ಭಾರತದ ಡಿಫೆನ್ಸ್ ಸೆಕ್ಟರ್ನಲ್ಲಿ ದಾಖಲೆಯ ₹1.78 ಲಕ್ಷ ಕೋಟಿ ಮೌಲ್ಯದ ಉತ್ಪಾದನೆ; ರಫ್ತು ಕೂಡ ಭರ್ಜರಿ ಏರಿಕೆ
India's defence production and exports see big increase in 2025-26: ಭಾರತದ ರಕ್ಷಣಾ ಕ್ಷೇತ್ರದಿಂದ 2025-26ರಲ್ಲಿ ಆದ ಒಟ್ಟು ಉತ್ಪಾದನೆ 1.78 ಲಕ್ಷ ಕೋಟಿ ರೂ ಎನ್ನಲಾಗಿದೆ. ಹಿಂದಿನ ವರ್ಷದಕ್ಕೆ ಹೋಲಿಸಿದರೆ ಉತ್ಪಾದನೆ ಶೇ. 15.6ರಷ್ಟು ಹೆಚ್ಚಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಮಾಹಿತಿ ಹಂಚಿಕೊಂಡಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಿದಂತೆ ರಫ್ತು ಕೂಡ ಗಣನೀಯವಾಗಿ ವೃದ್ಧಿಸಿದೆ.

ನವದೆಹಲಿ, ಜೂನ್ 18: ಭಾರತದ ರಕ್ಷಣಾ ಕ್ಷೇತ್ರ ಮಿಂಚಿನ ಸಂಚಾರ ನಡೆಸುತ್ತಿದೆ. ಸರ್ಕಾರದ ‘ಸ್ವಾವಲಂಬಿ ಭಾರತ’ (Aatmanirbhar Bharat) ಯೋಜನೆಗೆ ಭಾರಿ ಯಶಸ್ಸು ಸಿಕ್ಕಿದೆ. ದೇಶದ ವಾರ್ಷಿಕ ರಕ್ಷಣಾ ಉತ್ಪಾದನೆಯು 2025-26ರ ಹಣಕಾಸು ವರ್ಷದಲ್ಲಿ (FY26) ಸಾರ್ವಕಾಲಿಕ ದಾಖಲೆಯಾದ ₹1.78 ಲಕ್ಷ ಕೋಟಿ ತಲುಪಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನಾಯಕತ್ವದಲ್ಲಿ ಇದು ಸಾಧ್ಯವಾಗಿದ್ದನ್ನು ತಿಳಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು, ರಕ್ಷಣಾ ಕ್ಷೇತ್ರದ ಉತ್ಪಾದನೆ, ರಫ್ತು ಇತ್ಯಾದಿ ಸಾಧನೆಗಳನ್ನು ಹಂಚಿಕೊಂಡಿದ್ದಾರೆ.
ಶೇ. 15.6 ರಷ್ಟು ಹೆಚ್ಚಿದ ರಕ್ಷಣಾ ಉತ್ಪಾದನೆ
ಕಳೆದ ಹಣಕಾಸು ವರ್ಷಕ್ಕೆ (2024-25) ಹೋಲಿಸಿದರೆ ಭಾರತದ ರಕ್ಷಣಾ ಉತ್ಪಾದನೆಯು ಈ ಬಾರಿ ಶೇ. 15.6 ರಷ್ಟು ಗಮನಾರ್ಹ ಬೆಳವಣಿಗೆ ಕಂಡಿದೆ. ಕಳೆದ ವರ್ಷ ಡಿಫೆನ್ಸ್ ಪ್ರೊಡಕ್ಷನ್ನ ಮೊತ್ತವು ₹1.54 ಲಕ್ಷ ಕೋಟಿಯಷ್ಟಿತ್ತು. ಈಗ ಅದು ₹1.78 ಲಕ್ಷ ಕೋಟಿ ತಲುಪಿದೆ.
ದೀರ್ಘಾವಧಿಯ ಪ್ರಗತಿಯನ್ನು ಗಮನಿಸಿದರೆ, 2020-21ರ ಹಣಕಾಸು ವರ್ಷದಲ್ಲಿ ದೇಶದ ರಕ್ಷಣಾ ಉತ್ಪಾದನೆ ₹84,643 ಕೋಟಿಯಷ್ಟಿತ್ತು. ಅಲ್ಲಿಂದ ಇಂದಿನವರೆಗೆ ಅಂದರೆ ಕೇವಲ 5 ವರ್ಷಗಳಲ್ಲಿ ಉತ್ಪಾದನೆಯು ಶೇ. 110 ರಷ್ಟು ಬೃಹತ್ ಬೆಳವಣಿಗೆಯನ್ನು ದಾಖಲಿಸಿದೆ. ಇನ್ನು 2013-14ರ ಸಾಲಿಗೆ (₹43,746 ಕೋಟಿ) ಹೋಲಿಸಿದರೆ ಇದು ಸರಿಸುಮಾರು 4 ಪಟ್ಟು ಹೆಚ್ಚಾಗಿದೆ.
ಇದನ್ನೂ ಓದಿ: ಕ್ಯಾರಿ ಬ್ಯಾಗ್ಗೆ ₹10 ವಸೂಲಿ; ಶೂ ಕಂಪನಿಗೆ ಬಿತ್ತು ₹8,000 ದಂಡ; ಇದು ವ್ಯಾಪಾರಿಗಳು, ಗ್ರಾಹಕರಿಗೆ ಕಣ್ತೆರೆಸುವ ಪ್ರಕರಣ
ಖಾಸಗಿ ವಲಯದ ಸಾರ್ವಕಾಲಿಕ ದಾಖಲೆಯ ಕೊಡುಗೆ
ರಕ್ಷಣಾ ಉತ್ಪಾದನೆಯಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಷ್ಟೇ ಅಲ್ಲದೆ, ಖಾಸಗಿ ಕಂಪನಿಗಳ ಪಾಲ್ಗೊಳ್ಳುವಿಕೆಯೂ ಹೆಚ್ಚಾಗಿದೆ. ರಕ್ಷಣಾ ಕ್ಷೇತ್ರದಲ್ಲಿನ ಒಟ್ಟು ಉತ್ಪಾದನೆಯಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಪಾಲು ಶೇ. 76ರಷ್ಟಿದೆ. ಖಾಸಗಿ ವಲಯದ ಕೊಡುಗೆ ಶೇ. 24 ಮಾತ್ರವೇ ಇದೆ. ಆದರೂ ಕೂಡ ಇತಿಹಾಸದಲ್ಲೇ ಈ ಸೆಕ್ಟರ್ನ ಗರಿಷ್ಠ ಸಾಧನೆ ಎನಿಸಿದೆ. ಪ್ರೈವೇಟ್ ಸೆಕ್ಟರ್ ಕಂಪನಿಗಳ ಡಿಫೆನ್ಸ್ ಪ್ರೊಡಕ್ಷನ್ನ ಒಟ್ಟು ಮೊತ್ತ ₹42,000 ಕೋಟಿಯಷ್ಟಿದೆ.
ದಾಖಲೆ ಬರೆದ ರಕ್ಷಣಾ ರಫ್ತು
ದೇಶೀಯವಾಗಿ ಉತ್ಪಾದನೆ ಹೆಚ್ಚಿರುವುದು ಭಾರತದ ರಫ್ತು ಸಾಮರ್ಥ್ಯವನ್ನೂ (Defence Exports) ಬಲಪಡಿಸಿದೆ. 2025-26ರ ಸಾಲಿನಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ದಾಖಲೆಯ ₹38,424 ಕೋಟಿ ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ರಕ್ಷಣಾ ಉತ್ಪನ್ನಗಳಿಗೆ ಇರುವ ಬೇಡಿಕೆಯನ್ನು ತೋರಿಸುತ್ತದೆ.
ಇದನ್ನೂ ಓದಿ: 2025-26ಕ್ಕೆ ಶೇ. 8.25 ಇಪಿಎಫ್ ಬಡ್ಡಿಗೆ ಅನುಮೋದನೆ; ಸಕ್ರಿಯವಲ್ಲದ ಇಪಿಎಫ್ ಖಾತೆಗಳಿಗೂ ಸಿಗುತ್ತಾ ಹಣ?
ರಕ್ಷಣಾ ಇಲಾಖೆ, ಸಾರ್ವಜನಿಕ ಸ್ವಾಮ್ಯದ ಉದ್ಯಮಗಳು (DPSUs), ಖಾಸಗಿ ಉದ್ಯಮಗಳು ಮತ್ತು ಸ್ಟಾರ್ಟ್‌ಅಪ್‌ಗಳ ಜಂಟಿ ಪರಿಶ್ರಮದಿಂದ ಈ ಮೈಲಿಗಲ್ಲು ಸಾಧ್ಯವಾಗಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಪೂರಕ ನೀತಿಗಳು ಮತ್ತು ರಫ್ತು ಸಾಮರ್ಥ್ಯದೊಂದಿಗೆ ಈ ವಲಯವು ಮತ್ತಷ್ಟು ವೇಗವಾಗಿ ಮುನ್ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




