ಅಗ್ಗದ ವಸತಿ, ಐಷಾರಾಮಿ ಅಪಾರ್ಟ್ಮೆಂಟ್, ಎರಡೂ ಭರ್ಜರಿ ಮಾರಾಟ; ಬೆಂಗಳೂರಿನಲ್ಲೂ ದಾಖಲೆ ಸೇಲ್ಸ್
Indian real estate market: ಭಾರತದ ವಸತಿ ಮಾರುಕಟ್ಟೆ ಮತ್ತು ರಿಯಲ್ ಎಸ್ಟೇಟ್ ಉದ್ಯಮ 2024ರಲ್ಲಿ ಹುಲುಸಾಗಿ ಬೆಳೆಯುತ್ತಿದೆ. ಜೆಎಲ್ಎಲ್ ಪ್ರಕಾರ ಭಾರತದಲ್ಲಿ 2024ರಲ್ಲಿ 5.1 ಲಕ್ಷ ರೂ ಮೌಲ್ಯದ 3 ಲಕ್ಷ ಅಪಾರ್ಟ್ಮೆಂಟ್ಗಳು ಮಾರಾಟವಾಗುವ ನಿರೀಕ್ಷೆ ಇದೆ. ಅಗ್ಗದ ವಸತಿಗೂ ಬಹಳ ಬೇಡಿಕೆ ಇದ್ದು, ಈ ಉದ್ಯಮವು ಶೇ 15ರ ಸಿಎಜಿಆರ್ನಲ್ಲಿ ಬೆಳೆಯುವ ಸಾಧ್ಯತೆ ಇದೆ.
ನವದೆಹಲಿ, ಡಿಸೆಂಬರ್ 8: ಭಾರತದ ವಸತಿ ಮಾರುಕಟ್ಟೆ ಈ ವರ್ಷ ಹೊಸ ಮೈಲಿಗಲ್ಲು ಮುಟ್ಟುವ ಹಾದಿಯಲ್ಲಿದೆ. ಬೆಂಗಳೂರು ಸೇರಿದಂತೆ ಏಳು ಪ್ರಮುಖ ನಗರಗಳಲ್ಲಿ 2024ರಲ್ಲಿ 5.1 ಲಕ್ಷ ರೂ ಮೌಲ್ಯದ ಮನೆಗಳ ಮಾರಾಟವಾಗಬಹುದು ಎನ್ನುವ ಅಂದಾಜಿದೆ. ಜಾಗತಿಕ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಸಂಸ್ಥೆಯಾದ ಜೆಎಲ್ಎಲ್ ಪ್ರಕಾರ ಈ ವರ್ಷ ಭಾರತದಲ್ಲಿ ಒಟ್ಟಾರೆ 485 ಮಿಲಿಯನ್ ಚದರಡಿ ವಿಸ್ತೀರ್ಣದ 3 ಲಕ್ಷ ಮನೆಗಳು ಮಾರಾಟವಾಗುವ ನಿರೀಕ್ಷೆ ಇದೆ. 2023ರಲ್ಲಿ 2.7 ಲಕ್ಷ ಮನೆಗಳ ಮಾರಾಟವಾಗಿ ದಾಖಲೆಯಾಗಿತ್ತು. ಈ ವರ್ಷ ಆ ದಾಖಲೆ ಮುರಿದು, ಹೊಸ ಮೈಲಿಗಲ್ಲು ಸೃಷ್ಟಿಸಬಹುದು.
ಅತಿಹೆಚ್ಚು ಮನೆಗಳ ಮಾರಾಟ ನಡೆಯುತ್ತಿರುವುದು ದೆಹಲಿ ಎನ್ಸಿಆರ್ ಪ್ರದೇಶದಲ್ಲಿ. ಮಾರಾಟವಾಗುವ ಮನೆಗಳ ವಿಸ್ತೀರ್ಣದ ಪ್ರಕಾರ ಅಳೆಯುವುದಾದರೆ ಬೆಂಗಳೂರು ಮೊದಲಿಗೆ ಬರುತ್ತದೆ. ಮುಂಬೈನಲ್ಲಿ ಮನೆಗಳ ಚದರಡಿ ಬೆಲೆ ಹೆಚ್ಚು ದುಬಾರಿಯಾಗಿದೆ.
ಇದನ್ನೂ ಓದಿ: ಕೇಂದ್ರದಿಂದ ‘ಅನ್ನ ಚಕ್ರ’ ಆರಂಭ; ಆಹಾರ ಸಂಸ್ಕರಣಾ ವಲಯಕ್ಕೆ 368 ಮಿಲಿಯನ್ ಡಾಲರ್ ಎಫ್ಡಿಐ
ಅಪಾರ್ಟ್ಮೆಂಟ್ ಸರಾಸರಿ ಬೆಲೆ 1.64 ಕೋಟಿ ರೂ
ಜನವರಿಯಿಂದ ಸೆಪ್ಟೆಂಬರ್ವರೆಗೆ 9 ತಿಂಗಳಲ್ಲಿ ಈಗಾಗಲೇ 3,80,000 ಕೋಟಿ ರೂ ಮೌಲ್ಯದ ಮನೆಗಳು ಅಗ್ರ ಏಳು ನಗರಗಳಲ್ಲಿ ಮಾರಾಟವಾಗಿವೆ. ಇವುಗಳೆಲ್ಲದರ ಸರಾಸರಿ ತೆಗೆದುಕೊಂಡರೆ ಒಂದು ಅಪಾರ್ಟ್ಮೆಂಟ್ ಬೆಲೆ 1.64 ಕೋಟಿ ರೂ ಆಗುತ್ತದೆ.
ಅಗ್ಗದ ಮನೆಗಳಿಗೂ ಸಖತ್ ಬೇಡಿಕೆ….
ಐಷಾರಾಮಿ ಫ್ಲ್ಯಾಟ್ ಮತ್ತು ಅಪಾರ್ಟ್ಮೆಂಟ್ಗಳ ಮಾರಾಟ ಹೊಸ ದಾಖಲೆ ಮಟ್ಟಕ್ಕೆ ಏರುತ್ತಿರುವಂತೆಯೇ, ಅಗ್ಗದ ಮನೆಗಳಿಗೂ ಬೇಡಿಕೆ ಹೆಚ್ಚುತ್ತಿದೆ. ಎಚ್ಡಿಎಫ್ಸಿ ಕ್ಯಾಪಿಟಲ್, ಬ್ರಿಗೇಡ್ ರೀಪ್ ಮತ್ತು ನೈಟ್ ಫ್ರ್ಯಾಂಕ್ ಸಂಸ್ಥೆಗಳು ನಡೆಸಿದ ಅಧ್ಯಯನವೊಂದರ ಪ್ರಕಾರ ಅಗ್ಗದ ವಸತಿಯ ಕ್ಷೇತ್ರ ಮುಂದಿನ ವರ್ಷಗಳಲ್ಲಿ ಶೇ. 15ರ ಸಿಎಜಿಆರ್ ದರದಲ್ಲಿ ಬೆಳವಣಿಗೆ ಹೊಂದಲಿದೆ. 2023ರಲ್ಲಿ ಈ ಕ್ಷೇತ್ರ 6 ಬಿಲಿಯನ್ ಡಾಲರ್ ಗಾತ್ರದ್ದಾಗಿದೆ. 2030ರಲ್ಲಿ ಇದು 16 ಬಿಲಿಯನ್ ಡಾಲರ್ ಗಾತ್ರದ್ದಾಗಲಿದೆ ಎಂದು ಈ ಅಧ್ಯಯನದ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ಇದನ್ನೂ ಓದಿ: ನವೆಂಬರ್ ದ್ವಿತೀಯಾರ್ಧದಲ್ಲಿ ಷೇರು ಮಾರಾಟಕ್ಕಿಂತ ಖರೀದಿ ಹೆಚ್ಚಿಸಿದ ವಿದೇಶೀ ಹೂಡಿಕೆದಾರರು
ಎಲ್ಲಾ ಸ್ತರಗಳ ಜನರಿಗೆ ಅವರ ಕೈಗೆಟುವ ದರದಲ್ಲಿ ವಸತಿಗಳು ಲಭ್ಯ ಇರುವಂತೆ ನೋಡಿಕೊಳ್ಳಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಇದರಿಂದಾಗಿ ಒಟ್ಟಾರೆ ರಿಯಲ್ ಎಸ್ಟೇಟ್ ಮಾರುಕಟ್ಟೆ ಪ್ರಬಲಗೊಳ್ಳುತ್ತಲೇ ಹೋಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ