ಮುಂದೆ ಯಾರು ಮುಖ್ಯಸ್ಥ? ಸ್ಥಗಿತಗೊಂಡಿರುವ ಸೋನಿ ಮತ್ತು ಝೀ ವಿಲೀನ ಕಾರ್ಯ
Sony and Zee Merger Problem: ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ ಮತ್ತು ಝೀ ಎಂಟರ್ಪ್ರೈಸಸ್ ಲಿ ಸಂಸ್ಥೆಗಳ ವಿಲೀನ ಪ್ರಕ್ರಿಯೆಯಲ್ಲಿ ನಾಯಕತ್ವದ ಕಗ್ಗಂಟು ಸಮಸ್ಯೆ ತಂದಿದೆ. ವಿಲೀನ ಪ್ರಕ್ರಿಯೆ ಮುಗಿಸಲು ಡಿಸೆಂಬರ್ 21ಕ್ಕೆ ಡೆಡ್ಲೈನ್ ಇದೆ. ಅಷ್ಟರೊಳಗೆ ಎರಡೂ ಸಂಸ್ಥೆಗಳು ನಾಯಕತ್ವ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಿದೆ. ವಿಲೀನಗೊಂಡ ಬಳಿಕ ಸಂಸ್ಥೆಯ ಸಿಇಒ ಯಾರು ಆಗುವುದು ಎಂಬುದು ಸದ್ಯಕ್ಕೆ ಇರುವ ನಾಯಕತ್ವ ಬಿಕ್ಕಟ್ಟು.
ನವದೆಹಲಿ, ಡಿಸೆಂಬರ್ 1: ಇದು ಯಾವುದೇ ಸಂಸ್ಥೆಗಳ ವಿಲೀನ ವಿಚಾರಕ್ಕೆ ಬಂದಾಗ ಆಗುವ ಸಮಸ್ಯೆ. ಎರಡು ಸಂಸ್ಥೆಗಳು ವಿಲೀನಗೊಂಡ ಬಳಿಕ ಅವರೆರಡಲ್ಲಿ ಯಾರ ಕಡೆಯವರು ಮುಖ್ಯಸ್ಥರಾಗಬೇಕು ಎಂಬುದು ಪ್ರಮುಖ ಪ್ರಶ್ನೆಯಾಗುತ್ತದೆ. ವಿಲೀನಕ್ಕೆ ಮುಂಚೆಯೇ ಈ ಗೊಂದಲವನ್ನು ನಿವಾರಿಸಿಕೊಳ್ಳಲಾಗುತ್ತದಾದರೂ ಬಹಳಷ್ಟು ಬಾರಿ ಅದು ತಲೆನೋವಿನ ವಿಚಾರವಾಗಿರುತ್ತದೆ. ಸೋನಿ ಮತ್ತು ಝೀ ಸಂಸ್ಥೆಗಳ ವಿಲೀನದ (Sony and Zee Merger) ವಿಚಾರದಲ್ಲೂ ಇದೇ ತಲೆನೋವು ಆಗಿದೆ. ನಾಯಕತ್ವ ಯಾರಿಗೆ ಹೋಗಬೇಕು ಎಂಬ ಪ್ರಶ್ನೆಗೆ ಉತ್ತರ ಸಿಗದ ಹಿನ್ನೆಲೆಯಲ್ಲಿ ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ ಮತ್ತು ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿ ಸಂಸ್ಥೆಗಳ ವಿಲೀನ ಒಪ್ಪಂದಕ್ಕೆ ಅಂಕಿತವೇ ಬಿದ್ದಿಲ್ಲ ಎಂದು ಫೈನಾನ್ಷಿಯಲ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ವರದಿಯಾಗಿದೆ.
ಮುಖ್ಯಸ್ಥ ನಮ್ಮವರೇ ಆಗಬೇಕು ಎಂದು ಪಟ್ಟು ಹಿಡಿದಿರುವ ಸೋನಿ ಮತ್ತು ಝೀ
ಸೋನಿ ಇಂಡಿಯಾ ಸಂಸ್ಥೆಗೆ ಎಂಡಿ ಮತ್ತು ಸಿಇಒ ಆಗಿರುವುದು ಎನ್.ಪಿ. ಸಿಂಗ್. ಝೀ ಎಂಟರ್ಪ್ರೈಸಸ್ ಸಂಸ್ಥೆಯ ಎಂಡಿ ಮತ್ತು ಸಿಇಒ ಆಗಿರುವುದು ಪುನೀತ್ ಗೋಯೆಂಕಾ. ಈ ಎರಡೂ ಸಂಸ್ಥೆಗಳು ವಿಲೀನಗೊಂಡ ಬಳಿಕ ಇಬ್ಬರಲ್ಲಿ ಒಬ್ಬರು ಸಂಸ್ಥೆಯ ಸಿಇಒ ಆಗಬೇಕು. ಆದರೆ, ನಮ್ಮವರೇ ಆಗಬೇಕು ಎಂದು ಎರಡೂ ಕಂಪನಿಗಳು ಪಟ್ಟು ಹಿಡಿದಿವೆ.
ವಿಲೀನ ಪ್ರಕ್ರಿಯೆ ಡಿಸೆಂಬರ್ 21ಕ್ಕೆ ಮುಗಿಯಬೇಕು ಎಂದು ಡೆಡ್ಲೈನ್ ಇದೆ. ಆದರೆ, ನಾಯಕತ್ವ ವಿವಾದ ಈ ಪ್ರಕ್ರಿಯೆ ಮೇಲೆ ಕರಿನೆರಳು ಬೀಳುವಂತೆ ಮಾಡಿದೆ.
ಇದನ್ನೂ ಓದಿ: ಷೇರುಪೇಟೆಯಲ್ಲಿ ಟಾಟಾ ಟೆಕ್ನಾಲಜೀಸ್ ಸದ್ಯಕ್ಕೆ ಸೂಪರ್ ಹಿಟ್; ಮೇ 27ರ ನಂತರ ಬದಲಾಗುತ್ತಾ ಮ್ಯಾಜಿಕ್?
ಸೋನಿ, ಝೀ ನಾಯಕತ್ವ ವಿವಾದ ಯಾಕೆ?
ಎರಡು ವರ್ಷದ ಹಿಂದೆ ನಡೆದ ಮಾತುಕತೆಯ ಪ್ರಕಅರ ಝೀ ಮತ್ತು ಸೋನಿ ಸಂಸ್ಥೆಗಳ ವಿಲೀನದ ಬಳಿಕ ಸಂಸ್ಥೆಯಲ್ಲಿ ಸೋನಿ ಪಾಲು ಶೇ. 50.86ರಷ್ಟು ಇರಬೇಕು. ಝೀ ಸಂಸ್ಥೆಯ ಪುನೀತ್ ಗೋಯಂಕಾ ಅವರು ಆಡಳಿತ ಚುಕ್ಕಾಣಿ ಹಿಡಿಯಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ, ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣದಲ್ಲಿ ಪುನೀತ್ ಗೋಯಂಕಾ ಮತ್ತು ಸುಭಾಷ್ ಚಂದ್ರ ಅವರು ಝೀ ಗ್ರೂಪ್ನ ಯಾವ ಕಂಪನಿಯಲ್ಲೂ ನಿರ್ದೇಶಕ ಸ್ಥಾನಗಳನ್ನು ಹೊಂದದಂತೆ ಸೆಬಿ ನಿಷೇಧ ಹೇರಿತ್ತು. ಇತ್ತೀಚೆಗಷ್ಟೇ ಪುನೀತ್ ಗೋಯಂಕಾ ಮೇಲಿನ ನಿಷೇಧವನ್ನು ಸೆಬಿ ತೆರವುಗೊಳಿಸಿತ್ತು. ಆದರೆ, ಸೋನಿ ಸಂಸ್ಥೆ ಈ ವಿಚಾರವನ್ನು ಸ್ವೀಕರಿಸಲು ಸಿದ್ಧರಿಲ್ಲ. ತನಗೇ ಆಡಳಿತ ಚುಕ್ಕಾಣಿ ಸಿಗಬೇಕು ಎಂದು ಸೋನಿ ಸಂಸ್ಥೆ ಪಟ್ಟು ಹಿಡಿದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:24 am, Fri, 1 December 23