ಪಿಎಲ್ಐ ಸ್ಕೀಮ್ನಿಂದ 5.84 ಲಕ್ಷ ನೇರ ಉದ್ಯೋಗಗಳ ಸೃಷ್ಟಿ; ಸ್ಮಾರ್ಟ್ಫೋನ್, ಫಾರ್ಮಾ, ಆಹಾರ ಕ್ಷೇತ್ರಗಳಲ್ಲಿ ಹೆಚ್ಚು ಉದ್ಯೋಗ
PLI scheme and job creation: ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆಯಾದ ಪಿಎಲ್ಐ ಅಡಿಯಲ್ಲಿ 6 ಲಕ್ಷ ಸಮೀಪದಷ್ಟು ಉದ್ಯೋಗಸೃಷ್ಟಿ ಸಾಧ್ಯವಾಗಿದೆ. 2024ರ ಜೂನ್ ತಿಂಗಳವರೆಗೆ ಈ ಸ್ಕೀಮ್ನಿಂದಾಗಿ ಸೃಷ್ಟಿಯಾಗಿರುವ ನೇರ ಉದ್ಯೋಗಗಳ ಸಂಖ್ಯೆ 5.84 ಎನ್ನಲಾಗಿದೆ. ಆಹಾರ ಸಂಸ್ಕರಣೆ, ಸ್ಮಾರ್ಟ್ಫೋನ್ ಮತ್ತು ಔಷಧ ವಲಯಗಳಲ್ಲೇ ಬಹುಪಾಲು ಉದ್ಯೋಗಸೃಷ್ಟಿಯಾಗಿದೆ.
ನವದೆಹಲಿ, ಡಿಸೆಂಬರ್ 4: ದೇಶದಲ್ಲಿ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಪುಷ್ಟಿ ನೀಡಲೆಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿಎಲ್ಐ ಸ್ಕೀಮ್ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಲು ಸಹಕಾರಿಯಾಗಿದೆ. 2024ರ ಜೂನ್ವರೆಗಿನ ಮಾಹಿತಿ ಪ್ರಕಾರ, ಈ ಸ್ಕೀಮ್ನಿಂದ ಒಟ್ಟಾರೆ 5.84 ಲಕ್ಷ ನೇರ ಉದ್ಯೋಗಗಳು ಸೃಷ್ಟಿಯಾಗಿವೆ. ಆರ್ಟಿಐ ಮೂಲಕ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ಮಾಹಿತಿ ಪಡೆದು ಪ್ರಕಟಿಸಿರುವ ವರದಿ ಪ್ರಕಾರ ಸರ್ಕಾರ ನಿರೀಕ್ಷಿಸಿದ ರೀತಿಯಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ.
ಕೇಂದ್ರ ಸರ್ಕಾರ ಪಿಎಲ್ಐ ಸ್ಕೀಮ್ ಆರಂಭಿಸಿದಾಗ ಐದು ವರ್ಷದಲ್ಲಿ 14 ವಲಯಗಳಲ್ಲಿ 16.2 ಲಕ್ಷ ನೇರ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿತ್ತು. ಈಗ ಶೇ. 5.84 ಲಕ್ಷ ಉದ್ಯೋಗಗಳ ಸೃಷ್ಟಿಯಾಗಿದೆ. ಶೇ. 36ರಷ್ಟು ಗುರಿ ಈಡೇರಿದೆ.
ಇದನ್ನೂ ಓದಿ: ಪಿಎಂ ಗ್ರಾಮ್ ಸಡಕ್ ಸ್ಕೀಮ್ ಅಡಿ ಜಮ್ಮು ಕಾಶ್ಮೀರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಯೋಜನೆಗಳು ಪೂರ್ಣ
2020ರ ಏಪ್ರಿಲ್ನಲ್ಲಿ ಪಿಎಲ್ಐ ಸ್ಕೀಮ್ ಅನ್ನು ಆರಂಭಿಸಲಾಯಿತು. ಮೊದಲಿಗೆ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ಗೆ ಮಾತ್ರ ಇದು ಸೀಮಿತವಾಗಿತ್ತು. 2020ರ ಕೊನೆಯಲ್ಲಿ ಅದನ್ನು 10 ಸೆಕ್ಟರ್ಗೆ ವಿಸ್ತರಿಸಲಾಗಿದೆ. ಈಗ ಒಟ್ಟು 14 ವಲಯಗಳಿಗೆ ಪಿಎಲ್ಐ ಸ್ಕೀಮ್ ಅನ್ನು ವ್ಯಾಪಿಸಲಾಗಿದೆ. ಈ ಪೈಕಿ ಮೊಬೈಲ್ ಫೋನ್, ಆಹಾರ ಸಂಸ್ಕರಣೆ ಮತ್ತು ಔಷಧ ತಯಾರಿಕೆಯ ಉದ್ಯಮಗಳಲ್ಲಿ ಪಿಎಲ್ಐ ಸ್ಕೀಮ್ ಉತ್ತಮ ಪರಿಣಾಮ ಬೀರಿದೆ. ಶೇ. 75ರಷ್ಟು ಉದ್ಯೋಗಸೃಷ್ಟಿ ಈ ಮೂರು ಕ್ಷೇತ್ರಗಳಲ್ಲೇ ಆಗಿರುವುದು ಗಮನಾರ್ಹ.
ಫೂಡ್ ಪ್ರೋಸಸಿಂಗ್ ಅಥವಾ ಆಹಾರ ಸಂಸ್ಕರಣಾ ವಲಯದಲ್ಲಿ 2026-27ರ ವೇಳೆಗೆ 2.5 ಲಕ್ಷ ನೇರ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಇಡಲಾಗಿತ್ತು. 2024ರ ಜೂನ್ ವೇಳೆಯೊಳಗೆಯೇ 2.45 ಲಕ್ಷ ಉದ್ಯೋಗಗಳ ಸೃಷ್ಟಿಯಾಗಿದೆ.
ಇದನ್ನೂ ಓದಿ: 2024ರ ಏಪ್ರಿಲ್ನಿಂದ ಸೆಪ್ಟೆಂಬರ್ನಲ್ಲಿ ಭಾರತಕ್ಕೆ ಬಂತು 29.79 ಬಿಲಿಯನ್ ಡಾಲರ್ ಎಫ್ಡಿಐ; ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?
ಏನಿದು ಪಿಎಲ್ಐ ಸ್ಕೀಮ್?
ದೇಶದಲ್ಲಿ ಮ್ಯಾನುಫ್ಯಾಕ್ಚರಿಂಗ್ ಕಾರ್ಯಗಳನ್ನು ಹೆಚ್ಚಿಸಲು ಸರ್ಕಾರ ರೂಪಿಸಿರುವ ಪ್ರೋತ್ಸಾಹಕ ಸ್ಕೀಮ್. ಇದು ಉತ್ಪಾದಾನಾ ಪ್ರಮಾಣ ಆಧಾರಿತವಾಗಿ ಸರ್ಕಾರದಿಂದ ಇನ್ಸೆಂಟಿವ್ ನೀಡಲಾಗುವ ಯೋಜನೆ. ಆಯಾ ವಲಯಗಳಲ್ಲಿ ಆಯ್ದ ಕಂಪನಿಗಳಿಗೆ ಈ ಅವಕಾಶ ನೀಡಲಾಗುತ್ತದೆ. ಉತ್ಪಾದನೆ ಹೆಚ್ಚಿದಷ್ಟೂ ಪ್ರೋತ್ಸಾಹಕಗಳ ಹೆಚ್ಚಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ