ಕೆಲವೊಮ್ಮೆ ನಮಗೆ ಇಷ್ಟವಿಲ್ಲದಿದ್ದರೂ ನಮ್ಮ ಇಷ್ಟಕ್ಕೂ ಮೀರಿ ಕೆಲವೊಂದು ಕೆಲಸವನ್ನು ಮಾಡುವಂತಹ ಪರಿಸ್ಥಿತಿ ಎದುರಾಗತ್ತೆ. ನನ್ನ ಜೀವನದಲ್ಲಿಯೂ ಆಗಿದ್ದು ಅದೇ. ತಂದೆ ಇಲ್ಲದ ನನಗೆ ತಾಯಿಯೇ ಎಲ್ಲಾ. ನಾವು ಮೂವರೂ ಹೆಣ್ಣು ಮಕ್ಕಳು. ನಮ್ಮನ್ನು ಸಾಕುವ ಹೊಣೆ ಹೊತ್ತ ನನ್ನ ತಾಯಿಯ ಇಷ್ಟದ ಮೇರೆಗೆ ನಾನು ಮನಸ್ವಿನಿ ಹಾಸ್ಪಿಟಲ್‌ನಲ್ಲಿ ನರ್ಸ್ ಆಗಿ ಸೇರಿಕೊಂಡಿದ್ದೆ. ಫ್ಯಾಶನ್ ಡಿಸೈನಿಂಗ್‌ನಲ್ಲಿ ಏನಾದರು ಮಾಡಬೇಕು ಎಂದಿಕೊಂಡಿದ್ದ ನನಗೆ ಆಸ್ಪತ್ರೆಯ ಸೂಜಿಯೊಂದಿಗೆ ಕೆಲಸ ಮಾಡುವುದು ನಿಶ್ಚಯವಾಗಿತ್ತು. ಅವತ್ತು ಎಂದಿನಂತೆ ಆಸ್ಪತ್ರೆಗೆ ಹೊರಡಲು ಸಿದ್ಧವಾಗ್ತಿದ್ದೆ. ಮನೆಯಿಂದ ಹೊರಟು 19C ಬಸ್ಸಿನ ಕಿಟಕಿಯ ಪಕ್ಕದಲ್ಲಿ ಕುಳಿತು ಸುತ್ತಲೂ ಇರುವ ಜಗತ್ತು ಎಷ್ಟು ಸುಂದರ ಎಂದುಕೊಳ್ಳುತ್ತಿದ್ದೆ. ಕಿಟಕಿಯ ಹೊರಗಿನಿಂದ ಬರುವ ಗಾಳಿಯಲ್ಲಿ ದಿನವೂ ನಾನು ಕಾಣುವ ಕನಸು, ಕಂಡಕ್ಟರ್‌ನ ಸೀಟಿಯ ಸದ್ದಿನಿಂದ ಅದೇ ಗಾಳಿಯಲ್ಲಿ ತೇಲಿ ಹೋಗುತ್ತಿತ್ತು.
ಹೀಗೆ ಜೀವನ ಸದ್ದಿಲ್ಲದೇ ಸಾಗುತ್ತಿರುವಾಗಲೇ ಒಂದು ಘಟನೆ ನಡೆದಿದ್ದು. ಅವತ್ತು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಗೇಟಿನಲ್ಲಿ, ಆಗತಾನೇ ಆಕ್ಸಿಡೆಂಟ್‌ನಿಂದಾಗಿ ಕಾಲಿನ ಸ್ವಾಧೀನ ಕಳೆದುಕೊಂಡಿದ್ದ ಯಾರೋ ವ್ಯಕ್ತಿಯನ್ನು ವೀಲ್‌ಚೇರ್‌ನಲ್ಲಿ ಕೂರಿಸಿ ಎಮರ್ಜೆನ್ಸಿ ವಾರ್ಡ್ಗೆ ಕರೆದುಕೊಂಡು ಹೋಗುತ್ತಿದ್ದರು. ನಾನು ಗಡಿಬಿಡಿಯಿಂದ ಆಸ್ಪತ್ರೆಯ ಒಳಗೆ ಹೊಗಿ ನನ್ನ ಬಿಳಿ ಕೋಟ್ ಧರಿಸಿ ಮುಂದಿನ ಕಾರ್ಯಕ್ಕೆ ಸಿದ್ಧಳಾಗುತ್ತಿದ್ದೆ. ‘ಕೇಸು ಕ್ರಿಟಿಕಲ್ ಅಂತೆ, ಕಾಲು ಕಳೆದುಕೊಳ್ಳುವ ಸಾಧ್ಯತೆ ಇದೆಯಂತೆ’ ಎಂದು ನನ್ನ ಸಹೋದ್ಯೋಗಿ ಸುಮಾ ಮಾತನಾಡುವುದನ್ನು ಕೇಳಿದೆ. ಚಿಕಿತ್ಸೆಯಾಗುವ ಮೊದಲೇ ತೀರ್ಪು ಹೇಳುವುದು ಸುಮಾಳ ಗುಣ ಎಂದು ಅವಳನ್ನೊಮ್ಮೆ ಓರೆಗಣ್ಣಿನಿಂದ ನೋಡಿ ಹೊರಟು ಹೋದೆ. ಮತ್ತದೇ ಎಂದಿನ ದಿನಚರಿಯನ್ನು ಮುಗಿಸಿ ಮನೆಗೆ ತೆರಳಿದೆ. ಆ ದಿನ ರಾತ್ರಿಯವರೆಗೂ ನನ್ನ ಮನಸ್ಸಿಗೂ ಹುಚ್ಚು ಪ್ರೀತಿಯ ಅನುಭವವಾಗುವುದೆಂದು ನಾನು ಊಹಿಸಿರಲಿಲ್ಲ.
ಮಾರನೇದಿನ ಬೆಳಗಿನ ಶಿಫ್ಟ್ ನನ್ನದಾದ್ದರಿಂದ ಮನೆಯಿಂದ ಬೇಗ ಹೊರಟು ಮನಸ್ವಿನಿ ಆಸ್ಪತ್ರೆಯ ಆವರಣ ತಲುಪುವಷ್ಟರಲ್ಲಿ ಗಂಟೆ ಎಂಟಾಗಿತ್ತು. ವಾರ್ಡ್ ನಂಬರ್ 18 ನಲ್ಲಿ ನನ್ನ ಕೆಲಸವಿದ್ದ ಕಾರಣ ನೇರವಾಗಿ ಅಲ್ಲಿಗೇ ಹೋದೆ. ಬಿಳಿಯ ಓವರ್‌ಕೋಟ್, ಎರಡೂ ಕೈಗಳಿಗೆ ಹ್ಯಾಂಡ್‌ಗ್ಲೌಸ್ ಹಾಕಿ ಡ್ರೆಸ್ಸಿಂಗ್ ಆಗಬೇಕಾಗಿರುವ ರೋಗಿಗಳತ್ತ ಕಣ್ಣಾಡಿಸಿದೆ. ಬಲಿಷ್ಠವಾದ ಮೈಕಟ್ಟು, ಹಾಲಿನಂತ ಶುಭ್ರವಾದ ಮೈ ಬಣ್ಣ, ಗುಂಗುರು ಕೂದಲು, ಒಂದೇ ನೋಟದಲ್ಲಿಯೇ ಯಾರನ್ನು ಬೇಕಾದರೂ ಗೆಲ್ಲುವ ಕಣ್ಣುಗಳು, ಅಂತಹ ನೋವಿನಲ್ಲಿಯೂ ತನ್ನ ತಾಯಿಯ ಕೈ ಹಿಡಿದು ಮುಗಳುನಗೆ ಬೀರುತ್ತಾ ಆತ್ಮವಿಶ್ವಾಸದಿಂದ ಧೈರ್ಯ ಹೇಳುವ ಆ ವ್ಯಕ್ತಿ ನನ್ನ ಜೀವನದಲ್ಲಿ ಹುರುಪು ತರಬಹುದು ಎನ್ನುವ ಆಲೋಚನೆಗಳೇ ಇರಲಿಲ್ಲ ನನಗೆ.
ಇದನ್ನೂ ಓದಿ: Love Story: ಪ್ರೀತಿಗೆ ಕಣ್ಣಿಲ್ಲ; 70 ವರ್ಷದ ವೃದ್ಧನನ್ನು ಮದುವೆಯಾದ 19ರ ಹರೆಯದ ಪಾಕ್ ಯುವತಿ
ಆತನನ್ನೇ ನೋಡುತ್ತಾ, ಕೆಲಸವನ್ನೇ ಮರೆತಹೋದ ನನ್ನನ್ನು ತನ್ನ ಮೃದುವಾದ ಧ್ವನಿಯಿಂದ ‘ ನೀವು ಡ್ರೆಸ್ಸಿಂಗ್‌ಗೆ ಬಂದ್ರಾ.? ಬನ್ನಿ ಬನ್ನಿ’ ಎಂದ. ನಾನು ಹತ್ತಿರ ಹೋಗುತ್ತಿದ್ದಂತೆ ಏನೋ ಮನಸಿನಾಳದಲ್ಲಿ ಒಂದು ರೀತಿಯ ತಳಮಳ. ತನ್ನ ಮಾತಿನಿಂದ ಯಾರನ್ನಾದರೂ ಮೋಡಿ ಮಾಡುವ ಚಾಕಚಕ್ಯತೆ ಅವನಿಗೆ ಕರಗತವಾಗಿತ್ತೋ ಏನೋ ಆ ಒಂದೇ ನೋಟದಲ್ಲಿ ಆತ ನನ್ನನ್ನು ಸೋಲಿಸಿದ್ದ. ನನ್ನ ‘ಮಿಸ್ ಕವಿತಾ, ನಾನಿನ್ನೆಷ್ಟು ದಿನಕ್ಕೆ ಡಿಸ್ಚಾರ್ಜ್ ಆಗ್ತೇನೆ?, ನನಗೆ ಮತ್ತೆ ಮೊದಲಿನ ತರ ಬೇಗ ಓಡಾಡುವಂತೆ ಆಗಬೇಕು, ಹೇಳಿ ಯಾವಾಗ ಸರಿ ಹೋಗ್ತೇನೆ’ ಎಂದು ಒಂದೇ ಉಸಿರಿನಲ್ಲಿ ಹತ್ತಾರು ಪ್ರಶ್ನೆ ಕೇಳಿದ. ಬೇಗ ಗುಣವಾಗುತ್ತೆ. ಡೊಂಟ್‌ವರಿ ಎಂದು ಸಹಜವಾದ ಮಂದಹಾಸದಿಂದ ಉತ್ತರಿಸಿದೆ. ಹೀಗೆ ಅವನ ನೋಟ, ಅವನ ಮಾತುಗಾರಿಗೆ, ಅವನ ಸಲುಗೆ ನನ್ನನ್ನ ದಿನೇ ದಿನೇ ಅವನಿಗೆ ಇನ್ನಷ್ಟು ಹತ್ತಿರವಾಗುವಂತೆ ಮಾಡಿತ್ತು. ‘ನೀವು ತುಂಬಾ ಸೈಲೆಂಟ್, ಆದ್ರೂ ನನ್ನ ತಲೆಹರಟೆ ಎಲ್ಲವನ್ನೂ ಸಹಿಸಿಕೊಳ್ಳುತ್ತೀರಿ, ನಿಜವಾಗಿ ಈ ಆಸ್ಪತ್ರೆ ಸೆರೆವಾಸದಲ್ಲಿ ನೀವು ನನಗೆ ಸಿಕ್ಕಂತಹ ಬೆಸ್ಟ್ಫ್ರೆಂಡ್’ ಎಂದು ಅವನು ಹೇಳಿದ ಆ ದಿನವಂತೂ ನನ್ನ ಪಾಲಿನ ಅತ್ಯಂತ ಸಾರ್ಥಕದ ದಿನ ಎಂದರೆ ಅತಿಶಯೋಕ್ತಿಯಿಲ್ಲ.
ಯಾಕಾದರೂ ಈ ಕೆಲಸಕ್ಕೆ ಹೋಗಬೇಕೋ ಎನ್ನುವ ನನಗೆ ಬೆಳಗಾದರೆ ಸಾಕೆನ್ನುವಷ್ಟು ಹುಚ್ಚು ಆತ ಹಿಡಿಸಿದ್ದ. ಅವನಿಗಾಗಿ ಮನೆಯಿಂದ ಊಟ ತೆಗೆದುಕೊಂಡು ಹೋಗುವುದು, ನನ್ನ ಡ್ಯೂಟಿ ಇಲ್ಲದಿದ್ದರೂ ಅವನಿಗೆ ನಾನೇ ಡ್ರೆಸ್ಸಿಂಗ್‌ಗೆ ಹೋಗುವುದು, ಸಂಜೆಯಾದರೆ ಸಾಕು ವೀಲ್‌ಚೇರ್ ಬಿಡಿಸಿ ವಾಕಿಂಗ್‌ಗೆ ಕರೆದೊಯ್ಯುವುದು ನನ್ನ ದಿನಚರಿಯಾಗಿಹೋಯ್ತು. ನನಗೆ ಗೊತ್ತೇ ಆಗದ ಹಾಗೆ ಅಮಿತ್ ನನ್ನ ಹೃದಯವನ್ನು ಆವರಿಸಿಯಾಗಿತ್ತು. ಸುಮಾರು ಒಂದು ತಿಂಗಳಿಂದ ವಾರ್ಡ ನಂಬರ್ 13ರ ಮೂರನೇ ಬೆಡ್ ನನ್ನ ಪ್ರಿಯವಾದ ಜಾಗವಾಗಿತ್ತು. ಎಲ್ಲ ಆರಂಭಕ್ಕೂ ಒಂದು ಅಂತ್ಯವಿರುತ್ತದೆ ಹಾಗೆಯೇ ಅವತ್ತು ಅಮಿತ್ ಡಿಸ್ಚಾರ್ಜ ಆಗುವ ದಿನ.
ಬೆಳಗಿನಿಂದಲೇ ಏನೋ ಒಂದು ರೀತಿಯ ಮೌನ. ಒಳ ಮನಸ್ಸು ಬಹಳ ಸಂಕಟಕ್ಕೆ ಸಿಲುಕಿತ್ತು. ನನ್ನ ಪ್ರೀತಿಯನ್ನು ಆತನಿಗೆ ಹೇಳಬೇಕು ಎಂದು ಒಮ್ಮೆ ಯೋಚಿಸಿದರೆ, ಆತನಿಗೆ ಇದ್ಯಾವುದೂ ಭಾವನೆಗಳೇ ಇಲ್ಲದಿದ್ದರೆ ಉತ್ತಮವಾದ ಗೆಳೆತನ ಹಾಳಾಗುತ್ತದೆಯಲ್ಲಾ ಎನ್ನುವ ಯೋಚನೆ ಇನ್ನೋಂದೆಡೆ. ಆಗಿದ್ದಾಗಲಿ ನನ್ನ ಮನಸ್ಸಿನ ಮಾತನ್ನೆಲ್ಲವನ್ನೂ ಹೇಳಿಬಿಡಬೇಕು ಎಂದು ದೃಢ ಮನಸ್ಸು ಮಾಡಿ ಹೊರಟು ನಿಂತೆ. ಆತನ ಆತ್ವವಿಶ್ವಾಸ ಮತ್ತು ನನ್ನ ಸಹಾಯದ ಫಲವಾಗಿ ಅಮಿತ್ ಈಗ ವಾಕರ ಸಹಾಯದಿಂದ ಓಡಾಡುವಷ್ಟು ಗುಣವಾಗಿದ್ದ. ಅವತ್ತಿನ ತನಕ ಕೇವಲ ಒಬ್ಬ ಸಾಮಾನ್ಯ ವ್ಯಕ್ತಿ ಎಂದಿಕೊಂಡಿದ್ದ ಅಮಿತ್, ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಶಾರದಾ ಜ್ಯುವೆಲರ್ಸ್ ಅಧಿಪತಿ ಎನ್ನುವ ಸತ್ಯ ತಿಳಿದದ್ದು ಅಂದು ನಮ್ಮ ಡಾಕ್ಟರ್ ರಮೇಶ್ ಮಾತನಾಡಿಸುತ್ತಿದ್ದಾಗ. ಆ ಕ್ಷಣವೇ ನನ್ನ ಮನಸ್ಸು ಒಡೆದ ಕನ್ನಡಿಯಂತೇ ಹತ್ತು ಚೂರಾಯಿತು. ನನ್ನ ಪ್ರೇಮನಿವೇದನೆ ಮಾಡಿದರೆ ಎಲ್ಲಿ ಆತ ತನ್ನ ಶ್ರೀಮಂತಿಕೆ ನೋಡಿಯೇ ಬಂದಿದ್ದಾಳೆ ಎಂದುಕೊಳ್ಳುತ್ತಾನೊ ಎಂಬ ಭಯ ನನ್ನಲ್ಲಿ ಹುಟ್ಟಿಕೊಂಡಿತು.
ಆತನ ಎದುರು ಹೋಗಿ ನಿಂತು, ಜಾಗೃತೆ ಎಂದು ಒಂದು ಶಬ್ಧ ಹೇಳುವುದರೊಳಗಾಗಿ ಕಣ್ಣೀರು ಒಮ್ಮೆಲೆ ಬರತೊಡಗಿತು. ನನ್ನ ಭಾವನೆಗಳ ತೊಳಲಾಟ ಬಹುಶಃ ಅವನಿಗೂ ಅರ್ಥವಾಗಿತ್ತೋ ಏನೋ, ನನ್ನ ಬಳಿ ಬಂದು ಕೈ ಹಿಡಿದು, ಒಮ್ಮೆ ಮೃದುವಾಗಿ ಒತ್ತಿ, ಮೊದಲ ದಿನದ ಮಂದಹಾಸದೊಂದಿಗೆ ವಿದಾಯ ಹೇಳಿ ಹೊರಟೇ ಹೋದ. ಕೊನೆಗೂ ನನ್ನ ಮನದಾಳದ ಮಾತುಗಳನ್ನು ಹೇಳಿಕೊಳ್ಳಲಾಗದೆ ಇಂದಿಗೂ ಆತನ ನೆನಪಿನಲ್ಲಿಯೇ ಅವನೆದುರೇ ಬೆಸ್ಟ್ಫ್ರೆಂಡ್ ಎನ್ನುವ ಹೆಸರಿನಡಿ ಬದುಕುತ್ತಿದ್ದೇನೆ. ಎಂದಾದರೂ ಆತನಿಗೂ ನನ್ನ ಹಾಗೆಯೇ ಪ್ರೀತಿ ಹುಟ್ಟುತ್ತದೆ ಎಂಬ ನಂಬಿಕೆಯಲ್ಲಿಯೇ ಕಾಯುತ್ತಿದ್ದೇನೆ. ಆತನ ಆ್ಯಕ್ಸಿಡೆಂಟ್‌ಗೇನೋ ಔಷಧಿ ಸಿಕ್ಕಾಯ್ತು.. ಆದರೆ ನನ್ನ ಬದುಕಿನಲ್ಲಾದ ಲವ್ ಆ್ಯಕ್ಸಿಡೆಂಟ್‌ಗೆ ಔಷಧಿ?
ಲೇಖನ: ಭಾರತಿ ಹೆಗಡೆ, ಶಿರಸಿ
Published On - 1:19 pm, Tue, 28 February 23