ಭಾರತೀಯ ನೌಕಾಪಡೆ ಬತ್ತಳಿಕೆಗೆ ಸೇರಿದ ಶಕ್ತಿಶಾಲಿ ‘ದೃಷ್ಟಿ’ ಡ್ರೋನ್; ಅದಾನಿ ಕಂಪನಿಯಿಂದ ಎರಡನೇ ಯುಎವಿ ಸರಬರಾಜು
Drishti-10 starliner, Indian version of Israeli Hermes-900 UAV: ಇಸ್ರೇಲ್ನ ಎಲ್ಬಿಟ್ ಸಿಸ್ಟಮ್ಸ್ ಸಹಯೋಗದಲ್ಲಿ ಅದಾನಿ ಡಿಫೆನ್ಸ್ ಅಂಡ್ ಏರೋಸ್ಪೇಸ್ ಕಂಪನಿ ತಯಾರಿಸುತ್ತಿರುವ ದೃಷ್ಟಿ-10 ಡ್ರೋನ್ ಅನ್ನು ಭಾರತೀಯ ನೌಕಾಪಡೆ ಪಡೆದಿದೆ. ಅದಾನಿ ಕಂಪನಿಯಿಂದ ನೌಕಾಪಡೆಗೆ ನೀಡಲಾಗಿರುವ ಎರಡನೇ ಡ್ರೋನ್ ಇದು. ಎಲ್ಬಿಟ್ ಸಿಸ್ಟಮ್ಸ್ ತಯಾರಿಸಿರುವ ಹರ್ಮಿಸ್-900 ಡ್ರೋನ್ನ ಪರಿಷ್ಕೃತ ಆವೃತ್ತಿ ದೃಷ್ಟಿ-10 ಸ್ಟಾರ್ಲೈನರ್ ಡ್ರೋನ್.
ನವದೆಹಲಿ, ಡಿಸೆಂಬರ್ 4: ಅದಾನಿ ಡಿಫೆನ್ಸ್ ಅಂಡ್ ಏರೋಸ್ಪೇಸ್ ಕಂಪನಿ ನಿರ್ಮಿಸಿರುವ ದೃಷ್ಟಿ-10 ಸ್ಟಾರ್ಲೈನರ್ ಡ್ರೋನ್ ಅನ್ನು ಭಾರತೀಯ ನೌಕಾಪಡೆ ಪಡೆದುಕೊಂಡಿದೆ. ಇದು ಅದಾನಿಯಿಂದ ಸರಬರಾಜು ಆದ ಎರಡನೇ ಡ್ರೋನ್ ಆಗಿದೆ. ಸಮುದ್ರದಲ್ಲಿ ಸಾಗುವ ಹಡಗುಗಳ ಮೇಲೆ ಕಣ್ಣಿಡಲು ಮತ್ತು ಸಾಗರ ವಲಯದ ಭದ್ರತೆಗೆ ಸಹಾಯವಾಗಲು ಈ ಡ್ರೋನ್ಗಳನ್ನು ಬಳಸಲಾಗುತ್ತದೆ. 2024ರ ಜನವರಿಯಲ್ಲಿ ಮೊದಲ ದೃಷ್ಟಿ-10 ಸ್ಟಾರ್ಲೈನರ್ ಡ್ರೋನ್ ಅನ್ನು ನೌಕಾಪಡೆಗೆ ನೀಡಲಾಗಿತ್ತು. ಭಾರತೀಯ ಸೇನೆಯೂ ಕೂಡ ಈ ಡ್ರೋನ್ಗಳನ್ನು ಪಡೆಯುತ್ತಿದೆ.
ಇಸ್ರೇಲ್ನ ಎಲ್ಬಿಟ್ ಸಿಸ್ಟಮ್ಸ್ ಕಂಪನಿಯ ಸಹಯೋಗದಲ್ಲಿ ಅದಾನಿ ಡಿಫೆನ್ಸ್ ಅಂಡ್ ಏರೋಸ್ಪೇಸ್ ಕಂಪನಿ ದೃಷ್ಟಿ-10 ಸ್ಟಾರ್ಲೈನರ್ ಡ್ರೋನ್ ಅನ್ನು ತಯಾರಿಸುತ್ತಿದೆ. ಇದು ಮೂಲತಃ ಎಲ್ಬಿಟ್ ಸಿಸ್ಟಮ್ಸ್ನ ಹರ್ಮಿಸ್-900 ಎನ್ನುವ ಡ್ರೋನ್ನ ಭಾರತೀಯ ಆವೃತ್ತಿಯಾಗಿದೆ.
ಇದನ್ನೂ ಓದಿ: ಮನೆಮನೆಗೆ ಸೌರಶಕ್ತಿ; ಪಿಎಂ ಸೂರ್ಯಘರ್ ಯೋಜನೆಯಲ್ಲಿ 1.45 ಲಕ್ಷ ನೊಂದಣಿ; ಅರ್ಜಿ ಸಲ್ಲಿಸುವ ಕ್ರಮಗಳ ವಿವರ
ಹರ್ಮಿಸ್-900 ವಿಶ್ವದ ಬಲಶಾಲಿ ಡ್ರೋನ್ಗಳಲ್ಲಿ ಒಂದೆನಿಸಿದೆ. ಎಂಕ್ಯೂ-9 ರೀಪರ್, ಗ್ಲೋಬ್ ಹಾಕ್, ಬಾಯ್ರಾಕ್ತರ್ ಟಿಬಿ2, ವಿಂಗ್ ಲೂಂಗ್-2 ನಂತರ ಹರ್ಮಿಸ್-900 ಪ್ರಬಲ ಡ್ರೋನ್ ಎಂದು ಗುರುತಿಸಲಾಗಿದೆ. ಇದು 30,000 ಅಡಿ ಎತ್ತರದವರೆಗೂ ಹೋಗಬಲ್ಲುದು. 30 ಗಂಟೆ ನಿರಂತರವಾಗಿ ಚಾಲನೆಯಲ್ಲಿರಬಹುದು. ಹತ್ತಿರ ಹತ್ತಿರ ಒಂದು ಟನ್ ತೂಕದ ಈ ಡ್ರೋನ್ ಸುಮಾರು 300 ಕಿಲೋ ಪೇಲೋಡ್ ಹೊತ್ತು ಹಾರಾಟ ಮಾಡಬಲ್ಲುದು.
ಸರಹದ್ದುಗಳನ್ನು ಕಾಯಲು, ಶತ್ರುಗಳ ಮೇಲೆ ನಿಗಾ ಇಡಲು, ಭದ್ರತೆ ಹೆಚ್ಚಿಸಲು ಈ ಡ್ರೋನ್ ಬಹಳ ಉಪಯುಕ್ತವಾಗಿದೆ. ಇದೇ ಡ್ರೋನ್ ಅನ್ನು ಇಸ್ರೇಲೀ ಕಂಪನಿಯ ಸಹಯೋಗದಲ್ಲಿ ಅದಾನಿ ಡಿಫೆನ್ಸ್ ಅಂಡ್ ಏರೋಸ್ಪೇಸ್ ಭಾರತದಲ್ಲಿ ತಯಾರಿಸುತ್ತಿದೆ. ಹೈದರಾಬಾದ್ ಫ್ಯಾಕ್ಟರಿಯಲ್ಲಿ ಇದರ ತಯಾರಿಕೆ ನಡೆಯುತ್ತಿದೆ.
ಇದನ್ನೂ ಓದಿ: ಪಿಎಲ್ಐ ಸ್ಕೀಮ್ನಿಂದ 5.84 ಲಕ್ಷ ನೇರ ಉದ್ಯೋಗಗಳ ಸೃಷ್ಟಿ; ಸ್ಮಾರ್ಟ್ಫೋನ್, ಫಾರ್ಮಾ, ಆಹಾರ ಕ್ಷೇತ್ರಗಳಲ್ಲಿ ಹೆಚ್ಚು ಉದ್ಯೋಗ
ಜೂನ್ ತಿಂಗಳಲ್ಲಿ ಭಾರತೀಯ ಸೇನೆಯು ದೃಷ್ಟಿ-10 ಡ್ರೋನ್ ಅನ್ನು ಪಡೆದಿದ್ದು, ಅದನ್ನು ಭಾರತ ಮತ್ತು ಪಾಕಿಸ್ತಾನದ ಗಡಿ ಉದ್ದಗಲಕ್ಕೂ ನಿಗಾ ಇಡಲು ಬಳಕೆ ಮಾಡಲಾಗುತ್ತಿದೆ. ಇದೇ ರೀತಿ ಮತ್ತೊಂದು ಡ್ರೋನ್ ಅನ್ನು ಸೇನೆಯು ಪಡೆಯುತ್ತಿದೆ. ಭಾರತದ ಮಿಲಿಟರಿಗೆ ಒಟ್ಟು ಇಂಥ ನಾಲ್ಕು ಡ್ರೋನ್ಗಳು ಸಿಕ್ಕಂತಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ