ಸ್ನೇಹಿತರೆಂದರೆ ಎರಡು ದೇಹ ಒಂದು ಜೀವ ಇದ್ದಂತೆ, ಈ ಮಾತು ಅಕ್ಷರಶಃ ಸತ್ಯ. ಅದೇ ರೀತಿ ಸ್ನೇಹಿತರೆಂಬ ಪದವನ್ನು ಒಂದು ವಾಕ್ಯದಲ್ಲಿ ವರ್ಣನೆ ಮಾಡುವುದು ಅಸಾದ್ಯ. ಕಷ್ಟ ಬಂದಾಗ ಸಹಾಯ ಕೇಳುವ ಮುನ್ನವೇ ಸ್ಪಂದಿಸುವ ಸ್ನೇಹಿಜೀವಿಗಳು. ಜೀವನ ಎಂಬ ದಾರಿಯಲ್ಲಿ ಸಾಕಷ್ಟು ಸ್ನೇಹಿತರು ಸಿಗುತ್ತಾರೆ. ಜಾಲಿ ಡೇಸ್ ಸಿನಿಮಾದ ಹಾಡಿನಲ್ಲಿ ಇರುವಂತೆ ಭೇಟಿಯಾದ ಹೊಸದರಲ್ಲಿ ನೀವು ಎಂದು ಶುರುವಾಗುವ ಮಾತು ಹಂತಹಂತವಾಗಿ ಬೆಳೆಯುತ್ತಾ ಲೋ ಲೋ ಎನ್ನುವಷ್ಟಮಟ್ಟಿಗೆ ಬೆಳೆದು ಸ್ನೇಹದ ಮರವನ್ನು ಹೆಮ್ಮರವನ್ನಾಗಿಸುತ್ತದೆ. ಇಂತಹ ಸ್ನೇಹ ಬಳಗದಲ್ಲಿರುವ ಎಲ್ಲಾ ಸ್ನೇಹಿತರಿಗೂ ಸ್ನೇಹಿತರ ದಿನದ ಶುಭಾಶಯಗಳು.
ಕಾಲೇಜು ಆರಂಭವಾದ ಸಮಯದಲ್ಲಿ ಮಾತೇ ಆಡದ ವ್ಯಕ್ತಿಗಳು ದಿನಗಳು ಉರುಳುತ್ತಿದ್ದಂತೆ ಪರಪಸ್ಪರ ಮಾತುಕತೆ ಬೆಳೆದು ಅರಿವೇ ಇಲ್ಲದಂತೆ ಸ್ನೇಹದ ನಂಟು ಬೆಸೆದುಕೊಳ್ಳುತ್ತದೆ. ಸ್ನೇಹಿತರ ಮಾತು ಎಂದರೆ ಅದು ನಾನ್ಸ್ಟಾಪ್, ಗುಂಪಿನಲ್ಲಿ ಒಮ್ಮೆ ಮಾತು ಆರಂಭಿಸದರೆ ಸಾಕು ಅದಕ್ಕೆ ಕೊನೆ ಎಂಬುದು ಇಲ್ಲವೇ ಇಲ್ಲ. ಸ್ವಲ್ಪ ತಮಾಷೆ, ತರಲೆ, ಯಾವುದೋ ಒಂದು ಸಣ್ಣ ವಿಷಯ ಮುಂದಿಟ್ಟುಕೊಂಡು ಸಹಸ್ನೇಹಿತರನ್ನು ಪೀಡಿಸುವುದು, ಕಾಡಿಸುವುದು ಇತ್ಯಾದಿಗಳು ಇಲ್ಲದಿದ್ದರೆ ಸ್ನೇಹ ಬಳಗಕ್ಕೆ ಕಳೆಯೇ ಇರುವುದಿಲ್ಲ.
ಸ್ನೇಹಿತರ ಮೊಬೈಲ್, ಪುಸ್ತಕ ಇತ್ಯಾದಿ ವಸ್ತುಗಳನ್ನು ಬಚ್ಚಿಟ್ಟು ಏನೂ ಮಾಡದಂತೆ ಸುಮ್ಮನೆ ಕುಳಿತುಕೊಂಡು ಅವರು ಹುಡುಕಾಡುವ ಪರಿಯನ್ನು ನೋಡುವ ಮಜಾನೇ ಬಾರೆ. ಇನ್ನು ಪರೀಕ್ಷೆ ಹತ್ತಿರ ಬಂದರೆ ಹೇಳುವುದು ಬೇಡ, ಗುಂಪಿನಲ್ಲಿ ಯಾರಾದರೊಬ್ಬರು ತಮಗಿಂತ ಚೆನ್ನಾಗಿ ಓದುತ್ತಾರೆ, ಅಂಕ ಗಳಿಸುತ್ತಾರೆ ಎಂದರೆ ಸಾಕು ಅವರೇ ಪರೀಕ್ಷಾ ಸಮಯದ ಮೊದಲ ಟಾರ್ಗೆಟ್. ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಲೇ ಲೋ ಹೇಳುತ್ತಾ ಇಂಪಾರ್ಟೆಂಟ್ ಪ್ರಶ್ನೆಗಳು ಹೇಳು ಅಂತ ಸಾಲುಸಾಲು ಮೆಜೆಸ್ಗಳು. ಏಕೆಂದರೆ ಸ್ನೇಹಿತ ಹೇಳಿದ್ದು ಬಿಟ್ಟು ಬೇರೆ ಬರುವುದಿಲ್ಲ ಎಂಬ ನಂಬಿಕೆ ಒಂದೆಡೆಯಾದರೆ, ನಮಗೂ ಒಂದೇ ರೀತಿಯ ಅಂಕಗಳು ಸಿಗಲಿ ಎಂಬ ಮತ್ತೊಂದು ಉದ್ದೇಶ.
ಒಂದೊಮ್ಮೆ ಶಿಕ್ಷಕರು ಉತ್ತರ ಪತ್ರಿಕೆಯನ್ನು ಕೊಟ್ಟಾಗ ಸ್ನೇಹ ಬಳಗದಲ್ಲಿ ಒಬ್ಬರಿಗೆ ಕಡಿಮೆ, ಮತ್ತೊಬ್ಬರಿಗೆ ಹೆಚ್ಚು ಅಂಕ ಬಂದರೆ ಕಡಿಮೆ ಅಂಕ ಬಂದವನಿಗೆ ಉರಿಯೋ ಉರಿ. ಓದಿದ್ದು ಒಂದೇ ರೀತಿ, ಅದನ್ನೇ ಪರೀಕ್ಷೆಯಲ್ಲಿ ಬರೆದಿದ್ದು, ಆದರೆ ಅವನಿಗೆ ಅಥವಾ ಅವಳಿಗೆ ಹೇಗೆ ಹೆಚ್ಚು ಅಂಕ ಬಂತು ಎಂದು ಪ್ರಶ್ನಾರ್ಥಕ ಹುಳಗಳು ತಲೆಯಲ್ಲಿ ಓಡಾಡಲು ಪ್ರಾರಂಭವಾಗುತ್ತವೆ.
ಸ್ನೇಹದ ಗ್ಯಾಂಗ್ ಹೇಗಿರಬೇಕು ಅಂದರೆ ಒಬ್ಬ ಗೆಳೆಯ ತರಗತಿಗೆ ಬರದಿದ್ದರೆ ಯಾಕೆ ಬಂದಿಲ್ಲ? ಆರೋಗ್ಯ ಸರಿ ಇಲ್ವಾ ಎಂದು ಕೇಳುವವರು ಇರಬೇಕು. ಇನ್ನೂ ಕೆಲವು ಸ್ನೇಹ ಬಳಗ ಹೇಗೆ ಇರುತ್ತದೆ ಎಂದರೆ, ಸ್ನೇಹಿತನೊಬ್ಬ ತರಗತಿಗೆ ಬಂಕ್ ಮಾಡುತ್ತಾನೆ ಎಂದು ಗೊತ್ತಾದರೆ ಸಾಕು ಉಳಿದವರು ಕೂಡ ಅಂದು ಕಾಲೇಜಿಗೆ ರಜೆ. ಮರುದಿನ ಶಿಕ್ಷಕರು ಕೇಳಿದಾಗ ಮತ್ತದೇ ಬಾಲ್ಯದಲ್ಲಿ ಹೇಳುತ್ತಿದ್ದ ಹೊಟ್ಟೆ ನೋವು, ಕಾಲು ನೋವು, ತಲೆ ನೋವು, ಮೈಕೈನೋವು, ಜ್ವರ ಇತ್ಯಾದಿ ಕಾರಣಗಳನ್ನು ಮುಂದಿಡುತ್ತಾರೆ.
ಜೀವನದಲ್ಲಿ ಮರೆಯಲಾಗದಂತಹ ಇಂತಹ ಅನೇಕ ನೆನಪುಗಳು ಮನಸಿನಲ್ಲಿ ಆಳವಾಗಿ ಬೇರೂರಿಬಿಡುತ್ತವೆ. ಸ್ನೇಹಿತರ ಗುಂಪು ಸಣ್ಣದಿರಲಿ, ದೊಡ್ಡದಿರಲಿ ನಾವೆಲ್ಲರು ಒಂದೇ ಎಂಬ ಮನೋಭಾವ ಸ್ನೇಹಿತರದ್ದು. ಎಲ್ಲಿಂದಲೋ ಬಂದು ಪರಿಚಯಸ್ಥರಾಗಿ ಸ್ನೇಹಿತರು ಎಂಬ ನಾಲ್ಕಕ್ಷರದ ನಂಟಿನಲ್ಲಿ ಸಿಲುಕಿ ಕೊನೆಗೆ ಕುಟುಂಬ ಎಂಬ ಮೂರಕ್ಷರದಲ್ಲಿ ಬಿಗಿಯಾಗುವ ಸಂಬಂಧವೇ ಸ್ನೇಹ.
ಲೇಖನ: ಪ್ರತೀಕ್ಷಾ ಪೈ, ಆಳ್ವಾಸ್ ಕಾಲೇಜು