ಕಂಬಳಕ್ಕಿದೆ ಪಾರಂಪರಿಕ ಇತಿಹಾಸ, ಇಲ್ಲಿದೆ ಕಂಬಳದ ಬಗ್ಗೆ ಆಸಕ್ತಿದಾಯಕ ಮಾಹಿತಿ

ದಕ್ಷಿಣ ಕನ್ನಡ, ಉಡುಪಿಯಲ್ಲಿ ಈಗಲೂ ಈ ಒಂದು ಕ್ರೀಡೆ ಬಹಳ ಜನಪ್ರಿಯ. ದಕ್ಷಿಣ ಕನ್ನಡ ಜಿಲ್ಲೆಯ  ಭಾಗದ ಜನರು ಕಂಬಳ ಎಂದರೆ ಹುಚ್ಚೆದ್ದು ಕುಣಿಯುತ್ತಾರೆ. ಕಂಬಳ ವೀಕ್ಷಣೆಗಾಗಿ ದೂರದ ಊರಿಂದಲೂ ಜನ ಬರುತ್ತಾರೆ ಈ ಕಂಬಳವು ಚಳಿಗಾಲದಿಂದ ಹಿಡಿದು ಮಾರ್ಚ್ ವರೆಗೂ ಇದ್ದು ಎರಡು-ಮೂರು ದಿನಗಳ ಕಾಲ ಹಗಲು ರಾತ್ರಿ ನಡೆಯುತ್ತದೆ.

ಕಂಬಳಕ್ಕಿದೆ ಪಾರಂಪರಿಕ ಇತಿಹಾಸ, ಇಲ್ಲಿದೆ ಕಂಬಳದ ಬಗ್ಗೆ ಆಸಕ್ತಿದಾಯಕ ಮಾಹಿತಿ
ಕಂಬಳದ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 19, 2022 | 8:00 AM

ಕರುನಾಡು ಕಲೆ ಸಂಸ್ಕೃತಿಗಳ ನಾಡು, ಅದೆಷ್ಟೋ ಜನಪದ ಕಲೆಗಳನ್ನು ತನ್ನೊಡಲೊಳಗೆ ಜೋಪಾನವಾಗಿ ಕಾಪಾಡಿಕೊಂಡು ಬರುತ್ತಿರುವ ಕರ್ನಾಟಕ ಎಲ್ಲಾ ದೇಶ, ರಾಜ್ಯಗಳಿಗೂ ಮಾದರಿ. ತನ್ನದೇ ಶೈಲಿಯಲ್ಲಿ ಕಲೆಗಳನ್ನು ಕಲಾವಿಧರಿಗೆ ಧಾರೆ ಎರೆಯುವುದರ ಮುಖಾಂತರ ಅನೇಕ ಕಲೆಗಳನ್ನು ಲೋಕಕ್ಕೆ ಪರಿಚಯಿಸುವುದರ ಜೊತೆಗೆ ಅನೇಕ ಜನಪದ ಸಾಧಕರನ್ನು ಹುಟ್ಟು ಹಾಕಿದ ಹಿರಿಮೆ ಕರ್ನಾಟಕದ್ದು. ಅನೇಕ ವಿದ್ವಾಂಸರು, ಕವಿಗಳು, ಕ್ರೀಡಾರ್ಥಿಗಳ ತವರೂರು ಈ ಕರುನಾಡು. ಮಾತ್ರವಲ್ಲದೇ ಅನೇಕ ಜನಪದ ಕಲೆಗಳನ್ನು ಜನರಿಗೆ ಪರಿಚಯಿಸಿ ಕೊಟ್ಟಿದೆ ಜನಪದ ಎಂಬ ವಿಚಾರಕ್ಕೆ ಬಂದರೆ ಕಂಸಾಲೆ, ಹುಲಿವೇಷ, ಯಕ್ಷಗಾನ,  ಇನ್ನೂ ಹತ್ತು ಹಲವು ಜನಪದ ಕಲೆಗಳಲ್ಲಿ ಕಂಬಳವೂ ಒಂದು. ಕರ್ನಾಟಕದ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಕಂಬಳವನ್ನು ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಕಂಬಳ ಆರಂಭವಾಗಿರುವ ಉದ್ದೇಶ ಮನರಂಜನೆ ಹಿಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶದ ಜನರ ಮನರಂಜನೆಗಾಗಿ ಆಚರಿಸಲಾಗುತ್ತಿತ್ತು, ಆದರೆ ಈಗ ಇದು ಕ್ರೀಡೆಯಾಗಿ ಬದಲಾವಣೆಗೊಂಡಿದೆ. ಹಿಂದಿನ ಕಾಲದಲ್ಲಿ ಗ್ರಾಮೀಣ ಜನರು ಬಿಡುವಿಲ್ಲದೆ ಹೊಲ-ಗದ್ದೆಯಲ್ಲಿ ದುಡಿದು ಧನಿವಿರುವಾಗ ಆಯಾಸವನ್ನು ನೀಗಿಸುವ ಸಲುವಾಗಿ ಅಂದರೆ ಮೊದಲ ಹಂತದ ಗದ್ದೆ ಕೃಷಿ “ಸುಗ್ಗಿ” ಬೇಸಾಯ ನಂತರ ಕಂಬಳವನ್ನು ಮಾಡಲಾಗುತ್ತದೆ.

ದಕ್ಷಿಣ ಕನ್ನಡ, ಉಡುಪಿಯಲ್ಲಿ ಈಗಲೂ ಈ ಒಂದು ಕ್ರೀಡೆ ಬಹಳ ಜನಪ್ರಿಯ. ದಕ್ಷಿಣ ಕನ್ನಡ ಜಿಲ್ಲೆಯ  ಭಾಗದ ಜನರು ಕಂಬಳ ಎಂದರೆ ಹುಚ್ಚೆದ್ದು ಕುಣಿಯುತ್ತಾರೆ. ಕಂಬಳ ವೀಕ್ಷಣೆಗಾಗಿ ದೂರದ ಊರಿಂದಲೂ ಜನ ಬರುತ್ತಾರೆ ಈ ಕಂಬಳವು ಚಳಿಗಾಲದಿಂದ ಹಿಡಿದು ಮಾರ್ಚ್ ವರೆಗೂ ಇದ್ದು ಎರಡು-ಮೂರು ದಿನಗಳ ಕಾಲ ಹಗಲು ರಾತ್ರಿ ನಡೆಯುತ್ತದೆ. ಈ ಕಂಬಳದ ಇತಿಹಾಸದತ್ತ ನೋಡಿದರೆ ಇದನ್ನು 800 ವರ್ಷಗಳಿಂದ ಆಚರಿಸಲಾಗುತ್ತದೆ ಎಂಬ ಉಲ್ಲೇಖವಿದೆ. ಇಂತಹ ಸುಧೀರ್ಘ ಇತಿಹಾಸವನ್ನು ಈಗಲೂ ಮುನ್ನಡೆಸಿಕೊಂಡು ಬರುತ್ತಿದೆ ಕರ್ನಾಟಕ.

ಹಿಂದಿನ ಕಾಲದಲ್ಲಿ ರಾಜ ಮನೆತನಗಳು ತಮ್ಮ ಪ್ರತಿಷ್ಠೆಯ ಸಂಕೇತವಾಗಿ ಈ ಕಂಬಳವನ್ನು ಏರ್ಪಡಿಸುತ್ತಿದ್ದರಂತೆ. ಕಂಬಳ ಎಂದರೆ ಎರಡು ಕೋಣಗಳ ನಡುವಿನ ಓಟ, ಸುಮಾರು 200 ಮೀಟರ್ ಗಳಷ್ಟು ಉದ್ದದ ಕೆಸರು ನೀರಿನಿಂದ ತುಂಬಿದ  ಗದ್ದೆಯಲ್ಲಿ ಕೋಣಗಳ ಹೆಗಳಿಗೆ ನೊಗ ಇಟ್ಟು ಅದರ ನಿರ್ವಾಹಕ ಅವುಗಳನ್ನು ನಿಭಾಯಿಸಿದಾಗ ಯಜಮಾನನ ಘನತೆ, ಗೌರವ, ಪ್ರತಿಷ್ಠೆಯ ಉಳಿವಿಗಾಗಿ ಗೆಲುವಿನ ಬೆನ್ನು ಹಿಡಿದು ಓಟಕ್ಕಿಳಿಯುತ್ತದೆ. ಅದರ ಹಿಂದೆ ನಿರ್ವಾಹಕನು ಓಡುತ್ತಾನೆ. ಕಂಬಳದ ಕೋಣದ ಹಿಂದೆ ಓಡುವಾತನಿಗೆ ಧರ‍್ಯದ ಜೊತೆ ಚಾಣಾಕ್ಷತನವಿರಬೇಕು.

ಕಂಬಳದ ಓಟದ ಗೆಲುವು ನಿರ್ಧಾರವಾಗುವುದು ಕಡಿಮೆ ಅವಧಿಯಲ್ಲಿ ಯಾವ ಜೋಡಿ ಗುರಿ ಮುಟ್ಟುತ್ತದೆ ಎಂಬ ಆಧಾರದ ಮೇಲೆ. ಕಂಬಳವು ಮೂರು ಸುತ್ತಿನಲ್ಲಿ ನಡೆಯುತ್ತದೆ ಮೊದಲನೆಯ ಸುತ್ತು, ಎರಡೆಯ ಸುತ್ತು ಹಾಗೂ ಅಂತಿಮ ಸುತ್ತು. ಕಂಬಳದಲ್ಲಿ ಗೆದ್ದ ಕೋಣಗಳಿಗೆ ಚಿನ್ನದ ಪದಕ, ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ನೀಡಲಾಗುತ್ತದೆ. ಹಿಂದೆ ರಾಜರು ತಮ್ಮ ಅಧಿಪತ್ಯದ ಹಿರಿಮೆಗಾಗಿ ಕಂಬಳವನ್ನು ನಡೆಸುತ್ತಿದ್ದರು, ಒಳ್ಳೆ ತಳಿಯ ಕೋಣಗಳನ್ನು ಖರೀದಿಸುತ್ತಾರೆ, ಕಂಬಳದ ಕೋಣವನ್ನು ಸಾಕುವುದೆಂದರೆ ಸಾಮಾನ್ಯವಾದ ವಿಷಯವಲ್ಲ, ಅವುಗಳಿಗೆ ದಿನಂಪ್ರತಿ ಎಣ್ಣೆ ಸ್ನಾನ ಮಾಡಿಸಿ ಕಾಲ-ಕಾಲಕ್ಕೆ ದವಸ-ಧಾನ್ಯಗಳನ್ನು ಕೊಟ್ಟು, ಮುತುವರ್ಜಿಯಿಂದ ಕ್ರಮಬದ್ಧವಾಗಿ ದಷ್ಟ-ಪುಷ್ಟವಾಗಿ, ಬಹಳ ಪ್ರೀತಿಯಿಂದ ಸಾಕುತ್ತಾರೆ.

ಕಂಬಳದ ಓಟದಲ್ಲಿ ಅನೇಕ ವಿಧಗಳಿವೆ ಅವುಗಳಲ್ಲಿ ನೇಗಿಲು ಓಟ, ಅಡ್ಡ ಹಲಗೆ ಓಟ, ಹಗ್ಗದ ಓಟ. ಹಾಗೆಯೇ ಕಂಬಳದ ಗದ್ದೆಯಲ್ಲಿಯೂ ಎರಡು ವಿಧ ಒಂಟಿ ಗದ್ದೆ ಕಂಬಳ ಮತ್ತು ಜೋಡು ಕೆರೆ ಕಂಬಳ. ಒಂಟಿ ಗದ್ದೆ ಕಂಬಳ ಎಂದರೆ ಹೆಸರೇ ಸೂಚಿಸುವ ಹಾಗೆ ಒಂದೇ ಕಣದಲ್ಲಿ ಕೋಣಗಳನ್ನು ಓಡಿಸುವುದು. ಜೋಡು ಕೆರೆ ಕಂಬಳ ಎಂದರೆ ಎರಡು ಜೋಡು ಕೋಣಗಳನ್ನು ಏಕಕಾಲದಲ್ಲಿ ಎರಡು ಕಣಗಳಲ್ಲಿ ಓಡಿಸುವುದು. ಜೋಡು ಕೆರೆ ಕಂಬಳವು ಅವಳಿ-ಜವಳಿಗಳ ಹೆಸರಲ್ಲಿ ನಡೆಯುತ್ತದೆ ಅಂದರೆ ಲವ-ಕುಶ,ರಾಮ-ಲಕ್ಷ್ಮಣ, ಕೋಟಿ-ಚೆನ್ನಯ, ವಿಜಯ-ವಿಕ್ರಮ. ಹೀಗೆ ಅನೇಕ ಹೆಸರಿನಿಂದ ಕಂಬಳವು ನಡೆಯುತ್ತದೆ. ಅನೇಕರು ಕಂಬಳಕ್ಕೆ ಬರುವುದೇ ಕೋಣದ ಗತ್ತು-ಗಾಂಭೀರ್ಯವನ್ನು ಕಣ್ತುಂಬಿಕೊಳ್ಳಲು. ಹೀಗೆ ಪ್ರತಿಷ್ಟೆಯ ಸಂಕೇತವಾದ ‘ಜನಪದ ಕಲೆ’ಯಾದ ಕಂಬಳವು ಈಗ ಮನೋರಂಜನೆಯ ಕ್ರೀಡೆಯಾಗಿ ರೂಪಾಂತಗೊಂಡಿದೆ.

ಕವಿತಾ ಆಳ್ವಾಸ್ ಕಾಲೇಜು, ಮೂಡಬಿದಿರೆ