ಭಾರತದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಶೇ. 66ರಷ್ಟು ಉದ್ಯಮಿಗಳಿಂದ ಲಂಚ: ಸಮೀಕ್ಷಾ ವರದಿ

|

Updated on: Dec 09, 2024 | 11:19 AM

LocalCircles survey report on bribery in India: ಸರ್ಕಾರಿ ಅಧಿಕಾರಿಗಳಿಗೆ ಕಳೆದ 12 ತಿಂಗಳಲ್ಲಿ ಲಂಚ ನೀಡಿರುವುದಾಗಿ ಶೇ. 66ರಷ್ಟು ಉದ್ಯಮಿಗಳು ಹೇಳಿದ್ದಾರೆ. ಲೋಕಲ್​ಸರ್ಕಲ್ಸ್ ಸಂಸ್ಥೆ ಭಾರತದಾದ್ಯಂತ 159 ಜಿಲ್ಲೆಗಳಲ್ಲಿ 18,000 ಜನರನ್ನು ಸಮೀಕ್ಷೆ ಮಾಡಿದೆ. ಲಂಚ ನೀಡಿರುವುದನ್ನು ಒಪ್ಪಿಕೊಂಡಿರುವವರ ಪೈಕಿ ಶೇ. 54 ಮಂದಿ, ತಾವು ಬಲವಂತವಾಗಿ ಲಂಚ ನೀಡಬೇಕಾಗಿ ಬಂತು ಎಂದಿದ್ದಾರೆ.

ಭಾರತದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಶೇ. 66ರಷ್ಟು ಉದ್ಯಮಿಗಳಿಂದ ಲಂಚ: ಸಮೀಕ್ಷಾ ವರದಿ
ಲಂಚ
Follow us on

ನವದೆಹಲಿ, ಡಿಸೆಂಬರ್ 9: ಗೌತಮ್ ಅದಾನಿ ಭಾರತದ ಸರ್ಕಾರಿ ಅಧಿಕಾರಿಗಳಿಗೆ ಲಂಚ ಕೊಟ್ಟರೆಂಬ ಆರೋಪದ ಮೇಲೆ ಅಮೆರಿಕದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿರುವುದು ಗೊತ್ತಿರಬಹುದು. ಭಾರತದಲ್ಲಿ ಲಂಚಕೋರತನ ಎಷ್ಟು ತಾಂಡವವಾಡುತ್ತದೆ ಎಂಬುದು ಸ್ಥಳೀಯರಿಗೆ ಗೊತ್ತಿರುವ ಸಂಗತಿ. ಇದಕ್ಕೆ ಇಂಬು ನೀಡುವಂತೆ ಲೋಕಲ್ ಸರ್ಕಲ್ಸ್ ಎನ್ನುವ ಆನ್​ಲೈನ್ ಪ್ಲಾಟ್​ಫಾರ್ಮ್​ನ ವರದಿಯೊಂದು ಭಾರತದಲ್ಲಿ ಲಂಚದ ಸಮಸ್ಯೆ ಎಷ್ಟು ಆಳವಾಗಿದೆ ಎಂಬುದನ್ನು ಸಮೀಕ್ಷೆ ಮೂಲಕ ಎತ್ತಿತೋರಿಸಿದೆ. ಕಳೆದ 12 ತಿಂಗಳಲ್ಲಿ ಶೇ. 66ರಷ್ಟು ಭಾರತದ ಉದ್ದಿಮೆಗಳು ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿವೆಯಂತೆ.

ಲೋಕಲ್​ಸರ್ಕಲ್ಸ್ ಭಾರತದಾದ್ಯಂತ 159 ಜಿಲ್ಲೆಗಳಲ್ಲಿ ಮೇ 22ರಿಂದ ನವೆಂಬರ್ 30ರವರೆಗೆ 18,000 ಜನರು ಮತ್ತು ಉದ್ದಿಮೆಗಳನ್ನು ಸಂಪರ್ಕಿಸಿ ಸಮೀಕ್ಷೆ ನಡೆಸಿದೆ. ಸಮೀಕ್ಷೆಗೆ ಸ್ಪಂದಿಸಿದವರ ಪೈಕಿ ಶೇ. 66ರಷ್ಟು ಬಿಸಿನೆಸ್​ಮೆನ್​ಗಳು ಕಳೆದ 12 ತಿಂಗಳಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕನಿಷ್ಠ ಒಂದು ಬಾರಿಯಾದರೂ ಲಂಡ ನೀಡಿದ್ದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಅಗ್ಗದ ವಸತಿ, ಐಷಾರಾಮಿ ಅಪಾರ್ಟ್ಮೆಂಟ್, ಎರಡೂ ಭರ್ಜರಿ ಮಾರಾಟ; ಬೆಂಗಳೂರಿನಲ್ಲೂ ದಾಖಲೆ ಸೇಲ್ಸ್

ಶೇ. 16ರಷ್ಟು ಉದ್ಯಮಿಗಳು ಲಂಚ ನೀಡದೇ ಕೆಲಸ ಮಾಡಿಸಿದ್ದಾಗಿ ಹೇಳಿದ್ದಾರೆ. ಶೇ. 19ರಷ್ಟು ಮಂದಿ ತಮಗೆ ಲಂಚ ನೀಡುವ ಸಂದರ್ಭವೇ ಬರಲಿಲ್ಲ ಎಂದಿದ್ದಾರೆ. ಮಿಕ್ಕಂತೆ ಬೇರೆಲ್ಲರೂ ಕೂಡ ಲಂಚ ನೀಡಿದ್ದಾರೆ. ಕೆಲವರು ಅನಿವಾರ್ಯವಾಗಿ ಲಂಚ ನೀಡಿದರೆ, ಇನ್ನೂ ಕೆಲವರು, ಕೆಲಸ ಬೇಗ ಆಗಲೆಂದು ಲಂಚ ನೀಡಿರುವುದುಂಟು ಎನ್ನುತ್ತದೆ ಈ ಸಮೀಕ್ಷೆ.

‘ಕಳೆದ 12 ತಿಂಗಳಲ್ಲಿ ಲಂಚ ನೀಡಿರುವ ಉದ್ಯಮಿಗಳ ಪೈಕಿ ಶೇ. 54 ಮಂದಿ ಬಲವಂತಕ್ಕೊಳಗಾಗಿ ಲಂಚ ನೀಡಿದ್ದರಂತೆ. ಇನ್ನುಳಿದ ಶೇ. 46 ಜನರು ಕೆಲಸವನ್ನು ಸಲೀಸವಾಗಿ ಮಾಡಿಸಿಕೊಳ್ಳಲು ಲಂಚ ನೀಡಿದ್ದಾರೆ’ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಶೇ. 3.2ಕ್ಕೆ ಇಳಿದ ನಿರುದ್ಯೋಗ ದರ; ಇ-ಶ್ರಮ್ ಪೋರ್ಟಲ್​ನಲ್ಲಿ ಅಸಂಘಟಿತ ವಲಯದ 30 ಕೋಟಿ ಕಾರ್ಮಿಕರ ನೊಂದಣಿ

‘ಸರ್ಕಾರಿ ಕಚೇರಿಗಳಲ್ಲಿ ಉದ್ದಿಮೆಗಳಿಗೆ ಬೇಕಾದ ಕಡತ, ಆರ್ಡರ್, ಪರ್ಮಿಟ್, ಸಪ್ಲಯರ್ ಕ್ವಾಲಿಫಿಕೇಶನ್, ಪೇಮೆಂಟ್ಸ್ ಇತ್ಯಾದಿಯನ್ನು ವಿಲೇವಾರಿ ಮಾಡಲಾಗುತ್ತದೆ. ಲಂಚ ನೀಡಿದರೆ ಮಾತ್ರ ಈ ಕೆಲಸ ಮಾಡಲಾಗುತ್ತದೆ ಎಂದರೆ ಅದು ಸುಲಿಗೆಗೆ ಸಮಾನ. ಬಹಳ ಕಡೆ ಸರ್ಕಾರಿ ಕಾರ್ಯಗಳನ್ನು ಕಂಪ್ಯೂಟರೀಕರಣ ಮಾಡಲಾಗಿದೆ. ಕಚೇರಿಯೊಳಗೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಕ್ಯಾಮೆರಾ ವ್ಯಾಪ್ತಿ ಇಲ್ಲದ ಬೇರೆಡೆ ಲಂಚ ಪಡೆಯಲಾಗುತ್ತದೆ’ ಎಂದು ಲೋಕಲ್​ಸರ್ಕಲ್ಸ್ ಪ್ಲಾಟ್​ಫಾರ್ಮ್​ನಲ್ಲಿ ತಿಳಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ