ಪಿಎಂ ಗ್ರಾಮ್ ಸಡಕ್ ಸ್ಕೀಮ್ ಅಡಿ ಜಮ್ಮು ಕಾಶ್ಮೀರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಯೋಜನೆಗಳು ಪೂರ್ಣ
PMGSY Scheme in Jammu and Kashmir: ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನಾ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಎರಡು ದಶಕಗಳಲ್ಲಿ 3,500 ಸಮೀಪದಷ್ಟು ಪ್ರಾಜೆಕ್ಟ್ಗಳು ಪೂರ್ಣಗೊಂಡಿವೆ. 2001ರಲ್ಲಿ ಆರಂಭವಾದ ಈ ಯೋಜನೆಯ ಅಡಿಯಲ್ಲಿ 3,742 ಪ್ರಾಜೆಕ್ಟ್ಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳ ಪೈಕಿ 3,429 ಪ್ರಾಜೆಕ್ಟ್ಗಳು ಪೂರ್ಣಗೊಂಡಿವೆ. ಇವುಗಳಿಗೆ ಒಟ್ಟಾರೆ ವೆಚ್ಚ 12,000 ಕೋಟಿ ರೂಗಿಂತ ತುಸು ಹೆಚ್ಚಿದೆ.
ನವದೆಹಲಿ, ಡಿಸೆಂಬರ್ 3: ಗ್ರಾಮೀಣ ಭಾಗಗಳಿಗೆ ಸಂಪರ್ಕತೆ ಕಲ್ಪಿಸುವ ಯೋಜನೆಗಳಿಗೆ ಒತ್ತು ಕೊಡುವ ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆ (ಪಿಎಂಜಿಎಸ್ವೈ) ಅಡಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ಅದ್ವಿತೀಯ ಕಾರ್ಯಗಳು ನಡೆದಿವೆ. ಈ ಸ್ಕೀಮ್ ಬಳಸಿಕೊಂಡು ಕಳೆದ ಎರಡು ದಶಕಗಳಲ್ಲಿ ಕಣಿವೆ ರಾಜ್ಯದಲ್ಲಿ 3,500 ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಮಿತ್ ಶುಕ್ಲಾ ನೇತೃತ್ವದಲ್ಲಿ ನಡೆದ ಪರಾಮರ್ಶೆ ಸಭೆಯಲ್ಲಿ ಅಧಿಕಾರಿಗಳು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಕಳೆದ ಎರಡು ದಶಕದಲ್ಲಿ ಪೂರ್ಣಗೊಂಡಿರುವ 3,500 ಯೋಜನೆಗಳಲ್ಲಿ 217 ಸೇತುವೆಗಳೂ ಒಳಗೊಂಡಿವೆ. ಪಿಎಂಜಿಎಸ್ವೈ ಅಡಿಯ ಯೋಜನೆಗಳನ್ನು ನಿಗದಿತ ವೇಳೆಗೆ ಪೂರ್ಣಗೊಳಿಸುವುದರ ಜೊತೆಜೊತೆಗೆ ಗುಣಮಟ್ಟದ ಕಾಮಗಾರಿಯನ್ನೂ ಕಾಯ್ದುಕೊಳ್ಳುವ ಕೆಲಸ ಎಷ್ಟು ಮುಖ್ಯ ಎಂಬುದನ್ನು ಅಧಿಕಾರಿಗಳು ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ: 2024ರ ಏಪ್ರಿಲ್ನಿಂದ ಸೆಪ್ಟೆಂಬರ್ನಲ್ಲಿ ಭಾರತಕ್ಕೆ ಬಂತು 29.79 ಬಿಲಿಯನ್ ಡಾಲರ್ ಎಫ್ಡಿಐ; ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?
2001-02ರ ವರ್ಷದಲ್ಲಿ ಪಿಎಂ ಗ್ರಾಮ್ ಸಡಕ್ ಯೋಜನೆಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಆರಂಭಿಸಲಾಯಿತು. 250ಕ್ಕೂ ಹೆಚ್ಚು ಜನಸಂಖ್ಯೆ ಇರುವ (2001ರ ಸೆನ್ಸಸ್ ಪ್ರಕಾರ) ಗ್ರಾಮಗಳಲ್ಲಿ ಉತ್ಕೃಷ್ಟ ಗುಣಮಟ್ಟದ ಮತ್ತು ಎಲ್ಲಾ ಹವಾಮಾನಗಳನ್ನೂ ತಾಳಿಕೊಳ್ಳಬಲ್ಲಂತಹ ರಸ್ತೆ ಇತ್ಯಾದಿ ಸಂಪರ್ಕವನ್ನು ಒದಗಿಸುವ ಗುರಿ ಈ ಯೋಜನೆ ಮೂಲಕ ಇಡಲಾಗಿತ್ತು.
ಈಗ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಕಾಶ್ಮೀರದಲ್ಲಿ ಪಿಎಂ ಜಿಎಸ್ವೈ ಸ್ಕೀಮ್ ಅಡಿಯಲ್ಲಿ ಇಲ್ಲಿಯವರೆಗೆ 3,742 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 20,801 ಕಿಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಅಂಗೀಕರಿಸಲಾಗಿದೆ. ಇದರಲ್ಲಿ 305 ಸೇತುವೆಗಳೂ ಒಳಗೊಂಡಿವೆ. ಈ ಪೈಕಿ 3,429 ಯೋಜನೆಗಳು ಪೂರ್ಣಗೊಂಡಿವೆ. ಇದರಲ್ಲಿ 217 ಸೇತುವೆಗಳೂ ಸೇರಿವೆ. ಈ ಯೋಜನೆಗಳ ಒಟ್ಟಾರೆ ವೆಚ್ಚ 12,650 ಕೋಟಿ ರೂ ಎನ್ನಲಾಗಿದೆ.
ಇದನ್ನೂ ಓದಿ: ನವೆಂಬರ್ನಲ್ಲಿ ಭಾರತದಲ್ಲಿ ಕಲ್ಲಿದ್ದಲು ಉತ್ಪಾದನೆ 90.62 ಮಿಲಿಯನ್ ಟನ್; ಶೇ. 7.2ರಷ್ಟು ಉತ್ಪಾದನೆ ಹೆಚ್ಚಳ
ಕುತೂಹಲ ಎಂದರೆ ಪಿಎಂ ಗ್ರಾಮ್ ಸಡಕ್ ಯೋಜನೆ ಜಮ್ಮು ಕಾಶ್ಮೀರದಲ್ಲಿ ಪುಷ್ಟಿ ಪಡೆದದ್ದು ಕಳೆದ ಐದು ವರ್ಷದಲ್ಲೇ. ಈ ಯೋಜನೆಯ ಕಾಮಗಾರಿಯನ್ನು ಚುರುಕಾಗಿ ನಡೆಸಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಸರ್ಕಾರ ಮಾಡಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ