8th Pay Commission: ಎಲೆಕ್ಷನ್ ಬಂತು, 8ನೇ ವೇತನ ಆಯೋಗ ರಚನೆಯಾಗುತ್ತಾ? ಸರ್ಕಾರದಿಂದ ಅಪ್​ಡೇಟ್ ಇದು

|

Updated on: Dec 01, 2023 | 4:06 PM

2014ರ ಚುನಾವಣೆಗೆ ಮುನ್ನ ಅಂದಿನ ಯುಪಿಎ ಸರ್ಕಾರ 7ನೇ ವೇತನ ಆಯೋಗ ರಚಿಸಿದಂತೆ ಈಗ 8ನೇ ವೇತನ ಆಯೋಗ ರಚನೆ ಬಗ್ಗೆ ಪುಕಾರಿದೆ. 8ನೇ ವೇತನ ಆಯೋಗ ರಚಿಸುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಹಣಕಾಸು ಇಲಾಖೆ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಸ್ಪಷ್ಟಪಡಿಸಿದ್ದಾರೆ. 7ನೇ ವೇತನ ಆಯೋಗವು 2.57ರಷ್ಟು ಫಿಟ್ಮೆಂಟ್ ಫ್ಯಾಕ್ಟರ್, ಮೂಲವೇತನ ಹೆಚ್ಚಳ ಇತ್ಯಾದಿ ಕ್ರಮ ಕೈಗೊಂಡಿತ್ತು. ಇದರಿಂದ ಲಾಭ ಕಂಡ ವ್ಯಕ್ತಿಗಳ ಸಂಖ್ಯೆ ಕೋಟಿಗೂ ಹೆಚ್ಚು.

8th Pay Commission: ಎಲೆಕ್ಷನ್ ಬಂತು, 8ನೇ ವೇತನ ಆಯೋಗ ರಚನೆಯಾಗುತ್ತಾ? ಸರ್ಕಾರದಿಂದ ಅಪ್​ಡೇಟ್ ಇದು
ವೇತನ ಹೆಚ್ಚಳ
Follow us on

ನವದೆಹಲಿ, ಡಿಸೆಂಬರ್ 1: ಲೋಕಸಭಾ ಚುನಾವಣೆ ಬಂತು, ಈಗ ಡಿಎ ಡಿಆರ್ ಹೆಚ್ಚಳಕ್ಕಿಂತ ಮಿಗಿಲಾದ ಖುಷಿಯ ಸುದ್ದಿಯ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರಿ (central government employees) ಉದ್ಯೋಗಿಗಳಿದ್ದಾರೆ. ಚುನಾವಣೆಗಿಂತ ಮುಂಚೆ ಸರ್ಕಾರ 8ನೇ ವೇತನ ಆಯೋಗದ (8th Pay Commission) ರಚನೆ ಮಾಡಬಹುದು ಎಂಬುದು ಈ ಸರ್ಕಾರಿ ಉದ್ಯೋಗಿಗಳ ನಿರೀಕ್ಷೆ. 7ನೇ ವೇತನ ಆಯೋಗದ ಶಿಫಾರಸಿನಿಂದ ಭರ್ಜರಿ ಸಂಬಳ ಹೆಚ್ಚಳ ಪಡೆದಿದ್ದ ಇವರಿಗೆ 8ನೇ ವೇತನ ಆಯೋಗದಿಂದ ಇನ್ನೂ ದೊಡ್ಡ ಮೊತ್ತದ ಅನುಕೂಲವಾಗುವ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚಿನ ಕೆಲ ತಿಂಗಳಲ್ಲಿ 8ನೇ ವೇತನ ಆಯೋಗದ ಬಗ್ಗೆ ಚರ್ಚೆಗಳೂ ನಡೆದಿದ್ದವು. ಈ ಹಿನ್ನೆಲೆಯಲ್ಲಿ ನಿರೀಕ್ಷೆ ದಟ್ಟವಾಗಿದೆ. ಆದರೆ, ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಚುನಾವಣೆಗೆ ಮುಂಚೆ 8ನೇ ವೇತನ ಆಯೋಗ ರಚನೆ ಬಗ್ಗೆ ಸರ್ಕಾರದ ಮುಂದೆ ಯಾವ ಪ್ರಸ್ತಾಪವೂ ಇಲ್ಲ ಎನ್ನಲಾಗಿದೆ.

7ನೇ ವೇತನ ಆಯೋಗ 2013ರಲ್ಲಿ ರಚನೆಯಾಗಿತ್ತು. ಆಗ ಯುಪಿಎ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿತ್ತು. ಚುನಾವಣೆಗೆ ಒಂದು ವರ್ಷ ಮುನ್ನ ಹೊಸ ವೇತನ ಆಯೋಗ ರಚಿಸಿತ್ತು ಆ ಸರ್ಕಾರ. ಕೋಟಿಯಷ್ಟು ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರನ್ನು ಒಲಿಸಿಕೊಳ್ಳಲು ಅದೊಂದು ಪ್ರಬಲ ಅಸ್ತ್ರವೂ ಆಗಿತ್ತು. ಈಗ 2024ರಲ್ಲಿ ಲೋಕಸಭಾ ಚುನಾವಣೆ ಇರುವುದರಿಂದ ಈಗಿನ ಎನ್​ಡಿಎ ಸರ್ಕಾರ ಈಗಲೇ 8ನೇ ವೇತನ ಆಯೋಗ ರಚಿಸಬಹುದು ಎಂಬ ಭಾವನೆ ಕೆಲ ವಲಯದ ಜನರಲ್ಲಿ ಇದೆ. ಆದರೆ, ಹಣಕಾಸು ಇಲಾಖೆ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಈ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಸದ್ಯಕ್ಕೆ ವೇತನ ಆಯೋಗ ರಚಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಈ ಹಣಕಾಸು ವರ್ಷಕ್ಕೆ ಭಾರತದ ಜಿಡಿಪಿ ಶೇ. 7ರಷ್ಟಾಗಬಹುದು: ನಿರೀಕ್ಷೆಹೆಚ್ಚಿಸಿದ ಎಸ್​ಬಿಐ ರಿಸರ್ಚ್

7ನೇ ವೇತನ ಆಯೋಗದ ಪ್ರಸ್ತಾಪ 2013ರಲ್ಲಿ ಆಯಿತಾದರೂ 2014ರ ಫೆಬ್ರುವರಿಯಲ್ಲಿ ಅದರ ರಚನೆ ಆಗಿದ್ದು. 2015ರ ನವೆಂಬರ್ 19ರಂದು ಈ ವೇತನ ಆಯೋಗ ತನ್ನ ವರದಿಯನ್ನು ಸಲ್ಲಿಸಿತು. 2016ರಲ್ಲಿ ಸರ್ಕಾರ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿತು.

7ನೇ ವೇತನ ಆಯೋಗದ ಪ್ರಮುಖ ಅಂಶಗಳು

  • ಈ ಹೊಸ ವೇತನ ಆಯೋಗವು ಸರ್ಕಾರಿ ನೌಕರಿಗೆ ಕನಿಷ್ಠ ಮಾಸಿಕ ಸಂಬಳವನ್ನು 18,000 ರೂಗೆ ಏರಿಸಿತು. ಪ್ರಥಮ ದರ್ಜೆ ಅಧಿಕಾರಿಯ ಮೊದಲ ಸಂಬಳ ಕನಿಷ್ಠ 56,100 ರೂ ಇರಬೇಕೆಂದು ನಿರ್ಧರಿಸಲಾಯಿತು.
  • ಸರ್ಕಾರಿ ಉದ್ಯೋಗಿಗಳ ಗರಿಷ್ಠ ಮಾಸಿಕ ಸಂಬಳ 2.25 ಲಕ್ಷ ರೂ ಎಂದು ನಿಗದಿ ಮಾಡಲಾಗಿದೆ. ಸಂಪಟ ಕಾರ್ಯದರ್ಶಿ ಹಾಗೂ ಆ ಮಟ್ಟದ ಸ್ಥಾನದಲ್ಲಿ ಕೆಲಸ ಮಾಡುವ ಅಧಿಕಾರಿಗಳ ಸಂಬಳವನ್ನು 2.5 ಲಕ್ಷ ರೂಗೆ ಮಿತಿಗೊಳಿಸಲಾಯಿತು.
  • ಏಳನೇ ವೇತನ ಆಯೋಗದಲ್ಲಿ ಗ್ರಾಚುಟಿ ಮಿತಿಯನ್ನು 20 ಲಕ್ಷಕ್ಕೆ ಮಿತಿಗೊಳಿಸಲಾಯಿತು. ಡಿಎ ಪ್ರಮಾಣ ಶೇ. 50ರಷ್ಟು ಹೆಚ್ಚಾದಾಗ ಗ್ರಾಚುಟಿ ಮಿತಿಯನ್ನೂ ಶೇ. 25ರಷ್ಟು ಹೆಚ್ಚಿಸಲಾಗುತ್ತದೆ. ಸದ್ಯ ಡಿಎ ಶೇ. 46ರಷ್ಟಿದೆ.
  • ಇನ್ನು, ಎಲ್ಲಾ ಉದ್ಯೋಗಿಗಳಿಗೂ ಸಮಾನವಾದ 2.57ರಷ್ಟು ಫಿಟ್ಮೆಂಟ್ ಫ್ಯಾಕ್ಟರ್ ಅನ್ನು ನಿಗದಿ ಮಾಡಲಾಯಿತು.
  • ಡಿಎ ಹೆಚ್ಚಳವಲ್ಲದೇ ವರ್ಷಕ್ಕೆ ಶೇ. 3ರಷ್ಟು ಸಂಬಳ ಹೆಚ್ಚಳಕ್ಕೆ ನಿರ್ಧಾರ ಮಾಡಲಾಯಿತು.

ಈಗ 8ನೇ ವೇತನ ಆಯೋಗ ರಚನೆಯಾದರೆ, ಮೂಲ ಸಂಬಳ, ಫಿಟ್ಮೆಂಟ್ ಫ್ಯಾಕ್ಟರ್ ಇತ್ಯಾದಿಯನ್ನು ಏರಿಕೆ ಮಾಡುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Fri, 1 December 23