ ಸುಜುಕಿಯ ಹಣಕಾಸು ವರದಿ ಪ್ರಕಟವಾಗಿತ್ತು. ಅದೇ ದಿನ ಸಂಸ್ಥೆಯು ಪ್ರತೀ ವರ್ಷ 10 ಲಕ್ಷ ವಾಹನಗಳನ್ನು ತಯಾರಿಸುವ ಸಾಮರ್ಥ್ಯ ಇರುವ ಹೊಸ ಘಟಕವೊಂದನ್ನು ಸ್ಥಾಪಿಸುವುದಾಗಿ ಹೇಳಿದೆ. ಇದರೊಂದಿಗೆ ಮಾರುತಿ ಸುಜುಕಿ ಮುಂಬರುವ ದಿನಗಳಲ್ಲಿ ಇನ್ನಷ್ಟು ಆಕ್ರಮಣಕಾರಿಯಾಗಿ ಮಾರುಕಟ್ಟೆಯನ್ನು ಆವರಿಸಿಕೊಳ್ಳುವ ಇರಾದೆಯಲ್ಲಿದೆ.
ವರ್ಷದ ಮೊದಲ ಕ್ವಾರ್ಟರ್ನಲ್ಲಿ ಮಾರುತಿ ಸುಜುಕಿ ನಿವ್ವಳ ಆದಾಯದಲ್ಲಿ ಭರ್ಜರಿ ಹೆಚ್ಚಳ
2023ರ ಜನವರಿಯಿಂದ ಮಾರ್ಚ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಮಾರುತಿ ಸುಜುಕಿಯ ನಿವ್ವಳ ಲಾಭ 2,623 ಕೋಟಿ ರೂ ಇದೆ. ವರ್ಷದ ಹಿಂದೆ ಬಂದಿದ್ದ ಲಾಭಕ್ಕಿಂತ ಶೇ. 43ರಷ್ಟು ಲಾಭ ಹೆಚ್ಚಳವಾಗಿದೆ. ಆದರೂ ಕೂಡ ಈ ತ್ರೈಮಾಸಿಕ ಅವಧಿಯಲ್ಲಿ ಮಾರುತಿ ಸುಜುಕಿಯ ನಿವ್ವಳ ಲಾಭ 2,773 ಕೋಟಿ ಇರಬಹುದು ಎಂಬ ನಿರೀಕ್ಷೆ ಇತ್ತು. ಅದಕ್ಕಿಂತ ತುಸು ಕಡಿಮೆ ಆಗಿದೆ.
ಇದನ್ನೂ ಓದಿ: World Bank: ವಿಶ್ವಬ್ಯಾಂಕ್ ಲಾಜಿಸ್ಟಿಕ್ಸ್ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ 6 ಸ್ಥಾನ ವೃದ್ಧಿಕಂಡ ಭಾರತಕ್ಕೆ 38ನೇ ರ‍್ಯಾಂಕ್
ಮಾರುತಿ ಷೇರು ಖರೀದಿಗೆ ಇದು ಸಕಾಲವಾ? ಶೇ. 35ರಷ್ಟು ಲಾಭ ಕೊಡುತ್ತಾ ಇದು?
ಮಾರುತಿ ಸುಜುಕಿ ಕಂಪನಿಯ ಆದಾಯ ಸಖತ್ತಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಈಗ ಮಾರುತಿ ಸುಜುಕಿಯ ಷೇರುಗಳತ್ತ ನೆಟ್ಟಿದೆ. ಮಾರ್ಗನ್ ಸ್ಟಾನ್ಲೀಯಿಂದ ಹಿಡಿದು ಶೇರ್ಖಾನ್ವರೆಗೆ ಬಹುತೇಕ ಬ್ರೋಕರೇಜ್ ಕಂಪನಿಗಳು ಮಾರುತಿ ಸುಜುಕಿ ಷೇರಿಗೆ ಸಕಾರಾತ್ಮಕ ಅಭಿಪ್ರಾಯ ನೀಡಿವೆ.
ಸದ್ಯ ಮಾರುತಿ ಸುಜುಕಿ ಷೇರು ಬೆಲೆ ಒಂದಕ್ಕೆ 8,500 ರೂ ಇದೆ. ಮುಂದಿನ ದಿನಗಳಲ್ಲಿ ಇದರ ಬೆಲೆ 10,500ರಿಂದ 11,500 ರೂವರೆಗೂ ಏರಬಹುದು ಎಂದು ಬ್ರೋಕರೇಜ್ ಕಂಪನಿಗಳು ಅಂದಾಜಿಸಿವೆ. ಅಂದರೆ ಸುಮಾರು ಶೇ. 25ರಿಂದ 35ರಷ್ಟು ಷೇರುಬೆಲೆ ಹೆಚ್ಚಾಗಬಹುದು. ನೀವು ಹೂಡಿಕೆಗೆ ಆಸಕ್ತಿ ಹೊಂದಿದ್ದರೆ ಇವತ್ತೇ ಮಾರುತಿ ಸುಜುಕಿಯ ಷೇರಿ ಮೇಲೆ ಹಣ ಹಾಕಬಹುದು ಎಂಬುದು ಬ್ರೋಕರೇಜ್ ಕಂಪನಿಗಳ ಶಿಫಾರಸು.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:11 pm, Thu, 27 April 23