AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2025-26ಕ್ಕೆ ಶೇ. 8.25 ಇಪಿಎಫ್ ಬಡ್ಡಿಗೆ ಅನುಮೋದನೆ; ಸಕ್ರಿಯವಲ್ಲದ ಇಪಿಎಫ್ ಖಾತೆಗಳಿಗೂ ಸಿಗುತ್ತಾ ಹಣ?

Govt ratifies epf interest rate of 8.25% for 2025-26: ಕಳೆದ ವರ್ಷಕ್ಕೆ ಇಪಿಎಫ್ ಖಾತೆಗಳಿಗೆ ಶೇ. 8.25 ಬಡ್ಡಿ ದರ ನಿಗದಿಪಡಿಸಿದ ಇಪಿಎಫ್​ಒ ನಿರ್ಧಾರಕ್ಕೆ ಕೇಂದ್ರ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ. ಇದರೊಂದಿಗೆ ದೇಶದ ಏಳು ಕೋಟಿಗೂ ಅಧಿಕ ಇಪಿಎಫ್ ಖಾತೆಗಳಿಗೆ ಬಡ್ಡಿ ಹಣ ಜಮೆ ಆಗಲಿದೆ. ಇಪಿಎಫ್ ಖಾತೆಗಳು ವಿಲೀನವಾಗದಿದ್ದರೂ, ಸಕ್ರಿಯವಿಲ್ಲದ ಎಲ್ಲಾ ಹಳೆಯ ಇಪಿಎಫ್ ಖಾತೆಗಳಿಗೂ ಬಡ್ಡಿ ಹಣ ಜಮೆಯಾಗುತ್ತದೆ.

2025-26ಕ್ಕೆ ಶೇ. 8.25 ಇಪಿಎಫ್ ಬಡ್ಡಿಗೆ ಅನುಮೋದನೆ; ಸಕ್ರಿಯವಲ್ಲದ ಇಪಿಎಫ್ ಖಾತೆಗಳಿಗೂ ಸಿಗುತ್ತಾ ಹಣ?
ಇಪಿಎಫ್​ಒImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 18, 2026 | 5:09 PM

Share

ನವದೆಹಲಿ, ಜೂನ್ 18: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (EPFO) ಕೋಟ್ಯಂತರ ಸದಸ್ಯರಿಗೆ ಕೇಂದ್ರ ಸರ್ಕಾರವು ಖುಷಿ ಸುದ್ದಿ ನೀಡಿದೆ. 2025-26ರ ಹಣಕಾಸು ವರ್ಷಕ್ಕೆ (FY26) ನೌಕರರ ಭವಿಷ್ಯ ನಿಧಿ (EPF) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ. 8.25 ರಷ್ಟು ನಿಗದಿಪಡಿಸುವ ಪ್ರಸ್ತಾವನೆಗೆ ಕೇಂದ್ರ ಹಣಕಾಸು ಸಚಿವಾಲಯವು ಅಧಿಕೃತವಾಗಿ ಅನುಮೋದನೆ (Ratify) ನೀಡಿದೆ. ಕೇಂದ್ರ ಸರ್ಕಾರದ ಒಪ್ಪಿಗೆ ಸಿಕ್ಕಿರುವುದರಿಂದ, ಇಪಿಎಫ್‌ಒ (EPFO) ಸಂಸ್ಥೆಯು ಕಾರ್ಮಿಕ ಸಚಿವಾಲಯದ ನಿರ್ದೇಶನದಂತೆ 2025-26ರ ಸಾಲಿನ ಬಡ್ಡ ಹಣವನ್ನು ದೇಶದ 7 ಕೋಟಿಗೂ ಅಧಿಕ ಚಂದಾದಾರರ ಖಾತೆಗಳಿಗೆ ಇದೇ ತಿಂಗಳೊಳಗೆ (ಜೂನ್ 2026) ಜಮೆ ಮಾಡುವ ಸಾಧ್ಯತೆಯಿದೆ.

ಹೊಸ ತಂತ್ರಜ್ಞಾನದ ಲಾಭ

ಇಪಿಎಫ್‌ಒ ಅಭಿವೃದ್ಧಿಪಡಿಸಿರುವ ಹೊಸ ತಂತ್ರಜ್ಞಾನ ವ್ಯವಸ್ಥೆಯಿಂದಾಗಿ (New Ecosystem), ಸರ್ಕಾರದಿಂದ ಅನುಮೋದನೆ ಸಿಕ್ಕ ತಕ್ಷಣವೇ ಯಾವುದೇ ವಿಳಂಬವಿಲ್ಲದೆ ಬಡ್ಡಿಯ ಮೊತ್ತವು ನೇರವಾಗಿ ಮತ್ತು ತಕ್ಷಣವೇ ಇಪಿಎಫ್ ಖಾತೆಗಳಿಗೆ ಕ್ರೆಡಿಟ್ ಆಗಲಿದೆ.

ಸತತ ಮೂರನೇ ವರ್ಷವೂ ಒಂದೇ ದರ

ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಅವರ ನೇತೃತ್ವದಲ್ಲಿ ಮಾರ್ಚ್ 2, 2026 ರಂದು ನಡೆದ ಇಪಿಎಫ್‌ಒನ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯಾದ ‘ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್’ (CBT) ಸಭೆಯಲ್ಲಿ 8.25% ಬಡ್ಡಿ ದರವನ್ನು ಶಿಫಾರಸು ಮಾಡಲಾಗಿತ್ತು. ಭಾರತ ಸರ್ಕಾರವು ಇಪಿಎಫ್‌ನ ಗ್ಯಾರಂಟರ್ ಆಗಿರುವುದರಿಂದ ಇದಕ್ಕೆ ಹಣಕಾಸು ಸಚಿವಾಲಯದ ಒಪ್ಪಿಗೆ ಬೇಕಾಗಿತ್ತು. ಪ್ರಸ್ತುತ ಸರ್ಕಾರ ಇದನ್ನು ಯಥಾವತ್ತಾಗಿ ಅಂಗೀಕರಿಸಿದೆ. ಇದರೊಂದಿಗೆ ಸತತ ಮೂರನೇ ವರ್ಷವೂ ಇಪಿಎಫ್ ಬಡ್ಡಿ ದರವನ್ನು 8.25% ನಲ್ಲೇ ಕಾಯ್ದುಕೊಳ್ಳಲಾಗಿದೆ. 2023-24, 2024-25 ರಲ್ಲೂ ಇಪಿಎಫ್ ಬಡ್ಡಿ ದರ 8.25% ಇತ್ತು.

ಇದನ್ನೂ ಓದಿ: ಪಿಎಂ ಕಿಸಾನ್ 23ನೇ ಕಂತು ಬಿಡುಗಡೆ ದಿನಾಂಕ ಪ್ರಕಟ; ಇನ್ನೆರಡು ದಿನದಲ್ಲಿ ರೈತರ ಖಾತೆಗೆ ಬರಲಿದೆ 2,000 ರೂ

ಕೆಲವು ವರ್ಷಗಳಿಂದ ಇರುವ ಇಪಿಎಫ್ ಬಡ್ಡಿ ದರಗಳು

  • 2025-26: 8.25%
  • 2024-25: 8.25%
  • 2023-24: 8.25%
  • 2022-23: 8.15%
  • 2021-22: 8.10%

2021-22ರಲ್ಲಿನ ಶೇ. 8.1 ಬಡ್ಡಿದರವು ಕಳೆದ ನಾಲ್ಕು ದಶಕಗಳಲ್ಲೇ ಅತ್ಯಂತ ಕಡಿಮೆ ಇಪಿಎಫ್ ಬಡ್ಡಿಯಾಗಿದೆ. 90ರ ದಶಕದ ಒಂದು ವರ್ಷದಲ್ಲಿ ಇಪಿಎಫ್ ಬಡ್ಡಿದರ ಶೇ. 12ರಷ್ಟಿತ್ತು. ಇದೂವರೆಗಿನ ಗರಿಷ್ಠ ಬಡ್ಡಿ ದರ ಅದು. 2010-22ರಲ್ಲಿ ಬಡ್ಡಿದರ ಶೇ. 9.50ರಷ್ಟು ಇತ್ತು. ಕುತೂಹಲಕ್ಕೆ ತಿಳಿಸುವುದಾದರೆ, ಇಪಿಎಫ್​ಒ ಸಂಸ್ಥೆ ಸ್ಥಾಪನೆಯಾಗಿದ್ದು 1952ರಲ್ಲಿ. ಅದು ಇಪಿಎಫ್ ಖಾತೆಗಳಿಗೆ ಘೋಷಿಸಿದ ಆರಂಭಿಕ ಬಡ್ಡಿದರ ಶೇ. 3 ಮಾತ್ರ.

ಸಕ್ರಿಯ ಖಾತೆಗಳಿಗೆ ಮಾತ್ರವೇ ಸಿಗುತ್ತಾ ಬಡ್ಡಿ?

ಸದ್ಯ ಸಕ್ರಿಯವಾಗಿರುವ ಖಾತೆಗಳಿಗೆ, ಅಂದರೆ, ಉದ್ಯೋಗಿಗಳು ಹಾಗೂ ಕಂಪನಿಗಳಿಂದ ಪ್ರತೀ ತಿಂಗಳು ಹಣ ಜಮೆಯಾಗುತ್ತಿರುವ ಇಪಿಎಫ್ ಖಾತೆಗಳಿಗೆ ಮಾತ್ರ ಬಡ್ಡಿ ಹಣ ಜಮೆ ಆಗುತ್ತದೆ ಎಂದು ಕೆಲ ಮಾಧ್ಯಮಗಳಲ್ಲಿ ಹೇಳುವುದುಂಟು. ಆದರೆ, ವಾಸ್ತವದಲ್ಲಿ ಹಾಗೇನಿಲ್ಲ. ಎಲ್ಲಾ ಇಪಿಎಫ್ ಖಾತೆಗಳಿಗೂ ಸರ್ಕಾರದ ವತಿಯಿಂದ ಬಡ್ಡಿ ಹಣ ಪ್ರತೀ ವರ್ಷ ಜಮೆ ಆಗುತ್ತಿರುತ್ತದೆ. ಉದ್ಯೋಗಿ ವಯಸ್ಸು 60 ವರ್ಷ ಮುಟ್ಟುವವರೆಗೂ ಇದು ನಿಲ್ಲುವುದಿಲ್ಲ.

ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಬ್ಯಾರಲ್​ಗೆ 80 ಡಾಲರ್​ಗಿಂತ ಕಡಿಮೆ; ಪೆಟ್ರೋಲ್, ಡೀಸಲ್ ಬೆಲೆ ಕಡಿಮೆಗೊಳ್ಳುತ್ತಾ?

ಉತ್ತಮ ನಿವೃತ್ತಿ ಯೋಜನೆ ಇಪಿಎಫ್

ಖಾಸಗಿ ವಲಯದ ಉದ್ಯೋಗಿಗಳಿಗೆ ದೀರ್ಘಾವಧಿಯ ಉಳಿತಾಯದ ದೃಷ್ಟಿಯಿಂದ ಇಪಿಎಫ್ ಉತ್ತಮ ಸ್ಕೀಮ್ ಆಗಿದೆ. ಈ 8.25% ಬಡ್ಡಿ ದರ ಕಡಿಮೆಯೇನಲ್ಲ. ಫಿಕ್ಸೆಡ್ ಡೆಪಾಸಿಟ್​ಗಳಿಗಿಂತಲೂ ಉತ್ತಮ ರಿಟರ್ನ್ಸ್ ತರಬಲ್ಲುದು ಇಪಿಎಫ್. ಹೀಗಾಗಿ, ಉದ್ಯೋಗಿಗಳು ಇಪಿಎಫ್ ಅಕೌಂಟ್​ನಿಂದ ಹಣ ಹಿಂಪಡೆಯುವ ಬದಲು ವಿಪಿಎಫ್ ಇತ್ಯಾದಿ ಮೂಲಕ ಹೂಡಿಕೆ ಹೆಚ್ಚಿಸಲು ಚಿಂತಿಸುವುದು ಉತ್ತಮ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us