ಭಾರತದ ಜಿಡಿಪಿ ಎಲ್ಲರ ಲೆಕ್ಕಾಚಾರ ಮೀರಿಸಿದ್ದು ಹೇಗೆ? ಇಲ್ಲಿದೆ ಕೆಲ ಪ್ರಮುಖ ಕಾರಣಗಳು
India GDP Growth Factors: ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್ ಆದ ಜುಲೈನಿಂದ ಸೆಪ್ಟೆಂಬರ್ವರೆಗಿನ ಅವಧಿಯಲ್ಲಿ ಭಾರತದ ಆರ್ಥಿಕತೆ ಶೇ. 7.6ರಷ್ಟು ಬೆಳೆದಿದೆ. ಭಾರತದ ಜಿಡಿಪಿ ನಿರೀಕ್ಷೆಮೀರಿ ಬೆಳೆಯಲು ಮ್ಯಾನುಫ್ಯಾಕ್ಚರಿಂಗ್ ಸೇರಿದಂತೆ ಕೆಲವಾರು ಕ್ಷೇತ್ರಗಳು ಮತ್ತು ಸಂಗತಿಗಳು ಕಾರಣವಾಗಿವೆ. ಉತ್ಪಾದನೆ, ನಿರ್ಮಾಣ, ರಫ್ತು ಮೊದಲಾದ ಕ್ಷೇತ್ರಗಳು ಅದ್ಭುತವಾಗಿ ಬೆಳೆದಿವೆ. ಹಾಗೆಯೇ ಇತರ ಕೆಲ ಅಂಶಗಳು ಜಿಡಿಪಿಗೆ ಪುಷ್ಟಿ ಕೊಟ್ಟಿವೆ.
ನವದೆಹಲಿ, ಡಿಸೆಂಬರ್ 1: ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್ ಆದ ಜುಲೈನಿಂದ ಸೆಪ್ಟೆಂಬರ್ವರೆಗಿನ ಅವಧಿಯಲ್ಲಿ ಭಾರತದ ಆರ್ಥಿಕತೆ (Indian economy) ಶೇ. 7.6ರಷ್ಟು ಬೆಳೆದಿದೆ ಎಂದು ಸರ್ಕಾರ ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶದಿಂದ ತಿಳಿದುಬಂದಿದೆ. ಆರ್ಬಿಐ ಸೇರಿದಂತೆ ಬಹುತೇಕ ಎಲ್ಲಾ ಸಂಸ್ಥೆಗಳ ಎಣಿಕೆ ಮತ್ತು ಲೆಕ್ಕಾಚಾರವನ್ನೂ ಮೀರಿಸುವಂತೆ ಜಿಡಿಪಿ ಬೆಳೆದಿದೆ. ಆರ್ಥಿಕ ತಜ್ಞರು ಜಿಡಿಪಿ ಶೇ. 5.8ರಿಂದ ಶೇ. 6.7ರವರೆಗೆ ಬೆಳೆಯಬಹುದು ಎಂದು ಅಂದಾಜು ಮಾಡಿದ್ದರು. ಆದರೆ, ನಿರೀಕ್ಷೆ ಮೀರುವಂತೆ ಜಿಡಿಪಿ ಹೆಚ್ಚಿದೆ. ಕಳೆದ ವರ್ಷದ ಎರಡನೇ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 6.2ರಷ್ಟು ಮಾತ್ರ ಬೆಳೆದಿತ್ತು. ಈ ವರ್ಷ ಅದಕ್ಕಿಂತಲೂ ಬಹಳ ಹೆಚ್ಚು ಬೆಳೆದಿದೆ.
ಭಾರತದ ಆರ್ಥಿಕತೆ ಮೊದಲ ಕ್ವಾರ್ಟರ್ನಲ್ಲಿ ಶೇ. 7.8ರಷ್ಟು ಬೆಳೆದಿತ್ತು. ಎರಡನೇ ಕ್ವಾರ್ಟರ್ನಲ್ಲಿ ಶೇ. 7.6ರಷ್ಟು ಆಗಿದೆ. ಸತತ ಎರಡು ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಬೆಳೆವಣಿಗೆ ಶೇ. 7ಕ್ಕಿಂತಲೂ ಹೆಚ್ಚಿರುವುದು ಗಮನಾರ್ಹ. ಭಾರತದ ಈ ಪರಿ ಬೆಳವಣಿಗೆಗೆ ಏನು ಕಾರಣ? ತಜ್ಞರು ಕೆಲ ಪ್ರಮುಖ ಕಾರಣಗಳನ್ನು ಗುರುತಿಸಿದ್ದಾರೆ.
ಉತ್ಪಾದನಾ ಕ್ಷೇತ್ರದ ಅತೀವ ಬೆಳವಣಿಗೆ
ಭಾರತದ ಜಿಡಿಪಿ ಎರಡನೇ ಕ್ವಾರ್ಟರ್ನಲ್ಲಿ ನಿರೀಕ್ಷೆಮೀರಿ ಹೆಚ್ಚಲು ಪ್ರಮುಖ ಕಾರಣವಾಗಿದ್ದು ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರ. ಕಳೆದ ವರ್ಷದಲ್ಲಿ ಮೈನಸ್ನಲ್ಲಿದ್ದ ಬೆಳವಣಿಗೆ ಈ ಬಾರಿ ಶೇ. 13.9ರಷ್ಟು ವೃದ್ಧಿ ಕಂಡಿದೆ. ಮೊದಲ ಕ್ವಾರ್ಟರ್ನಲ್ಲಿ ಈ ಸೆಕ್ಟರ್ ಬೆಳೆದದ್ದು ಶೇ. 4.7ರಷ್ಟು. ಅದನ್ನೂ ಮೀರಿಸುವಂತೆ ಎರಡನೇ ಕ್ವಾರ್ಟರ್ನಲ್ಲಿ ಉತ್ಪಾದನಾ ಕ್ಷೇತ್ರ ಮಿಂಚಿದೆ.
ಇದನ್ನೂ ಓದಿ: ಈ ಹಣಕಾಸು ವರ್ಷಕ್ಕೆ ಭಾರತದ ಜಿಡಿಪಿ ಶೇ. 7ರಷ್ಟಾಗಬಹುದು: ನಿರೀಕ್ಷೆಹೆಚ್ಚಿಸಿದ ಎಸ್ಬಿಐ ರಿಸರ್ಚ್
ನಿರ್ಮಾಣ ಕ್ಷೇತ್ರದ ಬೆಳವಣಿಗೆ
ದೇಶದ ಇನ್ಫ್ರಾಸ್ಟ್ರಕ್ಚರ್ ವಲಯ ಗಣನೀಯ ವೃದ್ಧಿ ಕಂಡಿದೆ. ಮೈನಿಂಗ್, ಎಲೆಕ್ಟ್ರಿಸಿಟಿ, ಗ್ಯಾಸ್, ನೀರು ಸರಬರಾಜು ಹಾಗು ಇತರ ನಾಗರಿಕ ಸೇವೆಗಳು ಎರಡನೇ ತ್ರೈಮಾಸಿಕದಲ್ಲಿ ಉತ್ತಮ ಬೆಳವಣಿಗೆ ಕಂಡಿದೆ.
ಸರ್ಕಾರದ ಅನುಭೋಗ ವೆಚ್ಚ ಹೆಚ್ಚಳ (ಜಿಎಫ್ಸಿಇ)
ಜನ ಬಳಕೆಯ ಸರಕು ಮತ್ತು ಸೇವೆಗಳನ್ನು ಸರ್ಕಾರ ನೇರವಾಗಿ ಪೂರೈಸಲು ಮಾಡುವ ವೆಚ್ಚ (ಜಿಎಫ್ಸಿ- ಗವರ್ನ್ಮೆಂಟ್ ಫೈನಲ್ ಕನ್ಸಂಪ್ಷನ್ ಎಕ್ಸ್ಪೆಂಡಿಚರ್) ಈ ಎರಡನೇ ಕ್ವಾರ್ಟರ್ನಲ್ಲಿ ಎರಡಂಕಿ ವೃದ್ಧಿ ಕಂಡಿದೆ.
ಎರಡನೇ ಕ್ವಾರ್ಟರ್ನಲ್ಲಿ ರಫ್ತು ಹೆಚ್ಚಳ
ಭಾರತದಿಂದ ರಫ್ತು ಪ್ರಮಾಣ ಗಮನಾರ್ಹವಾಗಿ ಹೆಚ್ಚಿದೆ. ಹಿಂದಿನ ತ್ರೈಮಾಸಿಕದಲ್ಲಿ ಸರಕು ಮತ್ತು ಸೇವೆಗಳ ರಫ್ತು ಶೇ. 7.7ರಷ್ಟು ಕುಸಿತ ಕಂಡಿತ್ತು. ಈ ಬಾರಿ ಶೇ. 4.3ರಷ್ಟು ಬೆಳೆದಿದೆ. ಇದೂ ಕೂಡ ನಿರೀಕ್ಷೆಮೀರಿದ ಜಿಡಿಪಿ ಸಂಖ್ಯೆ ಬರಲು ಕಾರಣವೆನ್ನಲಾಗಿದೆ.
ಹೂಡಿಕೆಗಳ ಹೆಚ್ಚಳ
ಭಾರತದಲ್ಲಿ ಈ ಕ್ವಾರ್ಟರ್ನಲ್ಲಿ ಗ್ರಾಸ್ ಫಿಕ್ಸೆಡ್ ಕ್ಯಾಪಿಟಲ್ ಫಾರ್ಮೇಶನ್ (ಜಿಎಫ್ಸಿಎಫ್) ಶೇ. 11.04ರಷ್ಟು ಬೆಳವಣಿಗೆ ಕಂಡಿದೆ. ಜಿಎಫ್ಸಿಎಫ್ ಎಂಬುದು ದೇಶದಲ್ಲಿ ಹೂಡಿಕೆ ಚಟುವಟಿಕೆಯ ಸೂಚಕವಾಗಿದೆ. ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್ನಲ್ಲಿ ಇದು 14.72 ಲಕ್ಷ ಕೋಟಿ ರೂನಷ್ಟಿತ್ತು. ಜಿಡಿಪಿಯಲ್ಲಿ ಜಿಎಫ್ಸಿಎಫ್ ಪ್ರಮಾಣ ಶೇ. 35.3ರಷ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:05 pm, Fri, 1 December 23