AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಯು, ಜಲ ಮತ್ತು ನೆಲ, ಮೂರೂ ಸ್ತರಗಳಲ್ಲೂ ಅಮೋಘವೆನಿಸಿದೆ ಭಾರತದ ಸ್ವಂತ ಬಲದ ರಕ್ಷಣಾ ಸಾಮರ್ಥ್ಯ

India's indigenous defence capabilities developed in last 12 years: ಯುದ್ಧವಿಮಾನ, ಕ್ಷಿಪಣಿ, ಫಿರಂಗಿ, ಮದ್ದುಗುಂಡುಗಳು ಇತ್ಯಾದಿ ಶಸ್ತ್ರಾಸ್ತ್ರಗಳು ಯಾವುದೇ ದೇಶಕ್ಕಾದರೂ ಬಹಳ ಮುಖ್ಯ. ಭಾರತದ ಮಿಲಿಟರಿ ಸಾಮರ್ಥ್ಯ ಕಳೆದ 12 ವರ್ಷಗಳಲ್ಲಿ ನಿರಂತರವಾಗಿ ಬೆಳವಣಿಗೆ ಆಗುತ್ತಿದೆ. ದೇಶೀಯವಾಗಿ ತಂತ್ರಜ್ಞಾನಗಳ ಅಭಿವೃದ್ಧಿಯಾಗುತ್ತಿದೆ. ದೇಶೀಯವಾಗಿ ಉತ್ಪಾದನೆಯೂ ಆಗುತ್ತಿದೆ. ಈ 12 ವರ್ಷದಲ್ಲಿ ಭಾರತದ ಸಾಧನೆಗಳ ಒಂದು ಝಲಕ ಇಲ್ಲಿದೆ.

ವಾಯು, ಜಲ ಮತ್ತು ನೆಲ, ಮೂರೂ ಸ್ತರಗಳಲ್ಲೂ ಅಮೋಘವೆನಿಸಿದೆ ಭಾರತದ ಸ್ವಂತ ಬಲದ ರಕ್ಷಣಾ ಸಾಮರ್ಥ್ಯ
ಐಎನ್​ಎಸ್ ತ್ರಿಕಾಂಡ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 18, 2026 | 11:56 AM

Share

ನವದೆಹಲಿ, ಜೂನ್ 18: ಕಳೆದ 12 ವರ್ಷಗಳ ಮೋದಿ ಆಡಳಿತದಲ್ಲಿ ಭಾರತದ ಮಿಲಿಟರಿ ಸಾಮರ್ಥ್ಯ ಗಣನೀಯವಾಗಿ ಹೆಚ್ಚಿದೆ. ಸ್ವಂತ ಬಲದಲ್ಲಿ ಭಾರತ ಸಾಮರ್ಥ್ಯ ಹೆಚ್ಚಿಸಿಕೊಂಡಿರುವುದು ಗಮನಾರ್ಹ. ತಂತ್ರಜ್ಞಾನ, ಸಾಮರ್ಥ್ಯದಲ್ಲಿ ಬಹಳ ಮುಂಚಿತವಾಗಿ ಹೂಡಿಕೆ ಮಾಡುವ ದೇಶಗಳಿಗೆ ಭವಿಷ್ಯ ಉಜ್ವಲವಾಗಿರುತ್ತದೆ. ಅಂತೆಯೇ, ಭಾರತದ ರಕ್ಷಣಾ ಕ್ಷೇತ್ರದ (India defence) ಕಳೆದ 12 ವರ್ಷಗಳ ಪ್ರಯಾಣ ಇದಕ್ಕೆ ಸಾಕ್ಷಿ. ಭಾರತ ಈಗ ಮಿಲಿಟರಿ ಶಕ್ತಿಯಲ್ಲಿ ವಿಶ್ವದ ಅಗ್ರಗಣ್ಯ ರಾಷ್ಟ್ರಗಳ ಸಾಲಿನಲ್ಲಿದೆ. ವಾಯು, ಜಲ ಮತ್ತು ನೆಲ ಈ ಮೂರೂ ವಿಭಾಗಗಳಲ್ಲಿ ಭಾರತದ ಸಾಮರ್ಥ್ಯ ವೃದ್ಧಿಯಾಗಿದೆ. ಅದರಲ್ಲೂ ದೇಶೀಯ ತಂತ್ರಜ್ಞಾನ ಮತ್ತು ಉತ್ಪಾದನೆ ಮೂಲಕ ಭಾರತ ಉನ್ನತಿ ಸಾಧಿಸಿರುವುದು ವಿಶೇಷ.

ಸರ್ಕಾರದ ಮೈ ಗವರ್ನ್ಮೆಂಟ್ ವಿಭಾಗವು ಸೋಷಿಯಲ್ ಮೀಡಿಯಾದಲ್ಲಿ ಈ 12 ವರ್ಷದಲ್ಲಿ ತನ್ನ ಕೆಲ ಸಾಧನೆಗಳನ್ನು ವಿವರಿಸುವ ಒಂದು ಥ್ರೆಡ್ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಇದನ್ನು ರೀಪೋಸ್ಟ್ ಮಾಡಿದ್ದಾರೆ. ಈ 12 ವರ್ಷಗಳ ಮಿಲಿಟರಿ ಸಾಧನೆಯ ಮಾಹಿತಿಯ ಅವಲೋಕನ ಇಲ್ಲಿದೆ:

ತೇಜಸ್ ಯುದ್ಧವಿಮಾನ

ಬೆಂಗಳೂರು ಮೂಲದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್) ನಿರ್ಮಿಸಿದ ಶಸ್ತ್ರಾಸ್ತ್ರಗಳಲ್ಲಿ ಪ್ರಮುಖವಾದುದು ತೇಜಸ್ ಸರಣಿಯ ಯುದ್ಧವಿಮಾನಗಳು. ಫೈಟರ್ ಜೆಟ್​ಗಳನ್ನು ಭಾರತದಲ್ಲೇ ಸ್ವಂತವಾಗಿ ವಿನ್ಯಾಸ ಮಾಡಿ ನಿರ್ಮಿಸಬಹುದು ಎಂದು ಮೊದಲು ತೋರಿಸಿಕೊಟ್ಟಿದ್ದು ಹೆಚ್​ಎಎಲ್. ತೇಜಸ್ ಎಂಕೆ-1ಎ ಯುದ್ಧವಿಮಾನ ಈಗಾಗಲೇ ಭಾರತೀಯ ವಾಯುಪಡೆಗೆ ನಿಯೋಜಿತವಾಗಿದೆ. ತೇಜಸ್ ಎಂಕೆ-2 ಅಭಿವೃದ್ಧಿಗೊಳ್ಳುತ್ತಿದೆ.

ಪಿಎಂ ನರೇಂದ್ರ ಮೋದಿ ಅವರ ಟ್ವೀಟ್ ಮತ್ತು ಥ್ರೆಡ್

ಆಕಾಶ್ ಮಿಸೈಲ್ ಸಿಸ್ಟಂ

ಭಾರತದ ಏರ್ ಡಿಫೆನ್ಸ್ ಜಾಲದಲ್ಲಿ ಆಕಾಶ್ ಸಿಸ್ಟಂ ಬಹಳ ಮುಖ್ಯ ಭಾಗವಾಗಿದೆ. ಆಪರೇಷನ್ ಸಿಂದೂರ್ ವೇಳೆ ಆಕಾಶ್ ಎಷ್ಟು ಉಪಯುಕ್ತ ಎಂಬುದು ಸಾಬೀತಾಗಿದೆ. ಆಕಾಶ್-ಎನ್​ಜಿ ಎನ್ನುವ ಮತ್ತಷ್ಟು ಸುಧಾರಿತ ಮಿಸೈಲ್ ಸಿಸ್ಟಂ ಅನ್ನು ಡಿಆರ್​ಡಿಒ ಅಭಿವೃದ್ಧಿಪಡಿಸುತ್ತಿದೆ. ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಸಂಸ್ಥೆ ಈ ಮಿಸೈಲ್ ಸಿಸ್ಟಂ ಅನ್ನು ತಯಾರಿಸುವ ಕೆಲಸ ಮಾಡುತ್ತಿದೆ.

ಇದನ್ನೂ ಓದಿ: ಗಣಿತ ಪರೀಕ್ಷೆಯಲ್ಲಿ 51 ಅಂಕ ಗಳಿಸಿದ್ದ ಹುಡುಗ ಇವತ್ತು ಭಾರತದ ಅತಿದೊಡ್ಡ ಖಾಸಗಿ ಬಾಹ್ಯಾಕಾಶ ಕಂಪನಿ ಒಡೆಯ

ಪಿನಾಕ ಎನ್ನುವ ಅಮೋಘ ಫಿರಂಗಿ

ಭಾರತ ಸ್ವಂತವಾಗಿ ನಿರ್ಮಿಸಿರುವ ಶಸ್ತ್ರಾಸ್ತ್ರಗಳಲ್ಲಿ ಫಿರಂಗಿಗಳು ಇವೆ. ಪಿನಾಕಾ ಸಿಸ್ಟಂ ಇದಕ್ಕೆ ನಿದರ್ಶನ. ಡಿಆರ್​ಡಿಒದ ಎಆರ್​ಡಿಎ ಲ್ಯಾಬ್​ನಲ್ಲಿ ಇದರ ಅಭಿವೃದ್ಧಿಯಾಗಿದ್ದು, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಇದನ್ನು ತಯಾರಿಸಲಾಗುತ್ತಿದೆ. ಭಾರತದ ಆರ್ಟಿಲರಿ ಶಕ್ತಿಯಲ್ಲಿ ಪಿನಾಕಾದ್ದು ಮುಖ್ಯಭಾಗ. ಈ ಅದ್ಭುತ ಫಿರಂಗಿಯಿಂದ ರಾಕೆಟ್ ದಾಳಿ ಮಾಡಬಹುದು.

ಅಗ್ನಿ ಮಿಸೈಲ್​ಗಳು

ಭಾರತದ ಅಗ್ನಿ-5 ವಿಶ್ವದ ಶಕ್ತಿಶಾಲಿ ಕ್ಷಿಪಣಿಗಳ ಸಾಲಿಗೆ ಬರುತ್ತದೆ. ಇದು ಎಂಐಆರ್​ವಿ ಟೆಕ್ನಾಲಜಿ ಹೊಂದಿದೆ. ಒಂದೇ ಮಿಸೈಲ್​ನಲ್ಲಿ ಹಲವು ವಾರ್​ಹೆಡ್​ಗಳನ್ನು ಕಳುಹಿಸಬಹುದು. ಬೇರೆ ಬೇರೆ ಗುರಿಗಳಿಗೆ ಇವನ್ನು ಹೊಡೆಯಬಹುದು. ಕೆಲವೇ ದೇಶಗಳಿಗೆ ಈ ಸಾಮರ್ಥ್ಯ ಇರುವುದು.

ಹೈಪರ್ಸಾನಿಕ್ ಮಿಸೈಲ್ ತಂತ್ರಜ್ಞಾನ

ಬಹಳ ವೇಗವಾಗಿ ಸಾಗಬಲ್ಲ ಹೈಪರ್​ಸಾನಿಕ್ ಕ್ಷಿಪಣಿಯನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ. ಹೈಪರ್​ಸಾನಿಕ್ ಕ್ಷಿಪಣಿಗಳು ಮ್ಯಾಕ್ 5ಗಿಂತ ಹೆಚ್ಚಿನ ವೇಗದಲ್ಲಿ ಹಾರುತ್ತವೆ. ಮ್ಯಾಕ್ ವೇಗ ಎಂದರೆ ಶಬ್ದದ ವೇಗ. ಮ್ಯಾಕ್ 5 ವೇಗ ಎಂದರೆ ಗಂಟೆಗೆ 6,000 ಕಿಮೀಗೂ ಹೆಚ್ಚು ವೇಗದಲ್ಲಿ ಸಾಗುವುದು.

ಮೂರೂ ಮಿಲಿಟರಿ ವಿಭಾಗದಲ್ಲಿ ಪರಮಾಣು ಶಕ್ತಿ

ಶತ್ರುಗಳ ಜಂಘಾಬಲ ಉಡುಗಿಸಲು ಸಹಾಯವಾಗುವುದು ಪರಮಾಣು ದಾಳಿಯ ಶಕ್ತಿ. ಭಾರತ ಇತ್ತೀಚೆಗೆ ಐಎನ್​ಎಸ್ ಅರಿಹಂತ್ ಅನ್ನು ನೌಕಾಪಡೆಗೆ ನಿಯೋಜಿಸಿತು. ಇದು ಪರಮಾಣ ಶಸ್ತ್ರಾಸ್ತ್ರ ದಾಳಿ ಸಾಮರ್ಥ್ಯ ಇರುವ ಯುದ್ಧ ನೌಕೆ. ಇದರೊಂದಿಗೆ ವಾಯು, ಜಲ ಮತ್ತು ನೆಲ ಮಾರ್ಗಗಳಲ್ಲಿ ಭಾರತ ಪರಮಾಣು ದಾಳಿ ಸಾಮರ್ಥ್ಯ ಹೊಂದಿದಂತಾಗಿದೆ. ಶತ್ರುಗಳು ಪರಮಾಣು ದಾಳಿ ಎಸಗುವ ಸಾಹಸ ಮಾಡಿದರೆ ಭಾರತ ಕ್ಷಿಪ್ರವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗಿದೆ.

ಐಎನ್​ಎಸ್ ವಿಕ್ರಾಂತ್

ಯುದ್ಧಗಳಲ್ಲಿ ಹಡಗುಗಳ ಪಾತ್ರ ಬಹಳ ಮಹತ್ವದ್ದು. ಚೋಳರ ಕಾಲದಲ್ಲಿ ಭಾರತದ ನೌಕಾ ಬಲ ಬಹಳ ಉಚ್ಚವಾಗಿತ್ತು. ಈಗ ಭಾರತ ಆ ನಿಟ್ಟಿನಲ್ಲಿ ಸಾಮರ್ಥ್ಯ ವೃದ್ಧಿಸಿಕೊಳ್ಳುತ್ತಿದೆ. ಐಎನ್​ಎಸ್ ವಿಕ್ರಾಂತ್ ಇದಕ್ಕೆ ನಿದರ್ಶನ. ಇದು ಭಾರತದಲ್ಲೇ ಸ್ವಂತವಾಗಿ ನಿರ್ಮಿಸಲಾದ ಹಡಗು. ಇದು ಯುದ್ಧವಿಮಾನಗಳ ವಾಹಕವಾಗಿದೆ. ಜನರನ್ನು ಸಾಗಿಸುವ ಹಡಗುಗಳಿಗಿಂತ ಯುದ್ದವಿಮಾನಗಳನ್ನು ಸಾಗಿಸುವ ಹಡಗುಗಳ ನಿರ್ಮಾಣ ಹೆಚ್ಚು ಸವಾಲಿಂದ ಕೂಡಿರುತ್ತದೆ ಮತ್ತು ಸಂಕೀರ್ಣವಾಗಿರುತ್ತದೆ.

ಇದನ್ನೂ ಓದಿ: ಬೆಂಗಳೂರಿನ ಐಐಎಂ ಕ್ಯಾಂಪಸ್​ನಲ್ಲಿ ಹೊಸ ಕಾಲೇಜು; ಎರಡು ಪದವಿ ಕೋರ್ಸ್​ಗಳು ಆಫರ್; ಟಾಟಾ ಟ್ರಸ್ಟ್ಸ್​ನಿಂದ ಅನುದಾನ

ನೌಕಾಪಡೆಗೆ ಸ್ಟೀಲ್ತ್ ಫ್ರಿಗೇಟ್, 15ಬಿ ಡೆಸ್ಟ್ರಾಯರ್ಸ್ ಇತ್ಯಾದಿ ಶಕ್ತಿ

ಭಾರತದ ನೌಕಾಪಡೆಯ ಆಧುನೀಕರಣ ಕೆಲಸ ಜೋರಾಗಿ ನಡೆಯುತ್ತಿದೆ. ದೇಶೀಯವಾಗಿ ಅಭಿವೃದ್ಧಿಗೊಂಡ ತಂತ್ರಜ್ಞಾನದಿಂದಲೇ ಆಧುನೀಕರಣ ಮಾಡಲಾಗುತ್ತಿದೆ. ಪ್ರಾಜೆಕ್ಟ್ 17ಎ ಸ್ಟೀಲ್ತ್ ಫ್ರಿಗೇಟ್ಸ್ (ಸಣ್ಣ ಹಡಗು), ಪ್ರಾಜೆಕ್ಟ್ 15ಬಿ ಡೆಸ್ಟ್ರಾಯರ್ಸ್, ಕಲ್ವರಿ ದರ್ಜೆಯ ಸಬ್​ಮರೀನ್​ಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ.

ಬ್ರಹ್ಮೋಸ್, ಅಸ್ತ್ರ, ರುದ್ರಂ ಬಲ

ಭಾರತ ಸ್ವಂತವಾಗಿ ಅದ್ಭುತವಾದ ಮಿಸೈಲ್ ಇಕೋಸಿಸ್ಟಂ ಅಭಿವೃದ್ಧಿಪಡಿಸಿದೆ. ಬ್ರಹ್ಮೋಸ್, ಅಸ್ತ್ರ, ರುದ್ರಂ ಕ್ಷಿಪಣಿಗಳು ಶತ್ರುಗಳ ರಾಡಾರ್ ಕಣ್ತಪ್ಪಿಸಿ ಮಿಂಚಿನ ವೇಗದಲ್ಲಿ ದಾಳಿ ಮಾಡಬಲ್ಲಂತಹ ವಿಶ್ವದರ್ಜೆಯ ಅಸ್ತ್ರಗಳಾಗಿವೆ. ಅತ್ಯಾಧುನಿಕ ಡಿಫೆನ್ಸ್ ಟೆಕ್ನಾಲಜಿಯ ಉತ್ಪನ್ನಗಳುಉ ಇವು.

ಸಿ-295 ಪ್ರಾಜೆಕ್ಟ್

ದೇಶೀಯವಾಗಿ ವಿಮಾನಗಳನ್ನು ಅಭಿವೃದ್ಧಿಪಡಿಸುವುದು ಸವಾಲಿನ ಕೆಲಸ. ಭಾರತ ಸಿ-295 ಪ್ರಾಜೆಕ್ಟ್​ಗೆ ಕೈ ಹಾಕಿದೆ. ಆಪತ್ಕಾಲದಲ್ಲಿ ಬೇರೆ ದೇಶಗಳ ಮೇಲೆ ವಿಮಾನಗಳಿಗಾಗಿ ಅವಲಂಬಿತವಾಗುವುದು ತಪ್ಪುತ್ತದೆ. ಈ ಸಿ-295 ವಿಮಾನಗಳು ಯುದ್ಧ ಕಾಲದಲ್ಲಿ ಸೈನಿಕರನ್ನು ಮತ್ತು ಯುದ್ಧ ಸಾಮಗ್ರಿಗಳನ್ನು ಸಾಗಿಸಲು ಬಳಕೆಯಾಗುತ್ತವೆ.

ಡ್ರೋನ್​ಗಳ ಬಲ

ಈಗ ಯುದ್ಧದಲ್ಲಿ ಡ್ರೋನ್ ಬಹಳ ಮುಖ್ಯವಾಗಿದೆ. ಶತ್ರುಗಳ ಡಿಫೆನ್ಸ್ ಸಿಸ್ಟಂ ಅನ್ನು ನ್ಯೂಟ್ರಲೈಸ್ ಮಾಡಲು ಡ್ರೋನ್​ಗಳ ಗುಂಪನ್ನು ಬಳಸಲಾಗುತ್ತದೆ. ಹೀಗಾಗಿ, ರಷ್ಯಾ ಎದುರು ಉಕ್ರೇನ್ ಇನ್ನೂ ಸೋಲಪ್ಪಿಲ್ಲ. ಅಮೆರಿಕ, ಇಸ್ರೇಲ್​ನ ಭೀಕರ ದಾಳಿಗೆ ಇರಾನ್ ಪ್ರತ್ಯುತ್ತರ ಕೊಡಲು ಈ ಡ್ರೋನ್​ಗಳ ಪಾತ್ರ ಇದೆ. ಈ ಕಾರಣಕ್ಕೆ ಭಾರತವು ಸಾಕಷ್ಟು ಡ್ರೋನ್ ಸಾಮರ್ಥ್ಯ ವೃದ್ಧಿಸಲು ಖಾಸಗಿ ಕ್ಷೇತ್ರವನ್ನೂ ಬಳಸಿಕೊಳ್ಳುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us