ಪರೀಕ್ಷೆಯ ಸಲುವಾಗಿ ಬೆಂಗಳೂರಿನ ಪೀಣ್ಯದಲ್ಲಿ ಪೂರ್ವಾಹ್ನ ಪತ್ರಿಕೆಯ ಬರೆದು, ಅಪರಾಹ್ನದ ಪತ್ರಿಕೆಗೆ ಪುನರ್ ಮನನ ಮಾಡಲು, ಅದಕ್ಕೂ ಮುಂಚಿತವಾಗಿ ಒಂದೊಳ್ಳೆ ಚಹಾದ ಶೊಧನೆಯಲ್ಲಿದ್ದ ನನಗೆ, ಸಿಕ್ಕ ಚಹಾದ ಸ್ವಾದ ನಿಜಕ್ಕೂ ಆಹ್ಲಾದವಾಗಿತ್ತು. ಚಹಾದ ಅಂಗಡಿಯ ಸಮೀಪದಲ್ಲೇ ಒಂದು ಮುಚ್ಚಿದ ಅಂಗಡಿಯ ಅಡಿ ನೆರಳನರಸಿ ಕುಳಿತೆ, ಒಂದಷ್ಟು ಓದುತಲಿರುವಾಗ ಒಂದು ಹುಡುಕಾಟದ ದನಿ ಕೇಳಿತು, ತಿರುಗಿ ನೋಡಲು ಶಿಳ್ಳೆ ಹೊಡೆದು ಅದ್ಯಾವುವೋ ಹೆಸರನು ಆದರದಿಂದ ಕರೆಯುತ್ತಿದ್ದ ವ್ಯಕ್ತಿ ಕಂಡರು… ಮೊದಲಿಗೆ ಅಷ್ಟಾಗಿ ಗಮನಿಸಲಿಲ್ಲ… ನಂತರ ಆ ದನಿಯಲ್ಲಿನ ಸದ್ದು ಗಾಢವಾಗಿ ಹೊರಡಿತು ಮರುಕ್ಷಣವೇ ಇಬ್ಬರು ಅತಿಥಿಗಳಿಗೆ ಮಂತ್ರಾರ್ಪಣೆ (ಬೈಗುಳ) ಶುರುವಾಯಿತು ಅವರು ಅದನ್ನ ಸ್ವೀಕರಿಸುವಂತೆ ತಲೆತಗ್ಗಿಸಿ ನಿಂತರು.
ಅದಾದ ಕೆಲವೇ ನಿಮಿಷಗಳಲ್ಲಿ ಆ ವ್ಯಕ್ತಿ ಏನೋ ಹುಡುಕಾಟದಲ್ಲಿ ತಲ್ಲೀನರಾಗಿ ನನ್ನ ಮುಂದೆ ಬಂದರು. ಅವರ ಹುಡುಕಾಟ ಪೇಪರ್ ತಟ್ಟೆಗಳಿಗಾಗಿ ಮತ್ತವು ನನ್ನಿಂದ ಸ್ವಲ್ಪ ದೂರದಲ್ಲಿಯೇ ಇತ್ತು. ಬಹುಶಃ ಮುಚ್ಚಿದ ಅಂಗಡಿಯ ಒಡೆಯನಾತನಾಗಿದ್ದ ಅಂದೆನಿಸುತ್ತೆ, ಅಂಗಡಿಯಿಂದ ಬಹಳಾನೇ ದೂರದಲ್ಲಿ ಮನೆಯಿದೆ, ಮತ್ತವರು ವಿಶಿಷ್ಟ ಚೇತನರು ಕಾಲಿಗೆ ಚಿಕ್ಕಂದಿನಲ್ಲಿಯೇ ಪೋಲಿಯೋ ತಾಗಿದೆ, ಆದರೆ ಮನಸ್ಸಿನ ಆಧಮ್ಯ ಚೇತನಕ್ಕೆ ಒಂದಷ್ಟೂ ಕೊರತೆಯಾಗಿಲ್ಲ. ಅಂದಹಾಗೆ ಆ ಎರಡು ಅತಿಥಿಗಳ ಸಲುವಾಗಿಯೇ ಈ ತಟ್ಟೆಯ ಹುಡುಕಾಟ… ಮನೆಯಿಂದ ಅಡುಗೆ ಮಾಡಿಸಿ, ಅದನ್ನು ಅತಿಥಿಗಳಿಗೆಂದೇ ತಂದಿದ್ದಾರೆ. ಅತಿಥಿಗಳು ಮತ್ಯಾರಲ್ಲ ಅರ್ಧ ವಯಸ್ಸಾದ ಶ್ವಾನಗಳು ಆಗಲೇ ಮಂತ್ರಾರ್ಪಣೆಯ ನಂತರ ಇಬ್ಬರಿಗೂ ಭೋಜನ ಬಡಿಸಿ ಅವು ತಿನ್ನುವವರೆಗೂ ಮಳೆಯಲ್ಲಿಯೇ ನಿಂತಿದ್ದರು ಆ ವ್ಯಕ್ತಿ, ಸಂಪೂರ್ಣ ಊಟ ಮುಗಿಸಲೆಂಬ ಕಾರಣಕ್ಕೆ, ತಿಂದಾದ ನಂತರ ಊಟದ ತಟ್ಟೆಯನ್ನು ತೆಗೆದು, ಆ ಸ್ಥಳ ಸ್ವಚ್ಛ ಮಾಡಿದ್ದರು.
ಮಾನವೀಯತೆ ಅನ್ನೋದು ಮನಸ್ಸಿಂದ ಬರಬೇಕೇ ಹೊರತು ದೇಹದ ನ್ಯೂನತೆಗಳು ಇಲ್ಲಿ ಯಾವುದೇ ಪ್ರಭಾವ ಬೀರುವುದಿಲ್ಲಾ… ಅಲ್ಲದೆ ಮಾನವೀಯತೆಯೊಂದಿಗಿನ ಅವರ ಸ್ವಚ್ಛತೆಯ ಕಾಳಜಿ.
ನಮ್ಮಲ್ಲಿರುವ ಎಷ್ಟೋ ಜನಕ್ಕೆ ಇದೆ ಸ್ವಚ್ಛತೆಯ ಕಳಕಳಿ… ನಾನೇ ಕಂಡಂತಹ ಬಹಳಷ್ಟು ಜನಕ್ಕೆ ಅದೇನೋ ಅಸಡ್ಡೆ, ಕಸವನ್ನು ರಸ್ತೆಗಳ ಮೇಲೆಯೇ ಎಸಿಯೋದು, ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ, ಉಗುಳುವುದು, ಇದೆಲ್ಲಾ so called ಅಕ್ಷರಸ್ಥರೇ ಹೆಚ್ಚಾಗಿ ಮಾಡುತ್ತಿರುವ ಕಾರ್ಯಗಳಾಗಿವೆ… ಅರ್ರೆ ಅಂದೊಂದು ದಿನ ದೇಶದ ಪ್ರಧಾನಿ ಸ್ವಚ್ಛತೆಯ ಮಾಡಿದಾಗ ಎಲ್ಲರಲ್ಲೂ ಹುರುಪಿತ್ತು ಸ್ವಚ್ಛತೆಯ ಬಗ್ಗೆ, ತಮ್ಮ ತೋರುವಿಕೆಯ ಸ್ವಚ್ಛತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದೇ ಹಾಕಿದ್ದು, ಆದರೀಗ….?
ಸುಂದರ ಸಮಾಜದ ನಾಗರೀಕರೇ… ಮತ್ತೆ ಈ ದೇಶದ ಪ್ರಧಾನಿ ಸ್ವಚ್ಛತೆಯ ಜಾಗೃತಿ ಮೂಡಿಸುವವರೆಗೂ ನಾವು ಸ್ವಚ್ಛತೆಯ ಬಗ್ಗೆ ಗಮನ ಹರಿಸಕೂಡದು ಎಂಬ ಅಲಿಖಿತ ನಿಯಮ ಪಾಲನೆಯಾಗ್ತಿದೆಯಾ?
ಸಾರ್ವಜನಿಕ ಸ್ಥಳಗಳನ್ನ ಶುಭ್ರವಾಗಿಡುವುದು ಕೇವಲ ಪೌರ ಕಾರ್ಮಿಕರ ಕಾಯಕವಲ್ಲ. ಸಾರ್ವಜನಿಕ ಶೌಚಾಲಯಗಳ ಸ್ವಚ್ಚತೆ ಅದಕ್ಕೆಂದೇ ನೇಮಕವಾದ ನೌಕರರದಷ್ಟೇ ಅಲ್ಲಾ. ಕುಟುಂಬದೊಂದಿಗೆ ಹೊರ ಸ್ಥಳಗಳಿಗೋದಾಗ ತಿನ್ನುವ ಪದಾರ್ಥಗಳ ಕವರುಗಳನ್ನ ರಸ್ತೆಗೆ ಎಸಿಯುವುದು ನಮ್ಮ ಘನತೆಯ ತೋರಿದಂತಾಗುವುದಿಲ್ಲಾ. ಸ್ವಚ್ಛ ಶೌಚಾಲಯಗಳ ನಿರ್ವಹಣೆ ಬಳಸಿದವರ ಹೊರತುಪಡಿಸಿ ಅನ್ಯರಿಂದ ಅಸಾಧ್ಯ. ಆದ್ರೆ ವಿಪರ್ಯಾಸ ಎಂದರೆ ನಮಗೆ ನಿರ್ಮಲ ಪರಿಸರ ಬೇಕು, ಆದರೆ ನೈರ್ಮಲ್ಯತೆ ಅನ್ನೋದು ನಮ್ಮಿಂದ ಆಗಬಾರದು. ಅದಕ್ಕೆಂದೆ ಬೇರೆ ಜನ ಇದ್ದಾರೆ ಎಂಬ ಅತ್ಯುತ್ತಮ ಪ್ರಜ್ಞೆ ನಮ್ಮದು.
ನಿಜಕ್ಕೂ ಡಿಗ್ರಿಗಳಷ್ಟೇ ಬದುಕಿಗೆ ಶೋಭೆಯಲ್ಲ ಬದಲಿಗೆ ಜೀವನ ಮೌಲ್ಯಗಳು ಮುಖ್ಯವಾಗ್ತವೆ. ಉತ್ತಮ ನಾಗರೀಕನ ಜವಾಬ್ದಾರಿ ನೌಕರಿಯಿಂದ ಸರ್ಕಾರಕ್ಕೆ ತೆರಿಗೆ ಕಟ್ಟುವುದಷ್ಟೇ ಅಲ್ಲಾ ಬದಲಿಗೆ ನಾಗರೀಕತೆಯನ್ನು ಬಳಸೋದು, ಮುಂದಿನ ಪೀಳಿಗೆಗೆ ಉಳಿಸೋದು.
ಆಗಲಿ ಸ್ವಚ್ಛತೆ ನಿನ್ನಿಂದ, ನಿನಗಾಗಿ, ನಾಳಿನ ನಿನ್ನ ಸ್ವಾಸ್ಥ್ಯ ಪೀಳಿಗೆಗಾಗಿ…
ಮಾಗಿದ ಮನಸ್ಸು (ಪವಿತ್ರಾ)