AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಫಿಯಾ ಕ್ವೀನ್ ಗಂಗೂಬಾಯಿ; ಕುಮಾರಿಯೂ ಅಲ್ಲದ, ಶ್ರೀಮತಿಯೂ ಅಲ್ಲದ ವೇಶ್ಯೆಯ ಅಂತರಂಗ

ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ನೋಡಿದ ಸುಮಾ.ಕಂಚೀಪಾಲ್ ಅವರು ತಮ್ಮ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಂಡಿದ್ದಾರೆ

ಮಾಫಿಯಾ ಕ್ವೀನ್ ಗಂಗೂಬಾಯಿ; ಕುಮಾರಿಯೂ ಅಲ್ಲದ, ಶ್ರೀಮತಿಯೂ ಅಲ್ಲದ ವೇಶ್ಯೆಯ ಅಂತರಂಗ
ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Mar 15, 2022 | 4:01 PM

Share

ಇತ್ತೀಚೆಗೆ ಬಿಡುಗಡೆಯಾದ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ನಿಜಕ್ಕೂ ಭಾವನಾತ್ಮಕವಾದದ್ದು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಎಂದಾಕ್ಷಣ ಪ್ರೇಕ್ಷಕರ ನಿರೀಕ್ಷೆ ಬೇರೆಯದ್ದೇ ಇರುತ್ತದೆ. ಆ ನಿರೀಕ್ಷೆಯನ್ನು ಹುಸಿಗೊಳಿಸದ ಸಿನಿಮಾ ಇದು ಎಂದೇ ಹೇಳಬಹುದು. ಬಿಳಿ ಸೀರೆ, ಕಾಸಗಲದ ಕೆಂಪು ಹಣೆಬಟ್ಟು, ಎಡಗೆನ್ನೆಯ ಮೇಲೊಂದು ಕಪ್ಪುಗುರುತು, ಢಾಳಾಗಿ ಕಾಣು ಕೆಂಪು ತುಟಿ ಬಣ್ಣ ಇವಿಷ್ಟು ಗಂಗೂಬಾಯಿ ಬಾಹ್ಯ ಚಹರೆ. ಇದಕ್ಕಿಂತ ಭಿನ್ನ ಅವಳ ಅಂತರಂಗ. ಎದೆಯಲ್ಲಿ ಬೆಂಕಿ ಮೊಗದಲ್ಲಿ ಗುಲಾಬಿ ನಗು ತುಂಬಿಕೊಂಡಿರುವ ಕುಮಾರಿಯೂ ಅಲ್ಲ ಶ್ರೀಮತಿಯೂ ಅಲ್ಲದ ವೇಶ್ಯೆ ಅಂತರಂಗ.

ಪ್ರಿಯತಮನಿಂದ ಕನಸಲ್ಲಿಯೂ ಬಯಸದ ಬಲೆಯಲ್ಲಿ ಬಿದ್ದು ಸಿನಿಮಾ ನಾಯಕಿಯಾಗಲು ಬಂದಿರುವ ಗಂಗು ಮುಂಬೈ ಸೇರಿ ವೇಶ್ಯೆಯಾಗುತ್ತಾಳೆ. ನಾಯಕಿಯಾಗಿ ನಟಿಸಬೇಕೆಂಬ ಆಶಯ ಹೊತ್ತು ಬಂದವಳ ಜೀವನವೇ ಕೊನೆಗೆ ಸಿನಿಮಾ ಆಗುತ್ತದೆ. ನಟಿ ಆಲಿಯಾ ಭಟ್ ಚಿತ್ರದಲ್ಲಿ ಮುಖ್ಯಪಾತ್ರ ವಹಿಸಿದ್ದು ಪ್ರತಿಯೊಂದು ಮಾತು, ಅಭಿನಯ ಜನರ ಮನಮುಟ್ಟುವಂತೆ ಅಭಿನಯಿಸಿದ್ದಾರೆ‌.

ದರ್ಪದ ಗಂಡಸರ ಬುದ್ದಿ, ರಾಜಕೀಯ ವ್ಯವಸ್ಥೆ, ಕಠು ಟೀಕೆ, ಹೆಣ್ಣಿನ ದೈಹಿಕ ಮತ್ತು ಮಾನಸಿಕ ವೇದನೆಗಳನ್ನು ಕಟ್ಟಿಕೊಟ್ಟ ಚಿತ್ರವಿದು. ಬೇಡ ಬೇಡವೆಂದರು ಹತ್ತಾರು ಬಾರಿ ಭಾವುಕರಾಗುವಂತಹ ಸನ್ನಿವೇಶ ಎದುರಾಗುತ್ತದೆ. ತಂದೆ ತಾಯಿಯರನ್ನು ನೋಡಬೇಕು ಎಂಬ ಹಂಬಲ. ಅವರು ಮತ್ತೆ ಸ್ವೀಕರಿಸುವುದಿಲ್ಲ ಎಂಬ ದುಗುಡ ಎಲ್ಲವನ್ನೂ ಮನಸಿನ ಚೀಲದಲ್ಲಿ ತುಂಬಿಕೊಂಡ ಹತ್ತಾರು ಹೆಣ್ಣುಮಕ್ಕಳು ಒಂದೇ ಸಾರಾಂಶವಿರುವ ಪತ್ರವನ್ನು ಒಕ್ಕೊರಲಿನಿಂದ ಧ್ವನಿಸುವ ಚಿತ್ರ, ವೇಶ್ಯೆಯೊಬ್ಬಳ ಮಕ್ಕಳನ್ನು ಶಾಲೆ ಮತ್ತು ಸಮಾಜದಲ್ಲಿ ಅವಮಾನಿಸುವ ರೀತಿ, ಮುಂದೊಂದುದಿನ ತಾನು ಸಮಾಜದಲ್ಲಿ ತಲೆ ಎತ್ತಿ ನಿಲ್ಲುತ್ತೇನೆ ಎಂಬ ಅವಳ ಭದ್ರ ಭರವಸೆ ಎಲ್ಲವೂ ಈ ಚಿತ್ರದ ಜೋರಾದ ಧ್ವನಿಯಲ್ಲಿ ಸಾರುತ್ತದೆ.

ಇನ್ನು ಅಲ್ಲಿನ ಬೀದಿಗಳ ಚಿತ್ರಣ, ಮನಸಿಗೆ ಇಷ್ಟವಿಲ್ಲದಿದ್ದರೂ ಕೈಬೀಸಿ ತಮ್ಮ ಗ್ರಾಹಕರನ್ನು ಕರೆಯುವ ದೃಶ್ಯ, ಇಷ್ಟವಿಲ್ಲದೆಯೂ ದಿನವೂ ತಮ್ಮನ್ನು ತಾವೇ ಅಲಂಕರಿಸಿಕೊಳ್ಳುವ ಸ್ಥಿತಿ ಎಷ್ಟು ಕ್ರೂರ ಎಂಬುದನ್ನು ಸ್ವತಃ ಅವರ ಧ್ವನಿಯಲ್ಲೇ ಆಲಿಸುವಂತೆ ಮಾಡುತ್ತದೆ ಈ ಚಿತ್ರ. ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುವ ರೀತಿಯಲ್ಲಿ ಇತಿಹಾಸವಾಗಿದ್ದಾಳೆ ಗಂಗೂಬಾಯಿ. ‌ಚಿತ್ರದ ದೃಶ್ಯಭಾಷೆಯೂ ಅಮೋಘ ಅನುಭವ ನೀಡುತ್ತದೆ.

 ಸುಮಾ.ಕಂಚೀಪಾಲ್

Published On - 4:00 pm, Tue, 15 March 22