48 ಲಕ್ಷ ಮದುವೆ, 6 ಲಕ್ಷ ಕೋಟಿ ರೂ ವ್ಯವಹಾರ… ಅಬ್ಬಬ್ಬ ವಿವಾಹ ‘ಬಿಸಿನೆಸ್’ ಇದು…

|

Updated on: Nov 06, 2024 | 5:09 PM

Wedding related business: ನವೆಂಬರ್ 12ರಿಂದ ಡಿಸೆಂಬರ್ 16ರವರೆಗೆ ಇರುವ ಮದುವೆ ಸೀಸನ್​ನಲ್ಲಿ ಹೆಚ್ಚು ಶುಭಮುಹೂರ್ತಗಳಿವೆ. ಈ ಋತುವಿನಲ್ಲಿ 48 ಲಕ್ಷ ವಿವಾಹ ಮಹೋತ್ಸವಗಳು ಜರುಗಬಹುದು. ಇವುಗಳಿಂದ ಆಗುವ ಬಿಸಿನೆಸ್ ಬರೋಬ್ಬರಿ 6 ಲಕ್ಷ ಕೋಟಿ ರೂ ಇರಬಹುದು ಎಂದು ಸಿಎಐಟಿ ಅಂದಾಜು ಮಾಡಿದೆ.

48 ಲಕ್ಷ ಮದುವೆ, 6 ಲಕ್ಷ ಕೋಟಿ ರೂ ವ್ಯವಹಾರ... ಅಬ್ಬಬ್ಬ ವಿವಾಹ ‘ಬಿಸಿನೆಸ್’ ಇದು...
ಮದುವೆ
Follow us on

ನವದೆಹಲಿ, ನವೆಂಬರ್ 6: ಮುಂದಿನ ವಾರದಿಂದ ಭಾರತದಲ್ಲಿ ವೆಡ್ಡಿಂಗ್ ಸೀಸನ್ ಶುರುವಾಗುತ್ತದೆ. ನವೆಂಬರ್ 12ಕ್ಕೆ ಆರಂಭವಾದರೆ ಡಿಸೆಂಬರ್ 16ರವರಗೆ ಮದುವೆ ಸಮಾರಂಭಗಳಿಗೆ ಶುಭ ಸಮಯ ಇದು. ಹೆಚ್ಚಿನ ಮದುವೆಗಳು ಈ ಅವಧಿಯಲ್ಲೇ ನಡೆಯಬಹುದು. ಭಾರತದ ಉದ್ಯಮ ವಲಯದ ಸಂಘಟನೆಯಾದ ಸಿಎಐಟಿ ಮಾಡಿರುವ ಅಂದಾಜು ಪ್ರಕಾರ ಈ ಬಾರಿಯ ಮದುವೆ ಸೀಸನ್​ನಲ್ಲಿ 48 ಲಕ್ಷ ವಿವಾಹ ಸಮಾರಂಭಗಳು ಜರುಗಬಹುದು. ಇವುಗಳಿಂದ ಸೃಷ್ಟಿಯಾಗುವ ಬಿಸಿನೆಸ್ ಬರೋಬ್ಬರಿ 6 ಲಕ್ಷ ಕೋಟಿ ರೂ ಇರಬಹುದು ಎನ್ನಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯೊಂದರಲ್ಲೆ 4.5 ಲಕ್ಷ ವಿವಾಹಗಳು ಹಾಗೂ 1.5 ಲಕ್ಷ ಕೋಟಿ ರೂ ಬಿಸಿನೆಸ್ ನಡೆಯುವ ನಿರೀಕ್ಷೆ ಇದೆ.

ಕಳೆದ ವರ್ಷ (2023) ಇದೇ ಮದುವೆ ಸೀಸನ್​ನಲ್ಲಿ 35 ಲಕ್ಷ ವಿವಾಹ ಮಹೋತ್ಸವಗಳು ಜರುಗಿ, ಅವುಗಳಿಂದ 4.25 ಲಕ್ಷ ಕೋಟಿ ರೂ ಬಿಸಿನೆಸ್ ಆಗಿತ್ತು. ಆ ವರ್ಷದ ಮದುವೆ ಸೀಸನ್​ನಲ್ಲಿ 11 ಶುಭ ಮುಹೂರ್ತಗಳಿದ್ದವು. ಈ ವರ್ಷದ ಸೀಸನ್​ನಲ್ಲಿ ಮದುವೆಗೆ ಶುಭದಿನಗಳ ಸಂಖ್ಯೆ ಬರೋಬ್ಬರಿ 18 ಇದೆ. ಇದು ಮದುವೆ ಸಂಬಂಧಿತ ಉದ್ದಿಮೆಗಳಿಗೆ ಒಳ್ಳೆಯ ಸುಗ್ಗಿ ತರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಅಕ್ಟೋಬರ್ ತಿಂಗಳಲ್ಲಿ 28 ಲಕ್ಷಕ್ಕೂ ಹೆಚ್ಚು ವಾಹನಗಳ ಮಾರಾಟ; ಒಟ್ಟಾರೆ ರೀಟೇಲ್ ಸೇಲ್ಸ್ ಶೇ. 32ರಷ್ಟು ಹೆಚ್ಚಳ

ನ. 12ರಿಂದ ಡಿ. 16ರವರೆಗಿನ ಮದುವೆ ಸೀಸನ್​ನಲ್ಲಿ ಶುಭದಿನಗಳಿವು…

  1. ನವೆಂಬರ್ 12
  2. ನವೆಂಬರ್ 13
  3. ನವೆಂಬರ್ 17
  4. ನವೆಂಬರ್ 18
  5. ನವೆಂಬರ್ 22
  6. ನವೆಂಬರ್ 23
  7. ನವೆಂಬರ್ 25
  8. ನವೆಂಬರ್ 26
  9. ನವೆಂಬರ್ 28
  10. ನವೆಂಬರ್ 29
  11. ಡಿಸೆಂಬರ್ 4
  12. ಡಿಸೆಂಬರ್ 5
  13. ಡಿಸೆಂಬರ್ 9
  14. ಡಿಸೆಂಬರ್ 10
  15. ಡಿಸೆಂಬರ್ 11
  16. ಡಿಸೆಂಬರ್ 14
  17. ಡಿಸೆಂಬರ್ 15
  18. ಡಿಸೆಂಬರ್ 16.

ಇದಾದ ಬಳಿಕ ಮದುವೆ ಶುಭಮುಹೂರ್ತ ಶುರುವಾಗುವುದು ಜನವರಿಯಲ್ಲೇ. ಜನವರಿ ಮಧ್ಯಭಾಗದಿಂದ ಹಿಡಿದು ಮಾರ್ಚ್​ವರೆಗೆ ಮದುವೆ ಸೀಸನ್ ಮುಂದುವರಿಯುತ್ತದೆ.

ಅದ್ಧೂರಿ ಮದುವೆಗಳೆಷ್ಟು, ಸರಳ ವಿವಾಹಗಳೆಷ್ಟು?

ಸಿಎಐಟಿ ಸಂಘಟನೆಯು ಈ ಮದುವೆ ಸೀಸನ್​ನಲ್ಲಿ ಯಾವ್ಯಾವ ಸ್ತರದ ಮದುವೆಗಳು ಎಷ್ಟು ನಡೆಯಬಹುದು ಎಂಬ ಅಂದಾಜನ್ನು ಮಾಡಿದೆ. ಅದರ ಪ್ರಕಾರ 48 ಲಕ್ಷ ಸಂಭಾವ್ಯ ಮದುವೆಗಳ ಪೈಕಿ, ಸರಾಸರಿ 3 ಲಕ್ಷ ರೂ ವ್ಯಯವಾಗುವ ಮದುವೆಗಳ ಸಂಖ್ಯೆ 10 ಲಕ್ಷ ಇರಬಹುದು. ಆರು ಲಕ್ಷ ರೂ ವೆಚ್ಚವಾಗುವ ಮದುವೆಗಳ ಸಂಖ್ಯೆ 10 ಲಕ್ಷ ಇರಬಹುದು. ಹತ್ತು ಲಕ್ಷ ರೂ ವೆಚ್ಚದ 10 ಲಕ್ಷ ಮದುವೆ ಕಾರ್ಯಕ್ರಮಗಳಾಗಬಹುದು. ಪ್ರತೀ ಮದುವೆಗೆ 15 ಲಕ್ಷ ರೂ ಖರ್ಚಾಗುವಂತಹ 10 ಲಕ್ಷ ಮದುವೆಗಳು ಜರುಗಬಹುದು.

ಇದನ್ನೂ ಓದಿ: ಇ-ಕಾಮರ್ಸ್ ಪ್ಲಾಟ್​ಫಾರ್ಮ್​ಗಳಲ್ಲಿ ಲಕ್ಷ ಕೋಟಿ ರೂ ದಾಖಲೆ ಮಾರಾಟ; ಸಣ್ಣ ನಗರಗಳಿಂದಲೇ ಭರ್ಜರಿ ಶಾಪಿಂಗ್

ಇನ್ನು, 25 ಲಕ್ಷ ರೂನಷ್ಟು ಖರ್ಚಾಗುವ ಮದುವೆಗಳ ಸಂಖ್ಯೆ 7 ಲಕ್ಷ ಆಗಬಹುದು. 50 ಲಕ್ಷ ರೂ ವೆಚ್ಚವಾಗುವ ಮದುವೆಗಳ ಸಖ್ಯೆ ಐವತ್ತು ಸಾವಿರದಷ್ಟಿರಬಹುದು. ಹಾಗೆಯೆ, ಒಂದು ಕೋಟಿ ರೂ ಮತ್ತು ಅದಕ್ಕಿಂತ ಹೆಚ್ಚು ವೆಚ್ಚವಾಗುವ ಮದುವೆಗಳ ಸಂಖ್ಯೆ 50,000 ರೂ ಇರಬಹುದು ಎಂದು ಸಿಎಐಟಿ ಅಂದಾಜು ಮಾಡಿದೆ.

ವಿವಾಹಗಳಿಂದ ಯಾವೆಲ್ಲಾ ಬಿಸಿನೆಸ್​ಗೆ ಅನುಕೂಲ?

ಮದುವೆ ಸಮಾರಂಭಗಳಲ್ಲಿ ಹೆಚ್ಚಾಗಿ ವೆಚ್ಚವಾಗುವುದು ಬಟ್ಟೆ, ಆಭರಣ, ಸಿಹಿತಿಂಡಿ, ಹಣ್ಣ, ತರಕಾರಿ, ದಿನಸಿ ವಸ್ತುಗಳಿಗೆ. ಸಿಎಐಟಿ ಅಂದಾಜು ಪ್ರಕಾರ, ಅತಿಹೆಚ್ಚು ವ್ಯಯವಾಗುವುದು ಒಡವೆಗಳಿಗೆ (ಶೇ. 15). ಸೀರೆ, ಲೆಹೆಂಗಾ ಇತ್ಯಾದಿ ಬಟ್ಟೆಬರೆಗಳಿಗೆ ಶೇ. 10ರಷ್ಟು ಖರ್ಚಾಗುತ್ತದೆ. ಎಲೆಕ್ಟ್ರಾನಿಕ್ಸ್ ಮತ್ತು ಅಪ್ಲಯನ್ಸ್​ಗಳಿಗೆ ಶೇ. 5, ಡ್ರೈಫ್ರೂಟ್ ಇತ್ಯಾದಿ ತಿಂಡಿಗಳಿಗೆ ಶೇ. 5, ದಿನಸಿ, ತರಕಾರಿ ಇತ್ಯಾದಿಗೆ ಶೇ. 5ರಷ್ಟು ವೆಚ್ಚವಾಗಬಹುದು.

ಉಡುಗೊರೆ ವಸ್ತುಗಳಿಗೆ ಶೇ. 4, ಹಾಗು ಇತರ ಸಾಮಾನುಗಳಿಗೆ ಶೇ. 6ರಷ್ಟು ವೆಚ್ಚ ಆಗಬಹುದು. ಈ ಮೇಲಿನವು ಮದುವೆ ಸಮಾರಂಭದ ವೇಳೆ ಸರಕುಗಳ ಮೇಲೆ ಆಗುವ ವೆಚ್ಚ. ಇನ್ನು, ಸರ್ವಿಸ್ ಸೆಕ್ಟರ್​ ವಿಚಾರಕ್ಕೆ ಬಂದರೆ, ಮದುವೆ ಹಾಲ್​ಗಳು, ಹೋಟೆಲ್, ಇವೆಂಟ್ ಮ್ಯಾನೇಜ್ಮೆಂಟ್, ಟೆಂಟ್ ಡೆಕೋರೇಶನ್, ಕೆಟರಿಂಗ್ ಸರ್ವಿಸ್, ಹೂವಿನ ಅಲಂಕಾರ, ಕ್ಯಾಬ್ ಸರ್ವಿಸ್, ಫೋಟೋ ವಿಡಿಯೋ ಸರ್ವಿಸ್,ಲೈಟಿಂಗ್, ಆರ್ಕಿಸ್ಟ್ರಾ ಮತ್ತಿತರ ಸೇವೆಗಳಿಗೆ ವ್ಯಯವಾಗುತ್ತದೆ. ಈ ಪೈಕಿ ಕೆಟರಿಂಗ್ ಮತ್ತು ಟೆಂಟ್ ಡೆಕೋರೇಶನ್​ಗೆ ತಲಾ ಶೇ. 10ರಷ್ಟು ವೆಚ್ಚವಾಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ