Ola Dog: ಬೆಂಗಳೂರಿನ ಒಲಾ ಕಂಪನಿಗೆ ನಾಯಿ ಹೊಸ ಉದ್ಯೋಗಿ; ಐಡಿ ಹಂಚಿಕೊಂಡ ಸಿಇಒ
Ola Electric's New Employee Bijlee: ಒಲಾ ಎಲೆಕ್ಟ್ರಿಕ್ ಕಂಪನಿಯ ಸಿಇಒ ಭವೀಶ್ ಅಗರ್ವಾಲ್ ಅವರು ತಮ್ಮ ಸಂಸ್ಥೆಯ ಹೊಸ ಉದ್ಯೋಗಿಯಾಗಿ ನಾಯಿಯೊಂದನ್ನು ಆರಿಸಿಕೊಂಡಿದ್ದು, ಅದರ ಐಡಿ ವಿವರನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರು, ಆಗಸ್ಟ್ 2: ಕೆಲ ವರ್ಷಗಳ ಹಿಂದೆ ಬ್ರೆಜಿಲ್ನ ಹ್ಯುಂಡೈ ಶೋರೂಮ್ವೊಂದರಲ್ಲಿ ನಾಯಿಯೊಂದು ಉದ್ಯೋಗಿಯಾಗಿದ್ದೇ ಅಲ್ಲದೇ ವರ್ಷದ ಉದ್ಯೋಗಿ ಎಂಬ ಬಹುಮಾನವನ್ನೂ ಗಿಟ್ಟಿಸಿತ್ತು. ಹಾಗೆಯೇ, ಭಾರತದಲ್ಲೂ ಝೀರೋಧ (Zerodha) ಸೇರಿದಂತೆ ಕೆಲವಿಷ್ಟು ಕಂಪನಿಗಳು ನಾಯಿಗಳನ್ನು ನೇಮಕ ಮಾಡಿಕೊಂಡಿದ್ದು ಇದೆ. ಇದೀಗ ಬೆಂಗಳೂರಿನ ಒಲಾ ಎಲೆಕ್ಟ್ರಿಕ್ (Ola Electric) ಸಂಸ್ಥೆ ನಾಯಿಯೊಂದನ್ನು ಉದ್ಯೋಗಿಯಾಗಿ ನೇಮಕ ಮಾಡಿಕೊಂಡಿದಂತಿದೆ. ಒಲಾ ಸಿಇಒ ಭವೀಶ್ ಅಗರ್ವಾಲ್ (Bhavish Agarwal) ಅವರು ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಹೊಸ ಶ್ವಾನ ಉದ್ಯೋಗಿಯ ಬಗ್ಗೆ ಮಾಹಿತಿ ನೀಡಿ ಟ್ವೀಟ್ ಮಾಡಿದ್ದಾರೆ.
ಕುತೂಹಲವೆಂದರೆ ಒಲಾ ಕಚೇರಿಯಲ್ಲಿ ಈ ನಾಯಿಗೆ ವಿಶೇಷ ಗುರುತಿನ ಚೀಟಿ ಕೊಡಲಾಗಿದೆ. ಇದಕ್ಕಿರುವ ಹೆಸರು, ಗುರುತಿನ ಸಂಖ್ಯೆ ಇತ್ಯಾದಿ ವಿವರವೆಲ್ಲವೂ ಕುತೂಹಲ ಮೂಡಿಸುವಂತಿದೆ. ಇದರ ಹೆಸರನ್ನು ಬಿಜಲಿ ಎಂದಿಡಲಾಗಿದೆ. ಬಿಜಲಿ ಎಂಬುದು ಹಿಂದಿ ಪದ. ಇದರ ಅರ್ಥ ವಿದ್ಯುತ್. ಒಲಾ ಎಲೆಕ್ಟ್ರಿಕ್ ಸಂಸ್ಥೆ ಎಲೆಕ್ಟ್ರಿಕ್ ವಾಹನ ಕ್ಷೇತ್ರದ್ದಾದ್ದರಿಂದ ಬಿಜಲಿ ಹೆಸರು ಸಮಯೋಚಿತ ಎನಿಸಿದೆ.
New colleague now officially! pic.twitter.com/dFtGMsOFVX
— Bhavish Aggarwal (@bhash) July 30, 2023
ಇದನ್ನೂ ಓದಿ: Knowledge: ಕೆಲ ಲಿಸ್ಟೆಡ್ ಕಂಪನಿಗಳು ಯಾಕೆ ಸ್ಟಾಕ್ ಸ್ಪ್ಲಿಟ್ ಮಾಡುತ್ತವೆ? ಬೋನಸ್ ಷೇರುಗಳ ಹಂಚಿಕೆಯಿಂದ ಏನಾಗುತ್ತೆ?
ಇನ್ನು ಅದರ ಹುದ್ದೆಯ ಹೆಸರನ್ನು ಒಲಾ ಎಲೆಕ್ಟ್ರಿಕ್ ಐಡಿ ಕಾರ್ಡ್ಹೋಲ್ಡರ್ ಎಂದು ತಿಳಿಸಲಾಗಿದೆ. ಅದರ ಬ್ಲಡ್ ಗ್ರೂಪ್ ಅನ್ನು Paw+ve ಎಂದು ಹೆಸರಿಸಲಾಗಿದೆ. Paw ಎಂದರೆ ಇಂಗ್ಲೀಷ್ನಲ್ಲಿ ನಾಯಿಯ ಪಾದದ ಪಂಜ. ಅದರ ಎಂಪ್ಲಾಯಿ ಕೋಡ್ ಅನ್ನು 440ವಿ ಎಂದು ಇಡಲಾಗಿದೆ. 440ವಿ ಎಂಬುದು ಪ್ರಮಾಣಿತ ವೋಲ್ಟೇಜ್.
ತುರ್ತು ಸಂಪರ್ಕಕ್ಕೆ BA ಕಚೇರಿ ಎಂದು ಹೇಳಲಾಗಿದೆ. ಇಲ್ಲಿ BA ಎಂದರೆ ಭವೀಶ್ ಅಗರ್ವಾಲ್ ಎಂದು ಅರ್ಥ ಮಾಡಿಕೊಳ್ಳಬಹುದು. ಬೆಂಗಳೂರಿನ ಕೋರಮಂಗಲದಲ್ಲಿ ಒಲಾ ಎಲೆಕ್ಟ್ರಿಕ್ ಸಂಸ್ಥೆಯ ಕಚೇರಿ ಇದೆ. ಇಲ್ಲಿ ಬಿಜಲಿ ನಾಯಿಯನ್ನು ಇಟ್ಟುಕೊಂಡಿರಬಹುದು. ನಿನ್ನೆ (ಆಗಸ್ಟ್ 1) ರಾತ್ರಿ ಅವರು ಬಿಜಲಿ ನಾಯಿಯ ವಿಡಿಯೋ ತುಣಕೊಂದನ್ನು ಅಪ್ಲೋಡ್ ಮಾಡಿ ಟ್ವೀಟಿಸಿದ್ದಾರೆ.
When Lailaa met @OlaBijlee , official mascot and brand ambassador of @OlaElectric pic.twitter.com/dS3IiMZwAY
— laurelsudeep (@laurelsudeep) August 1, 2023
ಇದನ್ನೂ ಓದಿ: Loan: ಬೆಲೆ ಏರಿಕೆಯ ಬಿಸಿಯಲ್ಲಿ ಜೀವನ ನಡೆಸಲು ಸಾಲದ ಮೊರೆಹೋದ ಜನರು; ಕುತೂಹಲಕಾರಿ ಅಂಕಿಅಂಶಗಳು ಇಲ್ಲಿವೆ
ಶ್ವಾನ ಸ್ನೇಹಿ ಎಂದು ತೋರಿಸುವ ಪ್ರಯತ್ನ ಇರಬಹುದು…
ಕೆಲ ಕಂಪನಿಗಳು ಕಚೇರಿಗೆ ನಾಯಿಗಳನ್ನು ತರಲು ಉದ್ಯೋಗಿಗಳಿಗೆ ಅವಕಾಶ ಕೊಡುತ್ತವೆ. ಇದು ಕೆಲಸದಲ್ಲಿ ಖುಷಿಯ ವಾತಾವರಣ ಮೂಡಿಸುವುದು ಒಂದು ಕಾರಣವಾದರೆ, ಕಂಪನಿಗೆ ಶ್ವಾನ ಸ್ನೇಹಿ ಎಂಬ ಗೌರವ ಪ್ರಾಪ್ತವಾಗುತ್ತದೆ ಎಂಬುದು ಇನ್ನೊಂದು ಕಾರಣ ಇರಬಹುದು. ಮೊದಲೇ ಹೇಳಿದಂತೆ ಕೆಲ ಕಂಪನಿಗಳು ನಾಯಿಗಳನ್ನು ಉದ್ಯೋಗಿಯಾಗಿ ನೇಮಕ ಮಾಡಿಕೊಂಡಿದ್ದೂ ಇದೆ.
ಕಂಪನಿಯಲ್ಲಿ ನಾಯಿ ಎಂದರೆ ಇತ್ತೀಚೆಗೆ ಟ್ವಟ್ಟರ್ ಮುಖ್ಯಸ್ಥ ಇಲಾನ್ ಮಸ್ಕ್ ನೆನಪಾಗುತ್ತಾರೆ. ಇವರು ಟ್ವಿಟ್ಟರ್ ಅನ್ನು ಖರೀದಿಸಿದ ಬಳಿಕ ಆಗಿನ ಸಿಇಒ ಪರಾಗ್ ಅಗರ್ವಾಲ್ ಮೊದಲಾದವರೆಲ್ಲಾ ಕಂಪನಿಯಿಂದ ನಿರ್ಗಮಿಸಿದ್ದರು. ಆಗ ಟ್ವಿಟ್ಟರ್ನ ಮುಂದಿನ ಸಿಇಒ ಯಾರು ಎಂದು ಮಾಧ್ಯಮದವರು ಮಸ್ಕ್ರನ್ನು ಕೇಳಿದಾಗ ಅವರು ತಮ್ಮ ನಾಯಿಯನ್ನು ತೋರಿಸಿದ್ದರು. ಶಿಬಾ ಇನು ಜಾತಿಯ ಅವರ ನಾಯಿಯನ್ನು ಸಿಇಒ ಚೇರ್ ಮೇಲೆ ಕೂರಿಸಿ, ಇದೇ ಟ್ವಿಟ್ಟರ್ ಸಿಇಒ ಎಂದು ಇಲಾನ್ ಮಸ್ಕ್ ಲೇವಡಿ ಮಾಡಿದ್ದೂ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ