ಮೈಸೂರು: ಎಟಿಎಂ ಮಷಿನ್ಗೆ ಹಣ ತುಂಬದೆ ಲಕ್ಷಾಂತರ ರೂ ವಂಚನೆ, ಆಡಿಟ್ ವೇಳೆ ಬಯಲು
ಕರ್ನಾಟಕದಲ್ಲಿ ಸಾಲುಸಾಲು ದರೋಡೆಯಾಗುತ್ತಿವೆ. ಬ್ಯಾಂಕ್‌ಗಳನ್ನೇ ದರೋಡೆಕೋರರು ಟಾರ್ಗೆಟ್ ಮಾಡುತ್ತಿದಾರೆ. ಬೀದರ್, ಮಂಗಳೂರು ಮತ್ತು ವಿಜಯಪುರದಲ್ಲಿ ನಡೆದ ದರೋಡೆಗಳಿಗೆ ಇಡೀ ರಾಜ್ಯವೇ ಬೆಚ್ಚಿಬಿದ್ದಿದೆ. ಈ ಮಧ್ಯೆ ಮೈಸೂರಿನಲ್ಲಿ ಒಂದು ಘಟನೆ ನಡೆದಿದೆ. ATMಗೆ ಹಣ ತುಂಬುವ ಉದ್ಯೋಗಿಯೇ 5.8 ಲಕ್ಷ ರೂ. ಕಳವು ಮಾಡಿರುವಂತಹ ಘಟನೆ ನಡೆದಿದೆ.
ಮೈಸೂರು, ಜನವರಿ 18: ಒಂದು ಕಡೆ ರಾಜ್ಯದಲ್ಲಿ ದರೋಡೆ, ಕಳ್ಳತನ ಸುಲಿಗೆ ಪ್ರಕರಣಗಳು ಪೊಲೀಸರ ನಿದ್ದೆಗೆಡಿಸಿದೆ. ಈ ನಡುವೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (mysuru) ಬೇಲಿಯೇ ಎದ್ದು ಹೊಲ ಮೇದಂತೆ ಎನ್ನುವಂತೆ ಎಟಿಎಂಗೆ ಹಣ ತುಂಬುವ ಕೆಲಸ ಮಾಡುತ್ತಿದ್ದವನೇ ಲಕ್ಷಾಂತರ ರೂಪಾಯಿ ಹಣವನ್ನ ದೋಚಿರುವಂತಹ ಘಟನೆ ನಡೆದಿದೆ.
ಆಡಿಟ್ ವೇಳೆ ಕಳ್ಳಾಟ ಬಯಲು
ಎಟಿಎಂಗೆ ತುಂಬು ಅಂತ ಕೊಟ್ಟ ಹಣವನ್ನು ಅಕ್ಷಯ್ ಎಂಬಾತ ಲಪಟಾಯಿಸಿ ಅದರಿಂದ ಚಿನ್ನಾಭರಣ ಖರೀದಿಸಿದ್ದಾನೆ. ಅಂದಹಾಗೆ ಅಕ್ಷಯ್ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ತುರಗನೂರು ಗ್ರಾಮದವನು. ಕಳೆದ ಮೂರು ತಿಂಗಳಿನಿಂದ ಟಿಎಲ್ಎಂಟರ್ ಪ್ರೈಸಸ್‌ನಲ್ಲಿ ಕೆಲಸ ಮಾಡುತ್ತಿದ್ದ. ಬ್ಯಾಂಕ್ ನ ಎಟಿಎಂ ಗಳಿಗೆ ಹಣ ತುಂಬುವುದು ಅಕ್ಷಯ್ನ ಕೆಲಸ. ತನಗೆ ವಹಿಸಿದ ಕೆಲಸವನ್ನ ಅಕ್ಷಯ್ ಸಮರ್ಪಕವಾಗಿ ಮಾಡುತ್ತಿದ್ದ. ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಸಂಸ್ಥೆ ಆಡಿಟ್ ಮಾಡಿಸಿದಾಗ ಅಕ್ಷಯ್ ಬಂಡವಾಳ ಬಯಲಾಗಿದೆ.
ಇದನ್ನು ಓದಿ: ಬೀದರ್ ಶೂಟೌಟ್ ಆರೋಪಿಗಳಿಗಾಗಿ ತೀವ್ರ ಶೋಧ: ದರೋಡೆಕೋರರು ಹೈದರಾಬಾದ್ನಲ್ಲೇ ಇರುವ ಶಂಕೆ
ಆಡಿಟ್ ವೇಳೆ ಸುಮಾರು 5 ಲಕ್ಷಕ್ಕೂ ಹೆಚ್ಚು ಹಣದ ವ್ಯತ್ಯಾಸ ಬಂದಿದೆ. ಈ ಬಗ್ಗೆ ಪರಿಶೀಲನೆ ಮಾಡಿದಾಗ ಅಕ್ಷಯ್ ಗದ್ದಿಗೆ ಗ್ರಾಮದ ಬಳಿಯ ಎಟಿಎಂಗೆ ಹಣ ಹಾಕದೆ 5 ಲಕ್ಷದ 80 ಸಾವಿರ ರೂ ಹಣವನ್ನು ತಾನೇ ತೆಗೆದುಕೊಂಡು ಹೋಗಿದ್ದು ಗೊತ್ತಾಗಿದೆ. ಆತ ಹಣ ತೆಗೆದುಕೊಂಡು ಹೋದ ವಿಡಿಯೋ ಎಟಿಎಂ ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಕೃತ್ಯಕ್ಕೆ ಆತನ ಪರಿಚಯದ ತೇಜಸ್ವಿನಿ ಎಂಬಾಕೆಯ ಕುಮ್ಮಕ್ಕು ಸಹ ಇದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಇದಕ್ಕೆ ಪೂರಕವೆಂಬಂತೆ ಇಬ್ಬರು ಸೇರಿ ಈ ಹಣದಿಂದ ಚಿನ್ನ ಖರೀದಿಸಿದ್ದಾರೆ. ಚಿನ್ನದ ಅಂಗಡಿಯಲ್ಲಿ ಚಿನ್ನ ಖರೀದಿಸಿರುವ ದೃಶ್ಯ ಸಹ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಹಿನ್ನೆಲೆ ಇಬ್ಬರ ವಿರುದ್ದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಎಫ್ಐಆರ್ ದಾಖಲು
ಯಾವಾಗ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಬೆನ್ನು ಹತ್ತಿದರೂ ಅಕ್ಷಯ್ ತಲೆಮರೆಸಿಕೊಂಡಿದ್ದ. ನಿನ್ನೆ ರಾತ್ರಿ ಅಕ್ಷಯ್ ತನ್ನ ತುರುಗನೂರು ಗ್ರಾಮದ ಪಕ್ಕದಲ್ಲಿ ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿರುವ ವಿಚಾರ ಪೊಲೀಸರಿಗೆ ಗೊತ್ತಾಗಿದೆ. ಯಾವಾಗ ಈ ವಿಚಾರ ಗೊತ್ತಾಯ್ತು ಪೊಲೀಸರು ತಕ್ಷಣ ಅಲರ್ಟ್ ಆಗಿದ್ದಾರೆ. ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ ಪೊಲೀಸರು ಅಕ್ಷಯ್ ನನ್ನ ಬಂಧಿಸಲಾಗಿದೆ. ಈ ವೇಳೆ ಅಲ್ಲಿ ಹೈಡ್ರಾಮವೇ ನಡೆದಿದೆ.
ಇದನ್ನೂ ಓದಿ: ಬೀದರ್: ಫೈರಿಂಗ್ ಮಾಡಿ ಎಟಿಎಂ ಹಣದ ಟ್ರಂಕ್ ಹೊತ್ತೊಯ್ದ ವಿಡಿಯೋ ನೋಡಿ
ಅಕ್ಷಯ್ ನನ್ನು ವಶಕ್ಕೆ ಪಡೆಯಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಅಕ್ಷಯ್ ಹಾಗೂ ಅವರ ಸ್ನೇಹಿತರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಕೊನೆಗೂ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದು ಅಕ್ಷಯನನ್ನು ಬಂಧಿಸಿದ್ದಾರೆ.
ಇನ್ನು ಪೊಲೀಸರು ಅಕ್ಷಯ್ ನನ್ನ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಇದೇ ರೀತಿಯ ಸಾಕಷ್ಟು ಕೃತ್ಯವೆಸಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮತ್ತಷ್ಟು ಕೃತ್ಯಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಒಟ್ಟಾರೆ ಬೇಲಿಯೇ ಎದ್ದು ಹೊಲ ಮೇದಂತೆ ಇಲ್ಲಿ ಅಕ್ಷಯ್ ಎಟಿಎಂಗೆ ತುಂಬ ಬೇಕಾದ ಹಣವನ್ನು ತಾನೇ ಲಪಟಾಯಿಸಿದ್ದು ಮಾತ್ರ ದುರಂತವೇ ಸರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:59 pm, Sat, 18 January 25