ಕಚ್ಚಾ ತೈಲ ಬೆಲೆ ಬ್ಯಾರಲ್ಗೆ 80 ಡಾಲರ್ಗಿಂತ ಕಡಿಮೆ; ಪೆಟ್ರೋಲ್, ಡೀಸಲ್ ಬೆಲೆ ಕಡಿಮೆಗೊಳ್ಳುತ್ತಾ?
Will Petrol and Diesel see decrease in price as crude oil rates down to below 80$: ಬ್ಯಾರಲ್ಗೆ 145 ಡಾಲರ್ವರೆಗೂ ಏರಿದ್ದ ಕಚ್ಚಾ ತೈಲ ಬೆಲೆ ಈಗ 80 ಡಾಲರ್ಗಿಂತ ಕೆಳಗೆ ಕುಸಿದಿದೆ. ಇದರೊಂದಿಗೆ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಇಳಿಕೆಯಾಗಬಹುದು ಎನ್ನುವ ನಿರೀಕ್ಷೆಗಳು ಹುಟ್ಟಿವೆ. ಹಿಂದಿನ ಸಂದರ್ಭಗಳನ್ನು ಅವಲೋಕಿಸಿದಾಗ ಪೆಟ್ರೋಲ್ ಮತ್ತು ಡೀಸಲ್ನ ರೀಟೇಲ್ ಮಾರಾಟದಲ್ಲಿ ಬೆಲೆ ಇಳಿಕೆಯಾಗುವ ಸಾಧ್ಯತೆ ಕಡಿಮೆ. ಅದಕ್ಕೇನು ಕಾರಣ ಎನ್ನುವ ವಿವರ ಇಲ್ಲಿದೆ.

ನವದೆಹಲಿ, ಜೂನ್ 18: ಕೆಲ ದಿನಗಳ ಹಿಂದೆ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಘೋಷಣೆಯಾದ ನಂತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆಗಳು ಸತತವಾಗಿ ಇಳಿಮುಖವಾಗುತ್ತಿವೆ. ಮಾರ್ಚ್ ಮಧ್ಯಭಾಗದಲ್ಲಿ ಪ್ರತಿ ಬ್ಯಾರೆಲ್‌ಗೆ ಬರೋಬ್ಬರಿ $145 ದಾಟಿದ್ದ ಭಾರತದ ಕಚ್ಚಾ ತೈಲ ಖರೀದಿ ದರ (Indian crude oil basket), ಈಗ ಗಣನೀಯವಾಗಿ ಕುಸಿದು ಬ್ಯಾರೆಲ್‌ಗೆ $80 ಕ್ಕಿಂತಲೂ ಕೆಳಗೆ ಬಂದಿದೆ ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ. ಇದು ಸಾಮಾನ್ಯ ಜನರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗುವ ಹೊಸ ಭರವಸೆಯನ್ನು ಮೂಡಿಸಿದೆ.
ಇತ್ತೀಚಿನ ತೈಲ ಬೆಲೆಗಳ ವಿವರ
ಪೆಟ್ರೋಲಿಯಂ ಸಚಿವಾಲಯದ ಅಡಿಯಲ್ಲಿ ಬರುವ ಪಿಪಿಎಸಿ (PPAC) ದತ್ತಾಂಶದ ಪ್ರಕಾರ, ಜೂನ್ 16 ರ ವೇಳೆಗೆ ಭಾರತದ ಕಚ್ಚಾ ತೈಲ ಬಾಸ್ಕೆಟ್ ಬೆಲೆ $78.66 ಕ್ಕೆ ತಲುಪಿದೆ. ಯುದ್ಧ ಆರಂಭವಾಗುವ ಮುನ್ನ (ಫೆಬ್ರವರಿ 19 ರಂದು) ಇದು $70.70 ರಷ್ಟಿತ್ತು. ಅಂದರೆ ಬೆಲೆಗಳು ಈಗ ಯುದ್ಧದ ಪೂರ್ವದ ಮಟ್ಟಕ್ಕೆ ವೇಗವಾಗಿ ಮರಳುತ್ತಿವೆ.
ಗರಿಷ್ಠ ಮಟ್ಟದಿಂದ ಭಾರಿ ಕುಸಿತ
ಮಾರ್ಚ್ 17 ರಂದು ತೈಲ ದರವು ಸರಾಸರಿ $146.09 ರಷ್ಟು ಗರಿಷ್ಠ ಮಟ್ಟ ಮುಟ್ಟಿತ್ತು. ಆ ಬಳಿಕ ಏಪ್ರಿಲ್‌ನಲ್ಲಿ $114.48 ಮತ್ತು ಮೇ ತಿಂಗಳಲ್ಲಿ $106.23 ರಷ್ಟಿದ್ದ ತೈಲ ದರ, ಪ್ರಸ್ತುತ ಜೂನ್‌ನಲ್ಲಿ ಭಾರಿ ಇಳಿಕೆ ಕಂಡಿದೆ.
ಇದನ್ನೂ ಓದಿ: ವಾಯು, ಜಲ ಮತ್ತು ನೆಲ, ಮೂರೂ ಸ್ತರಗಳಲ್ಲೂ ಅಮೋಘವೆನಿಸಿದೆ ಭಾರತದ ಸ್ವಂತ ಬಲದ ರಕ್ಷಣಾ ಸಾಮರ್ಥ್ಯ
ತಕ್ಷಣವೇ ಬೆಲೆ ಕಡಿತಕ್ಕೆ ಇರುವ ಅಡ್ಡಿಗಳು ಯಾವುವು?
ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ, ಪೆಟ್ರೋಲ್, ಡೀಸಲ್ನ ರೀಟೇಲ್ ಬೆಲೆಗಳು ಇಳಿಕೆಯಾಗುವ ಸಾಧ್ಯತೆ ಕಡಿಮೆ. ಅದಕ್ಕೂ ಕೆಲ ಪ್ರಮುಖ ಕಾರಣಗಳಿವೆ.
ಕಚ್ಚಾ ತೈಲ ಅಗ್ಗಗೊಂಡರೆ ಅದು ತೈಲ ಕಂಪನಿಗಳ ಹಿಂದಿನ ನಷ್ಟ ಭರ್ತಿ ಮಾಡಲು ಸರಿಹೋಗಬಹುದು. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ತೈಲ ಬೆಲೆ ಗಗನಕ್ಕೇರಿದ್ದಾಗ ತೈಲ ಮಾರುಕಟ್ಟೆ ಕಂಪನಿಗಳು (OMCs) ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಮಾಡದ್ದರಿಂದ ಅನುಭವಿಸಿದ ನಷ್ಟವನ್ನು ಭರಿಸಿಕೊಳ್ಳಲು ಈ ಸಮಯವನ್ನು ಬಳಸಿಕೊಳ್ಳಬಹುದು.
ಸರ್ಕಾರ ಕೂಡ ತನ್ನ ಆದಾಯ ನಷ್ಟ ಸರಿದೂಗಿಸಲು ಯತ್ನಿಸಬಹುದು. ಸರ್ಕಾರ ಈ ಹಿಂದೆ ಪೆಟ್ರೋಲ್ ಮತ್ತು ಡೀಸಲ್ ಮೇಲಿನ ಅಬಕಾರಿ ಸುಂಕವನ್ನು (Excise Duty) ಪ್ರತಿ ಲೀಟರ್‌ಗೆ 10 ರೂಪಾಯಿಯಷ್ಟು ಕಡಿತಗೊಳಿಸಿತ್ತು. ಇದರಿಂದ ಸರ್ಕಾರಕ್ಕೆ ಆದಾಯ ನಷ್ಟವಾಗಿದೆ. ಹೀಗಾಗಿ, ಸರ್ಕಾರವು ಅಬಕಾರಿ ಸುಂಕ ಹೆಚ್ಚಿಸಬಹುದು.
ಹಾಗೆಯೇ, ಸರ್ಕಾರವ ಗೊಬ್ಬರ ಸಬ್ಸಿಡಿ ಹೊರೆಯನ್ನು ಸರಿದೂಗಿಸಲು ಈ ಸಮಯಾವಕಾಶ ಬಳಸಬಹುದು. ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ರಸಗೊಬ್ಬರ ಸಬ್ಸಿಡಿ ವೆಚ್ಚವು ₹1.71 ಲಕ್ಷ ಕೋಟಿಯಿಂದ ₹3.4 ಲಕ್ಷ ಕೋಟಿಗಿಂತಲೂ ಹೆಚ್ಚಾಗುವ ಅಂದಾಜಿದೆ. ಈ ಹೊರೆಯನ್ನು ನಿಭಾಯಿಸಲು ಸರ್ಕಾರ ತೈಲದ ಮೇಲಿನ ಆದಾಯವನ್ನು ಬಳಸಬಹುದು.
ಇದನ್ನೂ ಓದಿ: ಗಣಿತ ಪರೀಕ್ಷೆಯಲ್ಲಿ 51 ಅಂಕ ಗಳಿಸಿದ್ದ ಹುಡುಗ ಇವತ್ತು ಭಾರತದ ಅತಿದೊಡ್ಡ ಖಾಸಗಿ ಬಾಹ್ಯಾಕಾಶ ಕಂಪನಿ ಒಡೆಯ
ಪೆಟ್ರೋಲ್ ಬೆಲೆ ಇಳಿಕೆಯಿಂದ ದೇಶಕ್ಕಾಗುವ ಲಾಭಗಳೇನು?
ಒಂದು ವೇಳೆ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿಮೆ ಮಾಡಿದರೆ, ಅದರಿಂದ ಪರೋಕ್ಷವಾಗಿ ದೇಶದ ಆರ್ಥಿಕತೆಗೆ ದೊಡ್ಡ ಲಾಭವಾಗುವ ನಿರೀಕ್ಷೆ ಇದೆ.
- ಬಳಕೆ ಹೆಚ್ಚಳ: ತೈಲ ದರ ಇಳಿಕೆಯಾದರೆ ಜನರ ಖರ್ಚು ಮಾಡುವ ಸಾಮರ್ಥ್ಯ ಹೆಚ್ಚಿ, ಮಾರುಕಟ್ಟೆಯಲ್ಲಿ ವಹಿವಾಟು ಹೆಚ್ಚುತ್ತದೆ.
- ಹಣದುಬ್ಬರ ನಿಯಂತ್ರಣ: ಮುಂಬರುವ ತಿಂಗಳುಗಳಲ್ಲಿ ‘ಎಲ್ ನಿನೋ’ (El Nino) ಪ್ರಭಾವ ಹಾಗೂ ಕಡಿಮೆ ಮಳೆಯ ಮುನ್ಸೂಚನೆಯಿಂದಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಇಂತಹ ಸಮಯದಲ್ಲಿ ಇಂಧನ ದರ ಇಳಿಕೆಯಾದರೆ ಚಿಲ್ಲರೆ ಹಣದುಬ್ಬರ (Inflation) ನಿಯಂತ್ರಣಕ್ಕೆ ಬರಲು ಸಹಾಯವಾಗುತ್ತದೆ.
- ಉದ್ಯೋಗ ಮತ್ತು ಪ್ರಗತಿ: ಯುದ್ಧದ ಕಾರಣದಿಂದ ಮಂಕಾಗಿದ್ದ ದೇಶದ ಆರ್ಥಿಕ ಪ್ರಗತಿ ಮತ್ತು ಉದ್ಯೋಗ ಸೃಷ್ಟಿಗೆ ಇದು ಉತ್ತೇಜನ ನೀಡಬಲ್ಲದು.
ಅದೇನೇ ಇರಲಿ, ಕಚ್ಚಾ ತೈಲದ ದರ ಇಳಿಕೆಯಿಂದ ಪೆಟ್ರೋಲ್, ಡೀಸಲ್ ಬೆಲೆ ಕಡಿಮೆ ಆಗದಿದ್ದರೂ ಬೇರೆ ಬೇರೆ ರೀತಿಯಲ್ಲಿ ಆರ್ಥಿಕತೆಗೆ ಅದು ಪುಷ್ಟಿ ನೀಡುವುದು ಹೌದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




