ಅಕ್ಸೆಂಚರ್ ಕೊಟ್ಟ ಒಂದು ರಿಪೋರ್ಟ್​ಗೆ ಭಾರತದ ಷೇರುಬಜಾರು ಅಲ್ಲೋಲಕಲ್ಲೋಲ; ಶುಕ್ರವಾರ 2 ಲಕ್ಷ ಕೋಟಿ ರೂ ನಷ್ಟ

Indian stock market news: ಭಾರತದ ಷೇರು ಮಾರುಕಟ್ಟೆ ಜೂನ್ 19ರಂದು ತೀವ್ರ ಕುಸಿತ ಕಂಡಿದೆ. ಅದರಲ್ಲೂ ಐಟಿ ಸೆಕ್ಟರ್​ನ ಷೇರುಗಳು ಝರ್ರೆಂದು ಜಾರಿವೆ. ಐಟಿ ದೈತ್ಯ ಕಂಪನಿ ಎನಿಸಿದ ಅಕ್ಸೆಂಚರ್ ತನ್ನ ಭವಿಷ್ಯದ ಆದಾಯದ ವಿಚಾರದಲ್ಲಿ ನೆಗಟಿವ್ ರಿಪೋರ್ಟ್ ಕೊಟ್ಟ ಹಿನ್ನೆಲೆಯಲ್ಲಿ ಭಾರತದ ಐಟಿ ಕಂಪನಿಗಳ ಲಾಭದ ಬಗ್ಗೆ ಹೂಡಿಕೆದಾರರಿಗೆ ಆತಂಕ ತಂದಿದಂತಿದೆ. ಹೀಗಾಗಿ, ಷೇರುಗಳನ್ನು ಆತುರದಿಂದ ಮಾರುತ್ತಿರುವುದು ಕಂಡುಬಂದಿದೆ.

ಅಕ್ಸೆಂಚರ್ ಕೊಟ್ಟ ಒಂದು ರಿಪೋರ್ಟ್​ಗೆ ಭಾರತದ ಷೇರುಬಜಾರು ಅಲ್ಲೋಲಕಲ್ಲೋಲ; ಶುಕ್ರವಾರ 2 ಲಕ್ಷ ಕೋಟಿ ರೂ ನಷ್ಟ
ಷೇರು ಮಾರುಕಟ್ಟೆ

Updated on: Jun 19, 2026 | 12:56 PM

ನವದೆಹಲಿ, ಜೂನ್ 19: ಕಳೆದ ಐದು ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿದ್ದ ಷೇರು ಮಾರುಕಟ್ಟೆಯ (Stock Market) ಓಟಕ್ಕೆ ಶುಕ್ರವಾರ ಬ್ರೇಕ್ ಬಿದ್ದಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಮುಂಜಾನೆಯ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಸುಮಾರು 750 ರಿಂದ 786 ಪಾಯಿಂಟ್‌ಗಳಷ್ಟು ಭಾರಿ ಕುಸಿತ ಕಂಡು 76,624 ರ ಮಟ್ಟಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ ಕೂಡ 200 ಕ್ಕೂ ಹೆಚ್ಚು ಪಾಯಿಂಟ್‌ಗಳನ್ನು ಕಳೆದುಕೊಂಡು 24,000 ರ ಮಟ್ಟಕ್ಕಿಂತ ಕೆಳಗೆ ಇಳಿದಿದೆ. ಐಟಿ ಸಂಸ್ಥೆಯಾದ ಅಕ್ಸೆಂಚರ್ ಕೊಟ್ಟ ಅದರ ಗೈಡೆನ್ಸ್ ರಿಪೋರ್ಟ್ (ಆದಾಯ ಮುನ್ನೋಟ) ಭಾರತದ ಷೇರು ಬಜಾರಿನಲ್ಲಿ ಅಲ್ಲೋಲಕಲ್ಲೋಲವನ್ನೇ ತಂದಿಟ್ಟಿದೆ. ಟೆಲಿಕಾಂ, ಇಂಡಸ್ಟ್ರಿಯಲ್ಸ್, ಬ್ಯಾಂಕಿಂಗ್ ಇತ್ಯಾದಿ ಸೆಕ್ಟರ್ ಕಂಪನಿಗಳು ಪಾಲಿಸಿಟಿವ್ ಆದರೂ ಐಟಿ ಕಂಪನಿಗಳ ಮಹಾಕುಸಿತವು ಇಡೀ ಮಾರುಕಟ್ಟೆಯನ್ನು ಕೆಳಗೆ ಎಳೆದಿದೆ. ಶುಕ್ರವಾರ ಒಂದೇ ದಿನ ಮಾರುಕಟ್ಟೆಯಲ್ಲಿನ ಹೂಡಿಕೆದಾರರಿಗೆ ಬರೋಬ್ಬರಿ ಎರಡು ಲಕ್ಷ ಕೋಟಿ ರೂನಷ್ಟು ನಷ್ಟವಾಗಿದೆ.

ಅಕ್ಸೆಂಚರ್ ಎಫೆಕ್ಟ್; ಮನಬಂದಂತೆ ಬಿಕರಿಯಾಗುತ್ತಿರುವ ಐಟಿ ಷೇರುಗಳು

ಜಾಗತಿಕ ಐಟಿ ದೈತ್ಯ ಕಂಪನಿಯಾದ ಅಕ್ಸೆಂಚರ್ (Accenture) ತನ್ನ ಆದಾಯದ ಬೆಳವಣಿಗೆಯ ಮುನ್ಸೂಚನೆಯನ್ನು (Revenue Growth Guidance) ಕಡಿತಗೊಳಿಸಿದೆ. ಇದು ಜಾಗತಿಕವಾಗಿ ತಂತ್ರಜ್ಞಾನದ ಮೇಲಿನ ವೆಚ್ಚ ಮತ್ತು ಬೇಡಿಕೆ ಕಡಿಮೆಯಾಗುತ್ತಿರುವುದನ್ನು ಸೂಚಿಸುತ್ತದೆ. ಇದರಿಂದಾಗಿ ಭಾರತೀಯ ಐಟಿ ಕಂಪನಿಗಳ ಮೇಲೂ ನಕಾರಾತ್ಮಕ ಪರಿಣಾಮ ಬೀರಿದ್ದು, ನಿಫ್ಟಿ ಐಟಿ ಸೂಚ್ಯಂಕವು ಶೇಕಡಾ 5-6 ರಷ್ಟು ಕುಸಿತ ಕಂಡಿದೆ.

ಇದನ್ನೂ ಓದಿ: ಇನ್ಸ್​ಟಾ ಸ್ಕ್ರೋಲ್ ಮಾಡುವಾಗ ಬೇಡದ್ದು ಬರುತ್ತಿವೆಯಾ? ನೀವಿಚ್ಛಿಸುವವೇ ಫೀಡ್​ನಲ್ಲಿ ಬರುವಂತೆ ಮಾಡುತ್ತದೆ ಈ ಹೊಸ ಮೆಟಾ ಫೀಚರ್

ಐಟಿ ಷೇರುಗಳು ಶೇ. 8ರವರೆಗೂ ಕುಸಿತ ಕಂಡಿವೆ. ಇನ್ಫೋಸಿಸ್ (Infosys) ಶೇ. 8 ರಷ್ಟು, ಟೆಕ್ ಮಹೀಂದ್ರಾ ಶೇ. 6.3 ರಷ್ಟು, ಟಿಸಿಎಸ್ (TCS) ಶೇ. 6 ರಷ್ಟು ಮತ್ತು ಎಚ್‌ಸಿಎಲ್ ಟೆಕ್ ಶೇ. 5.3 ರಷ್ಟು ಕುಸಿದವು. ಐಟಿ ಕಂಪನಿಗಳು ಇರುವ ಹೆಚ್ಚಿನ ಸೂಚ್ಯಂಕಗಳು ನೆಗಟಿವ್ ರಿಟರ್ನ್ ಕೊಟ್ಟಿವೆ. ಇವೆಲ್ಲವೂ ನಿಫ್ಟಿ50 ಸೂಚ್ಯಂಕದ ಭಾಗಗಳಾಗಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರ (FII) ಮಾರಾಟ

ಶುಕ್ರವಾರ ಷೇರು ಮಾರುಕಟ್ಟೆ ಭಾರೀ ಕುಸಿಯಲು ಐಟಿ ಮಾತ್ರವೇ ಅಲ್ಲ, ಇನ್ನೂ ಕೆಲ ಕಾರಣಗಳಿವೆ. ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ತಮ್ಮ ಹಣವನ್ನು ಮತ್ತೆ ಹಿಂಪಡೆಯತೊಡಗುತ್ತಿದ್ದಾರೆ.

ಜಾಗತಿಕ ಮಾರುಕಟ್ಟೆಯ ನಕಾರಾತ್ಮಕ ಸಂಕೇತಗಳು

ಅಮೆರಿಕದ ಷೇರು ಮಾರುಕಟ್ಟೆಯ ಫ್ಯೂಚರ್ಸ್ (ವಿಶೇಷವಾಗಿ ನಾಸ್‌ಡಾಕ್ ಫ್ಯೂಚರ್ಸ್ ಶೇ. 0.71 ರಷ್ಟು) ಕುಸಿತದ ಹಾದಿಯಲ್ಲಿದ್ದುದು ಭಾರತೀಯ ಮಾರುಕಟ್ಟೆಯ ಮೇಲೆಯೂ ಇದು ನಕಾರಾತ್ಮಕ ಒತ್ತಡವನ್ನು ಉಂಟುಮಾಡಿತು.

ಇದನ್ನೂ ಓದಿ: ಭಾರತದ ಡಿಫೆನ್ಸ್ ಸೆಕ್ಟರ್​ನಲ್ಲಿ ದಾಖಲೆಯ ₹1.78 ಲಕ್ಷ ಕೋಟಿ ಮೌಲ್ಯದ ಉತ್ಪಾದನೆ; ರಫ್ತು ಕೂಡ ಭರ್ಜರಿ ಏರಿಕೆ

ಮಾರುಕಟ್ಟೆಯ ಭಯದ ಸೂಚ್ಯಂಕ ಎಂದೇ ಕರೆಯಲ್ಪಡುವ ‘ಇಂಡಿಯಾ ವಿಐಎಕ್ಸ್’ ಶೇ. 6 ರಷ್ಟು ಏರಿಕೆಯಾಗಿ 13.26 ಕ್ಕೆ ತಲುಪಿದೆ. ಇದು ಮುಂಬರುವ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಇನ್ನೂ ಹೆಚ್ಚಿನ ಏರಿಳಿತಗಳು ಮತ್ತು ಅನಿಶ್ಚಿತತೆ ಇರಬಹುದು ಎಂಬುದನ್ನು ತೋರಿಸುತ್ತದೆ.

ಇಡೀ ಮಾರುಕಟ್ಟೆ ನಷ್ಟದಲ್ಲಿದ್ದರೂ ಫಾರ್ಮಾ (Pharma) ವಲಯದ ಕೆಲವು ಷೇರುಗಳು ಹಾಗೂ ಎನ್‌ಟಿಪಿಸಿ, ಭಾರ್ತಿ ಏರ್‌ಟೆಲ್ ಮತ್ತು ಪವರ್ ಗ್ರಿಡ್ ಕಂಪನಿಗಳು ಮಾತ್ರ ಶುಕ್ರವಾರ ಲಾಭ ಗಳಿಸುವಲ್ಲಿ ಯಶಸ್ವಿಯಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us