ಎರಡು ದಿನ ವೀಕಾಫ್ ಇಲ್ಲ; ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಬ್ಯಾಂಕ್ ಯೂನಿಯನ್​ಗಳಿಂದ ಪ್ಲಾನ್

|

Updated on: Dec 04, 2024 | 12:56 PM

Bank employees planning nationwide agitation: ವಾರದಲ್ಲಿ ಎರಡು ದಿನ ವೀಕಾಫ್ ನೀಡಬೇಕೆಂಬ ಬ್ಯಾಂಕ್ ಉದ್ಯೋಗಿಗಳ ಬೇಡಿಕೆಯನ್ನು ಸರ್ಕಾರ ಈಡೇರಿಸುವ ಸಾಧ್ಯತೆ ಕಾಣುತ್ತಿಲ್ಲ. ಈ ಕಾರಣಕ್ಕೆ ಬ್ಯಾಂಕ್ ಉದ್ಯೋಗಿಗಳ ಯೂನಿಯನ್​ಗಳು ಮುಷ್ಕರ ನಡೆಸಲು ಯೋಜಿಸುತ್ತಿವೆ ಎಂದು ವರದಿಯಾಗಿದೆ. ಸದ್ಯ ಬ್ಯಾಂಕುಗಳು ಭಾನುವಾರದ ಜೊತೆಗೆ ಪ್ರತೀ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರದಂದು ರಜೆ ಹೊಂದಿವೆ. ಈಗ ಭಾನುವಾರದಂತೆ ಶನಿವಾರವನ್ನೂ ಖಾಯಂ ರಜೆಯಾಗಿ ಮಾಡಬೇಕು ಎನ್ನುವುದು ಒತ್ತಾಯ.

ಎರಡು ದಿನ ವೀಕಾಫ್ ಇಲ್ಲ; ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಬ್ಯಾಂಕ್ ಯೂನಿಯನ್​ಗಳಿಂದ ಪ್ಲಾನ್
ಬ್ಯಾಂಕ್
Follow us on

ನವದೆಹಲಿ, ಡಿಸೆಂಬರ್ 4: ವಾರದಲ್ಲಿ ಐದು ದಿನ ಕೆಲಸ, ಎರಡು ದಿನ ರಜೆಯ ನೀತಿಯನ್ನು ಜಾರಿಗೆ ತರಬೇಕು ಎಂದು ಬ್ಯಾಂಕ್ ಉದ್ಯೋಗಿಗಳ ಬಹುದಿನ ಬೇಡಿಕೆ ಸದ್ಯಕ್ಕೆ ನೆರವೇರುವ ಲಕ್ಷಣ ಕಾಣುತ್ತಿಲ್ಲ. ಡಿಸೆಂಬರ್​ನಲ್ಲಿ ಆ ಹೊಸ ನೀತಿ ಜಾರಿಗೆ ತರಬೇಕು ಎಂದು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳು ಡೆಡ್​ಲೈನ್ ನೀಡಿದ್ದವು. ಈಗ ಆ ನೀತಿ ಜಾರಿಯಾಗುವ ಸಾಧ್ಯತೆ ಇಲ್ಲದ್ದರಿಂದ ಯೂನಿಯನ್​ಗಳು ಮುಷ್ಕರದ ಹಾದಿ ಹಿಡಿಯಲು ಆಲೋಚಿಸುತ್ತಿವೆ ಎಂದು ಹೇಳಲಾಗುತ್ತಿದೆ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಮಹಾ ಒಕ್ಕೂಟವು (ಎಐಬಿಒಸಿ) ಶೀಘ್ರದಲ್ಲೇ ಬ್ಯಾಂಕ್ ಉದ್ಯೋಗಿಗಳಿಂದ ಪ್ರತಿಭಟನೆ ಆರಂಭಿಸುತ್ತಿರುವುದಾಗಿ ಹೇಳಿದೆ ಎಂದು ನ್ಯೂಸ್18ನಲ್ಲಿ ವರದಿಯಾಗಿದೆ.

‘ಪ್ರತಿಭಟನೆ ಆರಂಭಿಸಲು ಯೋಜನೆ ರೂಪಿಸುತ್ತಿದ್ದೇವೆ. ಬ್ಯಾಂಕ್ ಯೂನಿಯನ್​ಗಳ ಸಂಯುಕ್ತ ವೇದಿಕೆಯ (ಯುಎಫ್​ಬಿಯು) ಎಲ್ಲಾ ಯೂನಿಯನ್​ಗಳನ್ನೂ ಈ ಕಾರ್ಯಕ್ಕಾಗಿ ಆಹ್ವಾನಿಸಿದ್ದೇವೆ’ ಎಂದು ಎಐಬಿಒಸಿ ಪ್ರಧಾನ ಕಾರ್ಯದರ್ಶಿ ರೂಪಮ್ ರಾಯ್ ಹೇಳಿದ್ದಾರೆನ್ನಲಾಗಿದೆ.

ಬ್ಯಾಂಕ್ ಯೂನಿಯನ್ ಯುನೈಟೆಡ್ ಫೋರಂ ಸಂಘಟನೆಯಲ್ಲಿ ಎಐಬಿಒಸಿಯೂ ಸೇರಿ ಒಂಬತ್ತು ಬ್ಯಾಂಕ್ ಯೂನಿಯನ್​ಗಳಿವೆ. ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ, ರಾಷ್ಟ್ರೀಯ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ, ಭಾರತದ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ ಇತ್ಯಾದಿ ಸಂಘಟನೆಗಳು ಸಂಯುಕ್ತ ವೇದಿಕೆಯಲ್ಲಿವೆ.

ಇದನ್ನೂ ಓದಿ: ಇವತ್ತು ಆರ್​ಬಿಐ ಎಂಪಿಸಿ ಸಭೆ ಆರಂಭ; ಬಡ್ಡಿದರ ಬದಲು ಸಿಆರ್​ಆರ್ ಕಡಿಮೆ ಮಾಡುವ ಸಾಧ್ಯತೆ; ಇಲ್ಲಿದೆ ಕೆಲ ನಿರೀಕ್ಷೆಗಳು…

ಭಾರತದ ಬಹುತೇಕ ಬ್ಯಾಂಕ್ ಉದ್ಯೋಗಿಗಳು ಈ ಯೂನಿಯನ್​ಗಳಲ್ಲಿ ಜೋಡಿತರಾಗಿದ್ದಾರೆ. ಹೀಗಾಗಿ, ಇವೆಲ್ಲಾ ಯೂನಿಯನ್​ಗಳು ಪ್ರತಿಭಟನೆಗೆ ಬೆಂಬಲ ನೀಡಿದರೆ ದೇಶವ್ಯಾಪಿ ಬ್ಯಾಂಕ್ ಕಚೇರಿಗಳು ಕೆಲ ದಿನ ಸ್ಥಗಿತಗೊಂಡರೂ ಅಚ್ಚರಿ ಇಲ್ಲ.

ಹೆಚ್ಚು ಕೆಲಸ ಹೆಚ್ಚು ಫಲ ಎಂಬುದನ್ನು ಒಪ್ಪಲಾಗುವುದಿಲ್ಲ: ರಾಯ್

ಭಾರತೀಯ ಉದ್ಯೋಗಿಗಳು ಹೆಚ್ಚು ಅವಧಿ ಕೆಲಸ ಮಾಡಬೇಕು ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ, ಒಲಾ ಸಿಇಒ ಭವೀಶ್ ಅಗರ್ವಾಲ್ ಮೊದಲಾದವರು ವ್ಯಕ್ತಪಡಿಸುತ್ತಿರುವ ಅಭಿಪ್ರಾಯವನ್ನು ರೂಪಂ ರಾಯ್ ತಳ್ಳಿಹಾಕುತ್ತಾರೆ.

‘ಅವರೆಲ್ಲಾ ಹೇಳುತ್ತಿರುವುದು ವೈಯಕ್ತಿಕ ಅನಿಸಿಕೆ ಮಾತ್ರ. ಕಡಿಮೆ ಕೆಲಸದ ಅವಧಿ, ಕಡಿಮೆ ವಾರದ ಕೆಲಸದ ದಿನ ಎಂಬುದು ಜಾಗತಿಕವಾಗಿ ಜಾರಿಗೆ ಬರುತ್ತಿದೆ. ಹೆಚ್ಚು ಅವಧಿ ಕೆಲಸ ಮಾಡಿದರೆ ಉತ್ಪನ್ನಶೀಲತೆ ಹೆಚ್ಚುತ್ತದೆ ಎನ್ನುವುದಕ್ಕೆ ಸರಿಯಾದ ಸಾಕ್ಷ್ಯಾಧಾರ ಇಲ್ಲ. ಇಂಥ ವೈಯಕ್ತಿಕ ಅನಿಸಿಕೆಗಳಿಂದ ಸರ್ಕಾರ ಪ್ರಭಾವಿತವಾಗುವುದಿಲ್ಲ ಎನ್ನುವ ನಂಬಿಕೆ ನಮಗಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬ್ಯಾಂಕಿಂಗ್ ಕಾನೂನಿಗೆ ತಿದ್ದುಪಡಿ, ಬ್ಯಾಂಕಿಂಗ್ ವಲಯ ಇನ್ನಷ್ಟು ಪ್ರಬಲ: ನಿರ್ಮಲಾ ಸೀತಾರಾಮನ್

ಬ್ಯಾಂಕುಗಳಲ್ಲಿ ಸದ್ಯ ಪ್ರತೀ ಭಾನುವಾರ ನಿಯಮಿತ ರಜೆ ಇದೆ. ಇದರ ಜೊತೆಗೆ ತಿಂಗಳಲ್ಲಿ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಒಳಗೊಂಡು ಎರಡು ರಜೆಗಳಿವೆ. ಈಗ ಶನಿವಾರವನ್ನೂ ಖಾಯಂ ರಜಾ ದಿನವಾಗಿ ಘೋಷಣೆ ಮಾಡಬೇಕು ಎನ್ನುವುದು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳು ಮಾಡುತ್ತಿರುವ ಒತ್ತಾಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ