ಪಾನ್ ಕಾರ್ಡ್ (PAN) ಮತ್ತು ಆಧಾರ್ ಕಾರ್ಡ್ (Aadhaar) ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಜೂನ್ 30 ರವರೆಗೆ ಕೇಂದ್ರ ವಿಸ್ತರಿಸಿದೆ. ಇದೀಗ ಕೇಂದ್ರ ಮತ್ತೊಂದು ಮಹತ್ವದ ಆದೇಶವೊಂದನ್ನು ನೀಡಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಪಾನ್ ಮತ್ತು ಆಧಾರ್ ಕಾರ್ಡ್ ಮುಖ್ಯ ಎಂದು ಹೇಳಿದೆ. ಈ ಎರಡು ದಾಖಲೆಗಳು ಇನ್ನೂ ಮುಂದೆ ಎಲ್ಲ ದಾಖಲೆಗಳಿಗೂ ಹಾಗೂ ಕೆಲಸಗಳಿಗೆ ಮುಖ್ಯವಾಗಿರುತ್ತದೆ. ಹೀಗಾಗಿ ಪಾನ್ ಮತ್ತು ಆಧಾರ್ ಕಾರ್ಡ್ KYC (Know Your Customer) ಯ ಅವಿಭಾಜ್ಯ ಅಂಗವಾಗಿದೆ. ಈಗ, ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆ ಕಡ್ಡಾಯ ಎಂದು ಹಣಕಾಸು ಸಚಿವಾಲಯ ಹೇಳಿದೆ. ಮಾರ್ಚ್ 31ರಂದು ಹಣಕಾಸು ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಈಗ ಸಣ್ಣ ಉಳಿತಾಯ ಯೋಜನೆಗಳಿಗಾಗಿ KYCಯು ಮುಖ್ಯ ಭಾಗವಾಗಿದೆ. ಈ ಹಿಂದೆ ಆಧಾರ್ ಸಂಖ್ಯೆಯನ್ನು ಸಲ್ಲಿಸದೆಯೇ ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದಾಗಿತ್ತು. ಆದರೆ, ಈಗ ಈ ಯೋಜನೆಗಳಲ್ಲಿ ಹೂಡಿಕೆ ಮಾಡಲು ಚಂದಾದಾರರು ಕನಿಷ್ಠ ಆಧಾರ್ ಸಂಖ್ಯೆಯನ್ನಾದರೂ ಸಲ್ಲಿಸಬೇಕಾಗುತ್ತದೆ. ಅಲ್ಲದೆ, ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಹೂಡಿಕೆಯನ್ನು ಮಾಡಿದರೆ, ಬಳಕೆದಾರರು ಪ್ಯಾನ್ ಸಂಖ್ಯೆಯನ್ನು ಒದಗಿಸಬೇಕಾಗುತ್ತದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
PPF, ಸುಕನ್ಯಾ ಸಮೃದ್ಧಿ ಯೋಜನೆ (SSY), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಮುಂತಾದ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಚಂದಾದಾರರು ಸೆಪ್ಟೆಂಬರ್ 30ರೊಳಗೆ ಆಧಾರ್ ಸಂಖ್ಯೆಯನ್ನು ಸಲ್ಲಿಸಬೇಕು ಎಂದು ಅಧಿಸೂಚನೆಯು ತಿಳಿಸುತ್ತದೆ. ಹೀಗೆ ಮಾಡಲು ಇಚ್ಛಿಸುವವರು ಹಾಗೂ ಹೊಸ ಚಂದಾದಾರರು ಆರು ತಿಂಗಳೊಳಗೆ ಆಧಾರ್ ವಿವರಗಳನ್ನು ಸಲ್ಲಿಸಬೇಕು ಎಂದು ಹೇಳಿದೆ. ಒಂದು ವೇಳೆ ಚಂದಾದಾರರಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ (UIDAI) ಆಧಾರ್ ಸಂಖ್ಯೆಯನ್ನು ನಿಯೋಜಿಸದಿದ್ದರೆ, ನಿಮ್ಮ ನೋಂದಣಿ ಸಂಖ್ಯೆ ಕಾರ್ಯನಿರ್ವಹಿಸುತ್ತದೆ. ಆದರೆ ಖಾತೆ ತೆರೆದ ಆರು ತಿಂಗಳೊಳಗೆ ಆಧಾರ್ ವಿವರಗಳನ್ನು ಸಲ್ಲಿಸದಿದ್ದರೆ, ಈ ವರ್ಷ ಅಕ್ಟೋಬರ್ 1ರಿಂದ ಸಣ್ಣ ಉಳಿತಾಯ ಯೋಜನೆ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ.
ಇದನ್ನೂ ಓದಿ: Pan Aadhaar Linking: ಪ್ಯಾನ್ ಆಧಾರ್ ಕಾರ್ಡ್ ಲಿಂಕ್ ಗಡುವು ಮತ್ತೆ ವಿಸ್ತರಣೆ
ಉಳಿತಾಯ ಖಾತೆ ತೆರೆಯುವಾಗ ಪ್ಯಾನ್ ಸಂಖ್ಯೆಯನ್ನು ಒದಗಿಸಬೇಕು ಎಂದು ಹಣಕಾಸು ಸಚಿವಾಲಯದ ಅಧಿಸೂಚನೆ ತಿಳಿಸಿದೆ. ಖಾತೆ ತೆರೆಯುವ ಸಮಯದಲ್ಲಿ ಈ ಎರಡು ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು, ಅದನ್ನು ಕೂಡ ಎರಡು ತಿಂಗಳೊಳಗೆ ಸಲ್ಲಿಸಬೇಕು. ನಿಮ್ಮ ಖಾತೆಯಲ್ಲಿ 50,000 ರೂ. ಕ್ಕಿಂತ ಹೆಚ್ಚಿನ ಹಣವನ್ನು ಹೊಂದಿರಬೇಕು ಎಂದು ಹೇಳಿದೆ.ಖಾತೆಯಿಂದ ಒಂದು ತಿಂಗಳಲ್ಲಿ ಎಲ್ಲಾ ವ್ಯವಹಾರ ವಹಿವಾಟು ನಡೆಸುವಾಗ ಒಟ್ಟು ಮೊತ್ತವು 10,000 ಕ್ಕಿಂತ ರೂ. ಹೆಚ್ಚಿದ್ದರೆ ಮತ್ತು ಯಾವುದೇ ಹಣಕಾಸಿನ ವರ್ಷದಲ್ಲಿ ಖಾತೆಯಲ್ಲಿನ ಕ್ರೆಡಿಟ್‌ಗಳ ಒಟ್ಟು ಮೊತ್ತವು 1 ಲಕ್ಷಕ್ಕಿಂತ ಹೆಚ್ಚಿದ್ದರೆ PAN ವಿವರಗಳನ್ನು ಸಲ್ಲಿಸಬೇಕಾಗುತ್ತದೆ.
ನಿಗದಿತ ಅವಧಿಯೊಳಗೆ ಚಂದಾದಾರರು ಪ್ಯಾನ್ ವಿವರಗಳನ್ನು ಸಲ್ಲಿಸದಿದ್ದರೆ, ಪ್ಯಾನ್ ಸಂಖ್ಯೆಯನ್ನು ಒದಗಿಸುವವರೆಗೆ ಖಾತೆಯು ಕಾರ್ಯನಿರ್ವಹಿಸುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
Published On - 4:55 pm, Sat, 1 April 23