ನವೆಂಬರ್ನಲ್ಲಿ ಭಾರತದಲ್ಲಿ ಕಲ್ಲಿದ್ದಲು ಉತ್ಪಾದನೆ 90.62 ಮಿಲಿಯನ್ ಟನ್; ಶೇ. 7.2ರಷ್ಟು ಉತ್ಪಾದನೆ ಹೆಚ್ಚಳ
Coal production in 2024 November: 2024ರ ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ಉತ್ಪಾದನೆಯಾದ ಕಲ್ಲಿದ್ದಲು ಪ್ರಮಾಣ 90 ಮಿಲಿಯನ್ ಟನ್ ಮುಟ್ಟಿದೆ. ಕಳೆದ ವರ್ಷದ ನವೆಂಬರ್ಗೆ ಹೋಲಿಸಿದರೆ ಈ ಬಾರಿ ಕಲ್ಲಿದ್ದಲು ಉತ್ಪಾದನೆಯಲ್ಲಿ ಶೇ 7.2ರಷ್ಟು ಏರಿಕೆ ಆಗಿದೆ. ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ 628.03 ಎಂಟಿಗಳಷ್ಟು ಕಲ್ಲಿದ್ದಲು ಉತ್ಪಾದನೆ ಆಗಿರುವುದು ಸರ್ಕಾರದಿಂದ ಬಿಡುಗಡೆಯಾದ ಮಾಹಿತಿಯಿಂದ ತಿಳಿದುಬಂದಿದೆ.
ನವದೆಹಲಿ, ಡಿಸೆಂಬರ್ 3: ನವೆಂಬರ್ ತಿಂಗಳಲ್ಲಿ ಭಾರತದಲ್ಲಿ 90.62 ಮಿಲಿಯನ್ ಟನ್ಗಳಷ್ಟು ಕಲ್ಲಿದ್ದಲು ಉತ್ಪಾದನೆ ಆಗಿರುವುದು ತಿಳಿದುಬಂದಿದೆ. ಕಳೆದ ವರ್ಷದ ನವೆಂಬರ್ನಲ್ಲಿ 84.52 ಎಂಟಿಗಳಷ್ಟು ಕಲ್ಲಿದ್ದಲು ಉತ್ಪಾದನೆ ಆಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿಯ ಕಲ್ಲಿದ್ದಲು ಉತ್ಪಾದನೆಯ ಪ್ರಮಾಣ ಶೇ. 7.2ರಷ್ಟು ಏರಿಕೆ ಆಗಿದೆ. ಇದು ಕಲ್ಲಿದ್ದಲು ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬಂದಿರುವ ಮಾಹಿತಿಯಾಗಿದೆ.
2024-25ರ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ, ಅಂದರೆ ಏಪ್ರಿಲ್ನಿಂದ ನವೆಂಬರ್ವರೆಗೆ ಒಟ್ಟಾರೆ ಕಲ್ಲಿದ್ದಲು ಉತ್ಪಾದನೆಯ ಪ್ರಮಾಣ 628.03 ಮಿಲಿಯನ್ ಟನ್ನಷ್ಟಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಆಗಿದ್ದ ಕಲ್ಲಿದ್ದಲು ಉತ್ಪಾದನೆ 591.32 ಎಂಟಿಗಳಷ್ಟು ಎನ್ನಲಾಗಿದೆ.
ಇದನ್ನೂ ಓದಿ: ಪಂಚಾಯತಿ ಸ್ತರದಲ್ಲಿ ಪರಿವರ್ತನೆ ತರುತ್ತಿರುವ ಕೃತಕ ಬುದ್ಧಿಮತ್ತೆಯ ಭಾಷಿಣಿ ಆ್ಯಪ್
ವಿದ್ಯುತ್ ತಯಾರಕಾ ಘಟಕಗಳಿಗೆ ವಿಲೇವಾರಿಯಾದ ಕಲ್ಲಿದ್ದಲು ಪ್ರಮಾಣ ಶೇ. 3.85ರಷ್ಟು ಹೆಚ್ಚಳವಾಗಿದೆ. 2023ರ ನವೆಂಬರ್ನಲ್ಲಿ 82.07 ಎಂಟಿ ಕಲ್ಲಿದ್ದಲನ್ನು ವಿಲೇವಾರಿ ಮಾಡಲಾಗಿತ್ತು. 2024ರ ನವೆಂಬರ್ನಲ್ಲಿ 85.22 ಎಂಟಿಗಳಷ್ಟು ಕಲ್ಲಿದ್ದಲನ್ನು ವಿದ್ಯುತ್ ಘಟಕಗಳಿಗೆ ಕಳುಹಿಸಲಾಗಿದೆ. ಕ್ಯಾಪ್ಟಿವ್ ಮತ್ತಿತರ ಸಂಸ್ಥೆಗಳಿಗೆ ಕಳುಹಿಸಲಾದ ಕಲ್ಲಿದ್ದಲು ಪ್ರಮಾಣದಲ್ಲಿ ಶೇ. 25.73ರಷ್ಟು ಏರಿಕೆ ಆಗಿದೆ.
2024-25ರ ಹಣಕಾಸು ವರ್ಷದಲ್ಲಿ ಏಪ್ರಿಲ್ನಿಂದ ನವೆಂಬರ್ವರೆಗೆ ವಿಲೇವಾರಿಯಾದ ಒಟ್ಟಾರೆ ಕಲ್ಲಿದ್ದಲು ಪ್ರಮಾಣ 657.75 ಎಂಟಿಗಳಷ್ಟು. ಕಳೆದ ವರ್ಷ 623.78 ಎಂಟಿಗಳಷ್ಟು ಕಲ್ಲಿದ್ದಲು ವಿಲೇವಾರಿಯಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇ. 5.45ರಷ್ಟು ಏರಿಕೆ ಆಗಿದೆ.
ಇದನ್ನೂ ಓದಿ: ಇನ್ಫ್ರಾಸ್ಟ್ರಕ್ಚರ್ ಯೋಜನೆಗಳ ಪರಿಣಾಮಕಾರಿ ಜಾರಿ: ಪ್ರಧಾನಿ ಮೋದಿ, ‘ಪ್ರಗತಿ’ ಪರಿಣಾಮ ಗುರುತಿಸಿದ ಆಕ್ಸ್ಫರ್ಡ್ ಅಧ್ಯಯನ
ಕಲ್ಲಿದ್ದಲು ಉತ್ಪಾದನೆ ಮತ್ತು ವಿಲೇವಾರಿಯಲ್ಲಿ ಆಗಿರುವ ಹೆಚ್ಚಳವು ದೇಶದ ಇಂಧನ ಅವಶ್ಯಕತೆ ಪೂರೈಕೆ ಆಗುತ್ತಿರುವುದನ್ನು ಸೂಚಿಸುತ್ತದೆ. ಕಲ್ಲಿದ್ದಲು ಲಭ್ಯತೆ ಮತ್ತು ವಿತರಣೆ ಸಮರ್ಪಕವಾಗಿ ಆಗುತ್ತಿರುವುದಕ್ಕೆ ಇದು ಸಾಕ್ಷ್ಯವಾಗಿದೆ ಎಂದು ಕಲ್ಲಿದ್ದಲು ಸಚಿವಾಲಯ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ