ಈ ಹಣಕಾಸು ವರ್ಷಕ್ಕೆ ಭಾರತದ ಜಿಡಿಪಿ ಶೇ. 7ರಷ್ಟಾಗಬಹುದು: ನಿರೀಕ್ಷೆಹೆಚ್ಚಿಸಿದ ಎಸ್ಬಿಐ ರಿಸರ್ಚ್
India's Growth Forecast For 24FY: 2023ರ ಏಪ್ರಿಲ್ನಿಂದ 2024ರ ಮಾರ್ಚ್ವರೆಗಿನ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 7ರಷ್ಟು ಬೆಳೆಯಬಹುದು ಎಂದು ಎಸ್ಬಿಐನ ರಿಸರ್ಚ್ ವಿಭಾಗವು ಹೇಳಿದೆ. ಈ ಹಣಕಾಸು ವರ್ಷದಲ್ಲಿ ಆರ್ಥಿಕತೆ ಶೇ. 6.7ರಷ್ಟು ಬೆಳೆಯಬಹುದು ಎಂದು ಎಸ್ಬಿಐ ರಿಸರ್ಚ್ ಕಳೆದ ಬಾರಿಯ ಲೆಕ್ಕಾಚಾರದಲ್ಲಿ ಅಭಿಪ್ರಾಯಪಟ್ಟಿತ್ತು. ನವೆಂಬರ್ 30ರಂದು ಎನ್ಎಸ್ಒ ಬಿಡುಗಡೆ ಮಾಡಿದ ವರದಿ ಪ್ರಕಾರ ಭಾರತದ ಜಿಡಿಪಿ ಎರಡನೇ ಕ್ವಾರ್ಟರ್ನಲ್ಲಿ ಶೇ. 7.6ರಷ್ಟು ಬೆಳೆದಿದೆ. ಈ ಹಿನ್ನೆಲೆಯಲ್ಲಿ ಜಿಡಿಪಿ ಅಂದಾಜು ಪರಿಷ್ಕರಿಸಲಾಗಿದೆ.
ನವದೆಹಲಿ, ಡಿಸೆಂಬರ್ 1: ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್ನಲ್ಲಿ ದೇಶದ ಜಿಡಿಪಿ (India GDP) ಶೇ. 7.6ರಷ್ಟು ಬೆಳೆದು, ಎಲ್ಲರ ನಿರೀಕ್ಷೆ ಮೀರುವಂತೆ ಹೆಚ್ಚು ಮಟ್ಟದಲ್ಲಿದೆ. ಇದರ ಬೆನ್ನಲ್ಲೇ ಎಸ್ಬಿಐನ ರಿಸರ್ಚ್ ವಿಭಾಗವು (SBI Research) ಈ ಹಣಕಾಸು ವರ್ಷಕ್ಕೆ ತನ್ನ ಲೆಕ್ಕಾಚಾರವನ್ನು (GDP growth forecast) ಬದಲಿಸಿದೆ. 2023-24ರ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6.7ರಷ್ಟು ಬೆಳೆಯಬಹುದು ಎಂದು ಹೇಳಿದ್ದ ಎಸ್ಬಿಐ ರಿಸರ್ಚ್ ಇದೀಗ ತನ್ನ ನಿರೀಕ್ಷೆಯನ್ನು ಶೇ. 7ಕ್ಕೆ ಹೆಚ್ಚಿಸಿದೆ. ಎರಡನೇ ಕ್ವಾರ್ಟರ್ನಲ್ಲಿ ಬಂದ ನಿರೀಕ್ಷೆಮೀರಿದ ಆರ್ಥಿಕ ವೃದ್ಧಿಯಿಂದಾಗಿ ಎಸ್ಬಿಐ ಲೆಕ್ಕಾಚಾರ ಬದಲಿಸುವಂತೆ ಮಾಡಿದೆ.
‘ಇವತ್ತು ಬಿಡುಗಡೆ ಆದ ಎರಡನೇ ತ್ರೈಮಾಸಿಕ ವರದಿಯಲ್ಲಿ ಉತ್ತಮ ಸಂಖ್ಯೆ ಬಂದಿರುವುದು ಮುಂದಿನ ದಿನಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ. ಜಾಗತಿಕ ಕಾರ್ಪೊರೇಟ್ ಸಂಸ್ಥೆಗಳು, ನೀತಿರೂಪಕರು, ಹೂಡಿಕೆ ಗುರುಗಳು, ಫಂಡ್ ಮ್ಯಾನೇಜರ್ಗಳು ಭಾರದತ್ತ ಹೊಸ ಉತ್ಸಾಹದಿಂದ ನೋಡಬಹುದು’ ಎಂದು ಎಸ್ಬಿಐ ರಿಸರ್ಚ್ ನಿನ್ನೆ ನ. 30ರಂದು ಹೇಳಿಕೆ ನೀಡಿದೆ.
‘ಆರ್ಬಿಐನ ಶೇ. 6.5ರಷ್ಟು ಪ್ರಗತಿ ಅಂದಾಜಿಗಿಂತ ನಾವು ತುಸು ಮೇಲೆಯೆ ನಿರೀಕ್ಷೆ ಇಟ್ಟುಕೊಂಡಿದ್ದೆವು. ನಮ್ಮ ಈ ನಿರೀಕ್ಷೆ ಹುಸಿಯಾಗಲಿಲ್ಲ. ಜೊತೆಗೆ, ನಮ್ಮ ಅಂದಾಜನ್ನು ಮತ್ತೆ ಪರಾಮರ್ಶಿಸುವಂತೆ ಮಾಡಿದೆ,’ ಎಂದು ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾದ ರಿಸರ್ಚ್ ವಿಭಾಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಎಸ್ಬಿಐಗಿಂತ ಮುಂಚೆ ಮಿಂಟ್ ಸ್ಟ್ರೀಟ್ ಕೂಡ ತನ್ನ ಜಿಡಿಪಿ ವೃದ್ಧಿ ಅಂದಾಜನ್ನು ಶೇ. 6.5ರಿಂದ ಶೇ. 6.8ಕ್ಕೆ ಹೆಚ್ಚಿಸಿದೆ. ಈಗ ಬಹುತೇಕ ಎಲ್ಲಾ ಹಣಕಾಸು ವಿಶ್ಲೇಷಕ ಸಂಸ್ಥೆಗಳು ತಮ್ಮ ಅಂದಾನ್ನು ಪರಿಷ್ಕರಿಸುವ ಸಾಧ್ಯತೆ ಇದೆ.
ಭಾರತದ ಜಿಡಿಪಿ ಮೊದಲ ಕ್ವಾರ್ಟರ್ ಆದ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಶೇ. 7.8ರಷ್ಟು ಹೆಚ್ಚಳವಾಗಿತ್ತು. ಈ ವರ್ಷ ಸತತ ಎರಡು ತ್ರೈಮಾಸಿಕದಲ್ಲಿ ಜಿಡಿಪಿ ವೃದ್ಧಿದರ ಶೇ. 7ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿದೆ. ಮುಂದಿನ ಉಳಿದೆರಡು ಕ್ವಾರ್ಟರ್ಗಳಲ್ಲಿ ಜಿಡಿಪಿ ಶೇ. 6ಕ್ಕಿಂತಲೂ ಕಡಿಮೆ ಇರಬಹುದು ಎಂದು ಎಲ್ಲರೂ ಮಾಡಿರುವ ಅಂದಾಜು. ಈ ಲೆಕ್ಕಾಚಾರವೂ ತಲೆಕೆಳಗಾಗುವಂತೆ ಭಾರತದ ಜಿಡಿಪಿ ಹೆಚ್ಚುತ್ತದಾ ಕಾದುನೋಡಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:54 am, Fri, 1 December 23