Bank FD Vs Small Savings: ಬ್ಯಾಂಕ್ FD Vs ಸಣ್ಣ ಉಳಿತಾಯ ಯೋಜನೆ: ಯಾವುದು ಹೆಚ್ಚು ಆದಾಯವನ್ನು ನೀಡುತ್ತದೆ?
ಸಣ್ಣ ಉಳಿತಾಯ ಯೋಜನೆಗಳಿಗಿಂತ FD ಗಳು ಹೆಚ್ಚಿನ ಆದಾಯವನ್ನು ನೀಡುತ್ತಿವೆಯೇ? ಇಲ್ಲಿದೆ ಮಾಹಿತಿ.
ಆರ್‌ಬಿಐ (RBI) ಪ್ರಮುಖ ರೆಪೋ ದರದಲ್ಲಿ 250 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸಿರುವುದರಿಂದ ಕಳೆದ ವರ್ಷ ಮೇ ತಿಂಗಳಿನಿಂದ ಫಿಕ್ಸೆಡ್ ಡೆಪಾಸಿಟ್‌ಗಳು (ಎಫ್‌ಡಿಗಳು) ಬಡ್ಡಿದರ ಏರಿಕೆಯಾಗುತ್ತಿದೆ. ಹೀಗಾಗಿ ಬ್ಯಾಂಕ್‌ಗಳು ಎಫ್‌ಡಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದ್ದು ಇದರ ಪರಿಣಾಮವಾಗಿ, ಬ್ಯಾಂಕ್ ಎಫ್‌ಡಿಗಳು ಜನರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ. ಶುಕ್ರವಾರ (ಮಾ. 31) ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳಾದ ಪಿಪಿಎಫ್, ಎನ್‌ಎಸ್‌ಸಿ, ಎಸ್‌ಎಸ್‌ವೈ ಮತ್ತು ಪೋಸ್ಟ್ ಆಫೀಸ್ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಉಳಿತಾಯ ಯೋಜನೆಗಳಿಗಿಂತ ಎಫ್ಡಿಗಳು ಹೆಚ್ಚಿನ ಆದಾಯವನ್ನು ನೀಡುತ್ತಿವೆಯೇ? ಹೋಲಿಕೆ ಇಲ್ಲಿದೆ.
ಬ್ಯಾಂಕ್ ಎಫ್ಡಿಗಳು
ಬ್ಯಾಂಕ್ ಸ್ಥಿರ ಠೇವಣಿಗಳು ಕೆಲ ಸಮಯದ ಠೇವಣಿಗಳಾಗಿದ್ದು, ಇದರಲ್ಲಿ ಠೇವಣಿದಾರರು ತಮ್ಮ ಹಣವನ್ನು 6 ತಿಂಗಳು, 1 ವರ್ಷ, 3 ವರ್ಷ ಅಥವಾ 5 ವರ್ಷಗಳವರೆಗೆ ಇಡುತ್ತಾರೆ. ಈ ನಿಶ್ಚಿತ ಠೇವಣಿಯ ಮೇಲೆ ಬ್ಯಾಂಕ್ ಸ್ಥಿರ ವಾರ್ಷಿಕ ಬಡ್ಡಿ ದರಗಳನ್ನು ನೀಡುತ್ತದೆ ಮತ್ತು FD ಅವಧಿ ಮತ್ತು ಠೇವಣಿದಾರರ ವಯಸ್ಸಿನ ಆಧಾರದ ಮೇಲೆ ದರಗಳು ಬದಲಾಗುತ್ತವೆ. ಪ್ರಸ್ತುತ, ಎಚ್‌ಡಿಎಫ್‌ಸಿ ಬ್ಯಾಂಕ್ ಸಾಮಾನ್ಯ ಜನರಿಗೆ ಶೇಕಡಾ 7.1 ರವರೆಗೆ ಮತ್ತು ಹಿರಿಯ ನಾಗರಿಕರಿಗೆ (60 ವರ್ಷಕ್ಕಿಂತ ಮೇಲ್ಪಟ್ಟವರು) ಶೇಕಡಾ 7.6 ರವರೆಗೆ ಬಡ್ಡಿದರಗಳನ್ನು ನೀಡುತ್ತದೆ. PNB ಸಾಮಾನ್ಯ ಜನರಿಗೆ ಶೇಕಡಾ 7.25 ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 7.75 ವರೆಗೆ ನೀಡುತ್ತದೆ. ICICI ಬ್ಯಾಂಕ್ ಸಾಮಾನ್ಯ ಜನರಿಗೆ 7.1 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ 7.6 ಪ್ರತಿಶತದವರೆಗೆ ನೀಡುತ್ತದೆ.
ಸಣ್ಣ ಉಳಿತಾಯ ಯೋಜನೆಗಳು
ನಾಗರಿಕರನ್ನು ಪ್ರೋತ್ಸಾಹಿಸಲು ಸರ್ಕಾರದಿಂದ ನಿರ್ವಹಿಸಲ್ಪಡುವ ಉಳಿತಾಯ ಯೋಜನೆಗಳಾಗಿವೆ. ಉಳಿತಾಯ ಯೋಜನೆಗಳು ಮೂರು ವಿಭಾಗಗಳನ್ನು ಹೊಂದಿವೆ – ಉಳಿತಾಯ ಠೇವಣಿಗಳು, ಸಾಮಾಜಿಕ ಭದ್ರತಾ ಯೋಜನೆಗಳು ಮತ್ತು ಮಾಸಿಕ ಆದಾಯ ಯೋಜನೆ. ಉಳಿತಾಯ ಠೇವಣಿಗಳಲ್ಲಿ 1-3-ವರ್ಷದ ಸಮಯದ ಠೇವಣಿ ಇದ್ದು ಇದನ್ನು 5 ವರ್ಷದ ವರೆಗೆ ಮುಂದುವರೆಸಬಹುದಾಗಿದೆ. ಇವುಗಳಲ್ಲಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (NSC) ಮತ್ತು ಕಿಸಾನ್ ವಿಕಾಸ್ ಪತ್ರ (KVP) ನಂತಹ ಉಳಿತಾಯ ಪ್ರಮಾಣಪತ್ರಗಳೂ ಸೇರಿವೆ. ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ ಸಮೃದ್ಧಿ ಖಾತೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿವೆ. ಮಾಸಿಕ ಆದಾಯ ಯೋಜನೆಯು ಮಾಸಿಕ ಆದಾಯ ಖಾತೆಯನ್ನು ಒಳಗೊಂಡಿರುತ್ತದೆ.
ಜೂನ್ 2023 ತ್ರೈಮಾಸಿಕದಲ್ಲಿ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಇತ್ತೀಚಿನ ಬಡ್ಡಿ ದರಗಳು:
ಉಳಿತಾಯ ಠೇವಣಿ: 4 ಶೇ
1-ವರ್ಷದ ಪೋಸ್ಟ್ ಆಫೀಸ್ ಸಮಯದ ಠೇವಣಿಗಳು: 6.8 ಶೇ.
2-ವರ್ಷದ ಪೋಸ್ಟ್ ಆಫೀಸ್ ಸಮಯದ ಠೇವಣಿಗಳು: 6.9 ಶೇ.
3-ವರ್ಷದ ಪೋಸ್ಟ್ ಆಫೀಸ್ ಸಮಯದ ಠೇವಣಿಗಳು: 7 ಶೇ.
5-ವರ್ಷದ ಪೋಸ್ಟ್ ಆಫೀಸ್ ಸಮಯದ ಠೇವಣಿಗಳು: 7.5 ಶೇ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (NSC): 7.7 ಶೇ.
ಕಿಸಾನ್ ವಿಕಾಸ್ ಪತ್ರ: ಶೇಕಡಾ 7.5 (115 ತಿಂಗಳು)
ಸಾರ್ವಜನಿಕ ಭವಿಷ್ಯ ನಿಧಿ: 7.1 ಶೇ.
ಸುಕನ್ಯಾ ಸಮೃದ್ಧಿ ಖಾತೆ: 8.0 ಶೇ.
ಮೇ ತಿಂಗಳಿನಿಂದ ರಿಸರ್ವ್ ಬ್ಯಾಂಕ್ ಬೆಂಚ್ ಮಾರ್ಕ್ ಸಾಲದ ದರವನ್ನು ಶೇ.2.5 ರಿಂದ ಶೇ.6.5ಕ್ಕೆ ಏರಿಸಿದ್ದು, ಬ್ಯಾಂಕ್ ಗಳು ಠೇವಣಿಗಳ ಮೇಲಿನ ಬಡ್ಡಿದರವನ್ನೂ ಹೆಚ್ಚಿಸುವಂತೆ ಮಾಡಿದೆ. ಆರ್‌ಬಿಐ ಕಳೆದ ತಿಂಗಳು ರೆಪೊ ದರ ಅಥವಾ ಅಲ್ಪಾವಧಿ ಸಾಲ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿತ್ತು. ಮೇ ತಿಂಗಳಲ್ಲಿ 40 ಬೇಸಿಸ್ ಪಾಯಿಂಟ್‌ಗಳ ಹೆಚ್ಚಳ ಮತ್ತು ಜೂನ್, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ತಲಾ 50 ಬೇಸಿಸ್ ಪಾಯಿಂಟ್‌ಗಳ ಹೆಚ್ಚಳದ ನಂತರ ಇದು ಸತತ ಆರನೇ ಬಾರಿ ದರ ಏರಿಕೆಯಾಗಿದೆ. ಒಟ್ಟಾರೆಯಾಗಿ, ಕಳೆದ ವರ್ಷ ಮೇ ತಿಂಗಳಿನಿಂದ ಆರ್‌ಬಿಐ ಬೆಂಚ್‌ಮಾರ್ಕ್ ದರವನ್ನು ಶೇಕಡಾ 2.5 ರಷ್ಟು ಹೆಚ್ಚಿಸಿದೆ.
ಪ್ರೀತಿ ಭಟ್, ಗುಣವಂತೆ
Published On - 3:25 pm, Sat, 1 April 23