Budget 2022: ಪಿಎಂ ಕಿಸಾನ್​ ಸಮ್ಮಾನ್​ ಸ್ಕೀಮ್​ಗೆ ಬಜೆಟ್​​ನಲ್ಲಿ 68 ಸಾವಿರ ಕೋಟಿ ರೂಪಾಯಿ ಮೀಸಲು

ಮೊಟ್ಟ ಮೊದಲು ಪಿಎಂ ಕಿಸಾನ್​ ಸಮ್ಮಾನ್​ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರ 2018ರಲ್ಲಿ ಶುರು ಮಾಡಿದೆ. ವರ್ಷದಿಂದ ವರ್ಷಕ್ಕೆ ಈ ಸ್ಕೀಮ್​​ನ ಫಲಾನುಭವಿಗಳ ಸಂಖ್ಯೆ ಏರಿಕೆಯಾಗುತ್ತಿದೆ.

Budget 2022: ಪಿಎಂ ಕಿಸಾನ್​ ಸಮ್ಮಾನ್​ ಸ್ಕೀಮ್​ಗೆ ಬಜೆಟ್​​ನಲ್ಲಿ 68 ಸಾವಿರ ಕೋಟಿ ರೂಪಾಯಿ ಮೀಸಲು
ಸಾಂಕೇತಿಕ ಚಿತ್ರ
Updated By: Lakshmi Hegde

Updated on: Feb 01, 2022 | 6:47 PM

ಇಂದು ಮಂಡನೆಯಾದ 2022-23ನೇ ಸಾಲಿನ ಬಜೆಟ್​​ನಲ್ಲಿ (Union Budget 2022), ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​ ನಿಧಿ (PM-KISAN)ಗೆ ಒಟ್ಟು 68 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಅಂದರೆ 2021-22ರಲ್ಲಿ 65 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಅದಕ್ಕಿಂತ ಈ ಬಾರಿ ಶೇ.4.8ರಷ್ಟು ಹೆಚ್ಚು ನೀಡಲಾಗಿದೆ. ಹಾಗೇ, ಪ್ರಸಕ್ತ ಹಣಕಾಸು ವರ್ಷದ ಪರಿಷ್ಕೃತ ಅಂದಾಜು 67,500 ಕೋಟಿ ರೂ.ಗಿಂತ ಕೇವಲ 0.74ರಷ್ಟು ಅಧಿಕವಾಗಿದೆ.   

ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರ, ಅರ್ಹ ಫಲಾನುಭವಿ ರೈತರ ಖಾತೆಗಳಿಗೆ ಒಟ್ಟು 6000 ರೂಪಾಯಿ ವಾರ್ಷಿಕವಾಗಿ ಹಾಕುತ್ತದೆ. ಅಂದರೆ ಇದು ಒಮ್ಮೆಲೇ ಹಾಕುವುದಲ್ಲ. ಕಂತಿನ ರೂಪದಲ್ಲಿ ರೈತರ ಖಾತೆಗಳಿಗೆ ವರ್ಗಾವಣೆಯಾಗುತ್ತದೆ. ಅಂದರೆ ಒಂದು ವರ್ಷದಲ್ಲಿ ಮೂರು ಕಂತುಗಳಲ್ಲಿ ಒಬ್ಬ ರೈತ ಖಾತೆಗೆ ಈ ಹಣ ಬರುತ್ತದೆ. ಪಿಎಂ ಕಿಸಾನ್​ ಯೋಜನೆಯ 10ನೇ ಕಂತನ್ನು 2022ರ ಜನವರಿ 1ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದು, ದೇಶಾದ್ಯಂತ 10.09 ಕೋಟಿ ರೈತರ ಅಕೌಂಟ್​ಗೆ ಒಟ್ಟು 20,946 ಕೋಟಿ ರೂ.ವರ್ಗಾವಣೆ ಮಾಡಲಾಗಿದೆ. ಅದರೊಂದಿಗೆ ಇಲ್ಲಿಯವರೆಗೆ ಒಟ್ಟು 1.8 ಲಕ್ಷ ಕೋಟಿ ರೂಪಾಯಿಗಳಷ್ಟನ್ನು ರೈತರ ಅಕೌಂಟ್​ಗೆ ಹಾಕಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ತಿಳಿಸಿದೆ.

ಮೊಟ್ಟ ಮೊದಲು ಪಿಎಂ ಕಿಸಾನ್​ ಸಮ್ಮಾನ್​ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರ 2018ರಲ್ಲಿ ಶುರು ಮಾಡಿತ್ತು. ವರ್ಷದಿಂದ ವರ್ಷಕ್ಕೆ ಈ ಸ್ಕೀಮ್​​ನ ಫಲಾನುಭವಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ದೇಶದಲ್ಲಿ ಪಿಎಂ ಕಿಸಾನ್​ ಯೋಜನೆ ಫಲಾನುಭವಿ ರೈತರ ಸಂಖ್ಯೆ 12 ಕೋಟಿ ತಲುಪಿದೆ ಎಂದು ಹೇಳಲಾಗಿದೆ. ಇನ್ನು ಕೃಷಿಯನ್ನು ಆಧುನಿಕರಣ ಗೊಳಿಸುವ ಜತೆ ನೈಸರ್ಗಿಕ ಮತ್ತು ಶೂನ್ಯ ಬಜೆಟ್​​ ಕೃಷಿಯನ್ನು ಉತ್ತೇಜಿಸಲು ಪ್ರಸಕ್ತ ಬಜೆಟ್​​ನಲ್ಲಿ ಒತ್ತು ನೀಡಲಾಗಿದೆ.

ಇದನ್ನೂ ಓದಿ:  ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 80 ಲಕ್ಷ ಮನೆಗಳು 2022-23ರಲ್ಲಿ ಪೂರ್ಣಗೊಳ್ಳಲಿವೆ: ವಿತ್ತ ಸಚಿವೆ

Published On - 6:03 pm, Tue, 1 February 22