ಜೀವನದಲ್ಲಿ ಒಂದು ಗುರಿ ಇರಬೇಕು, ಆ ಗುರಿಯ ಕಡೆ ನಮ್ಮ ಲಕ್ಷ್ಯ ಇರಬೇಕು ಎಂದು ಹಿರಿಯರು ಹೇಳಿರುವುದನ್ನು ನಾವು ನೀವು ಬಾಲ್ಯದದಿಂದ ಕೇಳಿರುತ್ತೇವೆ. ಹೀಗೆ ಇಂತಹ ಮಾತುಗಳಿಂದ ಪ್ರೇರಿಪಿತರಾಗಿ ಏನಾದರು ಸಾಧನೆ ಮಾಡಬೇಕು ಎಂದು ಹೊರಟ ನಮ್ಮ ಬದುಕು ಹಲವು ಕೆಲವೊಂದು ಬಾರಿ ಗೆಲುವಿನ ಕಡೆಗೆ ಹೋದರೆ, ಕೆಲವೊಂದು ಬಾರಿ ಸೋಲಿನ ಕಡೆಗೆ ಹೋಗುತ್ತದೆ. ಹೀಗೆ ಒಂದು ಗುರಿಯ ಬೆನ್ನತ್ತಿ ಹೊರಟ ನನ್ನ ಬದುಕು ಕೂಡ ಹಾಯಿ ಇಲ್ಲದ ದೋಣಿ ರೀತಿಯಲ್ಲಿ ಸಾಗುತಿತ್ತು. ಇಂತಹ ಸಂದರ್ಭದಲ್ಲಿ ನನ್ನ ಜೀವನವನ್ನು ಬದಲಿಸಿದ್ದು ಒಬ್ಬ ಗುರುಗಳು.
ಹೌದು ನಾನು ಸೆಕೆಂಡ್ ಪಿಯುಸಿ ಮುಗಿಸಿ ಇನ್ನು ಡಿಗ್ರಿ ಹಂತದ ಶಿಕ್ಷಣ ಪಡೆಯಬೇಕು ಎಂದು ಹೊರಟಿದ್ದೆ. ಆ ಸಂದರ್ಭದಲ್ಲಿ ನಾನು ನನ್ನ ಜೀವನದಲ್ಲಿ ಬೇಗ ನೆಲೆಕಂಡು ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಗುರಿಯನ್ನು ಕೂಡ ಹೊಂದಿದ್ದೆ. ಹೀಗೆ ಶಿಕ್ಷಣ ಪಡೆಯಲು ಮತ್ತು ಜೀವನದ ಹೊಂಗನಸುಗಳನ್ನು ಹೊತ್ತು ಊರು ತೊರೆದು, ಜಿಲ್ಲೆ ಬಿಟ್ಟು ಪರ ಜಿಲ್ಲೆಯ ಕಡೆ ಪಯಣ ಬೆಳೆಸಿದ್ದೆ. ಆದರೆ ನಾನು ಮನೆ ಬಿಟ್ಟು ಯಾವ ಕನಸುಗಳನ್ನು ಕಂಡು, ಮನೆ ಬಿಟ್ಟು ಹೊರ ನಡೆದಿದ್ದೆನೋ ಆ ಕನಸುಗಳು ಮಾತ್ರ ನನಸಾಗಲಿಲ್ಲ. ಅತ್ತ ಕಡೆ ನನ್ನ ಕಾಲೇಜು ಜೀವನವು ಕೂಡ ಪೂರ್ತಿಯಾಗದೆ, ಇತ್ತ ಕಡೆ ನನ್ನ ಗುರಿಯು ಕೂಡ ನೆರವೇರದೆ ಜೀವನದಲ್ಲಿ ಸೋತು ಹತಾಶನಾಗಿದ್ದೆ. ಒಟ್ಟಿನಲ್ಲಿ ನನ್ನ ಜೀವನ ಹಾಯಿ ಇಲ್ಲದ ದೋಣಿಯಂತೆ ಸಾಗುತ್ತಾ, ನಾನು ಕಂಡ ಕನಸುಗಳನ್ನು ನನಸು ಮಾಡುವಲ್ಲಿ ಸೋತೆ, ನನ್ನ ಸ್ವಂತ ಬದುಕು ಕಟ್ಟಿಕೊಳ್ಳುವಲ್ಲಿ ವಿಫಲನಾದೆ ಎಂಬ ಹತಾಶೆಯಲ್ಲಿ ಜೀವನ ಸಾಗಿಸುತಿದ್ದೆ.
ಹೀಗೆ ಸಮಯ ಸಾಗುತಿತ್ತು, ಕಾಲ ಚಕ್ರ ಉರುಳುತಿತ್ತು. ಹೀಗೆ ಬದುಕಿನಲ್ಲಿ ಹಲವಾರು ಕನಸುಗಳನ್ನು ಕಂಡು, ಅದನ್ನು ಪೂರ್ತಿಗೊಳಿಸಲಾಗದೆ ನಿರಾಸೆಯಲ್ಲಿದ್ದ ನಾನು ಏನೇ ಆಗಲಿ ಮತ್ತೆ ನನ್ನ ಬದುಕನ್ನು ಮತ್ತೆ ಕಟ್ಟಿಕೊಳ್ಳಬೇಕು ಎಂದು ಧೃಢ ನಿರ್ಧಾರ ಮಾಡಿದ್ದೆ. ಈ ಬಳಿಕ ನಾನು ಎದುರಿಸಿದ್ದ ಎಲ್ಲಾ ಸಮಸ್ಯೆಗಳನ್ನು, ಕಷ್ಟ-ನಷ್ಟಗಳನ್ನು ನನ್ನ ಒಬ್ಬ ಆತ್ಮೀಯ ಗುರುಗಳಲ್ಲಿ ಹಂಚಿಕೊಂಡಿದ್ದೆ. ಅವರು ನನ್ನ ಎಲ್ಲಾ ಸಮಸ್ಯೆಗಳನ್ನು ಬಹಳ ತಾಳ್ಮೆಯಿಂದ ಆಲಿಸಿ, ಒಬ್ಬ ತಂದೆಯ ಸ್ಥಾನದಲ್ಲಿ ನಿಂತು ನನಗೆ ಅತ್ಯಮೂಲ್ಯವಾದ ಸಲಹೆಗಳನ್ನು ನೀಡಿ ಹತಾಶೆಯಿಂದ ಕೂಡಿದ್ದ ನನ್ನ ಜೀವನಕ್ಕೆ ಹೊಸ ಚೈತನ್ಯ ನೀಡಿದ್ದರು. ಆ ಬಳಿಕ ನಾನು ಅವರ ಸಲಹೆಯಂತೆ ನನ್ನದೆ ಊರಿನ ಕಾಲೇಜಿನಲ್ಲಿ ಕಲಾವಿಭಾಗಕ್ಕೆ ಪ್ರವೇಶಾತಿ ಪಡೆದು ನಾಲ್ಕು ವರುಷಗಳ ಬಳಿಕ ಮತ್ತೆ ಕಾಲೇಜು ಮೆಟ್ಟಿಲು ಹತ್ತಿದೆನು. ಆ ಸಂದರ್ಭದಲ್ಲಿ ನಾನು ನನ್ನ ಜೀವನವನ್ನು ಮತ್ತೆ ರೂಪಿಸಿದೆ ಎಂಬ ಸಂತೋಷದಲ್ಲಿ ಮನಸಾರೆ ಖುಷಿ ಪಟ್ಟಿದ್ದೆ. ಈಗ ನಾನು ಪ್ರಥಮ ಶ್ರೇಣಿಯಲ್ಲಿ ಪದವಿಯನ್ನು ಪೂರೈಸಿ ಒಂದು ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಓದುತಿದ್ದೇನೆ.
ಹೀಗೆ ಹಗ್ಗ ಕಡಿದ ಗಾಳಿಪಟ ಹಾರಾಡುವಂತೆ ನನ್ನ ಬದುಕಿನ ದಿಕ್ಕನ್ನು ಬದಲಾಯಿಸಿದ ನನ್ನ ಪ್ರೀತಿಯ ಗುರುಗಳು ರಾಕೇಶ್ ಕುಮಾರ್ ಕಮ್ಮಾಜೆ. ಅತೀ ದೊಡ್ಡ ವಿದ್ಯಾರ್ಥಿಗಳ ಪ್ರೀತಿಯ ಸಮೂಹವನ್ನು ಹೊಂದಿರುವ ಅವರನ್ನು ಎಲ್ಲರೂ ಕೂಡ ಬಹಳ ಆತ್ಮೀಯತೆಯಿಂದ ಕಮ್ಮಾಜೆ ಸರ್ ಎಂದು ಕರೆಯುವುದಿದೆ. ನನ್ನ ಜೀವನದಲ್ಲಿ ಏನೇ ಸಮಸ್ಯೆ ಉಂಟಾದರು ಮೊದಲು ನಾನು ಮೊದಲ ಸಲಹೆ ಪಡೆಯುವುದು ನನ್ನ ಪ್ರೀತಿಯ ಗುರುಗಳಾದ ಕಮ್ಮಾಜೆ ಸರ್ ಅವರ ಬಳಿಯೇ. ಅವರ ಬಳಿ ಏನೇ ಸಮಸ್ಯೆಯನ್ನು ಹೇಳಿಕೊಳ್ಳಲು ಒಂದು ಕರೆ ಮಾಡಿದರೆ ಸಾಕು ಅತ್ಯಂತ ಪ್ರೀತಿಯಿಂದ ಕರೆ ಸ್ವೀಕರಿಸಿ ಅತ್ಯಂತ ತಾಳ್ಮೆಯಿಂದ ಎಲ್ಲಾ ಮಾತುಗಳನ್ನು ಆಲಿಸಿ, ಸಮಸ್ಯೆಗೆ ತಕ್ಕುದಾದ ಪರಿಹಾರವನ್ನು ಹೇಳುವ ಅವರ ಸೌಜನ್ಯಯುತವಾದ ಮಾತುಗಳು ನನಗೆ ಬಹಳ ಇಷ್ಟ. ಹೀಗೆ ಕಮ್ಮಾಜೆ ಸರ್ ನನಗೆ ನೀಡಿದ ಹಲವಾರು ಸಲಹೆಗಳು ನನ್ನ ಬದುಕಿಗೆ ಪೂರಕವಾಗಿವೆ. ಹೀಗೆ ಹರಿದು ಹಂಚಿ ಹೋಗಿದ ನನ್ನ ಬದುಕನ್ನು ಮತ್ತೆ ಕಟ್ಟಲು ನೆರವಾದ ನನ್ನ ಪ್ರೀತಿಯ ಗುರುಗಳಿಗೆ ಎಷ್ಟೇ ಧನ್ಯವಾದ ಹೇಳಿದರೂ ಸಾಕಾಗದು. ಶಿಕ್ಷಕರ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ನನ್ನ ಎಲ್ಲಾ ಆತ್ಮೀಯ ಗುರುಗಳಿಗೆ ಪ್ರೀತಿಯ ಶುಭಾಶಯಗಳು ಮತ್ತು ವಂದನೆಗಳು.
ಶಶಿಧರ ನಾಯ್ಕ ಎ
ಪ್ರಥಮ ಎಂ.ಸಿ.ಜೆ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ
Published On - 12:07 pm, Mon, 5 September 22