Budget 2022: ವಜ್ರಾಭರಣ ಪ್ರಿಯರಿಗೆ ಒಳ್ಳೇ ಸುದ್ದಿ ನೀಡಿದ ನಿರ್ಮಲಾ ಸೀತಾರಾಮನ್​; ಅಗ್ಗವಾಗಲಿವೆ ಒಡವೆಗಳು !

| Updated By: Lakshmi Hegde

Updated on: Feb 01, 2022 | 1:58 PM

ವಜ್ರ ಮತ್ತು ಅಮೂಲ್ಯ ಹರಳುಗಳ ಮೇಲಿನ ಆಮದು ಸುಂಕವನ್ನು ಶೇ.7.5ರಿಂದ ಶೇ.2.5ಕ್ಕೆ ಇಳಿಕೆ ಮಾಡಬೇಕು ಎಂದು 2020ರಲ್ಲಿಯೇ ವಜ್ರ ವ್ಯಾಪಾರಿಗಳು ನಿರ್ಮಲಾ ಸೀತಾರಾಮನ್​ ಅವರನ್ನು ಒತ್ತಾಯಿಸಿದ್ದರು. 

Budget 2022: ವಜ್ರಾಭರಣ ಪ್ರಿಯರಿಗೆ ಒಳ್ಳೇ ಸುದ್ದಿ ನೀಡಿದ ನಿರ್ಮಲಾ ಸೀತಾರಾಮನ್​; ಅಗ್ಗವಾಗಲಿವೆ ಒಡವೆಗಳು !
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಇಂದಿನ ಕೇಂದ್ರ ಬಜೆಟ್​​ನಲ್ಲಿ (Union Budget 20220) ನಿರ್ಮಲಾ ಸೀತಾರಾಮನ್ (Nirmala Sitharaman)​ ಅವರು ಆಭರಣ ಪ್ರಿಯರಿಗೆ ಒಂದು ಗುಡ್​ ನ್ಯೂಸ್ ಕೊಟ್ಟಿದ್ದಾರೆ. ಕತ್ತರಿಸಿದ, ಪಾಲಿಶ್​ ಮಾಡಿದ ವಜ್ರ ಮತ್ತು ಬೆಲೆಬಾಳುವ ಹರಳು (ರತ್ನ)ಗಳ ಮೇಲಿನ ಆಮದು ಸುಂಕವನ್ನು ಶೇ.5ಕ್ಕೆ ಕಡಿತಗೊಳಿಸಲಾಗುವುದು ಎಂದು ಹೇಳಿದ್ದಾರೆ. ಸದ್ಯ ಇವುಗಳ ಆಮದು ಸುಂಕ ಶೇ.7.5ರಷ್ಟಿತ್ತು. ವಜ್ರ ಮತ್ತು ಹರಳುಗಳ ಮೇಲಿನ ಆಮದು ಸುಂಕ ಕಡಿಮೆಯಾದರೆ, ಸಹಜವಾಗಿಯೇ ಇವುಗಳಿಂದ ತಯಾರಾದ ಆಭರಣಗಳ ಬೆಲೆ ಕಡಿಮೆಯಾಗಲಿದೆ. ಅಷ್ಟೇ ಅಲ್ಲ, ಇ -ಕಾಮರ್ಸ್​ ವೇದಿಕೆ ಮೂಲಕ  ಆಭರಣಗಳನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ಅನುಕೂಲ ಮಾಡಿಕೊಡಲಿದೆ. ಅದಕ್ಕಾಗಿ ಈ ವರ್ಷ ಜೂನ್​ ತಿಂಗಳ ಹೊತ್ತಿಗೆ ಒಂದು ಸರಳೀಕೃತ ರೂಪುರೇಶೆ ಜಾರಿಗೆ ತರಲಾಗುವುದು ಎಂದೂ ಹೇಳಿದ್ದಾರೆ. 

ಬೆಲೆ ಬಾಳುವ ರತ್ನಗಳು ಮತ್ತು ಆಭರಣ ತಯಾರಿಕಾ ವಲಯಕ್ಕೆ ಉತ್ತೇಜನ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಕತ್ತರಿಸಿದ ಮತ್ತು ಪಾಲಿಶ್​ ಮಾಡಿದ ವಜ್ರಾಭರಣಗಳು, ಅಮೂಲ್ಯ ಹರಳುಗಳ ಆಮದು ಮೇಲಿನ ಸುಂಕ ಇಷ್ಟು ದಿನ ಶೇ.7.5ರಷ್ಟಿತ್ತು. ಅದನ್ನೀಗ ಶೇ.5ಕ್ಕೆ ಇಳಿಸಲಾಗಿದೆ ಎಂದು ಹೇಳಿದರು. ಅಷ್ಟೇ ಅಲ್ಲ, ಕಡಿಮೆ ಮೌಲ್ಯದ ಕೃತಕ ಆಭರಣಗಳ ಆಮದಿನ ಪ್ರಮಾಣ ಕಡಿಮೆ ಮಾಡುವ ಸಲುವಾಗಿ, ಅಂಥ ಕೃತಕ ಆಭರಣಗಳ ಮೇಲಿನ  ಆಮದು ಸುಂಕವನ್ನು ಪ್ರತಿ ಕೆಜಿಗೆ 400 ರೂಪಾಯಿಗಳಷ್ಟನ್ನು ಪಾವತಿಸುವಂತೆ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇ-ಕಾಮರ್ಸ್​ ವೇದಿಕೆ ಎಂದರೆ ಉತ್ಪನ್ನಗಳನ್ನು ಆನ್​ಲೈನ್​ ಮೂಲಕ ವಿದ್ಯುಚ್ಛಾಲಿತವಾಗಿ ಖರೀದಿಸುವ ಮತ್ತು ಮಾರಾಟ ಮಾಡುವ ಪ್ರಕ್ರಿಯೆಯಾಗಿದೆ.  ಇಂದು ಬಜೆಟ್​​ನಲ್ಲಿ ಹೇಳಿದಂತೆ ಜೂನ್​ ನಂತರ ಇ-ಕಾಮರ್ಸ್​ ಮೂಲಕ ವಜ್ರದ ರಫ್ತಿಗೂ ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಿಕೊಡುವುದರಿಂದ ವ್ಯಾಪಾರಿಗಳು, ಉದ್ಯಮಿಗಳಿಗೆ ಇನ್ನಷ್ಟು ಅನುಕೂಲವಾಗಲಿದೆ.

ಭಾರತಕ್ಕೆ ಶೇ.60ರಷ್ಟು ಪ್ರಮಾಣದ ಕತ್ತರಿಸಿದ ಮತ್ತು ಪಾಲಿಶ್​ ಮಾಡಿದ ವಜ್ರಗಳು ಆಮದು ಆಗುವುದು ಆಂಟ್ವೆರ್ಪ್​ ಮತ್ತು ದುಬೈನಿಂದ. ಇಂಥ ವಜ್ರ ಮತ್ತು ಅಮೂಲ್ಯ ಹರಳುಗಳ ಮೇಲಿನ ಆಮದು ಸುಂಕವನ್ನು ಶೇ.7.5ರಿಂದ ಶೇ.2.5ಕ್ಕೆ ಇಳಿಕೆ ಮಾಡಬೇಕು ಎಂದು 2020ರಲ್ಲಿಯೇ ವಜ್ರ ವ್ಯಾಪಾರಿಗಳು ನಿರ್ಮಲಾ ಸೀತಾರಾಮನ್​ ಅವರನ್ನು ಒತ್ತಾಯಿಸಿದ್ದರು.  ಅಂದಹಾಗೇ, ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳಿಗೆ ಶೇ.7.5ರಷ್ಟು ಆಮದು ಸುಂಕ ಹೇರಿದ್ದು 2018ರಲ್ಲಿ ಆಗಿತ್ತು. ಅಂದಿನಿಂದಲೂ ಕೇಂದ್ರ ಸರ್ಕಾರ ಅದನ್ನು ಹಾಗೇ ಉಳಿಸಿಕೊಂಡು ಬಂದಿತ್ತು. ಇದೀಗ ಶೇ.2.5ಕ್ಕೆ ಅಲ್ಲದಿದ್ದರೂ, ಶೇ.5ಕ್ಕೆ ಇಳಿಸುವ ಮೂಲಕ ವಜ್ರ ವ್ಯಾಪಾರಿಗಳ ಭಾರವನ್ನು ತುಸು ಕಡಿಮೆ ಮಾಡುವ ಜತೆ, ಒಡವೆ ಪ್ರಿಯರಿಗೂ ಖುಷಿಕೊಟ್ಟಿದೆ.

ಇದನ್ನೂ ಓದಿ: Budget 2022: ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್​ಗಳಿಗೆ ಶೀಘ್ರದಲ್ಲೇ ಬ್ಯಾಟರಿ ವಿನಿಮಯ ನೀತಿ ಘೋಷಣೆ

Published On - 1:36 pm, Tue, 1 February 22