ಹೊಳೆಯನ್ನು ದಾಟಬಹುದು ಆದರೆ ಸಾಗರವನ್ನೇ ದಾಟುವೆ ಎಂದು ಕೇವಲ ಮೂರ್ಖರು ಮಾತ್ರ ಹೇಳಲು ಸಾಧ್ಯ . ಹಾಗೆಯೇ ತಂದೆಯ ಪ್ರೀತಿ ,ವಾತ್ಸಲ್ಯ, ರಕ್ಷಣೆ ಇವೆಲ್ಲವನ್ನೂ ಪದಗಳಲ್ಲಿ ಗೀಚುವುದು ತುಂಬಾ ಕಷ್ಟ. ನಾನು ಹುಟ್ಟಿದ ನಂತರದಿಂದ ಇಲ್ಲಿಯವರೆಗೆ ಪ್ರತಿ ಕ್ಷಣವೂ ನನ್ನ ಪ್ರತಿ ತಪ್ಪುಗಳನ್ನು ತಿದ್ದಿ ತೀಡಿ ಸರಿ ದಾರಿ ತೋರಿ ಮುನ್ನಡೆಸಿದ ದೇವರು ನನ್ನಪ್ಪ. ನನ್ನ ಯಾವುದೇ ಆಸೆ-ಆಕಾಂಕ್ಷೆಗಳಿಗೆ ಅಡ್ಡಿ ಬಾರದೇ ಧೈರ್ಯದಿಂದ ಮುನ್ನಡೆಯುವ ಹಾಗೆ ಸಹಕರಿಸಿದ್ದಾರೆ. ನನ್ನ ಜೊತೆಗೆ ಇದ್ದು ನೆರಳಿನಂತೆ ಕಾಪಾಡಿದ್ದಾರೆ. ಅಪ್ಪ ಎಂದರೆ ನೆನಪಾಗುವ ಮೊದಲನೆಯ ಪದ ಅವರಲ್ಲಿರುವ ಧೈರ್ಯ. ಯಾವುದೇ ಸಂದರ್ಭ ಬರಲಿ ಅದು ಎಷ್ಟೇ ಕಠಿಣವಾಗಿರಲಿ. ಧೈರ್ಯದಿಂದ ಮುನ್ನುಗ್ಗುವ ಗುಣ ಅಪ್ಪನದ್ದು. ನಮ್ಮ ಶತ್ರುಗಳೇ ಆಗಿರಲಿ ಮಿತ್ರರೇ ಆಗಿರಲಿ ಅವರಿಗೆ ಕಷ್ಟ ಅಂತ ಬಂದಾಗ ಹಿಂದೆ ಮುಂದೆ ಯೋಚಿಸದೆ ಸಹಾಯ ಮಾಡುತ್ತಾರೆ. ತನಗಾಗಿ ಏನನ್ನೂ ಬಯಸದೆ ಇತರರಿಗಾಗಿ ಮಿಡಿಯುವ ದುಡಿಯುವ ಮನ ಅಪ್ಪನದ್ದು. ಊರಿನಲ್ಲಿ ಯಾರಿಗಾದರೂ ಏನಾದರೂ ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೆ ಅದನ್ನು ತಿಳಿದುಕೊಳ್ಳುವುದಕ್ಕಾಗಿ ಅಪ್ಪನ ಬಳಿಗೆ ಬರುತ್ತಾರೆ.
ಎಷ್ಟೋ ಬಾರಿ ಉಪಕಾರ ಮಾಡಿದವರು ನಮ್ಮ ಕಷ್ಟಕ್ಕೆ ನಮ್ಮ ಸಹಾಯಕ್ಕೆ ಬರದೇ ಇದ್ದ ಘಟನೆಗಳು ನಡೆದಿದೆ. ಆದರೆ ಅವರಿಗೆ ಮತ್ತೆ ಕಷ್ಟ ಬಂದಾಗ ಇದ್ಯಾವುದನ್ನೂ ಲೆಕ್ಕಿಸದೆ ಅವರ ಕಷ್ಟಕ್ಕೆ ತಾನು ಆಸರೆಯಾಗುತ್ತಾರೆ. ಇಂತಹ ನೂರಾರು ಘಟನೆಗಳು ನಡೆದು ಹೋಗಿವೆ. ನಾನು ಪ್ರಾಥಮಿಕ ತರಗತಿಯಲ್ಲಿ ಕಲಿಯುತ್ತಿರುವ ಸಂದರ್ಭದಲ್ಲಿ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಸ್ವಲ್ಪ ದಿನದ ಮಟ್ಟಿಗೆ ಚಿಕಿತ್ಸೆಗಾಗಿ ಅಲ್ಲೇ ಇರಬೇಕಾಗಿತ್ತು. ಆಗ ನನ್ನ ಜೊತೆಯೇ ಇದ್ದು ನನ್ನ ಸಂಪೂರ್ಣ ದಿನಚರಿಯನ್ನು ,ನನ್ನ ಬೇಕು, ಬೇಡಗಳನ್ನು ಅರಿತು ಕೈ ತುತ್ತು ತಿನ್ನಿಸಿ ಸಲಹಿದ ದೇವರು ನನ್ನ ಅಪ್ಪ. ಹೀಗೆ ಹಲವಾರು ಘಟನೆಗಳು ಸಂದರ್ಭಗಳು ನಡೆದುಹೋಗಿವೆ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ನನ್ನ ಬದುಕಿನ ರಾಯಭಾರಿ ಅಪ್ಪ
ನಾನಿಂದು ಜೀವಂತವಾಗಿ ಬದುಕಿ ಉಳಿದಿದ್ದರೆ ಅದಕ್ಕೆ ಮುಖ್ಯ ಕಾರಣ ನನ್ನ ಆ ಸಾಹುಕಾರನೆ, ತನಗೆ ಎಲ್ಲಾ ಜವಾಬ್ದಾರಿ ಇದ್ದರೂ ಏನೇ ಸಮಸ್ಯೆ ಬಂದರೂ ಕಷ್ಟ ಬಂದರೂ ಮಕ್ಕಳ ಎದುರು ಹೇಳಿಕೊಳ್ಳದೆ ತಾನೊಬ್ಬನೇ ನೋವನ್ನು, ದುಃಖವನ್ನು ಮನಸ್ಸಿನಲ್ಲಿ ಇರಿಸಿ ಕೊರಗಿ, ಕೊರಗಿ ತನ್ನನ್ನು ತಾನು ಸಮಾಧಾನಪಡಿಸಿ ಕೊಳ್ಳುವರು. ತನ್ನ ಮಕ್ಕಳ ಬಗ್ಗೆ ಅವರ ಜೀವನದ ಬಗ್ಗೆ ಬೆಟ್ಟದಷ್ಟು ಕನಸನ್ನು ಕಟ್ಟಿರುವರು. ಮಕ್ಕಳು ವಿದ್ಯಾಭ್ಯಾಸ ಪಡೆದು ಒಳ್ಳೆಯ ಕಾರ್ಯವನ್ನು ಮಾಡಬೇಕು, ಉತ್ತಮ ಕೆಲಸವನ್ನು ಗಿಟ್ಟಿಸಿಕೊಳ್ಳಬೇಕು ಎಂಬೆಲ್ಲ ಕನಸು ಅವರದು.
ನಮ್ಮ ಕೆಲವು ವಿಚಾರಗಳು, ನಿರ್ಧಾರಗಳನ್ನು ತಂದೆ ಧಿಕ್ಕರಿಸಿದರು ನಿಮಗೆ ಕೋಪ ಬರುವುದು ಸಹಜವೇ. ತಂದೆಗೆ ನಮ್ಮ ಮೇಲೆ ಪ್ರೀತಿ ಇಲ್ಲ ಎಂಬ ಆಲೋಚನೆ ಎಲ್ಲಾ ಬರುವುದು ಸಹಜವೇ ಆದರೆ ಅವರು ಧಿಕ್ಕರಿಸಿದ ವಿಚಾರದಲ್ಲಿ ಏನೋ ಕಾರಣವಿದೆ ಎಂಬುದನ್ನು ನಾವು ಅರಿಯುವುದಿಲ್ಲ. ಅವರು ಏನೇ ಆಜ್ಞೆ ಯನ್ನು ನೀಡಿದರೂ ಅದು ನಮ್ಮ ಒಳಿತಿಗಾಗಿಯೆ ಎಂಬುದು ನಾವು ತಿಳಿಯಬೇಕಾಗಿದೆ.
ನಾವು ಅಂಬೆಗಾಲಿಡುತ್ತಾ ನಡೆಯಲು ಪ್ರಾರಂಭಿಸಿದ ಆ ದಿನಗಳಲ್ಲಿ ತನ್ನ ಹೆಗಲ ಮೇಲೆ ಹೊತ್ತು ಅಂಬಾರಿಯ ಹಾಗೆ ಮೆರೆಸಿ ಜಗತ್ತನ್ನೇ ಪರಿಚಯಿಸಿದ ಏಕೈಕ ವ್ಯಕ್ತಿಯೆಂದರೆ ಅಪ್ಪಾ. ತನ್ನ ಹೆಗಲ ಮೇಲೆ ಮಕ್ಕಳನ್ನು ಹೊತ್ತುಕೊಂಡು ಹೋಗುವ ಸಂದರ್ಭದಲ್ಲಿ ತಂದೆಯ ಮನದಲ್ಲಿರುವ ಭಾವನೆ ಏನೆಂದರೆ ತನ್ನ ಮಕ್ಕಳು ತನಗಿಂತ ಎತ್ತರ ಬೆಳೆಯಬೇಕು ಸಾಧನೆ ಮಾಡಬೇಕು ಎಂಬ ಯೋಚನೆ ಅವರಿಗಿರುತ್ತದೆ. ಮಕ್ಕಳಿಗೆ ಮೊದಲ ಅಂಬಾರಿ ಎಂದರೆ ತನ್ನ ತಂದೆಯ ಹೆಗಲೆ. ತನ್ನ ಮಕ್ಕಳಿಗೆ ಮೊದಲು ರಕ್ಷಣೆ ನೀಡುವ ಯೋಧನೆಂದು ಅದು ತಂದೆ.
ದೀಪ್ತಿ ಅಡ್ಡಂತ್ತಡ್ಕ
Published On - 10:42 am, Mon, 20 June 22