World Bank: ವಿಶ್ವಬ್ಯಾಂಕ್ ಲಾಜಿಸ್ಟಿಕ್ಸ್ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ 6 ಸ್ಥಾನ ವೃದ್ಧಿಕಂಡ ಭಾರತಕ್ಕೆ 38ನೇ ರ‍್ಯಾಂಕ್
ವಿಶ್ವಬ್ಯಾಂಕ್ (World Bank) ಲಾಜಿಸ್ಟಿಕ್ಸ್ ಕಾರ್ಯಕ್ಷಮತೆ ಶ್ರೇಯಾಂಕದ (LPI 2023) 7 ನೇ ಆವೃತ್ತಿ ಬಿಡುಗಡೆಯಾಗಿದ್ದು, 139 ದೇಶಗಳ ಪೈಕಿ ಭಾರತವು 6 ಸ್ಥಾನಗಳನ್ನು ಜಿಗಿದು 38 ನೇ ಸ್ಥಾನಕ್ಕೆ ತಲುಪಿದೆ.
ನವದೆಹಲಿ: ವಿಶ್ವಬ್ಯಾಂಕ್ (World Bank) ಲಾಜಿಸ್ಟಿಕ್ಸ್ ಕಾರ್ಯಕ್ಷಮತೆ ಶ್ರೇಯಾಂಕದ (LPI 2023) 7 ನೇ ಆವೃತ್ತಿ (Logistics Performance Index 2023) ಬಿಡುಗಡೆಯಾಗಿದ್ದು, 139 ದೇಶಗಳ ಪೈಕಿ ಭಾರತವು 6 ಸ್ಥಾನಗಳನ್ನು ಜಿಗಿದು 38 ನೇ ಸ್ಥಾನಕ್ಕೆ ತಲುಪಿದೆ. ಆ ಮೂಲಕ ವೃದ್ಧಿ ದಾಖಲಿಸಿದೆ. ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ದಕ್ಷತೆಯನ್ನು ಹೆಚ್ಚಿಸಲು ಭಾರತವು 2015 ರಿಂದಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಲಾಜಿಸ್ಟಿಕ್ಸ್ ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತದ ಪ್ರಯತ್ನಗಳನ್ನು ವಿಶ್ವಬ್ಯಾಂಕ್ ಗುರುತಿಸಿದೆ. ಕಳೆದ ಕೆಲವು ವರ್ಷಗಳಿಂದ ಅನುಷ್ಠಾನಗೊಳ್ಳುತ್ತಿರುವ ವಿವಿಧ ಉಪಕ್ರಮಗಳ ಹಿನ್ನೆಲೆಯಲ್ಲಿ ಭಾರತವು ಈ ಬಾರಿ ಗಮನಾರ್ಹ ಸುಧಾರಣೆಯನ್ನು ಕಂಡಿದೆ ಎಂದು ಕೇಂದ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.
ಲಾಜಿಸ್ಟಿಕ್ಸ್ ಮೂಲಸೌಕರ್ಯವನ್ನು ಸುಧಾರಿಸುವ ವಿಚಾರದಲ್ಲಿ ನಮ್ಮ ಸರ್ಕಾರ ಕೈಗೊಂಡ ಸುಧಾರಣಾ ಕ್ರಮಗಳಿಂದಾಗಿ ಇದು ಸಾಧ್ಯವಾಗಿದೆ. ಮೂಲಸೌಕರ್ಯ ಯೋಜನೆ ಮತ್ತು ಅಭಿವೃದ್ಧಿಗಾಗಿ ಸರ್ಕಾರವು ಪ್ರಧಾನ ಮಂತ್ರಿ ಗತಿಶಕ್ತಿ ನ್ಯಾಷನಲ್ ಮಾಸ್ಟರ್ ಪ್ಲಾನ್ (PMGS-NMP) ಯೋಜನೆಯ ಸಮನ್ವಯ ವಿಧಾನ, ತಂತ್ರಜ್ಞಾನವನ್ನು ಬಳಸಿಕೊಳ್ಳಲು 2021 ರ ಅಕ್ಟೋಬರ್ನಲ್ಲಿ ಪ್ರಾರಂಭಿಸಿತು. ಇದು ಜಿಐಎಸ್ ಆಧಾರಿತ ಸಾಧನವಾಗಿದ್ದು, ಜನರು ಮತ್ತು ಸರಕುಗಳ ತಡೆರಹಿತ ಸಾಗಾಟಕ್ಕಾಗಿ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ವಿವಿಧ ಕೇಂದ್ರ ಸಚಿವಾಲಯಗಳ ಅಸ್ತಿತ್ವದಲ್ಲಿರುವ ಮತ್ತು ಪ್ರಸ್ತಾವಿತ ಮೂಲಸೌಕರ್ಯ ಉಪಕ್ರಮಗಳನ್ನು ಸಂಯೋಜಿಸುತ್ತದೆ. ಇದು ಕ್ಷಿಪ್ರ ನಗರೀಕರಣ, ಬದಲಾಗುತ್ತಿರುವ ಇಂಧನ ಆಯ್ಕೆಗಳು, ಇ-ಕಾಮರ್ಸ್, ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳನ್ನು ಅಭಿವೃದ್ಧಿಪಡಿಸುವ ಅಗತ್ಯತೆಯಂತಹ ಅಂಶಗಳಿಂದಾಗಿ ಲಾಜಿಸ್ಟಿಕ್ಸ್ ಸ್ಥಿತಿಯನ್ನು ಪರಿವರ್ತಿಸುವ ಅಗತ್ಯಗಳನ್ನು ತಿಳಿಸುತ್ತದೆ ಎಂದು ವಾಣಿಜ್ಯ ಮತ್ತು ಉದ್ಯಮ ಸಚಿವಾಲಯದ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
2022ರ ಸೆಪ್ಟೆಂಬರ್ನಲ್ಲಿ, ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು (NLP) ಪ್ರಾರಂಭಿಸಿದರು. ಇದು ಲಾಜಿಸ್ಟಿಕ್ಸ್ ನೀತಿಯನ್ನು ರೂಪಿಸಲು ಬಯಸುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ (19 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ತಮ್ಮ ಲಾಜಿಸ್ಟಿಕ್ಸ್ ನೀತಿಯನ್ನು ಸೂಚಿಸಿವೆ). ನೀತಿಯು ಲಾಜಿಸ್ಟಿಕ್ಸ್ ಮೂಲಸೌಕರ್ಯ ಮತ್ತು ಸೇವೆಗಳ ಉನ್ನತೀಕರಣ ಮತ್ತು ಡಿಜಿಟಲೀಕರಣದ ಸುತ್ತ ಕೇಂದ್ರೀಕೃತವಾಗಿದೆ.
ಈ ನೀತಿಯು ಸೇವೆಗಳು (ಪ್ರಕ್ರಿಯೆಗಳು, ಡಿಜಿಟಲ್ ವ್ಯವಸ್ಥೆಗಳು, ನಿಯಂತ್ರಕ ಚೌಕಟ್ಟು) ಮತ್ತು ಮಾನವ ಸಂಪನ್ಮೂಲಗಳಲ್ಲಿ ದಕ್ಷತೆಯನ್ನು ತರುವತ್ತ ಗಮನಹರಿಸುವುದರೊಂದಿಗೆ, ತಡೆರಹಿತ ಸಮನ್ವಯಕ್ಕಾಗಿ ಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸಲು ಮತ್ತು ಒಟ್ಟಾರೆ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ಗಮನಾರ್ಹವಾದ ಒತ್ತು ನೀಡುತ್ತದೆ. ಜೊತೆಗೆ ಉದ್ಯೋಗ ಸೃಷ್ಟಿ ಮತ್ತು ಉದ್ಯೋಗಿಗಳ ಕೌಶಲ್ಯವನ್ನು ಉತ್ತೇಜಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:08 pm, Wed, 26 April 23