DA Hike: ಸರ್ಕಾರಿ ನೌಕರರಿಗೆ ಮತ್ತೆ ಗುಡ್ ನ್ಯೂಸ್; ಈ ಬಾರಿಯೂ ಶೇ. 4 ಡಿಎ ಹೆಚ್ಚಳ ಸಾಧ್ಯತೆ

|

Updated on: Aug 02, 2023 | 5:43 PM

7th Pay Commission: ಹಣದುಬ್ಬರ ಏರಿಕೆ ಆಗಿರುವ ಕಾರಣ ಈ ಬಾರಿಯೂ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೇ. 4ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡುವ ನಿರೀಕ್ಷೆ ಇದೆ ಎಂದು ವರದಿಗಳು ಹೇಳುತ್ತಿವೆ. ಸೆಪ್ಟೆಂಬರ್​ನಲ್ಲಿ ಇದರ ಘೋಷಣೆ ಆಗಲಿದ್ದು, ಜುಲೈನಿಂದ ಇದು ಅನ್ವಯ ಆಗಬಹುದು.

DA Hike: ಸರ್ಕಾರಿ ನೌಕರರಿಗೆ ಮತ್ತೆ ಗುಡ್ ನ್ಯೂಸ್; ಈ ಬಾರಿಯೂ ಶೇ. 4 ಡಿಎ ಹೆಚ್ಚಳ ಸಾಧ್ಯತೆ
ಡಿಎ ಹೆಚ್ಚಳ
Follow us on

ನವದೆಹಲಿ, ಆಗಸ್ಟ್ 2: ಕೇಂದ್ರ ಸರ್ಕಾರಿ ನೌಕರರಿಗೆ ಖುಷಿಯ ಸುದ್ದಿ. ಮಾರ್ಚ್​ನಲ್ಲಿ ಶೇ. 4ರಷ್ಟು ಡಿಎ ಹೆಚ್ಚಳ ಕಂಡಿದ್ದ ಸರ್ಕಾರಿ ಉದ್ಯೋಗಿಗಳು (Central Government Employees) ಈ ಬಾರಿಯೂ ಶೇ. 4ರ ಅಸುಪಾಸಿನಷ್ಟು ತುಟ್ಟಿಭತ್ಯೆ ಹೆಚ್ಚಳ (DA Hike) ಕಾಣುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ. ಈಗಾಗಲೇ ಶೇ. 42ರಷ್ಟಿರುವ ತುಟ್ಟಿಭತ್ಯೆ ಶೇ. 46ಕ್ಕೆ ಹೆಚ್ಚಬಹುದು ಎನ್ನಲಾಗಿದೆ. ವರದಿ ಪ್ರಕಾರ ಮುಂದಿನ ತಿಂಗಳು (ಸೆಪ್ಟೆಂಬರ್) ಡಿಎ ಬಗ್ಗೆ ಸರ್ಕಾರದಿಂದ ಅಧಿಕೃತವಾಗಿ ಘೋಷಣೆ ಮಾಡಬಹುದು.

ಕೇಂದ್ರ ಸರ್ಕಾರ ಏಳನೇ ವೇತನ ಆಯೋಗದ ಶಿಫಾರಸಿನಂತೆ ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ (DA- Dearness Allowance) ಮತ್ತು ತುಟ್ಟಿಪರಿಹಾರ (DR- Dearness Relief) ಪ್ರಮಾಣವನ್ನು ಪರಿಷ್ಕರಿಸುತ್ತದೆ. ಇವು ಮೂಲವೇತನಕ್ಕೆ ಹೆಚ್ಚುವರಿಯಾಗಿ ನೀಡಲಾಗುವ ಉತ್ತೇಜಕ ಹಣ. ಹಣದುಬ್ಬರದಿಂದ ಜೀವನವೆಚ್ಚ ದುಬಾರಿಯಾಗುವುದರಿಂದ ಉದ್ಯೋಗಿಗಳಿಗೆ ಅದರ ಬಾಧ ತಟ್ಟಬಾರದೆಂಬ ಉದ್ದೇಶದಿಂದ ಡಿಎ ಮತ್ತು ಡಿಆರ್​ಗಳನ್ನು ಏರಿಸಲಾಗುತ್ತದೆ. ಡಿಎ ಎಂಬುದು ಹಾಲಿ ಸರ್ಕಾರಿ ನೌಕರರಿಗೆ ನೀಡಿದರೆ, ಡಿಆರ್ ಪಿಂಚಣಿದಾರರಿಗೆ ಅನ್ವಯ ಆಗುತ್ತದೆ.

ಇದನ್ನೂ ಓದಿ: Ola Dog: ಬೆಂಗಳೂರಿನ ಒಲಾ ಕಂಪನಿಗೆ ನಾಯಿ ಹೊಸ ಉದ್ಯೋಗಿ; ಐಡಿ ಹಂಚಿಕೊಂಡ ಸಿಇಒ

ಇತ್ತೀಚಿನ ದಿನಗಳಲ್ಲಿ ಡಿಎ ಮತ್ತು ಡಿಆರ್ ಅನ್ನು ಶೇ. 4ರಷ್ಟು ಏರಿಸಿಕೊಂಡು ಬರಲಾಗುತ್ತಿದೆ. ಶೇ. 4 ಅನ್ನೇ ನಿಶ್ಚಿತ ಮಾಡಿಕೊಂಡಿಲ್ಲ. ಡಿಎ ಮತ್ತು ಡಿಆರ್ ಎಷ್ಟು ಕೊಡಬೇಕೆಂದು ನಿರ್ಧರಿಸಲು ಒಂದು ವ್ಯವಸ್ಥೆ ಇದೆ. ಹಣದುಬ್ಬರ ಏರಿಕೆಗೆ ಅನುಗುಣವಾಗಿ ತುಟ್ಟಿಭತ್ಯೆ ನಿರ್ಧರಿಸಲಾಗುತ್ತದೆ. ಅದರಲ್ಲೂ ಕೈಗಾರಿಕಾ ನೌಕರರ ಗ್ರಾಹಕ ಬೆಲೆ ಅನುಸೂಚಿ (CPI-IW) ಆಧಾರಿತ ಹಣದುಬ್ಬರ ಪ್ರಕಾರ ತುಟ್ಟಿಭತ್ಯೆ ಇರುತ್ತದೆ.

ಸಿಪಿಐ ಐಡಬ್ಲ್ಯು ಆಧಾರಿತ ಹಣದುಬ್ಬರ ಮೇ ತಿಂಗಳಲ್ಲಿ ಶೇ. 4.42ರಷ್ಟಿತ್ತು. ಜೂನ್ ತಿಂಗಳಲ್ಲಿ ಅದು ಶೇ. 5.57 ತಲುಪಿದೆ. ಅಕ್ಕಿ, ಗೋಧಿ, ಹೆಸರು ಬೇಳೆ, ಮೀನು, ಕೋಳಿ, ಮೊಟ್ಟೆ, ಸೇಬು, ಬಾಳೆಹಣ್ಣು, ಕ್ಯಾರಟ್, ಬದನೆಕಾಯಿ, ಶುಂಠಿ, ಆಲೂಗಡ್ಡೆ, ಈರುಳ್ಳಿ ಇತ್ಯಾದಿ ಹಲವು ವಸ್ತುಗಳ ಬೆಲೆ ಏರಿಕೆಯ ಪರಿಣಾಮ ಸಿಬಿಐ ಐಡಬ್ಲ್ಯು ಹಣದುಬ್ಬರ ಹೆಚ್ಚಳವಾಗಿದೆ.

ಇದನ್ನೂ ಓದಿ: ಕಂಪನಿಗಳು ಯಾಕೆ ಸ್ಟಾಕ್ ಸ್ಪ್ಲಿಟ್ ಮಾಡುತ್ತವೆ? ಬೋನಸ್ ಷೇರುಗಳ ಹಂಚಿಕೆಯಿಂದ ಏನಾಗುತ್ತೆ?

ವರದಿ ಪ್ರಕಾರ ಕೇಂದ್ರ ಸರ್ಕಾರಿ ನೌಕರರ ಡಿಎ ಅನ್ನು ಶೇ. 4ರಷ್ಟು ಹೆಚ್ಚಿಸಲು ನಿರ್ಧರಿಸಬಹುದು. ಮುಂದಿನ ತಿಂಗಳು ಇದರ ಘೋಷಣೆ ಆದರೂ ಅದು ಜುಲೈ ತಿಂಗಳಿಂದ ಅನ್ವಯ ಆಗುತ್ತದೆ. ಸೆಪ್ಟೆಂಬರ್​ನಲ್ಲಿ ಬರುವ ಸಂಬಳದಲ್ಲೇ ಇದು ಅರಿಯರ್ಸ್ ಸಮೇತ ಅಪ್​ಡೇಟ್ ಆಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:42 pm, Wed, 2 August 23